ADVERTISEMENT

ರಾಯಚೂರು | ದಾಳಿ ಮಾಡಿದ ಚಿರತೆಯನ್ನೇ ಕೊಂದ ಗ್ರಾಮಸ್ಥರು

ದೇವದುರ್ಗ ತಾಲ್ಲೂಕಿನ ಡಿ.ಕರಡಿಗುಡ್ಡ ಚಿರತೆ ದಾಳಿಗೊಳಗಾದ ನಾಲ್ವರು ಆಸ್ಪತ್ರೆಗೆ ದಾಖಲು

​ಪ್ರಜಾವಾಣಿ ವಾರ್ತೆ
Published 7 ಜುಲೈ 2024, 15:28 IST
Last Updated 7 ಜುಲೈ 2024, 15:28 IST
ದೇವದುರ್ಗ ತಾಲ್ಲೂಕಿನ ಡಿ ಕರಡಿಗುಡ್ಡ ಗ್ರಾಮದಲ್ಲಿ ಗ್ರಾಮಸ್ಥರು ಚಿರತೆಯನ್ನು ಕೊಂದು ಮೆರವಣಿಗೆ ಮಾಡಿದರು
ದೇವದುರ್ಗ ತಾಲ್ಲೂಕಿನ ಡಿ ಕರಡಿಗುಡ್ಡ ಗ್ರಾಮದಲ್ಲಿ ಗ್ರಾಮಸ್ಥರು ಚಿರತೆಯನ್ನು ಕೊಂದು ಮೆರವಣಿಗೆ ಮಾಡಿದರು   

ದೇವದುರ್ಗ: ತಾಲ್ಲೂಕಿನ ಡಿ.ಕರಡಿಗುಡ್ಡ ಗ್ರಾಮದ ಹೊರವಲಯದಲ್ಲಿ ಮೂವರ ಮೇಲೆ ಚಿರತೆ ದಾಳಿ ಮಾಡಿದ್ದಕ್ಕೆ ಆಕ್ರೋಶಗೊಂಡ ಗ್ರಾಮಸ್ಥರು ದೊಣ್ಣೆಗಳಿಂದ ಹೊಡೆದು ಚಿರತೆಯನ್ನೇ ಕೊಂದು ಹಾಕಿದ್ದಾರೆ.

ಗ್ರಾಮದ ಬಾಲಕನೊಬ್ಬ ಬೆಳಿಗ್ಗೆ 8 ಗಂಟೆಗೆ ಬಯಲು ಶೌಚಕ್ಕೆ ಹೊರಟಿದ್ದಾಗ ಚಿರತೆ ಕಾಣಿಸಿದೆ. ಗಾಬರಿಗೊಂಡ ಬಾಲಕ ತಕ್ಷಣ ಮರಳಿ ಮನೆಗೆ ಬಂದು ಗ್ರಾಮಸ್ಥರಿಗೆ ಚಿರತೆ ಕಾಣಿಸಿದ್ದನ್ನು ತಿಳಿಸಿದ್ದಾನೆ.

‘‌ಮಕ್ಕಳ ಮೇಲೆ ದಾಳಿ ಮಾಡಿದರೆ ಕಷ್ಟ’ ಎಂದು ಆತಂಕಗೊಂಡ ಗ್ರಾಮಸ್ಥರು ಗುಂಪು ಕಟ್ಟಿಕೊಂಡು ಶಿಳ್ಳೆ–ಕೇಕೆ ಹಾಕುತ್ತ ಪೊದೆಗಳತ್ತ ಹೋಗಿದ್ದಾರೆ. ಇದೇ ಅವಧಿಯಲ್ಲಿ ಹಠಾತ್ ಎರಗಿದ ಚಿರತೆ ಗ್ರಾಮದ ರಮೇಶ (35) ಮೇಲೆ ದಾಳಿ ಮಾಡಿ ಬಲಗೈ ಕಚ್ಚಿ ಗಾಯಗೊಳಿಸಿದೆ. ಬಿಡಿಸಲು ಹೋದ ಮಲ್ಲಣ್ಣ (42), ರಂಗನಾಥ (29) ಅವರ ಮೇಲೆಯೂ ದಾಳಿ ಮಾಡಿದೆ. ಮೂವರು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ADVERTISEMENT

ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮೊಬೈಲ್‌ ಮೂಲಕ ಮಾಹಿತಿ ನೀಡಿದರು. ಘಟನೆ ನಡೆದ ಸ್ಥಳಕ್ಕೆ ಅರಣ್ಯ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

‘ಚಿರತೆಗೆ ಅರವಳಿಕೆ ನೀಡಿ ಅಥವಾ ಬಲೆ ಹಾಕಿ ಹಿಡಿದು ಬೇರೆ ಕಡೆ ಸಾಗಿಸಬೇಕು’ ಎಂದು ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗೆ ಹಲವು ಬಾರಿ ಮನವಿ ಮಾಡಿದರೂ ಸಮರ್ಪಕ ಉತ್ತರ ದೊರೆಯಲಿಲ್ಲ. ಮಧ್ಯಾಹ್ನ 2 ಗಂಟೆಗೆ ಮತ್ತೊಬ್ಬ ಗ್ರಾಮಸ್ಥನ ಮೇಲೆ ಚಿರತೆ ದಾಳಿ ಮಾಡಿದಾಗ ಗ್ರಾಮಸ್ಥರು ರೊಚ್ಚಿಗೆದ್ದರು. ದೊಣ್ಣೆಗಳನ್ನು ಹಿಡಿದುಕೊಂಡು ಗುಡ್ಡದ ಮೇಲೆ ಹೋಗಿ ಹುಡುಕಾಡಿದರು. ಸಂಜೆ 5 ಗಂಟೆ ವೇಳೆಗೆ ಬಂಡೆಗಲ್ಲು ಮಧ್ಯೆ ಕುಳಿತಿರುವುದು ಕಾಣಿಸಿದೆ. ನಂತರ ಭರ್ಚಿಯಿಂದ ಚುಚ್ಚಿ, ದೊಣ್ಣೆಗಳಿಂದ ಹೊಡೆದು ಕೊಂದು ಹಾಕಿದರು’ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಚಿರತೆಯನ್ನು ಕೊಂದ ನಂತರ ಕೆಲವರು ಚಿರತೆ ಶವದೊಂದಿಗೆ ಫೋಟೊ ತೆಗೆಸಿಕೊಂಡರು. ನಂತರ ಅದರ ಕಾಲುಗಳನ್ನು ಹಿಡಿದು ಎತ್ತುಕೊಂಡು ಮೆರವಣಿಗೆ ಮಾಡಿದರು. ಅರಣ್ಯ ಇಲಾಖೆ ಸಿಬ್ಬಂದಿ ಮೂಕ ಪ್ರೇಕ್ಷಕರಾಗಿದ್ದರು.

ಮೇ 18ರಂದು ವಾಚನಾಯಕ ತಾಂಡದಲ್ಲಿ ಆಕಳು ಮೇಲೆ ಚಿರತೆ ದಾಳಿ ನಡೆಸಿ ಕೊಂದು ಹಾಕಿತ್ತು. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಜಾಲಹಳ್ಳಿ, ಬಿ. ಗಣೇಕಲ್, ಎನ್ ಗಣೇಕಲ್, ಆಲ್ಕೋಡ ಮತ್ತು ಅರಕೇರಾ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಎರಡು ತಿಂಗಳಲ್ಲಿ ತಾಲ್ಲೂಕಿನಾದ್ಯಂತ ಚಿರತೆ ಕಾಣಿಸಿಕೊಳ್ಳುತ್ತಿದ್ದರೂ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಗ್ರಾಮಸ್ಥರೇ ಚಿರತೆಯನ್ನು ಕೊಂದು ಹಾಕಿದ್ದಾರೆ.

ದೇವದುರ್ಗ ತಾಲ್ಲೂಕಿನ ಡಿ.ಕರಡಿಗುಡ್ಡ ಗ್ರಾಮದಲ್ಲಿ ಚಿರತೆ ದಾಳಿ ಒಳಗಾದ ವ್ಯಕ್ತಿಯನ್ನು ಆಸ್ಪತ್ರೆಗೆ ಒಯ್ಯುತ್ತಿರುವ ಗ್ರಾಮಸ್ಥರು
ದೇವದುರ್ಗ ತಾಲ್ಲೂಕಿನ ಡಿ ಕರಡಿಗುಡ್ಡ ಗ್ರಾಮದಲ್ಲಿ ಚಿರತೆ ದಾಳಿ ಒಳಗಾದ ವ್ಯಕ್ತಿಯೊಬ್ಬರು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ
ದೇವದುರ್ಗ ತಾಲ್ಲೂಕಿನ ಡಿ.ಕರಡಿಗುಡ್ಡ ಗ್ರಾಮದಲ್ಲಿ ಗ್ರಾಮಸ್ಥರ ಆಕ್ರೋಶಕ್ಕೆ ಬಲಿಯಾದ ಚಿರತೆ

‘ಅವಲೋಕಿಸಿ ಪ್ರಕರಣ’ ‘ಗ್ರಾಮದಲ್ಲಿ ಮೂವರ ಮೇಲೆ ಚಿರತೆ ದಾಳಿ ನಡೆಸಿರುವ ಮಾಹಿತಿ ದೊರೆತ ತಕ್ಷಣ ಅರಣ್ಯ ಇಲಾಖೆ ಪೊಲೀಸ್‌ ಇಲಾಖೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲಿಸಿದ್ದಾರೆ. ಪ್ರಕರಣವನ್ನು ಅವಲೋಕಿಸಿ ಚಿರತೆ ಕೊಂದವರ ವಿರುದ್ಧ ಕ್ರಮಕೈಗೊಳ್ಳಲಾಗುವುದು’ ಎಂದು ಅರಣ್ಯ ಇಲಾಖೆಯ ಡಿಸಿಎಫ್‌ ಪ್ರವೀಣ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.