ADVERTISEMENT

ರಾಯಚೂರು | ಕೃಷ್ಣಾ ನದಿಗೆ ಪ್ರವಾಹ: ಹೊಲಗಳಿಗೆ ನುಗ್ಗಿದ ನೀರು

ನದಿ ಪಾತ್ರದ ಗ್ರಾಮಗಳ ರೈತರಲ್ಲಿ ಹೆಚ್ಚಿದ ಆತಂಕ

​ಪ್ರಜಾವಾಣಿ ವಾರ್ತೆ
Published 25 ಜುಲೈ 2024, 15:11 IST
Last Updated 25 ಜುಲೈ 2024, 15:11 IST
ಹಟ್ಟಿ ಚಿನ್ನದ ಗಣಿ ಸಮೀಪದ ಟಣಮಕಲ್ಲು ಸೇತುವೆ ಮುಳುಗುವ ಹಂತಕ್ಕೆ ಕೃಷ್ಣಾ ನದಿ ನೀರು ಬಂದಿದೆ/ ಚಿತ್ರ: ಅಮರೇಶ ನಾಯಕ
ಹಟ್ಟಿ ಚಿನ್ನದ ಗಣಿ ಸಮೀಪದ ಟಣಮಕಲ್ಲು ಸೇತುವೆ ಮುಳುಗುವ ಹಂತಕ್ಕೆ ಕೃಷ್ಣಾ ನದಿ ನೀರು ಬಂದಿದೆ/ ಚಿತ್ರ: ಅಮರೇಶ ನಾಯಕ   

ರಾಯಚೂರು: ಜಿಲ್ಲೆಯಲ್ಲಿ ಗುರುವಾರ ಮಳೆಯಾಗದಿದ್ದರೂ ನಾರಾಯಣಪುರ ಜಲಾಯಶದಿಂದ ಕ್ಷಷ್ಣಾ ನದಿಗೆ ತೆಗೆದು 2.40 ಲಕ್ಷ ಕ್ಯುಸೆಕ್ ನೀರು ಹರಿಯ ಬಿಟ್ಟಿರುವ ಕಾರಣ ಪ್ರವಾಹ ಬಂದಿದ್ದು, ನದಿ ಪಾತ್ರದ ಗ್ರಾಮಗಳಲ್ಲಿ ಆಗಲೇ ಆತಂಕ ಹೆಚ್ಚಿದೆ. ಈಗಾಗಲೇ ಲಿಂಗಸುಗೂರು ತಾಲ್ಲೂಕಿನ ಮೂರು ಗ್ರಾಮಗಳು ಜಲಾವೃತಗೊಂಡಿವೆ. ನದಿ ದಂಡೆಯ ಹೊಲಗಳಿಗೆ ನೀರು ನುಗ್ಗಿದೆ.

ಕೃಷ್ಣಾ ನದಿಯ ಮೇಲ್ಭಾಗದ ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆಯ ಸುರಿದು ಒಳ ಹರಿವಿನ ಪ್ರಮಾಣವ ಹೆಚ್ಚಾಗಿದೆ. ನಾರಾಯಣಪುರ ಅಣೆಕಟ್ಟಿನ ಒಳಹರಿವು ಸುಮಾರು 2,50,000 ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಮುನ್ಸೂಚನೆ ನೀಡಿದ್ದಾರೆ.

ದೇವದುರ್ಗ ತಾಲ್ಲೂಕಿನ ಹೂವಿನಡಗಿ ಸೇತುವೆ ಮುಳುಗಡೆಯಾಗುವ ಸಾಧ್ಯತೆ ಇದೆ. ಹೀಗಾಗಿ ದೇವದುರ್ಗ ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ ಸ್ಥಳಕ್ಕೆ ಭೇಟಿ ನೀಡಿ, ಸಾರ್ವಜನಿಕರಿಗೆ ತಿಳಿವಳಿಕೆ ನೀಡಿದರು.

ADVERTISEMENT

ಹಟ್ಟಿ ಚಿನ್ನದ ಗಣಿ ವರದಿ: ಲಿಂಗಸುಗೂರು ತಾಲ್ಲೂಕಿನ ಟಣಮಕಲ್ಲು, ಹಾಗೂ ಗದ್ದಿಗಿ ತಾಂಡ ನಡುಗಡ್ಡೆ ಗ್ರಾಮಗಳಲ್ಲಿ ಜಮೀನಿಗೆ ನೀರು ನುಗ್ಗಿದೆ.

ಹತ್ತಿ, ತೊಗರಿ, ಸಜ್ಜೆ ಬೆಳೆಗಳು ನೀರು ಪಾಲಾಗಿವೆ, ಪ್ರವಾಹ ಬಂದಾಗಲೆಲ್ಲ ರೈತರು ಇದೆ ಸಮಸ್ಯೆ ಎದುರಿಸುತ್ತಿದ್ದಾರೆ, ರೈತರಿಗೆ ಬೆಳೆ ಪರಿಹಾರ ನೀಡಬೇಕು ಎಂದು ರೈತ ವೆಂಕಟೇಶ ನಾಯಕ ದೊರೆ ಒತ್ತಾಯಿಸಿದ್ದಾರೆ.

ರಾಯಚೂರು ಉಪ ವಿಭಾಗಾಧಿಕಾರಿ ಮೆಹಬೂಬಿ ಹಾಗೂ ತಹಶೀಲ್ದಾರರು ಜುರಾಲಾ ಡ್ಯಾಮ್ ಗೆ ಭೇಟಿಕೊಟ್ಟು ಪರಿಸ್ಥಿತಿಯನ್ನು ಅವಲೋಕಿಸಿದರು.

ತುಂಗಭದ್ರಾ ಜಲಾಶಯದಿಂದ ನದಿಗೆ ನೀರು; ನದಿಪಾತ್ರದ ಗ್ರಾಮಗಳಲ್ಲಿ ನೆರೆ ಭೀತಿ

ಮಾನ್ವಿ: ಮುನಿರಾಬಾದಿನ ತುಂಗಭದ್ರಾ ಜಲಾಶಯದ ಒಳಹರಿವಿನ ಪ್ರಮಾಣ ಹೆಚ್ಚಾಗಿದ್ದು ಬುಧವಾರ ಸುಮಾರು 26ಸಾವಿರ ಕ್ಯುಸೆಕ್ ನೀರು ನದಿಗೆ ಹರಿಬಿಡಲಾಗಿದೆ. ಜಲಾಶಯದಿಂದ ನದಿಗೆ ನೀರಿನ ಹೊರ ಹರಿವಿನ ಪ್ರಮಾಣ ಹೆಚ್ಚಾದರೆ, ತಾಲ್ಲೂಕಿನ ನದಿಪಾತ್ರದ ಗ್ರಾಮಗಳಿಗೆ ನೆರೆಹಾವಳಿ ಪರಿಸ್ಥಿತಿ ಉದ್ಭವಿಸಲಿದೆ.

ತಾಲ್ಲೂಕು ಆಡಳಿತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಗುರುವಾರ ತಹಶೀಲ್ದಾರ್ ರಾಜು ಪಿರಂಗಿ ನದಿಪಾತ್ರದ ಚೀಕಲಪರ್ವಿ, ಯಡಿವಾಳ, ದದ್ದಲ, ಉಮಳಿಪನ್ನೂರು ಮತ್ತಿತರ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಸಂಭವನೀಯ ನೆರೆಹಾವಳಿ ಪರಿಸ್ಥಿತಿ ಬಗ್ಗೆ ಗ್ರಾಮಸ್ಥರಿಗೆ ಜಾಗೃತಿ ಮೂಡಿಸಲು ಕಂದಾಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಂತರ ಸುದ್ದಿಗಾರರ ಜತೆಗೆ ಮಾತನಾಡಿದ ತಹಶೀಲ್ದಾರ್ ರಾಜು ಪಿರಂಗಿ,' ತುಂಗಭದ್ರಾ ಜಲಾಶಯದಿಂದ ನದಿಗೆ ನೀರು ಬಿಟ್ಟಿರುವ ಹಿನ್ನೆಲೆಯಲ್ಲಿ ನದಿಪಾತ್ರದ ಗ್ರಾಮಗಳ ರೈತರು ನದಿದಡದ ಕೃಷಿ ಪಂಪ್ ಸೆಟ್ ಗಳನ್ನು ತೆರವುಗೊಳಿಸಲು ಸೂಚಿಸಲಾಗಿದೆ. ಜೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನದಿ ದಡದ ಸ್ಥಳಕ್ಕೆ ಜನರು , ಜಾನುವಾರುಗಳಲು ತೆರಳದಂತೆ ತಿಳಿಸಲಾಗಿದೆ. ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.