ADVERTISEMENT

ರಾಯಚೂರು: ನಗರ ಹೊಲಸು ಮಾಡುತ್ತಿರುವ ನಗರಸಭೆ

ಚಂದ್ರಕಾಂತ ಮಸಾನಿ
Published 3 ಅಕ್ಟೋಬರ್ 2024, 4:41 IST
Last Updated 3 ಅಕ್ಟೋಬರ್ 2024, 4:41 IST
ರಾಯಚೂರಿನ ಡ್ಯಾಡಿ ಕಾಲೊನಿಯಲ್ಲಿ ಸಾಗಿದ ನಗರಸಭೆಯ ಸ್ವಚ್ಚತಾ ವಾಹನ
ರಾಯಚೂರಿನ ಡ್ಯಾಡಿ ಕಾಲೊನಿಯಲ್ಲಿ ಸಾಗಿದ ನಗರಸಭೆಯ ಸ್ವಚ್ಚತಾ ವಾಹನ   

ರಾಯಚೂರು: ನಗರಸಭೆಯ ಆರೋಗ್ಯ ಶಾಖೆಯ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಘನತ್ಯಾಜ್ಯ ವಿಲೇವಾರಿ ವಾಹನಗಳ ಚಾಲಕರ ಬೇಜವಾಬ್ದಾರಿಯಿಂದ ಡ್ಯಾಡಿ ಕಾಲೊನಿಯ ಮುಖ್ಯ ರಸ್ತೆಯಲ್ಲಿ ಹೊಲಸು ತುಂಬಿಕೊಳ್ಳುತ್ತಿದೆ. ನಗರದಲ್ಲಿ ಇನ್ನೊಂದು ಕೊಳೆಗೇರಿ ನಿರ್ಮಾಣಕ್ಕೆ ನಗರಸಭೆ ಅಧಿಕಾರಿಗಳೇ ಕಾರಣವಾಗುತ್ತಿದ್ದಾರೆ.

ಡ್ಯಾಡಿ ಪ್ರತಿಷ್ಠಿತರ ಬಡವಾಣೆ ಎಂದೇ ಗುರುತಿಸಿಕೊಂಡಿದೆ. ನಗರಸಭೆಯ ಘನತ್ಯಾಜ್ಯ ಸಾಗಿಸುವ ವಾಹನಗಳೇ ರಸ್ತೆ ಮೇಲೆ ನಿತ್ಯ ಚೆಲ್ಲುತ್ತ ಹೋಗುತ್ತಿರುವ ಕಾರಣ ಬಡಾವಣೆಯ ಜನರು, ವಿದ್ಯಾರ್ಥಿಗಳು ಜೆಸ್ಕಾಂ ಸಿಬ್ಬಂದಿಗೂ ತಲೆ ನೋವಾಗಿದೆ.

ಓಲ್ಡ್‌ಸಿಟಿಯಲ್ಲಿನ ಗಟಾರುಗಳಿಂದ ಎತ್ತಿದ ಕೊಳೆಯನ್ನೂ ರಸ್ತೆ ಮೇಲೆ ಚೆಲ್ಲಲಾಗುತ್ತಿದೆ. ರಸ್ತೆ ಬದಿಗಳಲ್ಲೂ ಪ್ಲಾಸ್ಟಿಕ್‌ ಕಸ ಹಾರಿ ಬಿದ್ದಿದೆ. ನಗರಸಭೆ ಆರೋಗ್ಯ ಶಾಖೆಯ ಅಧಿಕಾರಿಗಳಿಗೆ ಹಲವು ಬಾರಿ ಫೋನ್‌ನಲ್ಲಿ ಕರೆ ಮಾಡಿ ತಿಳಿಸಿದರೂ ಪ್ರಯೋಜನವಾಗಿಲ್ಲ. ಕಸ ಸಾಗಿಸುವ ಟ್ರ್ಯಾಕ್ಟರ್‌ ಚಾಲಕರ ನಿರ್ಲಕ್ಷ್ಯದಿಂದ ರಸ್ತೆ ಬೀಳುವ ಹೊಲಸು ಇಲ್ಲಿಯ ನಿವಾಸಿಗಳ ಬದುಕು ಅಸಹನೀಯಗೊಳಿಸಿದೆ.

ADVERTISEMENT

ಅಂತ್ಯತ ಹಳೆಯ ನಗರವಾದರೂ ಲಿಂಗಸುಗೂರು ಮುಖ್ಯರಸ್ತೆಯ ತಿರುವಿನಲ್ಲಿರುವ ಚೈತನ್ಯ ಆಸ್ಪತ್ರೆಯಿಂದ ಡ್ಯಾಡಿ ಕಾಲೊನಿಯ ಅಂತ್ಯದ ವರೆಗೂ ಒಂದು ಬದಿಗೆ ಗಟಾರು ನಿರ್ಮಿಸಿಲ್ಲ. ರಸ್ತೆ ಸಂಪೂರ್ಣ ಹಾಳಾಗಿದೆ. ವಾಹನ ಸಂಚಾರಕ್ಕೂ ಯೋಗ್ಯವಿಲ್ಲದಂತಾಗಿದೆ. ಸಕಾಲದಲ್ಲಿ ನಗರಸಭೆಗೆ ತೆರಿಗೆ ಕಟ್ಟುವ ಜನರಿಗೆ ನಗರಸಭೆ ಅಧಿಕಾರಿಗಳ ನಡೆ ಬೇಸರ ಉಂಟು ಮಾಡಿದೆ.

ಡ್ಯಾಡಿ ಕಾಲೊನಿ ಮೂರನೇ ಕ್ರಾಸ್ನಲ್ಲಿರುವ ಕರೆಮ್ಮ ದೇವಸ್ಥಾನದ ಬಳಿ ರಸ್ತೆ ಬದಿಗೆ ಕೊಳಚೆ ನೀರು ನಿಂತು ಮತ್ತಷ್ಟು ಗಬ್ಬು ನಾರುತ್ತಿದೆ. ಜನ ಕಡ ಎಸೆಯುವುದನ್ನು ನಿಲ್ಲಿಸಲಿ ಎನ್ನುವ ಕಾರಣಕ್ಕೆ ಇಲ್ಲಿ ಚಿಕ್ಕದೊಂದು ಮಂದಿರ ನಿರ್ಮಿಸಲಾಗಿದೆ. ಮಂದಿರ ಪಕ್ಕದಲ್ಲಿ ಹಂದಿಗಳು ಕೆಸರಲ್ಲಿ ಉರುಳಾಡಿ ಓಣಿಗಳಲ್ಲಿ ಹೊಲಸು ಮಾಡುತ್ತಿವೆ. ರಸ್ತೆಯುದ್ದಕ್ಕೂ ಪಕ್ಕದಲ್ಲಿ ಬೆಳೆದಿರುವ ಜಾಲಿಮರಗಳು ಹಂದಿ, ನಾಯಿಗಳ ತಾಣವಾಗಿ ಬೆಳೆದಿದೆ.


ಕಸ ಸಂಗ್ರಹಣೆಯಲ್ಲೂ ನಿರ್ಲಕ್ಷ್ಯ:

ರಾಯಚೂರಿನ ಡ್ಯಾಡಿ ಕಾಲೊನಿಯ ರಸ್ತೆ ಬದಿಗೆ ಗಟಾರು ನಿರ್ಮಿಸಿಲ್ಲ. ಪಕ್ಕದಲ್ಲಿ ಜಾಲಿಗಿಡಗಳು ಬೆಳೆದಿವೆ

ರಾಯಚೂರು ನಗರಸಭೆಯ ಪೌರ ಕಾರ್ಮಿಕರ ವಾಹನ ನಿತ್ಯ ಡ್ಯಾಡಿ ಕಾಲೊನಿಗೆ ಬರುತ್ತಿಲ್ಲ. ಒಂದು ದಿನ ಬಂದರೆ ಮೂರು ನಾಲ್ಕು ದಿನ ಬರುವುದಿಲ್ಲ. ಮನೆಗಳಲ್ಲಿ ಕಸ ಸಂಗ್ರಹಿಸಿ ಇಟ್ಟುಕೊಳ್ಳುವ ಜನರು ವಾಹನಗಳು ಬಾರದಿದ್ದಾರೆ ರಸ್ತೆ ಬದಿಗೆ ಚೆಲ್ಲಿ ಬರುತ್ತಿದ್ದಾರೆ. ರಾತ್ರಿ ವೇಳೇ ಖಾಲಿನಿವೇಶಗಳಲ್ಲಿ ಎಸೆದು ಮನೆ ಸೇರುತ್ತಿದ್ದಾರೆ. ಹೀಗಾಗಿ ಡ್ಯಾಡಿ ಕಾಲೊನಿಯಲ್ಲಿ ಇನ್ನಷ್ಟು ಗಬ್ಬು ಎದ್ದಿದೆ.

‘ಮನೆ ಮನೆಗೆ ಕಸ ಸಂಗ್ರಹಿಸುವ ವಾಹನ ನಿತ್ಯ ಓಣಿಗಳಿಗೆ ಬರುವಂತೆ ಆಗಬೇಕು. ಅಂದಾಗ ನಾವು ಅವರಿಗೆ ಮನೆಯ ಕಸ ಕೊಟ್ಟು ಪರಿಸರ ಸ್ವಚ್ಛವಾಗಿಡಲು ಸಾಧ್ಯವಾಗುತ್ತದೆ. ಅಧಿಕಾರಿಗಳು ಹಾಗೂ ರಾಜಕಾರಣಿಗಳು ದೊಡ್ಡ ಭಾಷಣ ಮಾಡುತ್ತಾರೆ. ಕಸ ರಸ್ತೆ ಬೀಳಲು ಏನು ಕಾರಣ ಎನ್ನುವ ಬಗ್ಗೆ ವಾಸ್ತವ ಸಂಗತಿ ಅರಿತುಕೊಳ್ಳುವುದಿಲ್ಲ ‘ ಎಂದು ಡ್ಯಾಡಿಕಾಲೊನಿಯ ನಿವಾಸಿ ಸುಖದೇವಿ ಬೇಸರ ವ್ಯಕ್ತಪಡಿಸುತ್ತಾರೆ.

‘ನಗರಸಭೆಯ ಸ್ವಚ್ಛತಾ ವಾಹನ ಹಾಗೂ ಮನೆ ಮನೆಗೆ ಕಸ ಸಂಗ್ರಹಿಸಲು ಬರುವ ವಾಹನಗಳಿಗೆ ಜಿಪಿಎಸ್‌ ಅಳವಡಿಸಬೇಕು. ಪೊಲೀಸ್‌ ಬೀಟ್‌ ಮಾದರಿಯಲ್ಲಿ ಆಯಕಟ್ಟಿನ ಪ್ರದೇಶಗಳಲ್ಲಿ ಕ್ಯೂಆರ್‌ ಕೋಡ್‌ ಅಳವಡಿಸಬೇಕು. ಘನತ್ಯಾಜ್ಯ ಸಂಗ್ರಹಿಸಲು ಬರುವ ವಾಹನಗಳ ಚಾಲಕರು ಅಲ್ಲಿಗೆ ಬಂದ ಮೇಲೆ ಸ್ಯಾನ್‌ ಮಾಡಿದರೆ ಅವರು ಸ್ಥಳಕ್ಕೆ ಬಂದು ಹೋಗ ಬಗ್ಗೆ ನಿಖರವಾದ ಮಾಹಿತಿ ದೊರಕಲಿದೆ. ರಾಜ್ಯ ಬೇರೆ ಜಿಲ್ಲೆಗಳಲ್ಲಿ ಮಾಡಿರುವ ವ್ಯವಸ್ಥೆಯನ್ನು ಇಲ್ಲಿ ಮಾಡಿದರೂ ಎಲ್ಲರಿಗೂ ಅನುಕೂಲವಾಗಲಿದೆ‘ ಎಂದು ಡ್ಯಾಡಿ ಕಾಲೊನಿ ನಿವಾಸಿ ಶಿವಕುಮಾರ ಹಾಗೂ ಸಂತೋಷಕುಮಾರ ಹೇಳುತ್ತಾರೆ.

ರಾಯಚೂರಿನ ಡ್ಯಾಡಿ ಕಾಲೊನಿ ಹಾಗೂ ಕೆಇಬಿ ಕಾಲೊನಿ ಮಧ್ಯದ ರಸ್ತೆಯ ದುಸ್ಥಿತಿ

ಇಷ್ಟು ಹೊಲಸು ಊರು ನಾನು ರಾಜ್ಯದ ಯಾವುದೇ ಭಾಗದಲ್ಲೂ ನೋಡಿಲ್ಲವೆಂದು ಸ್ವತಃ ಜಿಲ್ಲಾಧಿಕಾರಿ ಅವರೇ ಬೇಸರ ವ್ಯಕ್ತಪಡಿಸಿದ್ದಾರೆ. ನಗರಸಭೆ ಅಧಿಕಾರಿಗಳು ಸಿಬ್ಬಂದಿ ಕೊರತೆಯ ಸಬೂಬು ನೀಡಿದ್ದಾರೆ. ಊರಿನ ಕಸ ಸಂಗ್ರಹಿಸಿ ಡ್ಯಾಡಿ ಕಾಲೊನಿಯ ರಸ್ತೆ ಮೇಲೆ ಚೆಲ್ಲುತ್ತ ಸಾಗುತ್ತಿರುವ ಟ್ಯ್ರಾಕ್ಟರ್‌ ಚಾಲಕರಿಗೆ ಬುದ್ದಿ ಹೇಳುವವರು ಯಾರು? ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ರಾಯಚೂರಿನ ಡ್ಯಾಡಿ ಕಾಲೊನಿಯ ಅಂಚಿನಲ್ಲಿ ಮುಖ್ಯ ರಸ್ತೆ ಮೇಲೆಯೇ ಬೇಲಿ ನಿರ್ಮಿಸಿ ನಿವೇಶನ ಮಾಡಿಕೊಳ್ಳಲಾಗಿದೆ

ರಾಯಚೂರಿನ ಡ್ಯಾಡಿ ಕಾಲೊನಿಯ ಮುಖ್ಯ ರಸ್ತೆಯಲ್ಲಿ ಒಂದು ಕಾಲೇಜು, ಒಂದು ಪ್ರಾಥಮಿಕ ಶಾಲೆ, ಜೆಸ್ಕಾಂ ಕಚೇರಿ, ಭೂಸೇನಾ ನಿಗಮದ ಕಚೇರಿ, ಎರಡು ಮಂದಿರಗಳು ಇವೆ. ಕಾಕತೀಯ ಕಾಲೊನಿ, ಡಾಲರ್ಸ್‌ ಕಾಲೊನಿ, ರಾಘವೇಂದ್ರ ಕಾಲೊನಿ ಹಾಗೂ ಏಕಲಾಸಪುರಕ್ಕೂ ಇದೇ ದಾರಿ. ಆದರೆ, ನಗರಸಭೆ ಸಿಬಂದಿ ನೈರ್ಮಲ್ಯಕ್ಕೆ ಆದ್ಯತೆ ನೀಡದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.