ADVERTISEMENT

ರಾಯಚೂರು ವಿವಿ, ಐಐಐಟಿಗೆ ಕೋವಿಡ್‌ ವಿಘ್ನ

ಜಿಲ್ಲೆಯ ಹೊಸ ಯೋಜನೆಗಳಿಗೆ ಅಡೆತಡೆಗಳೇ ಅಧಿಕ

ನಾಗರಾಜ ಚಿನಗುಂಡಿ
Published 3 ಆಗಸ್ಟ್ 2021, 19:30 IST
Last Updated 3 ಆಗಸ್ಟ್ 2021, 19:30 IST
ರಾಯಚೂರು ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನ ನೂತನ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಆರಂಭಿಸಿರುವ ಐಐಐಟಿ ಕಾಲೇಜು
ರಾಯಚೂರು ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನ ನೂತನ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಆರಂಭಿಸಿರುವ ಐಐಐಟಿ ಕಾಲೇಜು   

ರಾಯಚೂರು: ಹತ್ತಾರು ತಡೆಗಡೆ ವಿರುದ್ಧ ಜನಾಂದೋಲನ ರೂಪಿಸಿ ಜಿಲ್ಲೆಗೆ ಮಂಜೂರಿ ಮಾಡಿಕೊಂಡಿರುವ ರಾಯಚೂರು ವಿಶ್ವವಿದ್ಯಾಲಯ ಮತ್ತು ರಾಯಚೂರು ಐಐಐಟಿ, ಹಲವು ಕೊರತೆಗಳ ಮಧ್ಯೆಯೂ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಪ್ರಾರಂಭಿಸಲು ತಯಾರಿ ಮಾಡಿಕೊಳ್ಳಲಾಗಿತ್ತು. ಆದರೆ, ಕೋವಿಡ್‌ ಮೂರನೇ ಅಲೆ ಈಗ ವಿಘ್ನ ಅಡ್ಡಿಯಾಗಿದೆ.

ಅಂದುಕೊಂಡಂತೆ ಆಗಿದ್ದರೆ, ಆಗಸ್ಟ್‌ 16 ರಿಂದ ರಾಯಚೂರು ಐಐಐಟಿ ತರಗತಿಗಳನ್ನು ಆಫ್‌ಲೈನ್‌ನಲ್ಲಿ ಪ್ರಾರಂಭಿಸುವುದಕ್ಕೆ ನಿರ್ದೇಶಕ ಮಂಡಳಿ ನಿಶ್ಚಯ ಮಾಡಿತ್ತು. ಇದೀಗ ನೆರೆಯ ರಾಜ್ಯಗಳಲ್ಲಿ ಕೋವಿಡ್‌ ಮೂರನೇ ಅಲೆ ಪ್ರಕರಣಗಳು ಪತ್ತೆ ಆಗುತ್ತಿರುವುದು ಆತಂಕ ಸೃಷ್ಟಿಸಿದೆ. ಈ ಶೈಕ್ಷಣಿಕ ವರ್ಷವೂ ಆನ್‌ಲೈನ್‌ನಲ್ಲೇ ಮುಗಿದುಹೋಗುತ್ತದೆ ಎನ್ನುವ ಭೀತಿ ಜನರನ್ನು ಕಾಡುತ್ತಿದೆ.

ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ರಾಯಚೂರು ವಿಶ್ವವಿದ್ಯಾಲಯಕ್ಕೆ ರಾಜ್ಯ ಸರ್ಕಾರವು ಕನಿಷ್ಠ ಬೂನಾದಿ ಹಾಕುವುದಕ್ಕೂ ಅನುದಾನ ಘೋಷಿಸಿಲ್ಲ. ಹೀಗಾಗಿ ಯರಗೇರಾ ಸ್ನಾತಕೋತ್ತರ ಕೇಂದ್ರದ ಹಾಲಿ ಕಟ್ಟಡಗಳನ್ನೇ ಸುಸಜ್ಜಿತಗೊಳಿಸಿ ತರಗತಿಗಳನ್ನು ಪ್ರಾರಂಭಿಸುವುದಕ್ಕೆ ಕುಲಪತಿ ಹಾಗೂ ಬೋಧಕ ಸಿಬ್ಬಂದಿ ತಯಾರಿ ಮಾಡಿಕೊಂಡಿದ್ದರು. ಆದರೆ, ಕೋವಿಡ್‌ 3ನೇ ಅಲೆ ನಿರೀಕ್ಷೆಯಲ್ಲಿ ಮುಂದೆ ಏನಾಗುತ್ತದೆಯೋ ಎನ್ನುವ ಅನಿಶ್ಚಿತ ಆವರಿಸಿಕೊಂಡಿದೆ.

ADVERTISEMENT

ವಿಶ್ವವಿದ್ಯಾಲಯದಲ್ಲಿ ಅಗತ್ಯ ಭೌತಿಕ ಯೋಜನೆಗಳನ್ನು ಪೂರ್ಣಗೊಳಿಸುವುದಕ್ಕೂ ಸರ್ಕಾರ ಅನುದಾನ ಒದಗಿಸಿಲ್ಲ. ಹೀಗಾಗಿ ನೂತನವಾಗಿ ನೇಮಕವಾಗಿರುವ ಕುಲಪತಿ, ಕುಲಸಚಿವರು ಬೆಂಗಳೂರಿಗೆ ಅಲೆಯುತ್ತಿದ್ದಾರೆ. ಕಡತಗಳನ್ನು ಹಿಡಿದುಕೊಂಡು ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಭೇಟಿಯಾಗಿ ಬರುತ್ತಿದ್ದಾರೆ.

‘ಕೋವಿಡ್‌ ಇದ್ದರೂ ಸರ್ಕಾರದ ವಿವಿಧ ಕಾಮಗಾರಿಗಳಿಗೆ ಕೋಟಿಗಟ್ಟಲೇ ಅನುದಾನ ಬಿಡುಗಡೆ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯಕ್ಕೆ ಶಾಶ್ವತವಾಗಿ ಬೆಳಕು ತುಂಬುವಂತಹ ವಿಶ್ವವಿದ್ಯಾಲಯಕ್ಕೆ ಏಕೆ ಅನುದಾನ ಕೊಡುತ್ತಿಲ್ಲ’ ಎಂದು ಜಿಲ್ಲೆಯಲ್ಲಿ ಪ್ರಜ್ಞಾವಂತ ನಾಗರಿಕರೂ ಪ್ರಶ್ನಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.