ADVERTISEMENT

ಒಳ ಮೀಸಲಾತಿಗೆ‌ ಒತ್ತಾಯಿಸಿ ರಾಯಚೂರು ಬಂದ್: ಮಿಶ್ರ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2024, 5:27 IST
Last Updated 3 ಅಕ್ಟೋಬರ್ 2024, 5:27 IST
<div class="paragraphs"><p>ರಾಯಚೂರಿನ ಕೇಂದ್ರ ಬಸ್ ನಿಲ್ದಾಣದಲ್ಲಿ ಒಳ ಮೀಸಲಾತಿ ಹೋರಾಟ ಸಮಿತಿಯ ಮುಖಂಡರು ಪ್ರತಿಭಟನೆ ನಡೆಸಿದರು.</p></div>

ರಾಯಚೂರಿನ ಕೇಂದ್ರ ಬಸ್ ನಿಲ್ದಾಣದಲ್ಲಿ ಒಳ ಮೀಸಲಾತಿ ಹೋರಾಟ ಸಮಿತಿಯ ಮುಖಂಡರು ಪ್ರತಿಭಟನೆ ನಡೆಸಿದರು.

   

ರಾಯಚೂರು: ಪರಿಶಿಷ್ಟ ಜಾತಿಯ ಮಾದಿಗ ಸಂಬಂಧಿತ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸಲು ರಾಜ್ಯ‌ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಮಾದಿಗ ಸಮುದಾಯದ ಮುಖಂಡರು ಗುರುವಾರ ರಾಯಚೂರು ಬಂದ್‌ಗೆ ಕರೆ ನೀಡಿದ ಪ್ರಯುಕ್ತ ಮುನ್ನೆಚ್ಚರಿಕೆ ಕ್ರಮವಾಗಿ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ.

ನಗರದ ಕೇಂದ್ರ ಬಸ್ ನಿಲ್ದಾಣದ ಜನರಿಲ್ಲದೇ ಬಿಕೋ ಎನ್ನುತ್ತಿದೆ. ಸುತ್ತಮುತ್ತಲಿನ ಅಂಗಡಿ ಮುಂಗಟ್ಟುಗಳನ್ನು ಮಾಲೀಕರು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿ ಹೋರಾಟಕ್ಕೆ ಬೆಂಬಲ ನೀಡಿದರು.

ADVERTISEMENT

ಹೈದರಾಬಾದ್ ಕಡೆಯಿಂದ ರಾಯಚೂರು ಮಾರ್ಗವಾಗಿ ಹೋಗುವ ಬಸ್‌ಗಳಲ್ಲಿ ಪ್ರಯಾಣಿಸುವವರಿಗೆ ಅನುಕೂಲವಾಗುವಂತೆ ಬೈಪಾಸ್‌ ಮೂಲಕ ಹೋಗಲು ಅನುಕೂಲ ಮಾಡಿಕೊಡಲಾಗಿದೆ. ಸರಕು ಸಾಗಣೆ ವಾಹನಗಳು ಬೈಪಾಸ್‌ ಮೂಲಕ ಸಾಗುತ್ತಿವೆ.

ನವೋದಯ ಕಾಲೇಜು, ಬಸವೇಶ್ವರ ವೃತ್ತ, ಸಾತ್ ಮೈಲ್ ಕ್ರಾಸ್ ಹಾಗೂ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿ ಬಿಗಿ‌ಬಂದೋಬಸ್ತ್ ಮಾಡಿದ್ದಾರೆ.

ಒಳ ಮೀಸಲಾತಿಯ ಹೋರಾಟಗಾರ ಅಂಬಣ್ಣ ಅರೋಲಿಕರ್ ನೇತೃತ್ವದ ತಂಡ ಕೇಂದ್ರ ಬಸ್ ನಿಲ್ದಾಣ, ಉಸ್ಮಾನಿಯಾ ಮಾರುಕಟ್ಟೆ ಪ್ರದೇಶದ ಸುತ್ತಮುತ್ತ ಸಂಚರಿಸಿ ವಾಣಿಜ್ಯ ಮಳಿಗೆಗಳನ್ನು ಬಂದ್ ಮಾಡುವಂತೆ ಮನವಿ ಮಾಡಿದರು.

ಕಳೆದ 30 ವರ್ಷಗಳಿಂದ ರಾಯಚೂರು ಜಿಲ್ಲೆಯಲ್ಲಿ ಆರಂಭವಾಗಿರುವ ಒಳ ಮೀಸಲಾತಿಗೆ ನ್ಯಾಯಾಲಯದಲ್ಲಿ ಜಯ ಸಿಕ್ಕಿದೆ ಆದರೆ ಒಳ ಮೀಸಲಾತಿ ಜಾರಿ ಮಾಡಲು ನ್ಯಾಯಾಲಯ ರಾಜ್ಯ ಸರ್ಕಾರಗಳಿಗೆ ಅಧಿಕಾರ ಕೊಟ್ಟಿದ್ದು ಇದನ್ನು ಜಾರಿ ಮಾಡುವಲ್ಲಿ ಸರ್ಕಾರ ವಿಳಂಬ ನೀತಿ ಅನುಸರಿಸುತ್ತದೆ ಎಂದು ಹೋರಾಟಗಾರರು ಅಸಮಾಧಾನ ವ್ಯಕ್ತಪಡಿಸಿದರು.

ಬಸ್‌ ನಿಲ್ದಾಣ ಪರಿಸರ, ಸ್ಟೇಷನ್‌ ರಸ್ತೆಯಲ್ಲಿ ಅಂಗಡಿ ಮುಂಗಟ್ಟುಗಳು ಬಂದ್‌ ಇವೆ. ಮಾರುಕಟ್ಟೆ ಪ್ರದೇಶದಲ್ಲಿ ಬಂದ್‌ ಪ್ರಭಾವ ಬೀರಿಲ್ಲ. ಪ್ರತಿಭಟನಾಕಾರರು ಎಪಿಎಂಸಿಗೆ ತೆರಳಿದ್ದು, ಮಳಿಗೆಗಳನ್ನು ಬಂದ್‌ ಮಾಡಿ ಹೋರಾಟಕ್ಕೆ ಬೆಂಬಲಿಸುವಂತೆ ಮನವಿ ವ್ಯಾಪಾರಸ್ಥರಿಗೆ ಮಾಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.