ಮಾನ್ವಿ: ‘ನಮಗ ದುಡ್ಯದ ಬುಟ್ರ ಬ್ಯಾರೆ ಏನೂ ಗೊತ್ತಿಲ್ರಿ, ನಮ್ಮುಡುಗ ಯತಾರೀತಿ ಇದ್ದ, ಎರಡು ತಿಂಗಳಿಂದ ಕೆಲ್ಸ ಬುಟ್ಟು ಮನೇಲಿದ್ದ, ಇಂಗ್ಯಾಕ್ ಮಾಡ್ಯಾನೋ ಗೊತ್ತಿಲ್ರಿ, ಏನಂತ ತಿಳಿದಂಗ್ಯಾಗದ್ರಿ’ ಇವು ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಕೊಲೆ ಬೆದರಿಕೆ ಹಾಕಿ ಈಗ ಮುಂಬೈ ನಗರದ ಪೊಲೀಸರ ವಶದಲ್ಲಿರುವ ಪಟ್ಟಣದ ಯುವಕ ಸೊಹೆಲ್ ಪಾಷಾನ ತಂದೆ ರಸೂಲ್ ಪಾಷಾ ಅವರ ಆತಂಕದ ಮಾತುಗಳು.
ಪಟ್ಟಣದ ವಾರ್ಡ್ ನಂ.5 ರಲ್ಲಿ ಶಾದಿ ಮಹಲ್ ಹತ್ತಿರದ ಚಿಕ್ಕ ಮನೆಯಲ್ಲಿ ವಾಸವಿರುವ ರಸೂಲ್ ಪಾಷಾ ಎಲೆಕ್ಟ್ರಿಕಲ್ ವೈರಿಂಗ್ ಕೆಲಸ ಮಾಡಿ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ. ಅವರ ಇಬ್ಬರು ಮಕ್ಕಳಲ್ಲಿ ಸೊಹೆಲ್ ಪಾಷಾ ಹಿರಿಯ ಮಗ. ಇದೀಗ ಅವರ ಮಗನನ್ನು ಮುಂಬೈ ಪೊಲೀಸರು ಬಂಧಿಸಿ ಕರೆದೊಯ್ದಿರುವುದು ದಿಕ್ಕು ತೋಚದಂತೆ ಮಾಡಿದೆ.
‘ಎಂಟನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿದ್ದ ಸೊಹೆಲ್ ಪಾಷಾ ಮಾನ್ವಿಯ ಎಂಆರ್‌ಎಫ್ ಟೈರ್ ಶೋ ರೂಂನಲ್ಲಿ ಕೆಲಸ ಮಾಡುತ್ತಿದ್ದ. ಎರಡು ತಿಂಗಳಿಂದ ಕೆಲಸಕ್ಕೂ ಹೋಗುತ್ತಿರಲಿಲ್ಲ, ಮನೆಯಲ್ಲಿಯೇ ಇರುತ್ತಿದ್ದ. ಅವನ ಗೆಳೆಯರ ಬಗ್ಗೆ ನಮಗ ಹೆಚ್ಚಿಗಿ ಗೊತ್ತಿಲ್ರಿ, ಮೊದಲು ಸಣ್ಣ ಫೋನ್ ಇತ್ತು. ವರ್ಷದ ಹಿಂದೆ ಹೊಸ ದೊಡ್ಡ ಫೋನ್ ಖರೀದಿಸಿದ್ದ’ ಎಂದು ರಸೂಲ್ ಪಾಷಾ ಹೇಳುತ್ತಾರೆ.
ಕೇವಲ ಎಂಟನೇ ತರಗತಿವರೆಗೆ ಓದಿರುವ ಸೊಹೆಲ್ ಪಾಷಾ ಬೇರೆಯವರ ಫೋನ್ ನಂಬರ್ ಬಳಸಿ ತನ್ನ ಫೋನ್ ನಲ್ಲಿ ವಾಟ್ಸಆ್ಯಪ್ ಇನ್ ಸ್ಟಾಲ್ ಮಾಡಿಕೊಂಡಿದ್ದ. ಮುಂಬೈ ಪೊಲೀಸರಿಗೆ ವಾಟ್ಸಆ್ಯಪ್ ಕಾಲ್ ಮಾಡಿ ₹5 ಕೋಟಿ ನೀಡದಿದ್ದರೆ ಸಲ್ಮಾನ್ ಖಾನ್ ಹಾಗೂ ಅವರ ಸಿನಿಮಾದ ' ಮೈ ಸಿಕಂದರ್ ಹೂಂ' ಗೀತೆಯ ರಚನೆಕಾರನ ಖಾನ್ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವುದು ಸಾರ್ವಜನಿಕರಲ್ಲಿ ಚರ್ಚೆಗೆ ಎಡೆ ಮಾಡಿಕೊಟ್ಟಿವೆ.
ಫೋನ್ ನಂಬರ್ ಕದ್ದು ತನ್ನ ಫೋನ್ ನಲ್ಲಿ ವಾಟ್ಸಆ್ಯಪ್ ಇನ್‌ಸ್ಟಾಲ್: ನ.3ರಂದು ಮಾನ್ವಿಯ ಪಂಪಾ ಉದ್ಯಾನದ ಹತ್ತಿರ ಅರೋಪಿ ಸೊಹೆಲ್ ಪಾಷಾ ವೆಂಕಟೇಶ ಅಯ್ಯಂಗಾರ್ ಬಳಿಗೆ ಬಂದು ಕರೆ ಮಾಡಲು ಫೋನ್ ಇದೆಯೇ ಎಂದು ಕೇಳಿ, ಪೋನ್ ಪಡೆದಿದ್ದನು ಎಂದು ವಿಚಾರಣೆ ಸಂದರ್ಭದಲ್ಲಿ ವೆಂಕಟೇಶ ನಾರಾಯಣ್ ಪೊಲೀಸರಿಗೆ ತಿಳಿಸಿದ್ದಾರೆ.
ವೆಂಕಟೇಶ ನಾರಾಯಣ ಅವರ ಮೊಬೈಲ್ ಸಂಖ್ಯೆ ಹಾಗೂ ಒಟಿಪಿ ಬಳಸಿ ಆರೋಪಿಸೊಹೆಲ್ ಪಾಷಾ ತನ್ನ ಸ್ವಂತ ಫೋನ್ ನಲ್ಲಿ ವಾಟ್ಸಆ್ಯಪ್ ಇನ್‌ಸ್ಟಾಲ್ ಮಾಡಿಕೊಂಡಿದ್ದ. ನಂತರ ಅದೇ ವಾಟ್ಸಆ್ಯಪ್ ಮೂಲಕ ಮುಂಬೈ ಪೊಲೀಸರ ಸಹಾಯವಾಣಿಗೆ ಕರೆ ಮಾಡಿದ್ದ.ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಮುಂಬೈ ಪೊಲೀಸರು ನಟ ಸಲ್ಮಾನ್ ಖಾನ್ ಗೆ ಕೊಲೆ ಬೆದರಿಕೆ ಕರೆಯ ತನಿಖೆಗೆ ಆಗಮಿಸಿದ್ದ ಮುಂಬೈ ನಗರದ ಪೊಲೀಸರು ಮಾನ್ವಿಯ ಲಾಡ್ಜ್‌ನಲ್ಲಿ ಒಂದು ವಾರ ಕಾಲ ತಂಗಿದ್ದರು. ಬೆದರಿಕೆ ಕರೆಗೆ ಬಳಸಿದ್ದ ಫೋನ್ ನಂಬರ್ ಮಾಹಿತಿ ಆಧರಿಸಿ ತನಿಖೆ ಕೈಗೊಂಡಿದ್ದ ಅವರು ಆರಂಭದಲ್ಲಿ ಚೀಕಲಪರ್ವಿ ಗ್ರಾಮದ ವೆಂಕಟೇಶ ನಾರಾಯಣ ಅವರನ್ನು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೊಳಪಡಿಸಿದ್ದರು.
ನಂತರ ವೆಂಕಟೇಶ ನಾರಾಯಣ ಅವರ ಫೋನ್ ನಂಬರ್ ದುರ್ಬಳಕೆ ಮಾಡಿಕೊಂಡ ಆರೋಪಿ ಸೊಹೆಲ್ ಪಾಷಾನನ್ನು ಪತ್ತೆ ಹಚ್ಚಿದ್ದಾರೆ. ಮುಂಬೈ ಪೊಲೀಸರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೊಳಪಡಿಸಿದ ನಂತರ ಮುಂಬೈಗೆ ಕರೆದೊಯ್ದರು ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.