ADVERTISEMENT

ರಾಯಚೂರು | ಒಂದೂವರೆ ವರ್ಷದಿಂದ ಕಟ್ಟಡ ಕಾಮಗಾರಿ ಸ್ಥಗಿತ

ಹಾವು ಕಚ್ಚಿ ಬಾಲಕ ಮೃತಪಟ್ಟರೂ ಸರ್ಕಾರ ಗಂಭೀರವಾಗಿಲ್ಲ

ಚಂದ್ರಕಾಂತ ಮಸಾನಿ
Published 8 ಅಕ್ಟೋಬರ್ 2024, 6:21 IST
Last Updated 8 ಅಕ್ಟೋಬರ್ 2024, 6:21 IST
ಯರಮರಸ್‌ ಕ್ಯಾಂಪ್‌ನ ತಾತ್ಕಾಲಿಕ ಕಟ್ಟಡದಲ್ಲಿ ನೆಲೆಸಿರುವ ವಿದ್ಯಾರ್ಥಿಗಳು ಬಯಲಿನಲ್ಲೇ ಸ್ನಾನ ಮಾಡುತ್ತಿರುವುದು
ಯರಮರಸ್‌ ಕ್ಯಾಂಪ್‌ನ ತಾತ್ಕಾಲಿಕ ಕಟ್ಟಡದಲ್ಲಿ ನೆಲೆಸಿರುವ ವಿದ್ಯಾರ್ಥಿಗಳು ಬಯಲಿನಲ್ಲೇ ಸ್ನಾನ ಮಾಡುತ್ತಿರುವುದು   

ರಾಯಚೂರು: ಸಂಕನೂರಿನಲ್ಲಿ ನಿರ್ಮಿಸಲಾಗುತ್ತಿರುವ ಡಾ.ಎಪಿಜೆ ಅಬ್ದಲ್‌ ಕಲಾಂ ವಸತಿ ಸಿಬಿಎಸ್‌ಇ ವಸತಿ ಶಾಲೆ ನಿರ್ಮಾಣ ಕಾರ್ಯ ಒಂದೂವರೆ ವರ್ಷದಿಂದ ಸ್ಥಗಿತಗೊಂಡಿರುವ ಕಾರಣ ಯರಮರಸ್‌ ಕ್ಯಾಂಪ್‌ನ ತಾತ್ಕಾಲಿಕ ಕಟ್ಟಡದಲ್ಲಿ ನೆಲೆಸಿರುವ ವಿದ್ಯಾರ್ಥಿಗಳು ನಿತ್ಯ ಸಮಸ್ಯೆ ಎದುರಿಸುತ್ತಿದ್ದಾರೆ.

ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧೀನದಲ್ಲಿ ಡಾ.ಎಪಿಜೆ ಅಬ್ದಲ್‌ ಕಲಾಂ ಸಿಬಿಎಸ್‌ಇ ವಸತಿ ಶಾಲೆ ಯರಮರಸ್‌ ಕ್ಯಾಂಪ್‌ನ ತಾತ್ಕಾಲಿಕ ಕಟ್ಟಡದಲ್ಲಿ ನಡೆಯುತ್ತಿದೆ. ಇಲ್ಲಿ ಅಗತ್ಯ ಮೂಲಸೌಕರ್ಯಗಳೂ ಇಲ್ಲದ ಕಾರಣ ಶಾಲೆಯಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಒಂದೂವರೆ ವರ್ಷದಿಂದ ತೊಂದರೆ ಅನುಭವಿಸುತ್ತಿದ್ದಾರೆ.

ಡಾ.ಎಪಿಜೆ ಅಬ್ದಲ್‌ ಕಲಾಂ ಸಿಬಿಎಸ್‌ಇ ವಸತಿ ಶಾಲೆಯಲ್ಲಿ 6ರಿಂದ 12ನೇ ತರಗತಿಯಲ್ಲಿ ಒಟ್ಟು 570 ವಿದ್ಯಾರ್ಥಿಗಳು ಇದ್ದಾರೆ. ವಸತಿಗೆ ಯೋಗ್ಯವಾದ ವ್ಯವಸ್ಥೆ ಇಲ್ಲಿಲ್ಲ. ಕಳೆದ ವರ್ಷ ಆಗಸ್ಟ್‌ನಲ್ಲಿ ಮೊದಲ ವಾರದಲ್ಲಿ ಆರನೇ ತರಗತಿಯ ವಿದ್ಯಾರ್ಥಿಯೊಬ್ಬ ಹಾವು ಕಚ್ಚಿ ಮೃತಪಟ್ಟಿದ್ದ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಹಾಗೂ ಕಾಂಗ್ರೆಸ್‌ ಮುಖಂಡರು ಶಾಲೆಗೆ ಭೇಟಿ ಕೊಟ್ಟಿದ್ದರು. ವಸತಿ ಶಾಲೆಯ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿರುವುದು ಗೊತ್ತಿದ್ದರೂ ಕಟ್ಟಡ ಕಾಮಗಾರಿ ಪೂರ್ಣಗೊಳಿಸಿ, ಹೊಸ ಕಟ್ಟಡಕ್ಕೆ ವಸತಿ ಶಾಲೆಯನ್ನು ಸ್ಥಳಾಂತರಿಸುವ ಬಗ್ಗೆ ಆಸಕ್ತಿ ತೋರಿಸಿಲ್ಲ.

ADVERTISEMENT

ಜಿಲ್ಲಾ ಕೇಂದ್ರದಿಂದ 10 ಕಿ.ಮೀ ದೂರದಲ್ಲಿರುವ ಸಂಕನೂರಲ್ಲಿ ಕರ್ನಾಟಕ ಹೌಸಿಂಗ್‌ ಬೋರ್ಡ್‌ ಮೂಲಕ ₹20 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಗುತ್ತಿಗೆದಾರ ಕಂಪನಿಗೆ ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡದ ಕಾರಣ ಕಟ್ಟಡದ ಕಾಮಗಾರಿ ಸ್ಥಗಿತಗೊಂಡಿದೆ.

ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಜನ ವಿಕಾಸ ಯೋಜನೆಯಡಿಯಲ್ಲಿ ಕಟ್ಟಡ ನಿರ್ಮಿಸಲಾಗುತ್ತಿದೆ. ಇದರಲ್ಲಿ ಕೇಂದ್ರ ಸರ್ಕಾರದ ಪಾಲು ಶೇ 70ರಷ್ಟು ಹಾಗೂ ರಾಜ್ಯ ಸರ್ಕಾರದ ಪಾಲು ಶೇ 30ರಷ್ಟು ಇದೆ. ಹಿಂದೆ ಸಂಸದರಾಗಿದ್ದ ಅಮರೇಶ್ವರ ನಾಯಕ ಹಾಗೂ ಈಗ ಹೊಸದಾಗಿ ಆಯ್ಕೆಯಾದ ಜಿ.ಕುಮಾರ ನಾಯಕ ಸಹ ಶಾಲೆಗೆ ಭೇಟಿ ಕೊಟ್ಟಿಲ್ಲ. ಹೊಸ ಕಟ್ಟಡ ಕಾಮಗಾರಿಯನ್ನೂ ಪರಿಶೀಲಿಸಿಲ್ಲ. ನಗರ ಶಾಸಕ ಡಾ.ಶಿವರಾಜ ಪಾಟೀಲ ಅವರೂ ಭೇಟಿ ನೀಡಿ ಪರಿಶೀಲಿಸಿಲ್ಲ ಎಂದು ಪಾಲಕರು ದೂರುತ್ತಾರೆ.

ವಸತಿ ಇಲಾಖೆ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವರೂ ಆಗಿರುವ ಜಮೀರ್ ಅಹಮ್ಮದ್ ಅವರಿಗೆ ಕಾಂಗ್ರೆಸ್‌ ಮುಖಂಡರು ಹಾಗೂ ಮಕ್ಕಳ ಪಾಲಕರು ಭೇಟಿ ಮಾಡಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಯನ್ನು ವಿವರಿಸಿದ್ದಾರೆ. ಆದರೆ, ಸಚಿವ ಜಮೀರ್ ಅಹಮ್ಮದ್ ಅವರೂ ಕಟ್ಟಡ ಪೂರ್ತಿಗೊಳಿಸಿ ಮಕ್ಕಳಿಗೆ ಆದಷ್ಟು ಬೇಗ ಸೌಲಭ್ಯ ಒದಗಿಸುವ ದಿಸೆಯಲ್ಲಿ ಆಸಕ್ತಿ ತೋರಿಸುತ್ತಿಲ್ಲ.

ಜಮೀರ್ ಅಹಮ್ಮದ್ ಅವರು ಎರಡೂ ಇಲಾಖೆಗಳ ಹೊಣೆ ವಹಿಸಿಕೊಂಡಿರುವ ಕಾರಣ ಅಲ್ಪಸಂಖ್ಯಾತರ ಸಮಸ್ಯೆಗಳಿಗೂ ಪರಿಹಾರ ದೊರಕಲಿದೆ ಎಂದು ಮುಸ್ಲಿಂ ಸಮಾಜದವರು ಭಾವಿಸಿದ್ದರು. ಅಲ್ಪಸಂಖ್ಯಾತರ ಮಕ್ಕಳ ಬಗ್ಗೆಯೇ ನಿರ್ಲಕ್ಷ್ಯ ವಹಿಸಿರುವುದು ಅಲ್ಪಸಂಖ್ಯಾತರ ಅಸಮಾಧಾನಕ್ಕೆ ಕಾರಣವಾಗಿದೆ.

ಯರಮರಸ್‌ ಕ್ಯಾಂಪ್‌ನ ತಾತ್ಕಾಲಿಕ ಕಟ್ಟಡದಲ್ಲಿ ಎಲ್ಲ ವಿದ್ಯಾರ್ಥಿಗಳು ವಾಸಿಸಲು ಅಗತ್ಯವಿರುವ ಸೌಲಭ್ಯಗಳಿಲ್ಲ. ಮಕ್ಕಳು ಬಯಲಿನಲ್ಲಿ ನಿಂತು ಸ್ನಾನ ಮಾಡಬೇಕಿದೆ. ಅಲ್ಲಿಯೇ ಬಟ್ಟೆ ತೊಳೆಯಬೇಕಾಗಿದೆ. ಹೊಸ ಕಟ್ಟಡ ಬೇಗ ನಿರ್ಮಾಣವಾದರೆ ನಮಗೆ ಅನುಕೂಲವಾಗುತ್ತದೆ. ಆದರೆ ಕಟ್ಟಡ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳು ಆಸಕ್ತಿ ತೋರಿಸುತ್ತಿಲ್ಲ ಎಂದು ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸುತ್ತಾರೆ.

‘ಪಾಲಕರು ದೂರು ಕೊಟ್ಟಿರುವುದು ನಿಜ. ಜಿಲ್ಲಾಧಿಕಾರಿಯವರು ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ನಿರ್ದೇಶಕರಿಗೆ ನೇರವಾಗಿಯೇ ಕರೆ ಮಾಡಿ ಮಾತನಾಡಿದ್ದಾರೆ. ಸ್ಥಗಿತಗೊಂಡಿರುವ ಕಾಮಗಾರಿ ಪುನರಾರಂಭಿಸಿ ಕಟ್ಟಡ ಕಾಮಗಾರಿಯನ್ನೂ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿದ್ದಾರೆ’ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ಸಂಗಮೇಶ್ವರ ಹೇಳುತ್ತಾರೆ.

ರಾಯಚೂರು ನಗರ ವಿಧಾನಸಭಾ ಕ್ಷೇತ್ರದ ಸಂಕನೂರಿನಲ್ಲಿ ನಿರ್ಮಿಸುತ್ತಿರುವ ಡಾ. ಎಪಿಜೆ ಅಬ್ದಲ್‌ ಕಲಾಂ ವಸತಿ ಸಿಬಿಎಸ್‌ಇ ವಸತಿ ಶಾಲಾ ಕಟ್ಟಡ ಕಾಮಗಾರಿ ಅಪೂರ್ಣವಾಗಿದೆ

ಅಲ್ಪಸಂಖ್ಯಾತರ ಇಲಾಖೆಯಿಂದ ಅನುದಾನ ಬಿಡುಗಡೆ ವಿಳಂಬ ವಸತಿ ಶಾಲೆ ಮಕ್ಕಳ ಸಮಸ್ಯೆಗೆ ಸ್ಪಂದಿಸದ ಶಾಸಕ, ಸಂಸದ ಸೌಕರ್ಯದ ಕೊರತೆ: ಬಯಲಿನಲ್ಲೇ ಮಕ್ಕಳ ಸ್ನಾನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.