ರಾಯಚೂರು: ಮಾನ್ವಿ ತಾಲ್ಲೂಕಿನ ಕುರ್ಡಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಿಗೆ ಮೂಲಸೌಕರ್ಯ ಕಲ್ಪಿಸಲು ಒತ್ತಾಯಿಸಿ ಜೂನ್ 5 ರಂದು ಬೆಳಿಗ್ಗೆ 10:30ಕ್ಕೆ ಕುರ್ಡಿ ಕ್ರಾಸ್ ಬಳಿ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರಿಂದ ರಸ್ತೆ ತಡೆ ಹೋರಾಟ ಮಾಡಲಾಗುವುದು ಎಂದು ದಲಿತ, ಪ್ರಗತಿಪರ ಸಂಘಟೆಗಳ ಒಕ್ಕೂಟದ ಮುಖಂಡ ಜಿ.ಅಮರೇಶ ಹಾಗೂ ಎಂ.ಆರ್ ಭೇರಿ ತಿಳಿಸಿದರು.
ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕುರ್ಡಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿನ ಹಳ್ಳಿಗಳಲ್ಲಿ ಕುಡಿಯುವ ನೀರು, ಒಳ ಚರಂಡಿ ಕಾಮಗಾರಿ, ರಸ್ತೆ ನಿರ್ಮಾಣ ಸರಿಯಾಗಿ ಆಗಿಲ್ಲ. ಎಸ್ ಸಿಪಿ, ಟಿಎಸ್ ಪಿ ಯೋಜನೆ ಸಮರ್ಪಕವಾಗಿ ಅನುಷ್ಟಾನವಾಗಿಲ್ಲ, ನರೇಯ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ಸರಿಯಾಗಿ ವೇತನ ನೀಡುತ್ತಿಲ್ಲ ಎಂದು ದೂರಿದರು.
ಕುರ್ಡಿ ಹೋಬಳಿಯಲ್ಲಿ ಬರುವ 20ಕ್ಕೂ ಹೆಚ್ಚು ಹಳ್ಳಿಗಳ ಸಂಪರ್ಕ ಕೇಂದ್ರವಾದ ಕುರ್ಡಿ ಕ್ರಾಸ್ ಬಳಿಯಲ್ಲಿ ಸರ್ಕಾರಿ ಬಸ್ಸುಗಳು ನಿಲ್ಲಿಸುತ್ತಿಲ್ಲ ಇದರಿಂದಾಗಿ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಸಮಸ್ಯೆಯಾಗಿದೆ. ಹಳ್ಳಿಗಳಲ್ಲಿ ಜಲ ಜೀವನ ಮಿಷನ್ ಅಡಿಯಲ್ಲಿ ಕೈಗೊಂಡ ಕಾಮಗಾರಿಯು ಪೂರ್ಣವಾಗಿದ್ದು, ಕಳಪೆ ಮಟ್ಟದ ಸಾಮಾಗ್ರಿಗಳನ್ನು ಬಳಸಿ ಕೆಲಸ ನಿರ್ವಹಿಸಲಾಗಿದೆ. ತಪ್ಪಿತಸ್ಥ ಅಧಿಕಾರಿಗಳನ್ನು ವಜಾಗೊಳಿಸಬೇಕು ಹಾಗೂ ಗುತ್ತೇದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಒತ್ತಾಯಿಸಿದರು.
ಕುರ್ಡಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಸಾದಾಪೂರು, ಸುಂಕೇಶ್ವರ, ಗೋರ್ಕಲ್, ಕುರ್ಡಿ, ಅರೋಲಿಯಲ್ಲಿ ನಡೆದಿದೆ ಎನ್ನಲಾದ 15ನೇ ಹಣಕಾಸಿನ ದುರುಪಯೋಗದ ಬಗ್ಗೆ ತನಿಖೆ ನಡೆಸಿ ಪಿಡಿಒ ಮೇಲೆ ಸೂಕ್ತ ಕಾನೂನಿನ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಶರಣಪ್ಪ ದಿನ್ನಿ, ಚಿದಾನಂದ ಅರೋಲಿ, ಖಾಜಾ ಅಸ್ಲಾಂ ಅಹ್ಮದ್, ಹನುಮಂತು ಅರೋಲಿ, ಒಡೆಯರಾಜ ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.