ADVERTISEMENT

ರಾಯಚೂರಿಗೆ ಮಾತ್ರ ಏಮ್ಸ್‌ ಶಿಫಾರಸು: ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ

ನನ್ನ ಹೇಳಿಕೆಯೇ ಅಧಿಕೃತ: ವೈದ್ಯಕೀಯ ಶಿಕ್ಷಣ ಸಚಿವ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2023, 16:06 IST
Last Updated 15 ಆಗಸ್ಟ್ 2023, 16:06 IST
ಡಾ.ಶರಣಪ್ರಕಾಶ ಪಾಟೀಲ
ಡಾ.ಶರಣಪ್ರಕಾಶ ಪಾಟೀಲ   

ರಾಯಚೂರು: ‘ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರದಿಂದ ರಾಯಚೂರಿಗೆ ಮಾತ್ರ ಏಮ್ಸ್‌ ಶಿಫಾರಸು ಮಾಡಲಾಗಿದೆ. ಈ ವಿಷಯದಲ್ಲಿ ಯಾವುದೇ ಸಂಶಯ ಬೇಡ’ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ತಿಳಿಸಿದರು.

‘ಸಚಿವ ಪ್ರಿಯಾಂಕ್ ಖರ್ಗೆ ಕಲಬುರಗಿಯಲ್ಲಿ ಏಮ್ಸ್ ಸ್ಥಾಪಿಸಲಾಗುವುದು ಎಂದು ಯಾವ ಆಧಾರದ ಮೇಲೆ ಹೇಳಿದ್ದಾರೆ ಗೊತ್ತಿಲ್ಲ. ವೈದ್ಯಕೀಯ ಇಲಾಖೆಯ ಸಚಿವ ನಾನೇ ಇದ್ದೇನೆ. ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಕಟಿಸಿದ್ದೇವೆ. ಅನುಮಾನ ಬೇಡ’ ಎಂದು ಮಾಧ್ಯಮ ಗೋಷ್ಠಿಯಲ್ಲಿ ಹೇಳಿದರು‍.

‘ಕೇಂದ್ರ ಆರೋಗ್ಯ ಸಚಿವರ ಬಳಿ ಜಿಲ್ಲೆಯ ಸರ್ವ ಪಕ್ಷದ ನಾಯಕರ, ಶಾಸಕರ ಹಾಗೂ ಹೋರಾಟಗಾರರ ನಿಯೋಗ ಒಯ್ಯಲಾಗುವುದು’ ಎಂದು ತಿಳಿಸಿದರು.

ADVERTISEMENT

‘ಓಪೆಕ್ ಆಸ್ಪತ್ರೆಯು ರಿಮ್ಸ್ ಆಸ್ಪತ್ರೆಯ ಭಾಗವಲ್ಲ, ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತಿದೆ. ನೆಫ್ರಾಲಾಜಿ, ಯುರಾಲಾಜಿ, ಪ್ಯಾಡಾಲಜಿ, ಎಂಜಿಯೊಗ್ರಾಂನಲ್ಲಿ ಅನೇಕ ಸರ್ಜರಿಗಳಾಗಿವೆ. ಮುಚ್ಚಿ ಹೋದ ಓಪೆಕ್ ಆಸ್ಪತ್ರೆಗೆ ಪುನರ್ಜೀವ ನೀಡಲಾಗಿದೆ’ ಎಂದರು.

‘ವಿಭಾಗ ಮಟ್ಟದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾಡಲು ಸರ್ಕಾರ ನಿರ್ಧರಿಸಿದೆ. ಓಪೆಕ್ ಆಸ್ಪತ್ರೆಯನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗುವುದು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.