ಸಿಂಧನೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಸಲ್ಲಿಸಿದ್ದ ನಿರ್ದೇಶಕರ ನಾಮಪತ್ರ ಪರಿಶೀಲನೆಯಲ್ಲಿ ಚುನಾವಣಾಧಿಕಾರಿ ರವಿಯಪ್ಪ ಅವರಿಂದ ಗೊಂದಲ ಸೃಷ್ಠಿಯಾದ ಹಿನ್ನೆಲೆಯಲ್ಲಿ ಚಂದ್ರಶೇಖರ ಹಿರೇಮಠರ ನಾಮಪತ್ರ ರದ್ದು ಪಡಿಸುವಂತೆ ಪ್ರತಿಸ್ಪರ್ಧಿ ವೀರೇಶ ಸಾಸಲಮರಿ ಹಾಗೂ ಅವರ ಬಣ ಪಟ್ಟು ಹಿಡಿದ ಪ್ರಸಂಗ ನಡೆಯಿತು.
ಸ್ಥಳೀಯ ತಾಲ್ಲೂಕು ಪಂಚಾಯಿತಿ ಆವರಣದಲ್ಲಿರುವ ಕೊಠಡಿಯಲ್ಲಿ ಶುಕ್ರವಾರ ನಾಮಪತ್ರಗಳ ಪರಿಶೀಲನೆ ನಡೆಯಿತು. ಚುನಾವಣಾಧಿಕಾರಿ ರವಿಯಪ್ಪ ಅವರು ಅಧ್ಯಕ್ಷ ಸ್ಥಾನದ ಸ್ಪರ್ಧಾಳು ವೀರೇಶ ಸಾಸಲಮರಿಗೆ ಕೊಟ್ಟ ನಿರ್ದೇಶಕರ ಮತದಾರರ ಪಟ್ಟಿಯಲ್ಲಿ ಮತ್ತೊಬ್ಬ ಸ್ಪರ್ಧಾಳು ಚಂದ್ರಶೇಖರ ಹಿರೇಮಠರ ಹೆಸರು ಕ್ರಮ ಸಂಖ್ಯೆ 11 ರಲ್ಲಿದೆ. ಆದರೆ, ಚಂದ್ರಶೇಖರ ಹಿರೇಮಠರಿಗೆ ಕೊಟ್ಟ ಪಟ್ಟಿಯಲ್ಲಿ ಕ್ರಮ ಸಂಖ್ಯೆ 12ರಲ್ಲಿ ಹಿರೇಮಠರ ಹೆಸರಿದೆ. ಅಲ್ಲದೇ ಚಂದ್ರಶೇಖರ ಸಲ್ಲಿಸಿದ ನಾಮಪತ್ರದಲ್ಲಿ ರಶೀದಿ ಸಂಖ್ಯೆಯನ್ನು ತಿದ್ದಲಾಗಿದೆ. ಜೊತೆಗೆ ಸೂಚಕರು ಮತ್ತು ಅನುಮೋದಕರು ಚಂದ್ರಶೇಖರ ಯಾವ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ ಎಂದು ನಾಮಪತ್ರದಲ್ಲಿ ಸೂಚಿಸಿಲ್ಲ. ಹೀಗಾಗಿ ಚಂದ್ರಶೇಖರ ಹಿರೇಮಠರ ನಾಮಪತ್ರ ಅಸಂಬದ್ಧವಾಗಿದೆ. ಅದನ್ನು ರದ್ದುಪಡಿಸಬೇಕು ಎಂದು ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿರುವ ವೀರೇಶ ಸಾಸಲಮರಿ ಚುನಾವಣಾಧಿಕಾರಿಯನ್ನು ಒತ್ತಾಯಿಸಿದರು.
ಮಧ್ಯಾಹ್ನ 12 ರಿಂದ ಸಂಜೆ 4.30 ರವರೆಗೆ ಚುನಾವಣಾಧಿಕಾರಿಗಳ ಮುಂದೆ ವೀರೇಶ ಹಾಗೂ ಅವರ ಬಣದವರು ಕುಳಿತು ಧರಣಿ ನಡೆಸಿದಾಗ್ಯೂ ಚುನಾವಣಾಧಿಕಾರಿ ರವಿಯಪ್ಪ ಅವರು ಚಂದ್ರಶೇಖರ ಹಿರೇಮಠ ಅವರ ನಾಮಪತ್ರವನ್ನು ರದ್ದುಪಡಿಸಲಿಲ್ಲ. ಇಬ್ಬರ ನಾಮಪತ್ರವನ್ನು ಬಹಿರಂಗ ಪಡಿಸಿ, ಯಾರು ಸಿಂಧು, ಯಾರು ಅಸಿಂಧು ಎಂಬುದನ್ನು ಘೋಷಿಸುವಂತೆ ಕೇಳಿಕೊಂಡರೂ ಸ್ಪಂದಿಸಲಿಲ್ಲ. ಇದರಿಂದ ರವಿಯಪ್ಪ ಅವರು ಪಕ್ಷಪಾತ ಮಾಡಿದ್ದಾರೆ ಎಂದು ವೀರೇಶ ಬಣ ಆಕ್ರೋಶ ವ್ಯಕ್ತಪಡಿಸಿತು.
ಇದೇ ವೇಳೆ ವೀರೇಶ ಮತ್ತು ಚಂದ್ರಶೇಖರ ಬಣಗಳ ನಡುವೆ ವಾಗ್ವಾದ ನಡೆಯಿತು.
ಈ ವಿಷಯ ತಿಳಿಯುತ್ತಿದ್ದಂತೆ ಶಹರ ಪೊಲೀಸ್ ಠಾಣೆಯ ಪೊಲೀಸ್ ಇನ್‌ಸ್ಪೆಪೆಕ್ಟರ್ ದುರುಗಪ್ಪ ಡೊಳ್ಳಿನ್ ಹಾಗೂ ಸಿಬ್ಬಂದಿ ಅಭ್ಯರ್ಥಿಗಳನ್ನು ಹೊರತುಪಡಿಸಿ ಇನ್ನುಳಿದವರನ್ನು ಹೊರಗೆ ಕಳುಹಿಸಿದರು.
ನಂತರ ಚುನಾವಣಾಧಿಕಾರಿ ರವಿಯಪ್ಪ ಅವರು ‘ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ವೀರೇಶ ಮತ್ತು ಚಂದ್ರಶೇಖರ ಅವರು ಸಲ್ಲಿಸಿದ ನಾಮಪತ್ರಗಳು ಸರಿಯಾಗಿವೆ. ಮತಪತ್ರಗಳು ಸರಿ ಇದ್ದು, ನಾಮಪತ್ರಗಳು ಒಪ್ಪಿಗೆಗೆ ಇಬ್ಬರು ಒಪ್ಪಿ ಸಹಿ ಮಾಡಿರುತ್ತಾರೆ. ಈ ಇಬ್ಬರು ಅಂತಿಮ ಕಣದಲ್ಲಿದ್ದಾರೆ. ರಾಜ್ಯ ಪರಿಷತ್ ಸದಸ್ಯ ಮತ್ತು ಖಜಾಂಚಿ ಸ್ಥಾನಕ್ಕೆ ಸ್ಪರ್ಧಿಸಿದವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ’ ಎಂದು ಲಿಖಿತ ರೂಪದಲ್ಲಿ ನೋಟಿಸ್‍ನ್ನು ಬಾಗಿಲಿಗೆ ಹಂಚಿ ತೆರಳಿದರು.
ಇದರಿಂದ ರೊಚ್ಚಿಗೆದ್ದ ವೀರೇಶ ಸಾಸಲಮರಿ, ರಾಜೇಂದ್ರಕುಮಾರ, ಪ್ರಭಾಕರ್ ಕುಲಕರ್ಣಿ, ಬಸವರಾಜ ಬಿಳೆಕಲ್, ಅಶೋಕ ಗಾಜಿ, ಕಳಕಪ್ಪ ಗಡದ್, ಆದೇಶ ತಿಡಿಗೋಳ ಮತ್ತಿತರರು ಕೊಠಡಿಗಳ ಮುಂಭಾಗದಲ್ಲಿ ಕುಳಿತು ಘೋಷಣೆ ಕೂಗಿ ಪ್ರತಿಭಟಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.