ರಾಯಚೂರು: ನಗರದ ಸರ್ಕಾರಿ ಬಾಲಮಂದಿರದಲ್ಲಿ ಆಶ್ರಯ ಪಡೆದು ಓದುತ್ತಿದ್ದ ಅನಾಥ ಬಾಲಕಿ ಮೇಲೆ ಕಾವಲುಗಾರನೇ ಅತ್ಯಾಚಾರ ನಡೆಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಈ ಬಗ್ಗೆ ಸಲ್ಲಿಕೆಯಾಗಿದ್ದ ದೂರು ಪರಿಶೀಲಿಸಲು ವಿಳಂಬ ಮಾಡಿದ್ದ ಇಬ್ಬರು ಅಧಿಕಾರಿಗಳನ್ನು ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್ ಅವರು ಅಮಾನತುಗೊಳಿಸಿದ್ದಾರೆ.
ಹೊರಗುತ್ತಿಗೆ ಆಧಾರದಲ್ಲಿದ್ದ ಕಾವಲುಗಾರ ಆರೋಪಿ ಸಿದ್ದಯ್ಯ ತಲೆಮರೆಸಿಕೊಂಡಿದ್ದು, ಪೊಲೀಸರು ಶೋಧ ಆರಂಭಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಮಂದಿರದ ಮೇಲ್ವಿಚಾರಕ ಸಯ್ಯದ್ ಪಾಷಾ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಗುರುಪ್ರಸಾದ ಅಮಾನತುಗೊಂಡಿದ್ದಾರೆ.
ಎಸ್ಸೆಸ್ಸೆಲ್ಸಿ ಓದುತ್ತಿದ್ದ ವಿದ್ಯಾರ್ಥಿಯನ್ನು ಶಾಲೆಗೆ ಕರೆದುಕೊಂಡು ಹೋಗುವ ನೆಪದಲ್ಲಿ ಆರೋಪಿಯು ಕಳೆದ ವರ್ಷ ನವೆಂಬರ್‌ನಲ್ಲಿ ಅತ್ಯಾಚಾರ ಎಸಗಿದ್ದಾರೆ. ಮೊಬೈಲ್ ಸಂಭಾಷಣೆಯಿಂದ ಸಂಶಯಗೊಂಡಿದ್ದ ಬಾಲಕಿಯ ಸಹೋದರನು, ಸಹೋದರಿಯ ಮೇಲಿನ ಅತ್ಯಾಚಾರದ ಬಗ್ಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ದೂರು ಸಲ್ಲಿಸಿದ್ದರು. ಆದರೆ, ಯಾವುದೇ ಪರಿಶೀಲನೆ ಆಗಿರಲಿಲ್ಲ.
ಜನವರಿ 30 ರಂದು ಈ ಬಗ್ಗೆ ಮಹಿಳಾ ಠಾಣೆಯಲ್ಲಿ ರಕ್ಷಣಾ ಘಟಕದ ಅಧಿಕಾರಿಗಳು ದೂರು ಸಲ್ಲಿಸಿದ್ದರು. ಕೂಡಲೇ ಎಚ್ಚೆತ್ತುಕೊಂಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಹಾಗೂ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ್ ಅವರು ಶುಕ್ರವಾರ ಬಾಲಮಂದಿರಕ್ಕೆ ಭೇಟಿ ನೀಡಿ, ಮಾಹಿತಿ ಸಂಗ್ರಹಿಸಿದರು.
ಅತ್ಯಾಚಾರ ನಡೆದಿರುವ ಸಂಶಯ ವ್ಯಕ್ತವಾಗಿದ್ದರಿಂದ ಕೂಡಲೇ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಅಲ್ಲದೆ, ಬಾಲಕಿಯರ ಬಾಲಮಂದಿರದ ಲೋಪದೋಷಗಳ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸಲು ರಾಯಚೂರು ಉಪವಿಭಾಗಾಧಿಕಾರಿ ಸಂತೋಷ ಕಾಮಗೊಂಡ ಅವರಿಗೆ ಸೂಚನೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.