ರಾಯಚೂರು: ಜಗತ್ತಿನ ಧರ್ಮ ಗ್ರಂಥಗಳ ಸಾರ ಒಂದೇ ಎನ್ನುವ ಸಂದೇಶ ನೀಡಿದ ಸಾಯಿಬಾಬಾ ಸರ್ವಧರ್ಮದ ಆರಾಧಕರು ಎಂದು ಸಂತ ಇಬ್ರಾಹಿಂ ಸುತಾರ ಹೇಳಿದರು.
ನಗರದ ರಂಗಮಂದಿರ ಹತ್ತಿರ ನೂತನವಾಗಿ ನಿರ್ಮಿಸಿದ ಸಾಯಿಬಾಬಾ ದೇಗುಲದಲ್ಲಿ ಗುರುವಾರ ಹಮ್ಮಿಕೊಂಡಿದ್ದ ’ಶ್ರೀ ಸಾಯಿಬಾಬಾ ದೇವರ ಮೂರ್ತಿ ಪ್ರತಿಷ್ಠಾಪನೆ ಹಾಗೂ ಧ್ಯಾನ ಮಂದಿರ ಉದ್ಘಾಟನಾ’ ಸಮಾರಂಭದಲ್ಲಿ ಮಾತನಾಡಿದರು.
ಹಲವು ಧರ್ಮಗ್ರಂಥಗಳು ಹೇಳಿರುವುದು ’ಸಬ್ ಕಾ ಮಾಲಿಕ್ ಏಕ್ ಹೈ’ ಎಂಬ ಒಂದೇ ಸಾರ ಶಿರಡಿ ಸಾಯಿಬಾಬಾ ಸಾರಿದ್ದಾರೆ. ಎಲ್ಲರೂ ಜೀವನವನ್ನು ಅರ್ಥಮಾಡಿಕೊಂಡು ಬದುಕು ಸಾಗಿಸಬೇಕು ಎಂದು ಸಲಹೆ ನೀಡಿದರು.
ಸರ್ವಧರ್ಮ ಸಮನ್ವಯದ ಸಾಕಾರ ಮೂರ್ತಿಗಳೇ ಸಾಯಿ ಬಾಬಾ. ನಂಬಿರುವಂತಹ ಭಕ್ತರ ಪಾಲಿಗೆ ಕಾಮಧೇನುವಾಗಿ ಕಲ್ಪವೃಕ್ಷವಾಗಿರುವಂತವರೇ ಬಾಬಾ. ಅಪೇಕ್ಷಿಸುವವರಿಗೆ ಪೂರೈಕೆ ಮಾಡುವವರೇ ಬಾಬಾ. ಆಸೆ, ಆಡಂಬರಗಳನ್ನು ತೊರೆದು ನಂಬಿಕೆಯುಳ್ಳವರಿಗೆ ಬಾಬಾ ಮೋಕ್ಷ ಚಿಂತಾಮಣಿಯಿದ್ದಂತೆ. ಅನಾದಿ ಕಾಲದಿಂದಲೂ ಯಾವಾಗ ಜಗತ್ತಿನಲ್ಲಿ ಧರ್ಮಕ್ಕೆ ಧರ್ಮವಂತರಿಗೆ ಹಿನ್ನಡೆಯಾಗುತ್ತದೋ, ಅಧರ್ಮ ತಾಂಡವವಾಡುತ್ತದೋ ಆಗ ಅವತರಿಸಿ ಸಜ್ಜನರ ರಕ್ಷಣೆಗೆ, ಧರ್ಮವಂತರ ರಕ್ಷಣೆಗೆ ಧಾವಿಸುವುದು ನಡೆದಿದೆ. ಅಂತೆಯೇ ಬಾಬಾ ಅವರು ಕೂಡ ಅವತಾರ ಪುರುಷರಾಗಿ ಆಗಮಿಸಿ ಲೋಕಕಲ್ಯಾಣಕ್ಕಾಗಿ ಶ್ರಮಿಸಿದರು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಮಾತನಾಡಿ, ಹಲವು ದೇವರನ್ನು ಪೂಜಿಸುತ್ತಲೇ ಜಾತಿ ಜಾತಿಗಳ ಹೆಸರಿನಲ್ಲಿ ಹೊಡೆದಾಡಿಕೊಂಡು ಶಾಂತಿ, ಸುವ್ಯವಸ್ಥೆ ಹಾಳು ಮಾಡುತ್ತಿದ್ದೇವೆ. ಅನ್ಯಾಯ, ಅತ್ಯಾಚಾರ, ಅಶಾಂತಿ, ಕಲಹ ಉಂಟುಮಾಡುತ್ತಲೇ ಸ್ವಾರ್ಥಗಳಿಗಾಗಿ ಬದುಕುತ್ತಿದ್ದೇವೆ ಎಂದು ತಿಳಿಸಿದರು.
ಬಿಜೆಪಿ ಮುಖಂಡ ಎನ್.ಶಂಕ್ರಪ್ಪ, ವಿಧಾನ ಪರಿಷತ್ ಸದಸ್ಯ ಎನ್.ಎಸ್.ಬೋಸರಾಜ, ಸತ್ಯಸಾಯಿ ಬಾಬಾರ ಪರಮಭಕ್ತ ಭೂಪಾಲ್ ಚಿದಂಬರಂ ಮಾತನಾಡಿದರು. ಧ್ಯಾನ ಮಂದಿರ ಉದ್ಘಾಟನೆಯ ನಂತರ ರಕ್ತದಾನ ಶಿಬಿರ ನಡೆಯಿತು. ಆಗಮಿಸಿದ ಭಕ್ತರಿಗೆ ತುಳಸಿ ವೃಕ್ಷ ಹಾಗೂ ಮಹಾಪ್ರಸಾದ ವಿತರಿಸಲಾಯಿತು.
ಶ್ರೀ ಶಿರಡಿ ಸಾಯಿ ಬಾಬಾ ಸೇವಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಶ್ರೀ ಸಾಯಿ ಕಿರಣ್ ಆದೋನಿ, ಬಿಜೆಪಿ ಯುವ ಮೋರ್ಚಾ ರಾಜ್ಯ ಕೋಶಾಧ್ಯಕ್ಷ ಉಮೇಶ ಕಾರಜೋಳ, ಮುಖಂಡರಾದ ಕೆ.ಶಾಂತಪ್ಪ, ಆರ್.ತಿಮ್ಮಯ್ಯ, ಕೆ.ಆಂಜನೇಯ, ರವೀಂದ್ರ ಜಲ್ದಾರ್, ಅಂಬಣ್ಣ ಅರೋಲಿಕರ್, ಬಿ.ರಮೇಶ, ಬಸವನಗೌಡ ಪಿ.ಪಾಟೀಲ್, ಸತೀಶ್ ಸೇರಿದಂತೆ ಭಕ್ತರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.