ADVERTISEMENT

ರಸ್ತೆ ಅಪಘಾತ: ಮೂರೂವರೆ ವರ್ಷಗಳಲ್ಲಿ 1184 ಮಂದಿ ಸಾವು

ಪಾಲನೆಯಾಗದ ನಿಯಮ: ಕ್ರಮವಹಿಸದ ಇಲಾಖೆಗಳು

ಚಂದ್ರಕಾಂತ ಮಸಾನಿ
Published 20 ಅಕ್ಟೋಬರ್ 2024, 7:21 IST
Last Updated 20 ಅಕ್ಟೋಬರ್ 2024, 7:21 IST
ದೇವದುರ್ಗದಲ್ಲಿ ಮುಖ್ಯ ರಸ್ತೆ ಮೇಲೆಯೇ ಬಿಡಾಡಿ ದನಗಳು ನಿಂತುಕೊಂಡಿದ್ದು, ವಾಹನವೊಂದು ಮಿತಿಮೀರಿ ಪ್ರಯಾಣಿಕರನ್ನು ತುಂಬಿಕೊಂಡು ಸಾಗುತ್ತಿರುವುದು
ದೇವದುರ್ಗದಲ್ಲಿ ಮುಖ್ಯ ರಸ್ತೆ ಮೇಲೆಯೇ ಬಿಡಾಡಿ ದನಗಳು ನಿಂತುಕೊಂಡಿದ್ದು, ವಾಹನವೊಂದು ಮಿತಿಮೀರಿ ಪ್ರಯಾಣಿಕರನ್ನು ತುಂಬಿಕೊಂಡು ಸಾಗುತ್ತಿರುವುದು   

ರಾಯಚೂರು: ಜಿಲ್ಲಾಡಳಿತ ಜಿಲ್ಲೆಯಲ್ಲಿ ಸಮರ್ಪಕವಾಗಿ ರಸ್ತೆ ಸುರಕ್ಷತಾ ಕ್ರಮಗಳನ್ನು ಅನುಸರಿಸದ ಕಾರಣ ಹಾಗೂ ಸಂಚಾರ ನಿಯಮಗಳ ಉಲ್ಲಂಘನೆ ಸೇರಿದಂತೆ ಜಿಲ್ಲೆಯ ವಿವಿಧೆಡೆ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ 1184 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

2021ರಲ್ಲಿ ಗರಿಷ್ಠ 335 ಮಂದಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಪ್ರಸಕ್ತ ವರ್ಷ 10 ತಿಂಗಳಲ್ಲೇ 240 ಜೀವ ಕಳೆದುಕೊಂಡಿದ್ದಾರೆ. ರಸ್ತೆ ಅಪಘಾತಗಳಿಗೆ ಚಾಲಕರ ನಿರ್ಲಕ್ಷ್ಯವೇ ಕಾರಣ ಎಂದು ಪೊಲೀಸ್‌ ಇಲಾಖೆ ಹೇಳುತ್ತಿದ್ದರೂ ಹಾಳಾದ ರಸ್ತೆಗಳ ಬಗ್ಗೆ ಒಬ್ಬ ಜನಪ್ರತಿನಿಧಿಯೂ ಮಾತನಾಡಲು ಸಿದ್ಧವಿಲ್ಲ.

ಸಂಚಾರ ನಿಯಮಗಳ ಉಲ್ಲಂಘನೆಯಲ್ಲಿ ರಾಯಚೂರು ಜಿಲ್ಲೆ ಮುಂಚೂಣಿಯಲ್ಲಿದೆ. ದೇವದುರ್ಗ, ಸಿಂಧನೂರು ಹಾಗೂ ಲಿಂಗಸುಗೂರು ತಾಲ್ಲೂಕಿನಲ್ಲಿ ಬಹುತೇಕ ವಾಹನಗಳಿಗೆ ನಂಬರ್‌ ಪ್ಲೇಟ್‌ಗಳೇ ಇಲ್ಲ. ಮರಳು ಸಾಗಿಸುವ ನೂರಾರು ವಾಹನಗಳಿಗೆ ನಂಬರ್‌ ಪ್ಲೇಟ್‌ ಇಲ್ಲ. ಕಣ್ಣು ಮುಂದೆ ಹಾದು ಹೋದರೂ ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ.

ADVERTISEMENT

ರಾಯಚೂರು, ದೇವದುರ್ಗ ಹಾಗೂ ಸಿಂಧನೂರು ತಾಲ್ಲೂಕಿನಲ್ಲಿ ಕೂಲಿಕಾರ್ಮಿಕರು ಹಾಗೂ ಮಕ್ಕಳನ್ನು ಕುರಿಗಳಂತೆ ತುಂಬಿಕೊಂಡು ಸಾಗಿಸುವುದು ನಿತ್ಯ ಕಾಣುತ್ತದೆ. ಆದರೆ ಪ್ರಾದೇಶಿಕ ಸಾರಿಗೆ ಇಲಾಖೆ ಹಾಗೂ ಪೊಲೀಸರು ಮಾಮುಲು ಪಡೆದು ಮೌನಕ್ಕೆ ಶರಣಾಗುತ್ತಿದ್ದಾರೆ.

ಶಾಲಾ ವಾಹನಗಳಲ್ಲೂ ಸುರಕ್ಷತೆ ಇಲ್ಲ. ವಾಹನಗಳಿಗೆ ಜಿಪಿಎಸ್‌ ಅಳವಡಿಸಿಲ್ಲ. ಲೈಸೆನ್ಸ್‌ ಇಲ್ಲದ ಚಾಲಕರೇ ಅನೇಕ ಶಾಲೆಗಳ ವಾಹನಗಳ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೇ ಕಾರಣಕ್ಕೆ ಮಾನ್ವಿಯಲ್ಲಿ ಮೂವರು ಮಕ್ಕಳು ಕಾಲು ಕಳೆದುಕೊಂಡರೂ ಜಿಲ್ಲಾಡಳಿತ ಗಂಭೀರವಾಗಿಲ್ಲ.

ರಸ್ತೆ ಸುರಕ್ಷತಾ ಸಮಿತಿಗೆ ಜಿಲ್ಲಾಧಿಕಾರಿ ಅಧ್ಯಕ್ಷರಾಗಿದ್ದಾರೆ. ಪ್ರಾದೇಶಿಕ ಸಾರಿಗೆ ಅಧಿಕಾರಿಯೇ ಸದಸ್ಯ ಕಾರ್ಯದರ್ಶಿಯಾಗಿದ್ದಾರೆ. ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿಗಳು ಪೋಸ್ಟರ್‌ ಹಿಡಿದು ಪೊಟೊ ತೆಗೆಸಿಕೊಂಡು ದಾಖಲೆಗೆ ಇಟ್ಟುಕೊಂಡಿದ್ದು ಬಿಟ್ಟರೆ ಜಾಗೃತಿ ಕಾರ್ಯಕ್ರಮಗಳನ್ನು ಪರಿಣಾಮಕಾರಿ ನಡೆಸುತ್ತಿಲ್ಲ.

ರಸ್ತೆ ಸುರಕ್ಷತಾ ಸಮಿತಿ ಸಭೆಗಳಿಗೆ ಸಾರ್ವಜನಿಕರ, ಸಂಘ ಸಂಸ್ಥೆಗಳಿಗೆ ಆಹ್ವಾನವೇ ಇರುವುದಿಲ್ಲ. ಅಧಿಕಾರಿಗಳು ಕಾಟಾಚಾರಕ್ಕೆ 10 ನಿಮಿಷ ಸಭೆ ಸೇರಿದಂತೆ ಮಾಡಿ ಕಡತಗಳಲ್ಲಿ ದಾಖಲೆ ಇಟ್ಟುಕೊಳ್ಳುತ್ತಿದ್ದಾರೆ. ಪಾದಾಚಾರಿಗಳ ಹಾಗೂ ರಸ್ತೆ ಸುರಕ್ಷತೆಗೆ ಸಂಬಂಧಪಟ್ಟ ಕುಂದುಕೊರತೆಗಳನ್ನೂ ಆಲಿಸಲು ಸಿದ್ಧವಿಲ್ಲ.

‘ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಲೋಕೋಪಯೋಗಿ ಹಾಗೂ ರಾ‌ಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಅವೈಜ್ಞಾನಿಕವಾದ ರೋಡ್‌ ಹಂಪ್ಸ್‌ ನಿರ್ಮಿಸಿದ್ದಾರೆ. ಇದರಿಂದಾಗಿಯೂ ರಾತ್ರಿ ವೇಳೆಯಲ್ಲಿ ಅತಿ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ’ ಎಂದು ಕಾರು ಚಾಲಕ ಶರಣಬಸವ ಹೇಳುತ್ತಾರೆ.

‘2021ರಿಂದ ಈವರೆಗೆ ವರ್ಷಗಳಲ್ಲಿ 1184 ಮಂದಿ ಮೃತಪಟ್ಟಿದ್ದಾರೆ. 3365 ಜನ ಸಾಮಾನ್ಯ ಹಾಗೂ ಗಂಭೀರವಾಗಿ ಗಾಯಗೊಂಡಿದ್ದಾರೆ. ಬಹುತೇಕ ಪ್ರಕರಣಗಳಲ್ಲಿ ಚಾಲಕರ ನಿರ್ಲಕ್ಷ್ಯದಿಂದಾಗಿಯೇ ಸಾವು ನೋವು ಸಂಭವಿಸಿವೆ. ಅಪಘಾತ ತಡೆಗೆ ವೈಜ್ಞಾನಿಕ ಕ್ರಮ ಅನುಸರಿಸಿ ಉಪಕರಣಗಳನ್ನು ಅಳವಡಿಸುವ ಕಾರ್ಯ ನಿರಂತರವಾಗಿ ನಡೆದಿದೆ‘ ಎನ್ನುತ್ತಾರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ.

‘ಗ್ರಾಮ ಸಭೆ ಹಾಗೂ ಜಾಹೀರಾತುಗಳ ಮೂಲಕ ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ನಡೆದಿದೆ. ಹೆಲ್ಮೇಟ್‌ ಧರಿಸದ ಕಾರಣ ಅಪಘಾತಕ್ಕೀಡಾಗಿ ಅನೇಕ ಜನ ಪ್ರಾಣ ಕಳೆದುಕೊಂಡಿದ್ದಾರೆ‘ ಎಂದು ಹೇಳುತ್ತಾರೆ.

ದೇವದುರ್ಗದ ಹಜರತ್ ಜೈರುಧ್ದೀನ್ ಪಾಶಾ ವೃತ್ತದ ಬಳಿ ವಾಹನ ಮೇಲೆ ಕುಳಿತು ಪ್ರಯಾಣಿಸುತ್ತಿರುವ ಮಕ್ಕಳು
ರಾಯಚೂರಿನ ಸ್ಟೇಷನ್ ರಸ್ತೆಯಿಂದ ಎಟಿಎಂ ಸರ್ಕಲ್‌ ಕಡೆಗೆ ಹೋಗುವ ರೈಲ್ವೆ ಕೆಳ ಸೇತುವೆ ರಸ್ತೆಯಲ್ಲಿ ಅಪಾರ ಪ್ರಮಾಣದಲ್ಲಿ ನೀರು ನಿಂತಿದ್ದು ಸಂಬಂಧಪಟ್ಟ ಅಧಿಕಾರಿಗಳು ನೀರು ತೆರವುಗೊಳಿಸಲು ಕ್ರಮಕೈಗೊಳ್ಳದ ಕಾರಣ ನಿಂತ ನೀರಲ್ಲೇ ಸಾಗುತ್ತಿರುವ ವಾಹನ ಸವಾರರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.