ADVERTISEMENT

ಸೌಕರ್ಯ ವಂಚಿತ ಸೈದಾಪುರ ರೈಲ್ವೆ ನಿಲ್ದಾಣ

ಕಡೇಚೂರು ರೈಲು ಕಾರ್ಖಾನೆಗೆ ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವ ವಿ ಸೋಮಣ್ಣ ಇಂದು ಭೇಟಿ

ಮಲ್ಲಿಕಾರ್ಜುನ ಅರಿಕೇರಕರ್
Published 3 ಸೆಪ್ಟೆಂಬರ್ 2024, 5:57 IST
Last Updated 3 ಸೆಪ್ಟೆಂಬರ್ 2024, 5:57 IST
ಬೀಗ ಹಾಕಿದ ಶೌಚಾಲಯ
ಬೀಗ ಹಾಕಿದ ಶೌಚಾಲಯ   

ಸೈದಾಪುರ: ಪಟ್ಟಣದ ರೈಲು ನಿಲ್ದಾಣದಲ್ಲಿ ಮೂಲ ಸೌಕರ್ಯ ಮರೀಚಿಕೆಯಾಗಿದ್ದರಿಂದ ಬೇರೆ ಬೇರೆ ಊರುಗಳಿಗೆ ತೆರಳುವ ಪ್ರಯಾಣಿಕರು ಪರದಾಡುವಂತಾಗಿದೆ.

ವಡಗೇರಾ ಮತ್ತು ಗುರುಮಠಕಲ್ ತಾಲ್ಲೂಕಿನಿಂದ ನಿತ್ಯ ಬೆಂಗಳೂರು, ಮುಂಬೈ, ಪುಣೆ, ಹೈದ್ರಾಬಾದ್‌ಗೆ ಉದ್ಯೋಗ ಅರಿಸಿ ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಸಾವಿರಾರು ಜನ ಪ್ರಯಾಣಿಸುತ್ತಾರೆ. ಆದರೆ, ದೂರದ ಪ್ರಯಾಣಕ್ಕೆ ತೆರಳುವ ಪ್ರಯಾಣಿಕರು ಮುಂಗಡವಾಗಿ ಟಿಕೆಟ್‌ ಬುಕ್ ಮಾಡಲು ಪ್ರತ್ಯೇಕ ರಿಜರ್ವೇಶನ್ ಕೌಂಟರ್ ಇಲ್ಲ. ಆಹಾರ ಮಳಿಗೆಗಳಿಲ್ಲ. ಸದಾ ಪ್ರಯಾಣಿಕರ ನಿರೀಕ್ಷಣಾ ಕೊಠಡಿಗೆ, ಶೌಚಾಲಯಕ್ಕೆ ಬೀಗ ಹಾಕಿರುವುದರಿಂದ ಮಹಿಳೆಯರಿಗೆ ತೀವ್ರ ಸಂಕಷ್ಟ ಎದುರಾಗಿದೆ.

ಕಡೇಚೂರು ರೈಲು ಕಾರ್ಖಾನೆಗೆ ಕೇಂದ್ರದ ರೈಲ್ವೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಮಂಗಳವಾರ ಭೇಟಿ ನೀಡಲಿದ್ದು, ಈ ಸಮಸ್ಯೆಗಳ ಕುರಿತು ಚರ್ಚೆ ನಡೆಸಬೇಕಾದ ಅನಿವಾರ್ಯತೆ ಇದೆ ಎನ್ನುತ್ತಾರೆ ಇಲ್ಲಿಯ ಜನರು.

ADVERTISEMENT

ಕುಡಿಯುವ ನೀರಿನ ಸಮಸ್ಯೆ: ನಿಲ್ದಾಣದಲ್ಲಿ ಕುಡಿಯಲು ಶುದ್ಧ ನೀರಿಲ್ಲ. ಪ್ರಯಾಣಿಕರು ನೀರಿಗಾಗಿ ಪರಿತಪಿಸುವಂಥ ಪರಿಸ್ಥಿತಿ ಇದೆ. ಪ್ಲಾಟ್‌ಫಾರಂಗಳಲ್ಲಿ ಹಲವು ನೀರಿನ ಕೊಳಾಯಿಗಳಿವೆ. ಅದರಲ್ಲಿ ಕೆಲವು ಕೊಳಾಯಿಗಳಲ್ಲಿ ಮಾತ್ರ ನೀರು ಬರುತ್ತದೆ. ಅದೂ ಕುಡಿಯಲು ಯೋಗ್ಯವಾಗಿಲ್ಲ. ಹಣ ಕೊಟ್ಟು ನೀರಿನ ಬಾಟಲಿಗಳನ್ನು ಕೊಂಡುಕೊಳ್ಳಬೇಕೆಂದರೆ ಮಳಿಗೆಗಳೇ ಇಲ್ಲಿ ಇಲ್ಲ.

ಶೌಚಾಲಯ ಅವ್ಯವಸ್ಥೆ: ನಿಲ್ದಾಣದಲ್ಲಿ ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯಗಳಿಲ್ಲ. ಒಂದು ಶೌಚಾಲಯ ಇದೆ. ಅದಕ್ಕೂ ಸದಾ ಬೀಗ ಹಾಕಿರುವುದರಿಂದ ಇದ್ದು ಇಲ್ಲದಂತಾಗಿದೆ. ಮಹಿಳೆಯರಿಗೆ ತುಂಬಾ ತೊಂದರೆ ಆಗಿದೆ.

ಡಿಜಿಟಲ್ ಪ್ರದರ್ಶನ ಫಲಕಗಳಲ್ಲ: ನಿಲ್ದಾಣದಲ್ಲಿ ರೈಲುಗಳ ಹೆಸರು, ಸಮಯ, ಬೋಗಿಗಳ ಸಂಖ್ಯೆ ಸೇರಿದಂತೆ ಇತರೆ ಮಾಹಿತಿ ತಿಳಿಸುವ ವ್ಯವಸ್ಥಿತ ಆಧುನಿಕ ಪ್ರದರ್ಶನ ಫಲಕಗಳಲ್ಲದೇ ಪ್ರಯಾಣಿಕರು ತುಂಬಾ ತೊಂದರೆ ಅನುಭವಿಸುವಂತಾಗಿದೆ.

ರೈಲುಗಳ ನಿಲುಗಡೆ ಆಗಬೇಕು: ವಿವಿಧ ಜಿಲ್ಲೆಗಳಿಗೆ, ನಗರ ಪ್ರದೇಶಗಳಿಗೆ ಹೋಗುವ ಮತ್ತು ಬರುವ ನಿತ್ಯ ನೂರಾರು ಪ್ರಯಾಣಿಕರಿಗೆ ಕೆಲವು ರೈಲುಗಳ ನಿಲುಗಡೆ ಇಲ್ಲದಿರುವುದರಿಂದ ಸಾರ್ವಜನಿಕರಿಗೆ ಅನಾನುಕೂಲವಾಗುತ್ತಿದೆ. ಆದ್ದರಿಂದ 16381-2 ಕನ್ಯಾಕುಮಾರಿ ಎಕ್ಸ್‌ಪ್ರೆಸ್, 17308-7 ಬಸವ ಎಕ್ಸ್‌ಪ್ರೆಸ್, 11311-2 ಸೋಲಾಪುರ ಹಾಸನ ಎಕ್ಸ್‌ಪ್ರೆಸ್ ಹಾಗೂ ನಿತ್ಯ ಓಡಾಡುವ ಕಲಬುರಗಿ–ರಾಯಚೂರು ಪ್ಯಾಸೆಂಜರ್ ಸೇರಿದಂತೆ ಇನ್ನೂ ಹೆಚ್ಚಿನ ರೈಲುಗಳ ನಿಲುಗಡೆಗೆ ಅವಕಾಶ ನೀಡಬೇಕು ಎಂಬುದು ಸ್ಥಳೀಯರ ಆಶಯವಾಗಿದೆ.

ಕ್ರಾಸಿಂಗ್‌ನಿಂದ ನಿತ್ಯ ಪರದಾಡುವ ಪ್ರಯಾಣಿಕರು: ಸಾರ್ವಜನಿಕರಿಗೆ ಅನುಕೂಲವಾಗುವಂತಹ ರೈಲ್ವೆ ಕ್ರಾಸಿಂಗ್ ಇಲ್ಲದಿರುವುದರಿಂದ ರೋಗಿಗಳು, ವಯೋವೃದ್ಧರು, ಶಾಲಾ-ಕಾಲೇಜಿನ ವಿದ್ಯಾರ್ಥಿಗಳು, ಸರ್ಕಾರಿ ನೌಕರರು ನಿತ್ಯ ಗಂಟೆಗಟ್ಟಲೆ ಕಾಯುವಂತಾಗಿದೆ. ರೈಲ್ವೆ ಕ್ರಾಸಿಂಗ್‌ ಬಳಿ ಕೆಳಸೇತುವೆ ಇಲ್ಲವೇ ಮೇಲ್ಸೇತುವೆ ಮಾಡಿದರೆ ಸಾರ್ವಜನಿಕರ ಮುಕ್ತ ಸಂಚಾರಕ್ಕೆ ಅನುಕೂಲವಾಗುತ್ತದೆ ಎಂಬುದು ಸ್ಥಳೀಯರ ಆಗ್ರಹವಾಗಿದೆ.

ಬಹುದಿನಗಳಿಂದ ಸಮಸ್ಯೆಗಳ ಸುಳಿಯಲ್ಲಿ ಸೈದಾಪುರ ರೈಲ್ವೆ ನಿಲ್ದಾಣ ಸಿಲುಕಿದೆ. ನಮ್ಮವರಾದ ಕೇಂದ್ರ ಸಚಿವರು ನಿಲ್ದಾಣಕ್ಕೆ ಅಗತ್ಯ ಮೂಲ ಸೌಕರ್ಯ ಒದಗಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು
ಮಲ್ಲಿಕಾರ್ಜುನ ಅಲ್ಲಿಪುರ, ಪ್ರಯಾಣಿಕ
ರೈಲ್ವೆ ಇಲಾಖೆಗೆ ಹೆಚ್ಚಿನ ಆದಾಯ ನೀಡುವ ಸೈದಾಪುರ ಪಟ್ಟಣದ ನಿಲ್ದಾಣಕ್ಕೆ ಅಗತ್ಯ ಸೌಲಭ್ಯ ಕಲ್ಪಿಸುವಲ್ಲಿ ರೈಲ್ವೆ ಇಲಾಖೆ ಹಾಗೂ ಇಲ್ಲಿನ ಜನಪ್ರತಿನಿಧಿಗಳು ವಿಫಲವಾಗಿದ್ದಾರೆ.
ನಿತಿನ್ ತಿವಾರಿ, ಸೈದಾಪುರ ಸ್ಥಳೀಯ ನಿವಾಸಿ
ವ್ಯಾಪಾರ ವಹಿವಾಟಿನ ಕೇಂದ್ರವಾಗಿರುವ ಸೈದಾಪುರದ ರೈಲು ನಿಲ್ದಾಣದಲ್ಲಿ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ.. ಶೀಘ್ರದಲ್ಲಿ ಸಮಸ್ಯೆಗಳನ್ನು ಪರಿಹರಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟದ ಹಾದಿ ತುಳಿಯಬೇಕಾಗುತ್ತದೆ.
ಶರಣಿಕ ಕುಮಾರ ದೋಕಾ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ
ಬೀಗ ಹಾಕಿದ ಶೌಚಾಲಯ
ಸೈದಾಪುರ ರೈಲು ನಿಲ್ದಾಣದ ಹೊರನೋಟ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.