ADVERTISEMENT

ರಾಯಚೂರು: ಅಲ್ಪಸಂಖ್ಯಾತರು ಮತ್ತು ಪರಿಶಿಷ್ಟ ಮತದಾರರೇ ನಿರ್ಣಾಯಕ

ಕಾಂಗ್ರೆಸ್‌–ಬಿಜೆಪಿ ತೀವ್ರ ಹಣಾಹಣಿ

ನಾಗರಾಜ ಚಿನಗುಂಡಿ
Published 7 ಮೇ 2019, 6:50 IST
Last Updated 7 ಮೇ 2019, 6:50 IST
ರಾಜಾ ಅಮರೇಶ್ವರ ನಾಯಕ, ಬಿ.ವಿ.ನಾಯಕ
ರಾಜಾ ಅಮರೇಶ್ವರ ನಾಯಕ, ಬಿ.ವಿ.ನಾಯಕ    

ರಾಯಚೂರು: ರಾಯಚೂರು ಲೋಕಸಭಾ ಕ್ಷೇತ್ರ (ಪರಿಶಿಷ್ಟ ಪಂಗಡ)ವು ಈ ಬಾರಿಯೂ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ಜಿದ್ದಾಜಿದ್ದಿ ಪೈಪೋಟಿಗೆ ಸಾಕ್ಷಿಯಾಗುವ ಲಕ್ಷಣ ಎದ್ದು ಕಾಣಿಸುತ್ತಿದೆ.

2014ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಬಿ.ವಿ.ನಾಯಕ ಅವರು ನರೇಂದ್ರ ಮೋದಿಯ ಅಲೆಯ ವಿರುದ್ಧ ಈಜಿ ಬಿಜೆಪಿಯ ಶಿವನಗೌಡ ನಾಯಕ ಅವರನ್ನು 1,499 ಅಲ್ಪ ಮತಗಳ ಅಂತರಗಳಿಂದ ಸೋಲಿಸಿದ್ದರು. ಈಗ ಬಿ.ವಿ.ನಾಯಕ ಅವರಿಗೆ ಎದುರಾಳಿ ಬದಲಾಗಿದ್ದಾರೆ. ತಮ್ಮದೇ ಪಕ್ಷದಲ್ಲಿದ್ದ ಮಾಜಿ ಸಚಿವ ರಾಜಾ ಅಮರೇಶ್ವರ ನಾಯಕ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಹೀಗಾಗಿ ಈ ಕ್ಷೇತ್ರವು ಮತ್ತೊಮ್ಮೆ ತೀವ್ರ ಹಣಾಹಣಿಗೆ ಸಜ್ಜಾಗಿದೆ.

ಇದೇ ಕ್ಷೇತ್ರದಲ್ಲಿ ನಾಲ್ಕು ಬಾರಿ ಸಂಸದ ಹಾಗೂ ಒಮ್ಮೆ ದೇವದುರ್ಗ ಕ್ಷೇತ್ರದ ಶಾಸಕರಾಗಿದ್ದ ದಿವಂಗತ ವೆಂಕಟೇಶ ನಾಯಕ ಅವರ ಹಿರಿಯ ಪುತ್ರ ಬಿ.ವಿ.ನಾಯಕ. ಇವರನ್ನು ತಂದೆ 2014 ರಲ್ಲಿ ಲೋಕಸಭೆ ಚುನಾವಣೆ ಮೂಲಕ ಸಕ್ರಿಯ ರಾಜಕಾರಣಕ್ಕೆ ಕರೆತಂದರು. ಎರಡನೇ ಬಾರಿಗೆ ಸ್ಪರ್ಧಿಸಿರುವ ಬಿ.ವಿ.ನಾಯಕ ಅವರು ತಂದೆ ವೆಂಕಟೇಶ ನಾಯಕ ಅವರಂತೆ ಗೆಲುವಿನ ಓಟ ಮುಂದುವರಿಸುವ ಉತ್ಸುಕತೆಯಿಂದ ಪ್ರಚಾರದಲ್ಲಿ ತೊಡಗಿದ್ದಾರೆ.

ರಾಜಾ ಅಮರೇಶ್ವರ ನಾಯಕ ಅವರು 1989ರಲ್ಲಿ ಲಿಂಗಸುಗೂರು, 1999 ರಲ್ಲಿ ಕಲ್ಮಲಾ ವಿಧಾನಸಭೆ ಕ್ಷೇತ್ರಗಳಿಂದ ಕಾಂಗ್ರೆಸ್‌ನಿಂದ ಶಾಸಕರಾಗಿದ್ದರು. ಎರಡೂ ಬಾರಿಯು ಸಚಿವರಾಗಿ, ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಆಗ ಮಾಡಿದ ಕೆಲಸಗಳು ಜನಮಾನಸದಲ್ಲಿ ಇನ್ನೂ ಉಳಿದಿವೆ. ಈ ಎರಡೂ ಕ್ಷೇತ್ರಗಳಲ್ಲಿ ಪಕ್ಷವನ್ನು ಮರೆತು ರಾಜಾ ಅಮರೇಶ್ವರ ನಾಯಕ ಅವರನ್ನು ಬೆಂಬಲಿಸುವವರೂ ಇದ್ದಾರೆ.

ರಾಯಚೂರು ಜಿಲ್ಲೆಯ ಐದು ಹಾಗೂ ಯಾದಗಿರಿ ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರಗಳು ಈ ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿವೆ. ಈ ಎಂಟು ವಿಧಾನಸಭೆ ಕ್ಷೇತ್ರಗಳಲ್ಲಿ ಲಿಂಗಸುಗೂರು (ಎಸ್‌ಸಿ), ದೇವದುರ್ಗ, ಮಾನ್ವಿ, ಸುರಪುರ ಹಾಗೂ ರಾಯಚೂರು ಗ್ರಾಮೀಣ ಕ್ಷೇತ್ರ (ಎಸ್‌ಟಿ)ಗೆ ಮೀಸಲಾಗಿವೆ. ರಾಯಚೂರು ನಗರ ಮತ್ತು ಯಾದಗಿರಿ ವಿಧಾನಸಭೆ ಕ್ಷೇತ್ರಗಳಲ್ಲಿ ಮುಸ್ಲಿಂ ಮತಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಈ ಕ್ಷೇತ್ರದಲ್ಲಿ ಪರಿಶಿಷ್ಟರು ಹಾಗೂ ಅಲ್ಪಸಂಖ್ಯಾತರ ಮತಗಳು ನಿರ್ಣಾಯಕವಾಗಿವೆ.

ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳು ಹಿಂದುಳಿದಿದ್ದರೂ ಚುನಾವಣೆ ಪ್ರಚಾರದಲ್ಲಿ ಇದು ಪ್ರಮುಖವಾಗಿ ಚರ್ಚೆಗೆ ಬರುತ್ತಿಲ್ಲ. ರಾಷ್ಟ್ರಮಟ್ಟದ ವಿಷಯಗಳನ್ನು ಆಧರಿಸಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಾಯಕರು ಆರೋಪ, ಪ್ರತ್ಯಾರೋಪಗಳನ್ನು ಮಾಡುತ್ತಿದ್ದಾರೆ. ಐದು ವರ್ಷ ಸಂಸದರಾಗಿದ್ದ ಬಿ.ವಿ. ನಾಯಕ ಏನು ಕೆಲಸ ಮಾಡಿದ್ದಾರೆ ಎನ್ನುವ ಪ್ರಶ್ನೆಯನ್ನು ಬಿಜೆಪಿ ಕೇಳುತ್ತಿದೆ. ಇದರೊಂದಿಗೆ ಕೇಂದ್ರ ಸರ್ಕಾರದ ಸಾಧನೆಗಳನ್ನು ಬಿಜೆಪಿ ಜನರಿಗೆ ಮನವರಿಕೆ ಮಾಡುತ್ತಿದೆ. ಚುನಾವಣೆ ಕಣದಲ್ಲಿ ಮೋದಿಯೇ ಅಭ್ಯರ್ಥಿ ಎಂದು ಬಿಂಬಿಸಲಾಗುತ್ತಿದೆ.

ಬಿಜೆಪಿಯವರ ಪ್ರಶ್ನೆಗೆ ಉತ್ತರ ನೀಡುತ್ತಿರುವ ಬಿ.ವಿ.ನಾಯಕ, ವಿರೋಧ ಪಕ್ಷದಲ್ಲಿದ್ದರೂ ಎಷ್ಟು ಸಾಧ್ಯವೋ ಅಷ್ಟು ಅನುದಾನ ತಂದು ಪ್ರಾಮಾಣಿಕವಾಗಿ ಕೆಲಸ ಮಾಡಿರುವುದಾಗಿ ಒತ್ತುಕೊಟ್ಟು ಹೇಳುತ್ತಿದ್ದಾರೆ. ಪ್ರಜಾಪ್ರಭುತ್ವ, ಸಂವಿಧಾನ ಹಾಗೂ ಸಾಮಾಜಿಕ ನ್ಯಾಯ ಕಾಪಾಡಲು ಕಾಂಗ್ರೆಸ್‌ಗೆ ಮತ ನೀಡಿ ಎನ್ನುವ ಮನವಿಯನ್ನೂ ಮಾಡುತ್ತಿದ್ದಾರೆ.

ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ, ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ, ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ, ಸಿದ್ದರಾಮಯ್ಯ ಸೇರಿದಂತೆ ಅನೇಕ ಮುಖಂಡರು ಕಾಂಗ್ರೆಸ್‌ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದಾರೆ. ಮೋದಿ ಅಲೆಗಳನ್ನು ಹಿಮ್ಮೆಟ್ಟಿಸಿ ಮತದಾರರನ್ನು ಒಲಿಸಿಕೊಳ್ಳಲು ಅಬ್ಬರದ ಪ್ರಚಾರಕ್ಕೆ ಮುಂದಾಗಿದೆ.

ಈ ಸಲವೂ ಕಾಂಗ್ರೆಸ್‌ ಹಾದಿ ಸುಗಮವಾಗಿಲ್ಲ. ಮತ್ತೆ ಮೋದಿ ಪರ ಅಲೆ ಕಾಣಿಸುತ್ತಿದೆ. ಇದಕ್ಕಿಂತ ಮುಖ್ಯವಾಗಿ ರಾಜಾ ಅಮರೇಶ್ವರ ನಾಯಕ ಕಾಂಗ್ರೆಸ್‌ನಿಂದ ಬಂದಿರುವುದರಿಂದ ಮತಗಳು ಹಂಚಿಹೋಗುವ ಸಾಧ್ಯತೆಯೂ ಇದೆ.

ಕಾಂಗ್ರೆಸ್‌ ಮೈತ್ರಿ ಪಕ್ಷ ಜೆಡಿಎಸ್‌ ಮುಖಂಡರು ಪ್ರಚಾರದಲ್ಲಿ ತೊಡಗಿ‌ದ್ದಾರೆ. ಮಾನ್ವಿ, ಲಿಂಗಸುಗೂರು ಹಾಗೂ ದೇವದುರ್ಗ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗೆ ಇದು ವರದಾನವಾಗಲಿದೆ.

ಮಾನ್ವಿಯಲ್ಲಿ ಜೆಡಿಎಸ್‌ ಶಾಸಕ ರಾಜಾ ವೆಂಕಟಪ್ಪ ನಾಯಕ, ಲಿಂಗಸುಗೂರಿನಲ್ಲಿ ಸಿದ್ದು ಬಂಡಿ, ದೇವದುರ್ಗದಲ್ಲಿ ಕರೆಮ್ಮ ಕಾಂಗ್ರೆಸ್‌ ಪರ ಪ್ರಚಾರ ಮಾಡುತ್ತಿದ್ದಾರೆ. ಒಟ್ಟಾರೆ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ಸಮಬಲ ಸ್ಪರ್ಧೆ ಏರ್ಪಟ್ಟಿದೆ.

ಬಿ.ವಿ.ನಾಯಕ ರಾಜಕೀಯ ಕುಟುಂಬದವರು. ರಾಜಾ ಅಮರೇಶ್ವರ ನಾಯಕ ಅವರು ರಾಜ ವಂಶಸ್ಥರು. ಇಬ್ಬರೂ ನಾಯಕ ಸಮುದಾಯದವರು. ಇಬ್ಬರಲ್ಲಿ ಮತದಾರರು ಯಾರನ್ನು ಹೆಚ್ಚು ಇಷ್ಟ ಪಡುತ್ತಾರೆ ಎನ್ನುವುದರ ಮೇಲೆ ಫಲಿತಾಂಶ ನಿರ್ಧಾರವಾಗಲಿದೆ.

*ಚುನಾವಣೆ ಗೆಲ್ಲಲು ಮಾತ್ರ ಬಿಜೆಪಿ ನಾಯಕರು ಗಿಮಿಕ್‌ ಮಾಡುತ್ತಾರೆ. ಭರವಸೆ ಈಡೇರಿಸುವುದಿಲ್ಲ ಎನ್ನುವುದು ಗೊತ್ತಾಗಿದೆ. ಸಾಮಾಜಿಕ ನ್ಯಾಯ ಎತ್ತಿಹಿಡಿಯಲು ಜನ ನನಗೆ ಮತ ಹಾಕುತ್ತಾರೆ

- ಬಿ.ವಿ.ನಾಯಕ, ಕಾಂಗ್ರೆಸ್‌ ಅಭ್ಯರ್ಥಿ

* ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಬೇಕೆನ್ನುವ ಆಸೆ ಜನರದ್ದು. ಕೇಂದ್ರದಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲು ಎಲ್ಲರೂ ಬೆಂಬಲಿಸುತ್ತಿದ್ದಾರೆ

- ರಾಜಾ ಅಮರೇಶ್ವರ ನಾಯಕ, ಬಿಜೆಪಿ ಅಭ್ಯರ್ಥಿ

* ರಾಯಚೂರು ಅಭಿವೃದ್ಧಿ ಮಾಡುವವರು ಆಯ್ಕೆಯಾಗಿ ಬರಬೇಕು. ಆಯ್ಕೆಯಾದ ಬಳಿಕ ಕ್ಷೇತ್ರವನ್ನು ಮರೆಯುವವರನ್ನು ಜನರು ದೂರ ಇಡುತ್ತಾರೆ. ಇಂಥವರಿಗೆ ನನ್ನ ಮತವಿಲ್ಲ

- ವಿಕಾಸ ಜೈನ್, ವ್ಯಾಪಾರಿ

*ಈ ಕ್ಷೇತ್ರದಲ್ಲಿ ಬಡವರು, ಅಲ್ಪಸಂಖ್ಯಾತರ ಹಾಗೂ ಹಿಂದುಳಿದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಎಲ್ಲರನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿ ಮಾಡುವವರಿಗೆ ಮತ ನೀಡುತ್ತೇನೆ

- ಮುಬಿಬ್‌ ಅಫ್ಜಲ್‌, ವಿದ್ಯಾರ್ಥಿನಿ

ರಾಯಚೂರು ಲೋಕಸಭಾ ಕ್ಷೇತ್ರದ ಇನ್ನಷ್ಟು ಚುನಾವಣಾ ಸುದ್ದಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.