ADVERTISEMENT

ಬೆಂಗಳೂರಲ್ಲಿ ಸೈನ್ಸ್ ಪಾರ್ಕ್ ಸ್ಥಾಪನೆಗೆ ಚಿಂತನೆ: ಸತೀಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2023, 13:07 IST
Last Updated 29 ಡಿಸೆಂಬರ್ 2023, 13:07 IST
ಲಿಂಗಸುಗೂರಲ್ಲಿ ಶುಕ್ರವಾರ ಆರಂಭಗೊಂಡ ರಾಜ್ಯ ಮಟ್ಟದ 3ನೇ ವೈಜ್ಞಾನಿಕ ಸಮ್ಮೇಳನವನ್ನು ಸಚಿವ ಎನ್.ಎಸ್ ಬೋಸರಾಜು ಉದ್ಘಾಟಿಸಿದರು.
ಲಿಂಗಸುಗೂರಲ್ಲಿ ಶುಕ್ರವಾರ ಆರಂಭಗೊಂಡ ರಾಜ್ಯ ಮಟ್ಟದ 3ನೇ ವೈಜ್ಞಾನಿಕ ಸಮ್ಮೇಳನವನ್ನು ಸಚಿವ ಎನ್.ಎಸ್ ಬೋಸರಾಜು ಉದ್ಘಾಟಿಸಿದರು.   

ಲಿಂಗಸುಗೂರು: ‘ಶಾಲಾ ಕಾಲೇಜು ಮಕ್ಕಳು ಸೇರಿದಂತೆ ಆಸಕ್ತರಿಗೆ ವಿಜ್ಞಾನ ತಂತ್ರಜ್ಞಾನದ ಉನ್ನತೀಕರಣಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರದ ಸಹಯೋಗದಲ್ಲಿ ಬೆಂಗಳೂರಲ್ಲಿ 20ಎಕರೆ ವಿಶಾಲ ಪ್ರದೇಶದಲ್ಲಿ ಸೈನ್ಸ್‍ ಪಾರ್ಕ್‍ (ವಿಜ್ಞಾನ ಉದ್ಯಾನ) ಸ್ಥಾಪನೆಗೆ ಸರ್ಕಾರ ಚಿಂತನೆ ನಡೆಸಿದ’ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಶುಕ್ರವಾರ ರಾಷ್ಟ್ರಕವಿ ಕುವೆಂಪು ಜನ್ಮ ಹಾಗೂ ವೈಚಾರಿಕ ದಿನಾಚರಣೆ ನಿಮಿತ್ತ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಆಯೋಜಿಸಿದ ರಾಜ್ಯ ಮಟ್ಟದ 3ನೇ ವೈಜ್ಞಾನಿಕ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ‘ಮುಖ್ಯಮಂತ್ರಿಗಳು ಶೈಕ್ಷಣಿಕ ವರ್ಷದಿಂದ ಶಾಲಾ ಕಾಲೇಜುಗಳಿಗೆ ಟೆಲಿಸ್ಕೋಪ್‍ ವಿತರಣೆಗೆ ಹಾಗೂ ವಿಭಾಗ ಮಟ್ಟದಲ್ಲಿ ವಿಜ್ಞಾನ ಕೇಂದ್ರಗಳ ಸ್ಥಾಪಿಸಲಾಗುತ್ತೆ.ರಾಯಚೂರು ವಿಜ್ಞಾನ ಕೇಂದ್ರ ಜೀರ್ಣೋದ್ಧಾರಕ್ಕೆ ರೂ. 22.50ಕೋಟಿ ಬಿಡುಗಡೆ ಮಾಡಲಾಗಿದೆ’ ಎಂದರು.

ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಸಂಸ್ಥಾಪನ ಅಧ್ಯಕ್ಷ ಹುಲಿಕಲ್‍ ನಟರಾಜ್‍ ಮಾತನಾಡಿ, ‘2020ರಲ್ಲಿ ಸಂಸ್ಥೆ ಸ್ಥಾಪಿಸಿ ರಾಜ್ಯ ಮಟ್ಟದ ವೈಜ್ಞಾನಿಕ ಸಮ್ಮೇಳನ ಜೊತೆ ಜೊತೆಗೆ ರಾಜ್ಯವ್ಯಾಪಿ ಮೌಢ್ಯತೆ ನಿವಾರಣೆಗೆ ಅನೇಕ ಕಾರ್ಯಕ್ರಮ ಮಾಡುತ್ತ ಬಂದಿದೆ. ದಾನಿಗಳು ನೀಡಿದ 10ಎಕರೆ ಪ್ರದೇಶದಲ್ಲಿ ವಿಜ್ಞಾನ ಗ್ರಾಮ ನಿರ್ಮಾಣಕ್ಕೆ ಸರ್ಕಾರ ರೂ. 5.45ಕೋಟಿ ನೀಡಿದೆ. ಸಮ್ಮೇಳನ ನಡೆಸಲು ವಿಜ್ಞಾನ ತಂತ್ರಜ್ಞಾನ ಇಲಾಖೆ ರೂ. 20ಲಕ್ಷ, ಮಾನವ ಬಂಧುತ್ವ ವೇದಿಕೆ ರೂ. 25ಲಕ್ಷ ನೀಡಿದೆ’ ಎಂದರು.

ADVERTISEMENT

ಸಮ್ಮೇಳನದ ಸರ್ವಾಧ್ಯಕ್ಷ ಲೊಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ‘ಮೌಢ್ಯ, ಕಂದಾಚಾರಗಳಿಂದ ಹೊರಬಂದು ಭವ್ಯ ಭಾರತ ನಿರ್ಮಾಣಕ್ಕೆ ತಾವುಗಳೆಲ್ಲ ಮುಂದಾಗಬೇಕು. ವಿಜ್ಞಾನದ ಪ್ರಗತಿಯಿಂದ ಮಾತ್ರ ದೇಶದ ಪ್ರಗತಿ ಸಾಧ್ಯ. ಮೌಢ್ಯ ಮುಕ್ತ ಸಮಾಜ ನಿರ್ಮಾಣಕ್ಕೆ ತಾವು ಸಾಕಷ್ಟು ಹೋರಾಟ ನಡೆಸುತ್ತ ಬಂದಿದ್ದೇವೆ. ವೈಜ್ಞಾನಿಕ ಸಮ್ಮೇಳನಕ್ಕೆ ಪ್ರತಿ ವರ್ಷ ರೂ. 25ಲಕ್ಷ ದೇಣಿಗೆ ಗೋಷಿಸಿ ಅಗತ್ಯ ಬಿದ್ದಲ್ಲಿ ಹೆಚ್ಚಿನ ಪ್ರೋತ್ಸಾಹ ನೀಡುವುದಾಗಿ’ ಭರವಸೆ ನೀಡಿದರು.

ಶಾಸಕ ಮಾನಪ್ಪ ವಜ್ಜಲ, ಹಿರಿಯ ಸಾಹಿತಿ ಬಿ.ಟಿ ಲಲಿತಾ ನಾಯ್ಕ ಮಾತನಾಡಿದರು. ವಿಜ್ಞಾನ ಸಿರಿ ಮಾಸ ಪತ್ರಿಕೆಯನ್ನು ಸಚಿವ ಎನ್‍.ಎಸ್‍ ಬೋಸರಾಜು, ವಿಜ್ಞಾನ ಗ್ರಾಮಕ್ಕೆ ಡಾ. ಸಿ ಸೋಮಶೇಖರ, ಕೃಷಿ ಸುದ್ದಿ ಮಾಸಪತ್ರಿಕೆಯನ್ನು ಶಾಸಕ ಮಾನಪ್ಪ ವಜ್ಜಲ, ಮಾಜಿ ಸಚಿವ ಅಮರೆಗೌಡ ಪಾಟೀಲ ಬಯ್ಯಾಪುರ ವಿಜ್ಞಾನ ವಸ್ತು ಪ್ರದರ್ಶನ , ದಿನಚರಿ ಪುಸ್ತಕಗಳನ್ನು ಶಾಸಕ ಹಂಪಯ್ಯ ನಾಯಕ, ಎಚ್‍ಎನ್‍ ಟಿವಿ ಚಾನೆಲ್‍ನ್ನು ಮಾಜಿ ಶಾಸಕ ಡಿ.ಎಸ್‍ ಹೂಲಗೇರಿ ಚಾಲನೆ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ದುರ್ಗೇಶ, ಉಪ ವಿಭಾಗಾಧಿಕಾರಿ ಶಿಂಧೆ ಅವಿನಾಶ ಸಂಜೀವನ್‍, ತಹಶೀಲ್ದಾರ್‍ ಎನ್‍.ಶಂಶಾಲಂ. ಮುಖಂಡರಾದ ಅಮರಗುಂಡಪ್ಪ ಮೇಟಿ, ರವಿ ಪಾಟೀಲ್, ಭೀಮಣ್ಣ ನಾಯಕ, ದಂಡನಗೌಡ ಬಿರಾದರ, ರುದ್ರಗೌಡ ಪಾಟೀಲ, ಚಿರಂಜೀವಿ ರೋಡಕರ್‍, ನಬಿಸಾಬ ಆನೆಹೊಸೂರು ಸೇರಿದಂತೆ ಪ್ರಗತಿಪರ ಚಿಂತಕರು ಇದ್ದರು.

ಸಮ್ಮೇಳನಾಧ್ಯಕ್ಷರ ಭವ್ಯ ಮೆರವಣಿಗೆ

ಲಿಂಗಸುಗೂರು: ರಾಜ್ಯ ಮಟ್ಟದ 3ನೇ ವೈಜ್ಞಾನಿಕ ಸಮ್ಮೇಳನದ ಸರ್ವಾಧ್ಯಕ್ಷ ಲೊಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರನ್ನು ಅಲಂಕೃತ ತೆರೆದ ವಾಹನದಲ್ಲಿ ಪ್ರವಾಸಿ ಮಂದಿರದಿಂದ ಸಮ್ಮೇಳನದ ವೇದಿಕೆ ವರೆಗೆ ಭವ್ಯ ಮೆರವಣಿಗೆ ಮೂಲಕ ಬರಮಾಡಿಕೊಳ್ಳಲಾಯಿತು.

ಅಂಚೆ ಕಚೇರಿ, ಪುರಸಭೆ, ಪೊಲೀಸ್‍ ಠಾಣೆ ಮಾರ್ಗವಾಗಿ ಜೂನಿಯರ್‍ ಕಾಲೇಜು ಮೈದಾನದವರೆಗೆ ಮೆರವಣಿಗೆ ಸಾಗಿ ಬಂದಿತು. ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿದ್ದ ಕಲಾ ತಂಡಗಳು ಮೆರವಣಿಗೆಗೆ ಮೆರಗು ನೀಡಿದ್ದವು. ಮೆರವಣಿಗೆ ತಡವಾಗಿ ಆರಂಭ ಆಗಿದ್ದರಿಂದ ಮೆರವಣಿಗೆ ಮೊಟಕುಗೊಳಿಸಿ ವೇದಿಕೆ ಕಾರ್ಯಕ್ರಮ ನಿಗದಿತವಾಗಿ ನಡೆಸಿಕೊಡಲಾಯಿತು.

ಜೀವಮಾನ ಸಾಧಕರಿಗೆ ಪ್ರಶಸ್ತಿ ಪ್ರಧಾನ

ಲಿಂಗಸುಗೂರು: ಜೀವಮಾನ ಸಾಧನ ಪ್ರಶಸ್ತಿಗೆ ಪುರಸ್ಕೃತರಾದ ಹಿರಿಯ ಸಾಹಿತಿ ಬಿ.ಟಿ ಲಲಿತಾ ನಾಯ್ಕ, ಅಂತರಾಷ್ಟ್ರೀಯ ಕೌಶಲ್ಯ ತರಬೇತುದಾರ ಚೇತನ್‍ ರಾಮ್‍, ಲೈಂಗಿಕ ಅಲ್ಪಸಂಖ್ಯಾತರ ಪರ ಹೋರಾಟಗಾರ್ತಿ ಅಕಾಯಿ ಪದ್ಮಶಾಲಿ, ಸಾಮಾಜಿಕ ಚಿಂತಕ ಆರ್‍. ಮಾನಸಯ್ಯ ಹಾಗೂ ವಿಜ್ಞಾನ ಗ್ರಾಮ ನಿರ್ಮಾಣಕ್ಕೆ 10ಎಕರೆ ಜಮೀನು ದಾನ ಮಾಡಿದ ಆರ್‍. ರವಿ ಬಿಳಿಶಿವಾಲೆ ಅವರಿಗೆ ಪ್ರಶಸ್ತಿ ನೀಡಿ ಸತ್ಕರಿಸಲಾಯಿತು.

ಇದೇ ಸಂದರ್ಭದಲ್ಲಿ ವಿಶಿಷ್ಟ ಸೇವಾ ಪ್ರಶಸ್ತಿಗೆ ಭಾಜನರಾದ ಸಿದ್ಧರಾಮಣ್ಣ ಸಾಹುಕಾರ, ಬಸಮ್ಮ ತೆಗ್ಗಿನಮನಿ, ರಕ್ಷಿತಾ ಭರತಕುಮಾರ ಈಟಿ, ಸುಧಾ, ಜಿ.ಸಿ ಕಿರಣಕುಮಾರ್‍, ಜಗದೀಶ, ಎಚ್‍.ಎನ್‍ ನವೀನಕುಮಾರ, ಎಂ. ಮಂಜುನಾಥ, ಎನ್‍ ಲಕ್ಷ್ಮಿದೇವಿ, ಜಯಪ್ರಸಾದ, ಗೋಪಾಲ, ಲಯನ್‍ ಮುನಿರಾಜು ಅವರಿಗೂ ಪ್ರಶಸ್ತಿ ನೀಡಿ ಸತ್ಕರಿಸಲಾಯಿತು.

ಲಿಂಗಸುಗೂರಲ್ಲಿ ಶುಕ್ರವಾರ ಆರಂಭಗೊಂಡ ರಾಜ್ಯ ಮಟ್ಟದ 3ನೇ ವೈಜ್ಞಾನಿಕ ಸಮ್ಮೇಳನದಲ್ಲಿ ಭಾಗವಹಿಸಿದ್ದ ಶಾಲಾ ಕಾಲೇಜು ಮಕ್ಕಳು
ಲಿಂಗಸುಗೂರಲ್ಲಿ ಶುಕ್ರವಾರ ಆರಂಭಗೊಂಡ ರಾಜ್ಯ ಮಟ್ಟದ 3ನೇ ವೈಜ್ಞಾನಿಕ ಸಮ್ಮೇಳನಕ್ಕೆ ಮುಂಚೆ ಸಮ್ಮೇಳನದ ಸರ್ವಾಧ್ಯಕ್ಷ ಸಚಿವ ಸತೀಶ ಜಾರಕಿಹೊಳಿ ಅವರನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಸ್ವಾಗತಿಸಿದ ಕ್ಷಣ
ಲಿಂಗಸುಗೂರಲ್ಲಿ ಶುಕ್ರವಾರ ಆರಂಭಗೊಂಡ ರಾಜ್ಯ ಮಟ್ಟದ 3ನೇ ವೈಜ್ಞಾನಿಕ ಸಮ್ಮೇಳನಕ್ಕೆ ಮುಂಚೆ ಸಮ್ಮೇಳನದ ಸರ್ವಾಧ್ಯಕ್ಷ ಸಚಿವ ಸತೀಶ ಜಾರಕಿಹೊಳಿ ಮೆರವಣಿಗೆ ಸಂದರ್ಭದಲ್ಲಿ ಭಾಗವಹಿಸಿದ್ದ ಕಲಾತಂಡಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.