ಸಿಂಧನೂರು: ‘ವಿದ್ಯಾರ್ಥಿಗಳು ಬಾಲ್ಯಾವಸ್ಥೆಯಿಂದಲೇ ಸಮಯಪ್ರಜ್ಞೆ, ಕ್ರಿಯಾಶಿಲತೆ ಬೆಳೆಸಿಕೊಂಡು ಗುರುಗಳ ಮಾರ್ಗದರ್ಶನದಲ್ಲಿ ಮುಂದೆ ಸಾಗಿದರೆ ಉತ್ತಮ ಸಾಧಕರಾಗುವುದರಲ್ಲಿ ಸಂದೇಹವಿಲ್ಲ‘ ಎಂದು ಭಾರತ್ ಸ್ಕೌಟ್ಸ್ ಗೈಡ್ಸ್ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಎಸ್.ಶರಣೇಗೌಡ ಹೇಳಿದರು.
ತಾಲ್ಲೂಕಿನ ವಿರುಪಾಪುರ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಸಾವಿತ್ರಿಬಾಯಿ ಫುಲೆ ಗೈಡ್ಸ್ ಘಟಕ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಸ್ಕೌಟ್ಸ್ ಗೈಡ್ಸ್ ಧ್ವಜ ಚೀಟಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ವಿರುಪಾಪುರ ಪ್ರೌಢಶಾಲೆಯ ಆರ್ಥಿಕವಾಗಿ ಬಡತನದಲ್ಲಿದ್ದ ಪ್ರತಿಭಾವಂತ ಮೂವರು ವಿದ್ಯಾರ್ಥಿನಿಯರು ಮತ್ತು ಮೂವರು ವಿದ್ಯಾರ್ಥಿಗಳಿಗೆ ಪ್ರತಿವರ್ಷ ಸ್ಕೌಟ್ ಗೈಡ್ಸ್ ಸಮವಸ್ತ್ರಗಳನ್ನು ತಾವು ವೈಯಕ್ತಿಕವಾಗಿ ಉಚಿತವಾಗಿ ನೀಡುವುದಾಗಿ ಭರವಸೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಮುಖ್ಯಶಿಕ್ಷಕಿ ರಮಾದೇವಿ ಶಂಭೋಜಿ ಮಾತನಾಡಿ, ವಿದ್ಯಾರ್ಥಿಗಳ ಪಾಲಕರ, ಎಸ್‍ಡಿಎಂಸಿ ಅಧ್ಯಕ್ಷರು ಹಾಗೂ ಎಲ್ಲ ಸದಸ್ಯರ ಸಹಕಾರದಿಂದ ಇಲಾಖೆಯ ಅಧಿಕಾರಿಗಳ ಸೂಕ್ತ ಮಾರ್ಗದರ್ಶನದಿಂದ ಸರ್ಕಾರಿ ಪ್ರೌಢ ಶಾಲೆಯನ್ನು ಪ್ರಗತಿಪಥದಲ್ಲಿ ತೆಗೆದುಕೊಂಡು ಹೋಗಲು ಪ್ರಯತ್ನಿಸುವುದಾಗಿ ಹೇಳಿದ ಅವರು, ತಾವು ವಿದ್ಯಾರ್ಥಿನಿಯಾಗಿದ್ದಾಗ ಗೈಡ್ಸ್ ಸೇರಿ ಸೇವಾಮನೋಭಾವನೆ ಬೆಳೆಸಿಕೊಂಡಿರುವುದನ್ನು ಮೆಲುಕು ಹಾಕಿದರು.
ಭಾರತ್ ಸ್ಕೌಟ್ಸ್ ಗೈಡ್ಸ್ ವಿರುಪಾಪರ ಪ್ರೌಢಶಾಲೆಯ ಸಾವಿತ್ರಿಬಾಯಿ ಫುಲೆ ಗೈಡ್ಸ್ ಘಟಕದ ಗೈಡ್ ಕ್ಯಾಪ್ಟನ್ ಶ್ವೇತಾ ಗೊರವರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳ ಸ್ಪಂದನೆ ಉತ್ತಮವಾಗಿದ್ದು ಅವರಿಗೆ ಪ್ರೋತ್ಸಾಹ ನೀಡಬೇಕೆಂದು ಮನವಿ ಮಾಡಿಕೊಂಡರು.
ಇದೇ ಸಂದರ್ಭದಲ್ಲಿ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಎಸ್.ಶರಣೇಗೌಡ ಹಾಗೂ ಕೋಶಾಧ್ಯಕ್ಷ ಎನ್.ಬಿ.ಜೋಶಿ ಅವರನ್ನು ಸನ್ಮಾನಿಸಲಾಯಿತು.
ಭಾರತ್ ಸ್ಕೌಟ್ ಗೈಡ್ ಸಂಸ್ಥೆಯ ಜಿಲ್ಲಾ ಸಹಾಯಕ ಆಯುಕ್ತ ಬೀರಪ್ಪ ಶಂಭೋಜಿ, ಕೋಶಾಧ್ಯಕ್ಷ ಎನ್.ಬಿ.ಜೋಶಿ ಮಾತನಾಡಿದರು. ಶಿಕ್ಷಕಿಯರಾದ ಶಾರದಮ್ಮ, ಮಂಜುಳಾ, ಸುನೀತಾ ಅರಮನಿ, ಮೌಲಾಸಾಬ್, ಪ್ರಶಿಕ್ಷಣಾರ್ಥಿ ಚಂದ್ರಶೇಖರ ಇದ್ದರು. ವಿದ್ಯಾರ್ಥಿಗಳಾದ ಪಲ್ಲವಿ, ರಕ್ಷಿತಾ ಅನಿಸಿಕೆ ವ್ಯಕ್ತಪಡಿಸಿದರು. ಸಂಜನಾ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.