ADVERTISEMENT

ರಾಯಚೂರು: ಜಿಲ್ಲೆಯ ಇಬ್ಬರು ಶಾಸಕರಿಗೆ ಒಲಿದ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ

ಡಾ. ಶಿವರಾಜ ಪಾಟೀಲ, ಶಿವನಗೌಡ ನಾಯಕ ಅವರಿಗೆ ಅಧಿಕಾರ ಭಾಗ್ಯ

ನಾಗರಾಜ ಚಿನಗುಂಡಿ
Published 27 ಜುಲೈ 2020, 14:42 IST
Last Updated 27 ಜುಲೈ 2020, 14:42 IST
ಶಿವನಗೌಡ ನಾಯಕ
ಶಿವನಗೌಡ ನಾಯಕ   

ರಾಯಚೂರು: ರಾಜ್ಯದಲ್ಲಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವು ಅಧಿಕಾರ ವಹಿಸಿಕೊಂಡು ಒಂದು ವರ್ಷ ಪೂರೈಸುತ್ತಿದ್ದಂತೆ ಶಾಸಕರಾದ ಶಿವನಗೌಡ ನಾಯಕ ಹಾಗೂ ಡಾ.ಶಿವರಾಜ ಪಾಟೀಲ ಅವರಿಗೆ ಅಧಿಕಾರ ಅರಸಿಕೊಂಡು ಬಂದಿದೆ.

ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ಶಿವನಗೌಡ ನಾಯಕ ಹಾಗೂ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷರನ್ನಾಗಿ ಡಾ.ಶಿವರಾಜ ಪಾಟೀಲ ಅವರನ್ನು ನೇಮಕ ಮಾಡಲಾಗಿದೆ. ಸರ್ಕಾರದಲ್ಲಿ ಜಿಲ್ಲೆಗೆ ಒಂದಾದರೂ ಸಚಿವ ಸ್ಥಾನ ನೀಡಬಹುದು ಎನ್ನುವ ನಿರೀಕ್ಷೆ ಹುಸಿಯಾಗಿತ್ತು. ಒಂದು ವರ್ಷ ಕಳೆಯುತ್ತಿದ್ದಂತೆ ಬಿಜೆಪಿಯಿಂದ ಆಯ್ಕೆಯಾಗಿದ್ದ ಇಬ್ಬರೂ ಶಾಸಕರಿಗೆ ಅಧಿಕಾರ ದೊರಕಿದಂತಾಗಿದೆ.

ಒಂದು ವರ್ಷದಲ್ಲಿ ರಾಜ್ಯ ಸರ್ಕಾರ ಮಾಡಿರುವ ಸಾಧನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಯೋಜನೆಯಲ್ಲಿ ಜಿಲ್ಲೆಯ ಬಿಜೆಪಿ ಕಾರ್ಯಕರ್ತರು ಮುಳುಗಿದ್ದರು. ಇದೀಗ ಜಿಲ್ಲೆಯ ಇಬ್ಬರೂ ಶಾಸಕರಿಗೆ ಅಧಿಕಾರ ಬಂದಿರುವುದಕ್ಕೆ ಕಾರ್ಯಕರ್ತರ ಪಡೆ ಸಂಭ್ರಮ ಆಚರಿಸುತ್ತಿದೆ. ದೇವದುರ್ಗ ತಾಲ್ಲೂಕಿನಲ್ಲಿ ಪ್ರತಿ ಗ್ರಾಮಗಳಿಗೂ ಉತ್ತಮ ರಸ್ತೆ ಸಂಪರ್ಕ ವ್ಯವಸ್ಥೆ ಕಲ್ಪಿಸುವಲ್ಲಿ ಶಿವನಗೌಡ ಅವರು ಯಶಸ್ವಿಯಾಗಿದ್ದಾರೆ. ಇದೀಗ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಆಗಿರುವುದರಿಂದ ಇಡೀ ಜಿಲ್ಲೆಗೆ ವಿಶೇಷ ಆದ್ಯತೆ ಕೊಟ್ಟು ಅಭಿವೃದ್ಧಿ ರಸ್ತೆಗಳನ್ನು ಅಭಿವೃದ್ಧಿ ಮಾಡಿಸುತ್ತಾರೆ ಎಂದು ನಿರೀಕ್ಷಿಸಲಾಗುತ್ತಿದೆ.

ADVERTISEMENT

ಜೈವಿಕ ಇಂಧನ ಅಭಿವೃದ್ಧಿಗೆ ಪೂರಕವಾಗುವ ಸಸಿಗಳನ್ನು ಬೆಳೆಸುವುದಕ್ಕೆ ಜಿಲ್ಲೆಯ ರೈತರಿಗೆ ಹಾಗೂ ವಿವಿಧ ಸರ್ಕಾರಿ ಇಲಾಖೆಗಳಿಗೆ ಪ್ರೋತ್ಸಾಹ ದೊರಕಿಸುವುದು ಮತ್ತು ಪರ್ಯಾಯ ಇಂಧನ ಮೂಲವನ್ನು ಸದೃಢ ಮಾಡುವುದಕ್ಕೆ ಡಾ.ಶಿವರಾಜ ಪಾಟೀಲ ಅವರು ಮಹತ್ವ ನೀಡುತ್ತಾರೆ ಎಂದು ನಿರೀಕ್ಷಿಸಲಾಗುತ್ತಿದೆ. ವಿಶೇಷವೆಂದರೆ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಎಆರ್‌ಡಿಬಿ)ಗೆ ಅಧ್ಯಕ್ಷರಿಲ್ಲದೆ ಇಲ್ಲಿಯವರೆಗೂ ಅನೇಕ ಅಭಿವೃದ್ಧಿ ಕೆಲಸಗಳು ಕುಂಠಿತವಾಗಿದ್ದವು. ಇದೀಗ ದತ್ತಾತ್ರೇಯ ಪಾಟೀಲ ರೇವೂರ ಅವರು ಅಧ್ಯಕ್ಷರಾಗಿದ್ದಾರೆ. ರಾಯಚೂರು ಜಿಲ್ಲೆಯಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿಗಾಗಿ ಕೆಕೆಆರ್‌ಡಿಬಿಯಿಂದ ಹೆಚ್ಚು ಅನುದಾನ ತಂದು, ಸಮರ್ಪಕವಾಗಿ ಬಳಸುವುದಕ್ಕೆ ಶಿವನಗೌಡ ನಾಯಕ ಮತ್ತು ಡಾ.ಶಿವರಾಜ ಪಾಟೀಲ ಅವರಿಗೆ ಇನ್ನು ಮುಂದೆ ಸುಗಮ ಆಗಬಹುದು.

ಸದ್ಯಕ್ಕೆ ಜಿಲ್ಲೆಯಾದ್ಯಂತ ಜನರು ಕೋವಿಡ್ ಸಂಕಷ್ಟದಲ್ಲಿ ಮುಳುಗಿದ್ದಾರೆ. ಹೊರರಾಜ್ಯಗಳು ಮತ್ತು ಹೊರಜಿಲ್ಲೆಗಳಿಗೆ ದುಡಿಯುವುದಕ್ಕೆ ಹೋಗಿದ್ದ ಬಡವರು ಗ್ರಾಮಗಳಿಗೆ ವಾಪಸಾಗಿದ್ದಾರೆ. ಉದ್ಯೋಗ ಕೇಳುವ ಕೈಗಳ ಸಂಖ್ಯೆ ಹೆಚ್ಚಾಗಿದ್ದು, ಜನಪ್ರತಿನಿಧಿಗಳೇ ಈ ಸಮಸ್ಯೆಗೆ ಪರಿಹಾರ ಕಲ್ಪಿಸುವ ಕಾರ್ಯ ಮಾಡಬೇಕಿದೆ. ದುಡಿಯುವವರಿಗೆ ವ್ಯಾಪಕವಾಗಿ ಉದ್ಯೋಗ ಸೃಷ್ಟಿಸಬೇಕಾಗಿದೆ.

ಪ್ರತಾಪಗೌಡಗೆ ಬಾರದ ಅದೃಷ್ಟ: ಕಾಂಗ್ರೆಸ್‌ ತೊರೆದು ಬಿಜೆಪಿ ಸೇರ್ಪಡೆಯಾಗಿರುವ ಮಸ್ಕಿ ಕ್ಷೇತ್ರದ ಅನರ್ಹ ಶಾಸಕ ಪ್ರತಾಪಗೌಡ ಪಾಟೀಲ ಅವರಿಗೆಮಾತ್ರ ಅಧಿಕಾರ ಪಡೆಯುವ ಅದೃಷ್ಟ ಒಲಿದು ಬರುತ್ತಿಲ್ಲ. ಟಿಎಲ್‌ಬಿಸಿ ಕಾಡಾ ಅಧ್ಯಕ್ಷ ಬಸನಗೌಡ ಪಾಟೀಲ ತುರ್ವಿಹಾಳ ಅವರು ಕೋರ್ಟ್‌ನಲ್ಲಿ ದಾಖಲಿಸಿದ ದೂರು ಕಗ್ಗಂಟಾಗಿ ಪರಿಣಮಿಸಿದೆ. ಕೋರ್ಟ್‌ ಪ್ರಕರಣದ ವಿಚಾರಣೆಯೂ ಮುಗಿಯುತ್ತಿಲ್ಲ; ಚುನಾವಣೆಯೂ ಘೋಷಣೆ ಆಗುತ್ತಿಲ್ಲ. ಪ್ರತಾಪಗೌಡ ಅಡ್ಡಕತ್ತರಿಯಲ್ಲಿ ಸಿಲುಕಿದಂತಾಗಿದೆ.

ಶಾಸಕ ಡಾ.ಶಿವರಾಜ ಪಾಟೀಲ ಪ್ರತಿಕ್ರಿಯೆಗೆ ಲಭ್ಯವಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.