ADVERTISEMENT

ಮೂರು ತಿಂಗಳಿಂದ ಪಡಿತರ ವಿತರಣೆ ಸ್ಥಗಿತ: ಫಲಾನುಭವಿಗಳ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2023, 12:56 IST
Last Updated 29 ಡಿಸೆಂಬರ್ 2023, 12:56 IST
ಕವಿತಾಳ ಸಮೀಪದ ಬಸಾಪುರದಲ್ಲಿ ಶುಕ್ರವಾರ ಪಡಿತರ ವಿತರಿಸುವಂತೆ ಆಗ್ರಹಿಸಿ ಗೂಗೆಬಾಳ ಗ್ರಾಮದ ಜನರು ಆಕ್ರೋಶ ವ್ಯಕ್ತಪಡಿಸಿದರು.
ಕವಿತಾಳ ಸಮೀಪದ ಬಸಾಪುರದಲ್ಲಿ ಶುಕ್ರವಾರ ಪಡಿತರ ವಿತರಿಸುವಂತೆ ಆಗ್ರಹಿಸಿ ಗೂಗೆಬಾಳ ಗ್ರಾಮದ ಜನರು ಆಕ್ರೋಶ ವ್ಯಕ್ತಪಡಿಸಿದರು.   

ಕವಿತಾಳ: ಮೂರು ತಿಂಗಳಿಂದ ಪಡಿತರ ವಿತರಣೆ ಮಾಡಿಲ್ಲ ಎಂದು ಆರೋಪಿಸಿದ ಮಸ್ಕಿ ತಾಲ್ಲೂಕಿನ ಗೂಗೆಬಾಳ ಗ್ರಾಮಸ್ಥರು ಬಸಾಪುರ ಗ್ರಾಮದ ನ್ಯಾಯಬೆಲೆ ಅಂಗಡಿ ಎದುರು ಶುಕ್ರವಾರ ಆಕ್ರೋಶ ವ್ಯಕ್ತಪಡಿಸಿದರು.

‘ಗುರುವಾರ ಗ್ರಾಮಕ್ಕೆ ಬಂದು ಹೆಬ್ಬೆಟ್ಟಿನ ಗುರುತು ಪಡೆದು ಹೋಗಿದ್ದಾರೆ. ಈಗ ಪಡಿತರ ವಿತರಣೆಗೆ ನಿರಾಕರಿಸುತ್ತಿದ್ದಾರೆ. ಮೂರು ತಿಂಗಳಿಂದ ಇದೇ ರೀತಿ ಮಾಡುತ್ತಿದ್ದು ಉಪವಾಸ ಬೀಳುವಂತಾಗಿದೆʼ ಎಂದು ಮಹಿಳೆಯರು ಅಂಗಡಿ ಮಾಲೀಕನ ಜತೆ ವಾಗ್ವಾದ ಮಾಡಿದರು.

ʼಮಕ್ಕಳು ದುಡಿಯಲು ಬೆಂಗಳೂರಿಗೆ ಹೋಗಿದ್ದಾರೆ. ಮನೆಯಲ್ಲಿ ವಯಸ್ಸಾದ ಅತ್ತೆ, ಮಾವ ಇದ್ದಾರೆ. ಮೂರು ತಿಂಗಳಿಂದ ಅಕ್ಕಿ ಕೊಡದಿದ್ದರೆ ಜೀವನ ನಡೆಸುವುದು ಹೇಗೆʼ ಎಂದು ದೇವಮ್ಮ ಅಳಲು ತೋಡಿಕೊಂಡರು.

ADVERTISEMENT

ʼಗ್ರಾಮದಲ್ಲಿ ಅಂದಾಜು 110 ಕುಟುಂಬಗಳಿದ್ದು 5 ಕೆ.ಜಿ. ಬದಲಿಗೆ 4 ಕೆ.ಜಿ. ಅಕ್ಕಿ ನೀಡುತ್ತಾರೆ, ಈಗ ಮೂರು ತಿಂಗಳಿಂದ ಪಡಿತರ ವಿತರಿಸಿಲ್ಲ. ಈ ಬಗ್ಗೆ ಕೇಳಿದರೆ ಮುಂದಿನ ತಿಂಗಳು ನೀಡುವುದಾಗಿ ಹೇಳಿ ಪ್ರತಿ ತಿಂಗಳು ಅದನ್ನೇ ಹೇಳುತ್ತಾರೆʼ ಎಂದು ತಿಪ್ಪಣ್ಣ, ಕರಿಯಪ್ಪ ಮತ್ತು ಆದಪ್ಪ ಅಸಮಧಾನ ವ್ಯಕ್ತಪಡಿಸಿದರು.

‘ಸದ್ಯ ಪಡಿತರ ಕಡಿಮೆ ಬಿಡುಗಡೆಯಾಗಿದ್ದು ಇನ್ನೂ ಹೆಚ್ಚಿನ ಪಡಿತರ ಬಿಡುಗಡೆ ಅಧಿಕಾರಿಗಳ ಲಾಗಿನ್‌ ಹಂತದಲ್ಲಿದೆ. ಹೀಗಾಗಿ ಗೊಂದಲವಾಗಿದೆ. ಈ ತಿಂಗಳು ಬಸಾಪುರ ಗ್ರಾಮದವರಿಗೆ ವಿತರಿಸಿ ಜನವರಿ ತಿಂಗಳಲ್ಲಿ ಒಟ್ಟು ನಾಲ್ಕು ತಿಂಗಳ ಪಡಿತರವನ್ನು ಗೂಗೆಬಾಳ ಗ್ರಾಮಕ್ಕೆ ವಿತರಿಸುವುದಾಗಿʼ ಅಂಗಡಿ ಮಾಲೀಕ ಅಯ್ಯಣ್ಣ ಹೊಸಮನಿ ಹೇಳಿದರು.

’ಕಾರ್ಡ್‌ಗಳ ಸಂಖ್ಯೆಗೆ ಅನುಗುಣವಾಗಿ ಪ್ರತಿ ತಿಂಗಳು ನಿಗದಿತ ಪಡಿತರ ವಿತರಣೆ ಮಾಡಲಾಗಿದೆ. ಅಧಿಕಾರಿಗಳ ಹಂತದಲ್ಲಿ ಬಿಡುಗಡೆಗೆ ಬಾಕಿ ಉಳಿದಿಲ್ಲ. ಈ ಬಗ್ಗೆ ಅಂಗಡಿ ಮಾಲೀಕರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಆಹಾರ ಇಲಾಖೆ ಶಿರಸ್ತೇದಾರ ವಿರುಪಣ್ಣ ತಿಳಿಸಿದರು.

ದುರುಗಮ್ಮ, ಮಲ್ಲಮ್ಮ, ಲಕ್ಷ್ಮೀ, ಬಸ್ಸಮ್ಮ, ಗಂಗಮ್ಮ, ತಿಪ್ಪಣ್ಣ, ಯಂಕಮ್ಮ, ಕೃಷ್ಣಮ್ಮ, ಮರಿಸ್ವಾಮಿ, ದೇವರಾಜ, ಗೌರಮ್ಮ, ಹುಸೇನಪ್ಪ, ನಿಂಗಣ್ಣ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.