ADVERTISEMENT

ರಾಯಚೂರು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ₹3 ಸಾವಿರ ಕೋಟಿ: ಮುಖ್ಯಮಂತ್ರಿ 

​ಪ್ರಜಾವಾಣಿ ವಾರ್ತೆ
Published 26 ಜೂನ್ 2019, 5:48 IST
Last Updated 26 ಜೂನ್ 2019, 5:48 IST
   

ರಾಯಚೂರು: ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಆದ್ಯತೆ ಮೇರೆಗೆ ಈಗಾಗಲೇ ಸಚಿವರು, ಶಾಸಕರು ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದು, ವಿವಿಧ ಯೋಜನೆಗಳ ಜಾರಿಗೆ ₹3 ಸಾವಿರ ಕೋಟಿ ವೆಚ್ಚದ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಮಾನ್ವಿ ತಾಲ್ಲೂಕಿನ ಕರೇಗುಡ್ಡಕ್ಕೆ ಗ್ರಾಮ ವಾಸ್ತವ್ಯಕ್ಕೆಹೊರಡುವ ಪೂರ್ವ ಬುಧವಾರರಾಯಚೂರಿನ ಪ್ರವಾಸಿಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಕ್ಯಾಬಿನೆಟ್‌ನಲ್ಲಿ ರಾಯಚೂರು ವಿಶ್ವವಿದ್ಯಾಲಯ ಕುರಿತು ಸುಗ್ರೀವಾಜ್ಞೆ ಮಾಡಿ ರಾಜ್ಯಪಾಲರಿಗೆ ಕಳುಹಿಸಲಾಗಿತ್ತು. ರಾಜ್ಯಪಾಲರು ವಿವರಣೆ ಕೇಳಿದ್ದು, ಆ ಕುರಿತು ವಿಷಯ ಮನವರಿಕೆ ಮಾಡಲಾಗುವುದು ಎಂದರು.

ADVERTISEMENT

ರಾಯಚೂರಿನಲ್ಲಿ ಐಐಐಟಿ ಸ್ಥಾಪನೆಗೆ ಭೂಮಿ ನೀಡುವುದು ಸೇರಿದಂತೆ ವಿವಿಧ ಮೂಲಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು.

ತುಂಗಭದ್ರಾ ಜಲಾಶಯದ 31 ಟಿಎಂಸಿ ಹೂಳು ತುಂಬಿಕೊಂಡಿದ್ದು, ಅದು ತೆಗೆಯುವುದು ಅಸಾಧ್ಯ. ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಡಿಪಿಎಆರ್ ರೂಪಿಸುವುದಕ್ಕೆ ಸೂಚನೆ ನೀಡಲಾಗಿದೆ. ಅಭಿವೃದ್ಧಿ ವಿಷಯದಲ್ಲಿ ನಮ್ಮ ಸರ್ಕಾರ ಹಿಂಜರಿಯುವ ಪ್ರಶ್ನೆಯೇ ಇಲ್ಲ. ಅಭಿವೃದ್ಧಿಗೆ ದುಡ್ಡಿನ ಕೊರತೆ ಇಲ್ಲ; ಸಾಲಮನ್ನಾಕ್ಕಾಗಿ ಹಣವನ್ನು ವಿವಿಧ ಇಲಾಖೆಗಳಿಗೆ ಹಣ ಕಡಿತಮಾಡಲಾಗಿದೆ ಎಂಬುದು ಸುಳ್ಳು. ಸಣ್ಣ ಮತ್ತು ಬೃಹತ್ ‌ನೀರಾವರಿಗೆ ಈ ವರ್ಷ ₹19 ಸಾವಿರ ಕೋಟಿ ಒದಗಿಸಲಾಗಿದೆ ಎಂದು ಹೇಳಿದರು.

ಸಾಲಮನ್ನಾ ಯೋಜನೆಯಡಿ ರಾಯಚೂರು ಜಿಲ್ಲೆಗೆ ₹182 ಕೋಟಿ ರಾಷ್ಟ್ರೀಕೃತ ಬ್ಯಾಂಕುಗಳಿಗೆ ಬಿಡುಗಡೆ ಮಾಡಲಾಗಿದೆ ಎಂದರು.
ಸಮ್ಮಿಶ್ರ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳು ಅನುಷ್ಠಾನಕ್ಕೆ ಬಂದು‌ ಜನರಿಗೆ ಕಾಣುವುದಕ್ಕೆ ಇನ್ನೂ ನಾಲ್ಕು ತಿಂಗಳು ಬೇಕು. ಆರೋಪ ಮಾಡುವವರು ಸುಖಾಸುಮ್ಮನೆ ಆರೋಪ ಮಾಡಬಾರದು. ಗ್ರಾಮವಾಸ್ತವ್ಯಕ್ಕೆ ಸಂಬಂಧಿಸಿದಂತೆ ವಿನಾಕಾರಣ ಟೀಕೆ, ಆರೋಪಗಳು ಮಾಡುತ್ತಿದ್ದು, ಕಳೆದ ಬಾರಿ ನಡೆದ 43 ಗ್ರಾಮವಾಸ್ತವ್ಯದ ಬಗ್ಗೆ ವಿಧಾನಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಗುವುದು ಎಂದರು.

ವಿವಿಧ ಇಲಾಖೆಗಳ 61 ಯೋಜನೆಗಳ ಜಾರಿಗೆ ಜಿಲ್ಲಾಡಳಿತವು ಪಟ್ಟಿ ಮಾಡಿ ಕೊಟ್ಟಿದೆ‌. ಈ ಎಲ್ಲ ಯೋಜನೆಗಳ ಅನುಷ್ಠಾನಕ್ಕೆ ಸರ್ಕಾರ ಬದ್ಧವಾಗಿದೆ ಎಂದರು.

ಶಾಶ್ವತವಾದ ಕುಡಿಯುವ ನೀರಿನ ಯೋಜನೆಗಳು ಇಡೀ ರಾಜ್ಯದಾದ್ಯಂತ ಆಗಬೇಕು. ಗ್ರಾಮವಾಸ್ತವ್ಯ ಕಾರ್ಯಕ್ರಮ ಮೈತ್ರಿ ಸರಕಾರದ್ದೇ ಹೊರತು ಯಾವುದೇ ಪಕ್ಷಕ್ಕೆ ಸಂಬಂಧಿಸಿಲ್ಲ ಎಂದು ಸ್ಪಷ್ಟಪಡಿಸಿದರು. ಸಚಿವರಾದ ಸಾ.ರಾ.ಮಹೇಶ, ವೆಂಕಟರಾವ್ ನಾಡಗೌಡ, ಜಿಲ್ಲೆಯ ಶಾಸಕರು ಹಾಗೂ ಅಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.