ರಾಯಚೂರು: ಇಲ್ಲಿಯ ಎಲ್‌ಬಿಎಸ್ ಬಡಾವಣೆಯ ಸಂತೋಷನಗರದಲ್ಲಿ ಸರ್ಕಾರಿ ಜಾಗದಲ್ಲಿ ಅತಿಕ್ರಮಣ ಮಾಡುವ ಉದ್ದೇಶದಿಂದ ಕೆಲವರು ಕೂಟ ರಚಿಸಿಕೊಂಡು ನಿರ್ಮಿಸಿದ್ದ ಶೆಡ್ ಅನ್ನು ರಾಯಚೂರು ಜಿಲ್ಲಾಡಳಿತ ಬುಧವಾರ ಬೆಳಗಿನ ಜಾವ ಪೊಲೀಸ್ ಸರ್ಪಗಾವಲಿನಲ್ಲಿ ತೆರವುಗೊಳಿಸಿತು.
ಸರ್ಕಾರಿ ಪ್ರೌಢ ಶಾಲೆಗೆ ಮೀಸಲಿರಿಸಿದ ಜಾಗದಲ್ಲಿ ಅತಿಕ್ರಮಣ ಮಾಡಿ ಶೆಡ್ ನಿರ್ಮಿಸಿ ಮಂದಿರ ನಿರ್ಮಾಣಕ್ಕೆ ಪ್ರಯತ್ನ ನಡೆಸಿದ್ದರು. ಶೆಡ್‌ನೊಳಗೆ ಶಿವಲಿಂಗ ಹಾಗೂ ನಾಗರ ಮೂರ್ತಿಯನ್ನೂ ತಂದಿಟ್ಟಿದ್ದರು. ವಿವಿಧ ಸಂಘಟನೆಗಳು ಹಾಗೂ ವಿದ್ಯಾರ್ಥಿಗಳ ಪಾಲಕರು ನಿರಂತರವಾಗಿ ಜಿಲ್ಲಾಡಳಿತಕ್ಕೆ ಮನವಿಸಲ್ಲಿಸಿ ಅಕ್ರಮ ಕಟ್ಟಡ ತೆರವುಗೊಳಿಸುವಂತೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ದಿಟ್ಟಕ್ರಮ ಕೈಗೊಂಡರು.
ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಸರ್ವೆ ನಂ. 784/1 ರಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಿಸಲು ಆಗಮಿಸಿದಾಗ ರಾಜಕಾರಣಿಗಳು ಹಾಗೂ ಅತಿಕ್ರಮಣಕಾರರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದರು. ಅಧಿಕಾರಿಗಳ ಕಟ್ಟಡ ನಿರ್ಮಾಣಕ್ಕೆ ಮರಳು ಹಾಗೂ ಕಲ್ಲು ತಂದು ಸುರಿದಾಗ ಕಿಡಿಗೇಡಿಗಳು ರಾತ್ರೋರಾತ್ರಿ ಮಾಯ ಮಾಡುತ್ತಿದ್ದರು. ಹೀಗಾಗಿ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡು ಕಾರ್ಯಾಚರಣೆ ನಡೆಸಿತು. ಶಾಲಾ ಜಾಗದಲ್ಲಿ ನಾಗರ ಮೂರ್ತಿಗಳನ್ನು ಸುರಕ್ಷಿತ ಜಾಗಕ್ಕೆ ಸಾಗಿಸಿದರು. ಸಿಮೆಂಟ್ ಇಟ್ಟಿಗೆ ಶೆಡ್ ತ್ಯಾಜ್ಯವನ್ನು ತೆರವುಗೊಳಿಸಿದರು.
ಶೆಡ್ ತೆರವುಗೊಳಿಸಿದ ಸುದ್ದಿ ತಿಳಿಯುತ್ತಿದ್ದಂತೆಯೇ ಬಿಜೆಪಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಸಮೀಪದ ಟಿಪ್ಪು ಸುಲ್ತಾನ್ ಉದ್ಯಾನ ಜಾಗದಲ್ಲಿ ಪ್ರತಿಭಟನೆ ನಡೆಸಿದರು. ಜಿಲ್ಲಾಡಳಿತ ಮಂದಿರ ತೆರವುಗೊಳಿಸಿದ್ದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.