ADVERTISEMENT

ಆರ್‌ಟಿಪಿಎಸ್, ವೈಟಿಪಿಎಸ್, ಘಟಕಗಳು ತಾತ್ಕಾಲಿಕ ಬಂದ್

ಉತ್ತಮ ಮಳೆ: ಶಾಖೋತ್ಪನ್ನ ವಿದ್ಯುತ್ ಉತ್ಪಾದನೆಗೆ ತಗ್ಗಿದ ಬೇಡಿಕೆ

ಅಮರೇಶ ನಾಯಕ
Published 13 ಸೆಪ್ಟೆಂಬರ್ 2024, 6:05 IST
Last Updated 13 ಸೆಪ್ಟೆಂಬರ್ 2024, 6:05 IST
ಆರ್‌ಟಿಪಿಎಸ್ ವಿದ್ಯುತ್ ಘಟಕಗಳಿಂದ ಹೊರ ಬರುವ ಹಾರುಬೂದಿ
ಆರ್‌ಟಿಪಿಎಸ್ ವಿದ್ಯುತ್ ಘಟಕಗಳಿಂದ ಹೊರ ಬರುವ ಹಾರುಬೂದಿ   

ಶಕ್ತಿನಗರ (ರಾಯಚೂರು ಜಿಲ್ಲೆ): ರಾಜ್ಯದಲ್ಲಿ ಉತ್ತಮವಾಗಿ ಮಳೆಯಾಗಿದ್ದರಿಂದ ಜಲವಿದ್ಯುತ್‌ ಉತ್ಪಾದನೆ ಪ್ರಮಾಣ ಹೆಚ್ಚಿಸಿದ ಪರಿಣಾಮ ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದ (ಆರ್‌ಟಿಪಿಎಸ್) ಆರು ಘಟಕಗಳಲ್ಲಿ ಹಾಗೂ ಯರಮರಸ್ ಶಾಖೋತ್ಪನ್ನ ವಿದ್ಯುತ್ ಸ್ಥಾವರದ (ವೈಟಿಪಿಎಸ್) ಎರಡು ಘಟಕಗಳಲ್ಲಿ ತಾತ್ಕಲಿಕವಾಗಿ ವಿದ್ಯುತ್‌ ಉತ್ಪಾದನೆ ನಿಲ್ಲಿಸಲಾಗಿದೆ. 

ಬಹುತೇಕ ಜಲಾಶಯಗಳು ಭರ್ತಿ ಹಂತಕ್ಕೆ ತಲುಪಿದ್ದರಿಂದ ಜಲವಿದ್ಯುತ್ ಕೇಂದ್ರಗಳು ಕಾರ್ಯಾರಂಭಿಸಿವೆ. ಶಾಖೋತ್ಪನ್ನ ಘಟಕಗಳ ಉತ್ಪಾದನೆ ತಾತ್ಕಲಿಕವಾಗಿ ಬಂದ್ ಮಾಡಲು ಕರ್ನಾಟಕ ವಿದ್ಯುತ್ ನಿಗಮ (ಕೆಪಿಸಿ) ಮುಂದಾಗಿದೆ. ಮತ್ತೊಂದೆಡೆ ಪವನ ಮತ್ತು ಸೌರ ವಿದ್ಯುತ್ ಲಭ್ಯತೆಯೂ ಹೆಚ್ಚಾಗಿದ್ದರಿಂದ ಶಾಖೋತ್ಪನ್ನ ಘಟಕಗಳು ನಿರಾಳವಾಗಿವೆ. ಸದ್ಯ ಆರ್‌ಟಿಪಿಎಸ್‌ನ ಎರಡು ಘಟಕಗಳಲ್ಲಿ ಮಾತ್ರ ವಿದ್ಯುತ್‌ ಉತ್ಪಾದಿಸಲಾಗುತ್ತಿದೆ.

‘ವಾರ್ಷಿಕ ನಿರ್ವಹಣೆ ನಿಮಿತ್ತ 210 ಮೆಗಾವಾಟ್ ಸಾಮರ್ಥ್ಯದ 6ನೇ ಘಟಕದಲ್ಲಿ ಉತ್ಪಾದನೆ ಬಂದ್‌ ಮಾಡಲಾಗಿತ್ತು. ಇದೀಗ 1, 2, 3, 4 ಮತ್ತು 7ನೇ ಘಟಕಗಳಲ್ಲಿ ತಾತ್ಕಾಲಿಕವಾಗಿ ಉತ್ಪಾದನೆ ಬಂದ್ ಮಾಡಿದ್ದೇವೆ’ ಎಂದು ಆರ್‌ಟಿಪಿಎಸ್‌ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಪಿ.ನಾರಾಯಣ ಗಜಕೋಶ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘7.55 ಲಕ್ಷ ಮೆಟ್ರಿಕ್ ಟನ್ ಕಲ್ಲಿದ್ದಲು ಸಂಗ್ರಹ ಇದೆ. ಸಿಂಗರೇಣಿ, ಮಹಾನದಿ ಕಲ್ಲಿದ್ದಲು ಸೇರಿ ವಿವಿಧ ಗಣಿಗಳಿಂದ ನಿತ್ಯ 8 ಕಲ್ಲಿದ್ದಲು ರೇಕ್‌ಗಳು ಬರುತ್ತಿದ್ದವು. ಉತ್ಪಾದನೆ ತಗ್ಗಿದ ಪರಿಣಾಮ ರೇಕ್‌ಗಳನ್ನೂ ತಗ್ಗಿಸಲಾಗಿದೆ. ಈಗ ದಿನಕ್ಕೆ 3ರಿಂದ 4 ರೇಕ್‌ಗಳು ಮಾತ್ರ ಬರುತ್ತಿವೆ’ ಎಂದು ಮಾಹಿತಿ ನೀಡಿದರು.

‘ವಿದ್ಯುತ್ ಬೇಡಿಕೆ ಇಲ್ಲದ ಪರಿಣಾಮ ವೈಟಿಪಿಎಸ್‌ನ ತಲಾ 800 ಮೆಗಾವಾಟ್ ಸಾಮರ್ಥ್ಯದ ಎರಡು ವಿದ್ಯುತ್ ಘಟಕಗಳ ವಿದ್ಯುತ್ ಉತ್ಪಾದನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ’ ಎಂದು ವೈಟಿಪಿಎಸ್ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಗಂಗಾಧರ ಹೇಳಿದರು.

‘ಕಲ್ಲಿದ್ದಲು ವಿಭಾಗದಲ್ಲಿ 2.55 ಲಕ್ಷ ಮೆಟ್ರಿಕ್ ಟನ್‌ ಕಲ್ಲಿದ್ದಲು ಸಂಗ್ರಹ ಇದೆ. ವಿದ್ಯುತ್ ಬೇಡಿಕೆ ಇಲ್ಲದ ಪರಿಣಾಮ ವಿವಿಧ ಕಲ್ಲಿದ್ದಲು ಗಣಿಗಳಿಂದ 3 ದಿನಕ್ಕೊಮ್ಮೆ ಮಾತ್ರ ಒಂದು ಕಲ್ಲಿದ್ದಲು ರೇಕ್ ಬರುತ್ತಿದೆ. ವಿದ್ಯುತ್ ಘಟಕಗಳ ಉತ್ಪಾದನೆ ಆರಂಭವಿದ್ದಾಗ ದಿನಕ್ಕೆ 4 ಕಲ್ಲಿದ್ದಲು ರೇಕ್‌ಗಳು ಬರುತ್ತಿದ್ದವು’ ಎಂದು ಅವರು ತಿಳಿಸಿದರು.

ಘಟಕಗಳ ನಿರ್ವಹಣೆಗೆ ಸಾಕಷ್ಟು ಕಾಲಾವಕಾಶ ಸಿಕ್ಕಂತಾಗಿದೆ. ಬೇಸಿಗೆಯಲ್ಲಿ ಕಂಡು ಬಂದಿದ್ದ ತಾಂತ್ರಿಕ ತೊಡಕುಗಳನ್ನು ತಾತ್ಕಾಲಿಕವಾಗಿ ದುರಸ್ತಿಗೊಳಿಸಲಾಗಿತ್ತು. ಈಗ ಶಾಶ್ವತ ಪರಿಹಾರ ದೊರಕಿಸಲು ಅಧಿಕಾರಿಗಳು ಮುಂದಾಗಿದ್ದಾರೆ.

ರಾಜ್ಯದ ವಿದ್ಯುತ್ ಉತ್ಪಾದನೆಯ ಒಟ್ಟು ಪ್ರಮಾಣದಲ್ಲಿ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳ ಕೊಡುಗೆ ಅರ್ಧದಷ್ಟಿದೆ. ಮಳೆ ಕೈಕೊಟ್ಟಾಗಲೆಲ್ಲ ಶಾಖೋತ್ಪನ್ನ ಕೇಂದ್ರಗಳೇ ಆಸರೆಯಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.