ರಾಯಚೂರು: ಜಿಲ್ಲೆಯಲ್ಲಿ ಒಂದು ತಿಂಗಳಿಂದ ರಣ ಬಿಸಿಲು ಮುಂದುವರಿದಿದೆ. ಒಂದು ವಾರದಿಂದ ಗರಿಷ್ಣ ಉಷ್ಣಾಂಶ 42 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲೇ ಇದೆ. ಜತೆಗೆ ಬಿಸಿ ಗಾಳಿಯೂ ಬೀಸುತ್ತಿದೆ. ಕೆಂಡದಂತಹ ಬಿಸಿಲಿನಿಂದಾಗಿ ಟ್ರಾಫಿಕ್‌ನಲ್ಲಿ ಒಂದು ನಿಮಿಷವೂ ನಿಲ್ಲದಂತಹ ಸ್ಥಿತಿ ಇದೆ. ಸಾರ್ವಜನಿಕರ ಸಂಕಷ್ಟ ಅರಿತ ಜಿಲ್ಲಾಡಳಿತ ಜಿಲ್ಲೆಯ ಪ್ರಮುಖ ವೃತ್ತಗಳಲ್ಲಿ ವಾಹನ ಸವಾರರಿಗೆ ನೆರಳಿನ ವ್ಯವಸ್ಥೆ ಮಾಡತೊಡಗಿದೆ.
ನಗರದಲ್ಲಿ ಬಸವೇಶ್ವರ ವೃತ್ತ ಹಾಗೂ ಗಂಜ್ ಸರ್ಕಲ್‌ನಲ್ಲಿ ಸಂಚಾರ ಒತ್ತಡ ಅಧಿಕ ಇರುತ್ತದೆ. ಹೀಗಾಗಿ ಜಿಲ್ಲಾಡಳಿತ ಮೊದಲ ಹಂತವಾಗಿ ಈ ಎರಡು ವೃತ್ತಗಳಲ್ಲಿ ಚಪ್ಪರ ಹಾಕಿ ನೆರಳಿನ ವ್ಯವಸ್ಥೆ ಮಾಡಿದೆ. ವಾಹನ ಸವಾರರು ಒಂದಿಷ್ಟು ಸಮಾಧಾನ ಪಟ್ಟುಕೊಳ್ಳುವಂತಾಗಿದೆ.
‘ಈ ಬಾರಿ ಬಿಸಿಲು ಜಾಸ್ತಿ ಇರುವ ಕಾರಣ ರಾಯಚೂರು ನಗರದಲ್ಲಿ ಎರಡು ಕಡೆ ವೃತ್ತಗಳಲ್ಲಿ ಚಪ್ಪರ ಹಾಕಿ ನೆರಳಿನ ವ್ಯವಸ್ಥೆ ಮಾಡಲಾಗಿದೆ. ಸಿಂಧನೂರಲ್ಲೂ ವೃತ್ತಗಳಲ್ಲಿ ಚಪ್ಪರ ಹಾಕಿ ನೆರಳಿನ ವ್ಯವಸ್ಥೆ ಮಾಡುವಂತೆ ನಗರಸಭೆಗೆ ಸೂಚಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ತಿಳಿಸಿದರು.
‘ಬಿಸಿಲಿನಿಂದ ಸಾರ್ವಜನಿಕರಿಗೆ ರಕ್ಷಣೆ ಒದಗಿಸಲು ಸಾಧ್ಯವಿರುವ ಕ್ರಮ ಕೈಗೊಳ್ಳುವಂತೆ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೂ ಸೂಚನೆ ನೀಡಲಾಗಿದೆ‘ ಎಂದು ಹೇಳಿದರು.
‘ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಜಿಲ್ಲೆಯ ಗಡಿಗಳಲ್ಲಿ ತೆರೆಯಲಾದ ಚೆಕ್‌ಪೋಸ್ಟ್‌ಗಳಲ್ಲಿ ಟಿನ್‌ಶೆಡ್‌ಗಳಲ್ಲಿ ಅಸಹನೀಯ ಕಾವು ಇದೆ. ಹೀಗಾಗಿ ಬಿದಿರಿನಿಂದ ತಯಾರಿಸಿದ ಚಪ್ಪರ್ ನಿರ್ಮಿಸಲಾಗಿದೆ. ಚೆಕ್‌ಪೋಸ್ಟ್‌ಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆಯನ್ನೂ ಮಾಡಲಾಗಿದೆ‘ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ತಿಳಿಸಿದರು.
‘ಬಿಸಿಲಿನ ಝಳಕ್ಕೆ ಜನ ಮನೆಗಳಿಂದ ಹೊರಗೆ ಬರಲು ಹಿಂಜರಿಯುತ್ತಿದ್ದಾರೆ. ಶಾಲೆಗಳು ರಜೆಯಾಗಿರುವ ಕಾರಣ ಮಕ್ಕಳು ದೂರದ ಊರುಗಳಿಗೆ ತೆರಳಿದ್ದಾರೆ. ವ್ಯಾಪಾರಸ್ಥರು, ನೌಕರಿ ಮಾಡುವವರು ಮಾತ್ರ ಬಿಸಿಲಲ್ಲಿ ಸಂಚರಿಸಬೇಕಾದ ಅನಿವಾರ್ಯತೆ ಇದೆ. ಜಿಲ್ಲಾಡಳಿತ ವೃತ್ತಗಳಲ್ಲಿ ಚಪ್ಪರ ಹಾಕಿ ಒಳ್ಳೆಯ ಕೆಲಸ ಮಾಡಿದೆ‘ ಎಂದು ಬಸವೇಶ್ವರ ವೃತ್ತದಲ್ಲಿ ಟ್ರಾಫಿಕ್‌ನಲ್ಲಿ ನಿಂತಿದ್ದ ಡ್ಯಾಡಿಕಾಲೊನಿ ಶಿವಕುಮಾರ ಹಾಗೂ ಸಾಮಾಜಿಕ ಕಾರ್ಯಕರ್ತೆ ವಿದ್ಯಾ ಪಾಟೀಲ ಹೇಳಿದರು.
2022ರ ಏಪ್ರಿಲ್ ಸಂದರ್ಭದಲ್ಲಿ ರಾಯಚೂರಲ್ಲಿ ಮುಖ್ಯಮಂತ್ರಿ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿತ್ತು. ಆಗ ಗರಿಷ್ಣ ಉಷ್ಣಾಂಶ 44 ಡಿಗ್ರಿ ಸೆಲ್ಸಿಯಸ್ ಇದ್ದ ಕಾರಣ ಸರ್ಕಾರಿ ಕಾರ್ಯಕ್ರಮವನ್ನೇ ರದ್ದು ಪಡಿಸಲಾಗಿತ್ತು. ಇದೀಗ ಲೋಕಸಭೆ ಚುನಾವಣೆ ಪ್ರಚಾರ ಸಂಜೆ ವೇಳೆಯಲ್ಲೇ ನಡೆಯುತ್ತಿವೆ. ರಣ ಬಿಸಿಲು ರಾಜಕಾರಣಿಗಳು ಹಾಗೂ ರಾಜಕೀಯ ಕಾರ್ಯಕರ್ತರನ್ನು ಹಿಂಡಿ ಹಿಪ್ಪೆ ಮಾಡಿದೆ.
ರಾಯಚೂರಲ್ಲಿ ಶನಿವಾರ ಗರಿಷ್ಣ ಉಷ್ಣಾಂಶ 42 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇನ್ನೂ ಎರಡು ದಿನ ರಣ ಬಿಸಿಲು ಮುಂದುವರಿಯಲಿದೆ. ಮಂಗಳವಾರದಿಂದ ಎರಡು ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ದೃಢಪಡಿಸಿದೆ.
ನಗರದಲ್ಲಿ ಸಾಗುವ ಎತ್ತರದ ಕ್ಯಾಂಟರ್‌ಗಳ ಅಳತೆ ಪಡೆದು ಅದಕ್ಕಿಂತ ಎತ್ತರದ ಚಪ್ಪರ ನಿರ್ಮಿಸಿ ಅದರ ಮೇಲೆ ಹಸಿರು ಹೊದಿಕೆ ಹಾಕಿ ಕ್ರೇನ್ ನೆರವಿನಿಂದ ವೃತ್ತಗಳಲ್ಲಿ ಚಪ್ಪರ ಅಳವಡಿಸಲಾಗಿದೆ.–ನಿಖಿಲ್ ಬಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.