ಶಕ್ತಿನಗರ (ರಾಯಚೂರು ಜಿಲ್ಲೆ): ಗುತ್ತಿಗೆ ಕಾರ್ಮಿಕರಿಗೆ ನ್ಯಾಯಬದ್ಧವಾಗಿ ದೊರೆಯಬೇಕಾದ ಸೌಲಭ್ಯಗಳನ್ನು ಒದಗಿಸಬೇಕು ಎಂದು ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (ಕೆಪಿಸಿಎಲ್) ಅಧಿಕಾರಿಗಳಿಗೆ ಒತ್ತಾಯಿಸಿ ಗುತ್ತಿಗೆ ನೌಕರ ಸುನೀಲ್ ಎನ್ನುವವರು ಆರ್ ಟಿಪಿಎಸ್ ಚಿಮಣಿ ಏರಿದ್ದಾರೆ.
ಚಿಮಣಿ ಏರುವ ಮೊದಲು ಸಾಮಾಜಿಕ ತಾಲತಾಣ ಇನ್‌ಸ್ಟಾಗ್ರಾಂನಲ್ಲಿ ಎಂಟು ನಿಮಿಷ ಮಾತನಾಡಿರುವ ವಿಡಿಯೊ ಹರಿಬಿಟ್ಟಿದ್ದಾರೆ. ವಿಡಿಯೊ ವೈರಲ್ ಆಗಿದೆ.
ಕಾರ್ಮಿಕರು ಮತ್ತು ಅಧಿಕಾರಿಗಳ ಚಿಮಣಿ ಕೆಳಭಾಗದಲ್ಲಿ ನೆರೆದಿದ್ದು, ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ.
ಆರ್‌ಟಿಪಿಎಸ್ ನಿರ್ಮಾಣಕ್ಕೆ ಭೂಮಿ ನೀಡಿದವರನ್ನು ಗುತ್ತಿಗೆ ನೌಕರಿಗೆ ಸೇರಿಸಿಕೊಂಡಿದ್ದಾರೆ. ಸರಿಯಾದ ವೇತನ ಕೊಡುತ್ತಿಲ್ಲ ಎಂಬುದನ್ನು ವಿಡಿಯೊದಲ್ಲಿ ಸುನೀಲ್ ಹೇಳಿದ್ದಾರೆ.
ಅಧಿಕಾರಿಗಳು ಸರಿಯಾಗಿ ಸ್ಪಂದಿಸಬೇಕು ಎಂದು ಒತ್ತಾಯಿಸಿದ್ದಾರೆ.
ನಮಗೂ 'ಸಿಹಿ' ಕೊಡಿ: ಆರ್ ಟಿಪಿಎಸ್ ಚಿಮಣಿ ಏರಿದ ಕಾರ್ಮಿಕನ ಬೇಡಿಕೆ
'ಆರ್ ಟಿಪಿಎಸ್ ವಿದ್ಯುತ್ ಸ್ಥಾವರದಲ್ಲಿ ಕೆಲಸ ಮಾಡುವವರೆಲ್ಲ ಒಂದು ಕುಟುಂಬದ ಸದಸ್ಯರಿದ್ದಂತೆ. ಮನೆಯಲ್ಲಿ ಸಿಹಿ ಮಾಡಿದಾಗ ಎಲ್ಲರೂ ಹಂಚಿಕೊಂಡು ತಿನ್ನುತ್ತಾರೆ. ಆದರೆ, ಆರ್‌ಟಿಪಿಎಸ್‌ನಲ್ಲಿ ಅಧಿಕಾರಿಗಳಿಗೆ ಮಾತ್ರ ಸಿಹಿ ಸಿಗುತ್ತಿದೆ. ಗುತ್ತಿಗೆ ಕಾರ್ಮಿಕರಿಗೂ 'ಸಿಹಿ' ಕೊಡಿ. ನ್ಯಾಯಬದ್ಧ ವೇತನ ನೀಡಿ' ಎಂದು ಆರ್‌ಟಿಪಿಎಸ್ ಚಿಮಣಿ ಏರಿ ಕುಳಿತಿರುವ ಕಾರ್ಮಿಕ ಸುನೀಲ್ ಅವರು ವಿಡಿಯೊಲೈವ್‌ನಲ್ಲಿ ಅಳಲು ತೋಡಿಕೊಂಡಿದ್ದಾರೆ.
ಮಿಲ್ ನಿರ್ವಹಣೆ ವಿಭಾಗದಲ್ಲಿ ಪ್ರತಿಯೊಂದನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದೇವೆ. ಆದರೆ ಕೆಪಿಸಿಎಲ್ ಅಧಿಕಾರಿಗಳು ಈ ಕೆಲಸಗಳನ್ನು ಬೇರೆಯವರಿಗೆ ಗುತ್ತಿಗೆ ಕೊಟ್ಟು ತಿರುಗಿಯೂ ನೋಡುವುದಿಲ್ಲ. ಗುತ್ತಿಗೆದಾರ ಕಂಪೆನಿಗಳು ಸೌಲಭ್ಯ ಕೊಡದೆ ಕಾರ್ಮಿಕರನ್ನು ದುಡಿಸಿಕೊಳ್ಳುತ್ತಿವೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.