ADVERTISEMENT

ಕವಿತಾಳ | ಶಾಲೆಗೆ ಬರಲು ಸಜ್ಜಾದ ‘ಭುವನೇಶ್ವರಿ’

ಮಂಜುನಾಥ ಎನ್ ಬಳ್ಳಾರಿ
Published 26 ಅಕ್ಟೋಬರ್ 2024, 6:48 IST
Last Updated 26 ಅಕ್ಟೋಬರ್ 2024, 6:48 IST
ಕವಿತಾಳದ ಶಿಲ್ಪಿ ಮೋನಪ್ಪ(ಎಡತುದಿ) ಅವರು ಕೆತ್ತನೆ ಮಾಡಿದ ಭುವನೇಶ್ವರಿ ಮೂರ್ತಿ ಮತ್ತು ಮೂರ್ತಿ ದೇಣಿಗೆ ನೀಡಲಿರುವ ಕಾಳಪ್ಪ ಬಡಿಗೇರ
ಕವಿತಾಳದ ಶಿಲ್ಪಿ ಮೋನಪ್ಪ(ಎಡತುದಿ) ಅವರು ಕೆತ್ತನೆ ಮಾಡಿದ ಭುವನೇಶ್ವರಿ ಮೂರ್ತಿ ಮತ್ತು ಮೂರ್ತಿ ದೇಣಿಗೆ ನೀಡಲಿರುವ ಕಾಳಪ್ಪ ಬಡಿಗೇರ   

ಕವಿತಾಳ: ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಇಲ್ಲಿನ ಬಾಲಕಿಯರ ಸರ್ಕಾರಿ ಪ್ರೌಢಶಾಲೆಗೆ ದೇಣಿಗೆ ನೀಡುವ ಉದ್ದೇಶದಿಂದ ಪಟ್ಟಣದ ಶಿಲ್ಪಿ ಮೋನಪ್ಪ ಉಪ್ಪಳ ಅವರು ಭುವನೇಶ್ವರಿ ಮೂರ್ತಿಯನ್ನು ಕೆತ್ತಿದ್ದಾರೆ.

ಈ ಮೂರ್ತಿ ರೂಪಿಸಲು ಕಾಳಪ್ಪ ಅಯ್ಯಪ್ಪ ಪತ್ತಾರ ಅವರು ಅಂದಾಜು ₹30 ಸಾವಿರ ಮೌಲ್ಯದ ಸಾಗುವಾನಿ ಕಟ್ಟಿಗೆ ಖರೀದಿಸಿ ಕೊಟ್ಟಿದ್ದರು. ಶಿಲ್ಪಿ ಮೋನಪ್ಪ ಉಪ್ಪಳ ಅವರು ಅದರಲ್ಲಿ ಕನ್ನಡಾಂಬೆಯ ಮೂರ್ತಿ ಉಚಿತವಾಗಿ ಕೆತ್ತಿದ್ದಾರೆ. ಕಲಾವಿದ ಭಾಸ್ಕರ್‌ ಬಡಿಗೇರ ಬಿಡಿಸಿದ ಚಿತ್ರ ಆಧರಿಸಿ ಮೂರ್ತಿಗೆ ತಮ್ಮ ಕಲಾತ್ಮಕ ಕೆತ್ತನೆ ಮೂಲಕ ಜೀವಕಳೆ ತುಂಬಿದ್ದಾರೆ. ಶಾಲೆಗೆ ಉಚಿತವಾಗಿ ಕನ್ನಡಾಂಬೆಯ ಮೂರ್ತಿಯನ್ನು ದೇಣಿಗೆ ನೀಡಲು ಮುಂದಾಗುವ ಮೂಲಕ ಈ ಮೂವರೂ ಕನ್ನಡಾಭಿಮಾನ ಮೆರೆದಿದ್ದಾರೆ.

ಸತತ ಒಂದೂವರೆ ತಿಂಗಳು ಶ್ರಮಿಸಿ ಮೋನಪ್ಪ ಅವರು ಮೂರ್ತಿಯ ಸಂಪೂರ್ಣ ಕೆತ್ತನೆಯನ್ನು ಒಂದೇ ಕಟ್ಟಿಗೆಯಲ್ಲಿ ಮಾಡಿದ್ದಾರೆ. ಆ ಮೂರ್ತಿಗೆ ಕಲಾವಿದ ಭಾಸ್ಕರ್‌ ಬಡಿಗೇರ ಬಣ್ಣ ಬಳಿದ್ದು, ಮೂರ್ತಿಯ ಆಕರ್ಷಣೆಯನ್ನು ಹೆಚ್ಚಿಸಿದ್ದಾರೆ.

ADVERTISEMENT

ಹೀಗಿದೆ ಮೂರ್ತಿ: ಭುವನೇಶ್ವರಿಯ ಈ ಮೂರ್ತಿಯು ನಾಲ್ಕು ಅಡಿ ಎತ್ತರವಿದೆ. ಮೂರ್ತಿಯ ಬೆನ್ನಿಗೆ ಆಸರೆಯಾಗಿ ಕರ್ನಾಟಕದ ಭೂಪಟ ಕೆತ್ತನೆ ಮಾಡಿದ್ದು ಒಟ್ಟು ಎತ್ತರ ಆರೂವರೆ ಅಡಿಗಳಷ್ಟಿದೆ. ಅಂದಾಜು 40 ಕೆ.ಜಿ. ತೂಕವಿದೆ. ಹಳದಿ ಹಾಗೂ ಕೆಂಪು ಬಣ್ಣದಲ್ಲಿ ಕರ್ನಾಟಕ ರಾಜ್ಯದ ನಕ್ಷೆ ಬಿಡಿಸಿ, 31 ಜಿಲ್ಲೆಗಳನ್ನು ಗುರುತಿಸಲಾಗಿದೆ.

ಕವಿತಾಳದ ಶಿಲ್ಪಿ ಮೋನಪ್ಪ ಅವರು ಕನ್ನಡಾಂಬೆಯ ಮೂರ್ತಿ ಕೆತ್ತನೆ ಮಾಡುತ್ತಿರುವುದು
ಕವಿತಾಳದ ಶಿಲ್ಪಿ ಮೋನಪ್ಪ ಕನ್ನಡಾಂಬೆಯ ಮೂರ್ತಿ ಕೆತ್ತನೆಯಲ್ಲಿ ತೊಡಗಿದ್ದ ಕ್ಷಣ
ಭಾಸ್ಕರ್‌ ಬಡಿಗೇರ

ಶಿಲ್ಪಿ ಮೋನಪ್ಪ ಮತ್ತು ಕಲಾವಿದ ಭಾಸ್ಕರ್‌ ಅವರು ಹಣ ಪಡೆಯದೇ ಸೇವಾ ಮನೋಭಾವದಿಂದ ಸುಂದರ ಮೂರ್ತಿಯನ್ನು ನಿರ್ಮಿಸಿದ್ದಾರೆ

–ಕಾಳಪ್ಪ ಪತ್ತಾರ ಕವಿತಾಳ

ಕಟ್ಟಿಗೆ ಬಣ್ಣ ಅಗತ್ಯ ವಸ್ತುಗಳನ್ನು ಕಾಳಪ್ಪ ದೇಣಿಗೆ ನೀಡಿದ್ದು ನಾವು ಕೆಲಸ ಮಾಡಿದ್ದೇವೆ. ಮೂರ್ತಿ ಆಕರ್ಷಕವಾಗಿದ್ದು ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ

–ಭಾಸ್ಕರ್‌ ಬಡಿಗೇರ ಕಲಾವಿದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.