ADVERTISEMENT

ಲಿಂಗಸುಗೂರು | ಕೆಸರು ಗದ್ದೆಯಾದ ರಸ್ತೆಗಳು: ಕುಸಿದ ಸೇತುವೆಗಳು

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2024, 6:01 IST
Last Updated 21 ಅಕ್ಟೋಬರ್ 2024, 6:01 IST
ಲಿಂಗಸುಗೂರು ಸರ್ಕಾರಿ ನೌಕರರ ಬಡಾವಣೆ ಬಳಿ ಎಸ್‌ಬಿಎಚ್‍ ಬಡಾವಣೆಗೆ ಸಂಪರ್ಕ ಕಲ್ಪಿಸುವ ರಸ್ತೆಯ ಸೇತುವೆ ಕುಸಿದಿದೆ
ಲಿಂಗಸುಗೂರು ಸರ್ಕಾರಿ ನೌಕರರ ಬಡಾವಣೆ ಬಳಿ ಎಸ್‌ಬಿಎಚ್‍ ಬಡಾವಣೆಗೆ ಸಂಪರ್ಕ ಕಲ್ಪಿಸುವ ರಸ್ತೆಯ ಸೇತುವೆ ಕುಸಿದಿದೆ   

ಲಿಂಗಸುಗೂರು: ಪಟ್ಟಣದ ಬಹುತೇಕ ವಾರ್ಡ್‌ ರಸ್ತೆಗಳು ಹಾಳಾಗಿದ್ದು, ಸೇತುವೆಗಳು ಕೂಡ ಕುಸಿತಗೊಂಡಿವೆ. ದುರಸ್ತಿಗೆ ಹಣ ಎಲ್ಲಿಂದ ಸೇರಿಸುವುದು ಎಂದು ಪುರಸಭೆ ಆಡಳಿತ ಮಂಡಳಿಗೆ ಯಕ್ಷ ಪ್ರಶ್ನೆಯಾಗಿ ಕಾಡುತ್ತಿದೆ.

ಪುರಸಭೆ 23 ವಾರ್ಡ್‌ ಹಾಗೂ ದಿನದಿಂದ ದಿನಕ್ಕೆ ವಿಸ್ತರಣೆಗೊಳ್ಳುತ್ತಿರುವ ನೂರಾರು ಬಡಾವಣೆಗಳಲ್ಲಿ ಒಳಚರಂಡಿ, ರಸ್ತೆ ಅಭಿವೃದ್ಧಿ, ವಿದ್ಯುತ್‍ ಸಂಪರ್ಕ, ಶುದ್ಧ ಕುಡಿಯುವ ನೀರು ಪೂರೈಕೆ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಿಕೊಡುವ ಯಾವೊಂದು ಯೋಜನೆಗಳು ಆಡಳಿತ ಮಂಡಳಿ ಮುಂದಿಲ್ಲ. ರಸ್ತೆಗಳು ಕೊಚ್ಚಿ ಹೋಗಿ ಜಲಾವೃತಗೊಳ್ಳುತ್ತಿವೆ. ಅವೈಜ್ಞಾನಿಕ ಚರಂಡಿ ತುಂಬಿ ರಸ್ತೆಗೆ ಕಲುಷಿತ ನೀರು ಹರಿಯುತ್ತಿದೆ.

ಲಿಂಗಸುಗೂರು ಎರಡು ರಾಷ್ಟ್ರೀಯ ಹೆದ್ದಾರಿ ಮತ್ತು ಎರಡು ರಾಜ್ಯ ಹೆದ್ದಾರಿಗಳನ್ನು ಸಂಪರ್ಕಿಸುವ ಕೇಂದ್ರ ಸ್ಥಳವಾಗಿದೆ. ಬಾರ್ ಅಂಡ್‍ ರೆಸ್ಟೋರೆಂಟ್‍ಗಳನ್ನು ಮುಖ್ಯ ರಸ್ತೆಗಳಲ್ಲಿ ಉಳಿಸಿಕೊಳ್ಳಲು ರಾಜ್ಯ ಸರ್ಕಾರ ಈ ಹಿಂದೆ ಪುರಸಭೆ ಕೇಂದ್ರ ಸ್ಥಳದಿಂದ ಸುತ್ತಲು 5 ಕಿ.ಮೀ ರಸ್ತೆಗಳನ್ನು ಪುರಸಭೆ ವ್ಯಾಪ್ತಿಗೆ ಒಳಪಡಿಸಿ ಆದೇಶ ಹೊರಡಿಸಿದೆ. ರಾಜ್ಯ, ರಾಷ್ಟ್ರೀಯ ಹೆದ್ದಾರಿ ಹಾಳಾಗಿದ್ದು ದುರಸ್ತಿ ಮಾಡಿಸಲು ಪರದಾಡುವಂತ ದುಸ್ಥಿತಿ ನಿರ್ಮಾಣಗೊಂಡಿದೆ.

ADVERTISEMENT

ಶುಕ್ರವಾರ ಮಧ್ಯರಾತ್ರಿ ಸುರಿದ 16 ಮಿ.ಮೀ ಮಳೆಗೆ ಪಟ್ಟಣದ ರಸ್ತೆಗಳು ಹಾಳಾಗಿ ಹೋಗಿವೆ. ಉಪ ವಿಭಾಗಾಧಿಕಾರಿ ಕಚೇರಿ ಸಂಪರ್ಕಿಸುವ, ಕರಡಕಲ್ಲ ಸಂಪರ್ಕಿಸುವ, ಮೇನ್‍ ಬಜಾರ್‌ ಸಂಪರ್ಕಿಸುವ ರಸ್ತೆಗಳು ಕೆಸರುಗದ್ದೆಯಾಗಿ ಮಾರ್ಪಟ್ಟಿವೆ. ಆಳವಾದ ಗುಂಡಿಗಳಲ್ಲಿ ಸವಾರರು ಎದ್ದುಬಿದ್ದು ಸಂಚರಿಸುವಂತಾಗಿದೆ. ಸರ್ಕಾರಿ ವಸತಿ ಗೃಹ ಸೇರಿದಂತೆ ವಾರ್ಡ್‌ ಸಂಪರ್ಕಿಸುವ ರಸ್ತೆಗಳ ಸೇತುವೆ ಕುಸಿದು ಅಪಾಯದ ಮುನ್ಸೂಚನೆ ನೀಡುತ್ತಿದೆ.

ಪುರಸಭೆ ಅಧ್ಯಕ್ಷ ಬಾಬುರಡ್ಡಿ ಮುನ್ನೂರು ಮಾತನಾಡಿ, ‘ಪುರಸಭೆ ವ್ಯಾಪ್ತಿಯ ಬಹುತೇಕ ವಾರ್ಡ್‌ ರಸ್ತೆಗಳು ಭಾಗಶಃ ತಗ್ಗುಗುಂಡಿಗಳಿಂದ ತುಂಬಿವೆ. ಸುಲಭ ಪ್ರಯಾಣ ಅಸಾಧ್ಯವಾಗಿದೆ. ಹಲವು ವರ್ಷಗಳ ಸಮಸ್ಯೆ ಒಂದೇ ಬಾರಿ ಸರಿಪಡಿಸಲು ಆಗುವುದಿಲ್ಲ. ಮೊದಲ ಹಂತದಲ್ಲಿ ತಗ್ಗುಗುಂಡಿ ತಂಬಿಸಿ ಸರಳ ಪ್ರಯಾಣಕ್ಕೆ ಅನುಕೂಲ ಮಾಡುತ್ತೇವೆ. ನೀಲನಕ್ಷೆ ಸಿದ್ಧಪಡಿಸಿ ರಸ್ತೆ ಮತ್ತು ಸೇತುವೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

‘ಕೆಲ ತಿಂಗಳುಗಳಿಂದ ಪುರಸಭೆ ಆಡಳಿತ ಮಂಡಳಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನನೆಗುದಿಗೆ ಬಿದ್ದಿತ್ತು. ಈಗ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪೂರ್ಣಗೊಂಡಿದೆ. ಆಡಳಿತ ಮಂಡಳಿ ತುರ್ತು ಸಭೆ ಕರೆದು ಪುರಸಭೆಯಲ್ಲಿರುವ ಬಜೆಟ್‍ ಮತ್ತು ಬರಬಹುದಾದ ಆದಾಯ ಸಂಗ್ರಹ ಮುಂದಿಟ್ಟುಕೊಂಡು ಪಟ್ಟಣದ ಅಭಿವೃದ್ಧಿಗೆ ನೀಲನಕ್ಷೆ ಸಿದ್ಧಪಡಿಸಲು ಚಿಂತನೆ ನಡೆದಿದೆ’ ಎಂದು ಪುರಸಭೆ ಮುಖ್ಯಾಧಿಕಾರಿ ರಡ್ಡಿ ರಾಯನಗೌಡ್ರ ತಿಳಿಸಿದರು.

ಲಿಂಗಸುಗೂರು ಪಟ್ಟಣದ ಹೃದಯಭಾಗದ ಪೊಲೀಸ್‍ ಠಾಣೆ ಮುಖ್ಯ ರಸ್ತೆ ಮಳೆಯಿಂದ ಕೆಸರುಗದ್ದೆಯಾಗಿ ಮಾರ್ಪಟ್ಟಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.