ADVERTISEMENT

ಆಡಿಯೊ ಪ್ರಕರಣ: ಆಮಿಷದ ದೂರು ಸಲ್ಲಿಸಿದ ಶರಣಗೌಡ

ರಾಯಚೂರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಆಡಿಯೊ ಸಾಕ್ಷಿಗಳ ಹಸ್ತಾಂತರ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2019, 13:35 IST
Last Updated 13 ಫೆಬ್ರುವರಿ 2019, 13:35 IST
ರಾಯಚೂರು ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಗೆ ಶುಕ್ರವಾರ ಆಡಿಯೋ ಸಾಕ್ಷಿಗಳನ್ನು ಒದಗಿಸಲು ಬಂದಿದ್ದ ಗುರುಮಠಕಲ್‌ ಶಾಸಕ ನಾಗನಗೌಡ ಅವರ ಪುತ್ರ ಶರಣಗೌಡ ಹಾಗೂ ಅವರ ಬೆಂಬಲಿಗರು
ರಾಯಚೂರು ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಗೆ ಶುಕ್ರವಾರ ಆಡಿಯೋ ಸಾಕ್ಷಿಗಳನ್ನು ಒದಗಿಸಲು ಬಂದಿದ್ದ ಗುರುಮಠಕಲ್‌ ಶಾಸಕ ನಾಗನಗೌಡ ಅವರ ಪುತ್ರ ಶರಣಗೌಡ ಹಾಗೂ ಅವರ ಬೆಂಬಲಿಗರು   

ರಾಯಚೂರು: ಆಡಿಯೋ ರಿಕಾರ್ಡಿಂಗ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಯಚೂರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಸಂಪೂರ್ಣ ವಿವರ ಇರುವ ಸಿ.ಡಿ. ಸಾಕ್ಷಿ ಒದಗಿಸಿರುವ ಗುರುಮಠಕಲ್‌ ಶಾಸಕ ನಾಗನಗೌಡ ಅವರ ಪುತ್ರ ಶರಣಗೌಡ ಅವರು, ಬಿಜೆಪಿಯವರು ಆಮಿಷ ಒಡ್ಡಿರುವ ಬಗ್ಗೆ ದೇವದುರ್ಗ ಪೊಲೀಸ್‌ ಠಾಣೆಗೆ ಶುಕ್ರವಾರ ದೂರು ಸಲ್ಲಿಸಿದ್ದಾರೆ.

ಎಸ್‌ಪಿ ಕಚೇರಿಯಲ್ಲಿ ಆಡಿಯೋ ಸಾಕ್ಷಿಗಳನ್ನು ಹಸ್ತಾಂತರಿಸಿ ಬಂದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

‘ನನಗೆ ಬಿಜೆಪಿಯವರು ಎಷ್ಟು ಕೋಟಿ ಕೊಡುವುದಾಗಿ ಹೇಳಿದ್ದರು. ಎಲ್ಲಿ ಬರಲಿಕ್ಕೆ ಹೇಳಿದ್ದರು. ಯಾರು ಬರಲಿಕ್ಕೆ ಹೇಳಿದ್ದರು. ನನ್ನ ಮೇಲೆ ಯಾವ ರೀತಿ ಒತ್ತಡ ಹಾಕಿದ್ದರು. ಇದು ಆಗಲ್ಲ ಎಂದಾಗ, ರಾಜಕೀಯವಾಗಿ ಮುಗಿಸುವುದಾಗಿ ಬೆದರಿಕೆ ಹಾಕಿದ್ದು. ಈ ಎಲ್ಲ ವಿವರವನ್ನು ಎಸ್‌ಪಿ ಅವರಿಗೆ ಹೇಳಿ, ಸಿ.ಡಿ. ಸಾಕ್ಷಿಗಳನ್ನು ಕೊಟ್ಟು ಬಂದಿದ್ದೇನೆ’ ಎಂದು ತಿಳಿಸಿದರು.

ADVERTISEMENT

ಇದು ತಾಂತ್ರಿಕ ವಿಷಯವಾಗಿದ್ದರಿಂದ ವಕೀಲರೊಂದಿಗೆ ಚರ್ಚಿಸಿ ದೂರು ಸಲ್ಲಿಸಲು ಸ್ವಲ್ಪ ತಡವಾಗಿದೆ. ಅಂದು ರಾತ್ರಿ ಏನೇನು ಆಗಿತ್ತು ಎಂಬುದರ ವಿವರಣೆಯನ್ನು ಒದಗಿಸಿದ್ದೇನೆ. ಬಿಜೆಪಿಯವರು ಸಮ್ಮಿಶ್ರ ಸರ್ಕಾರಕ್ಕೆ ಈ ರೀತಿ ಪ್ರತಿನಿತ್ಯ ತೊಂದರೆ ಕೊಡುತ್ತಿರುವುದನ್ನು ನೋಡಿಕೊಂಡು ಸಹಿಸಲಾಗಲಿಲ್ಲ. ಈ ಅವಕಾಶಕ್ಕಾಗಿ ಕಾಯುತ್ತಿದ್ದೆ. ಇದನ್ನು ಪೂರ್ವಯೋಜಿತವಾಗಿಯೆ ಮಾಡಿದ್ದೇನೆ. ಸರ್ಕಾರ ಅಮವಾಸ್ಯೆಗೆ ಬೀಳುತ್ತದೆ, ಹುಣ್ಣಿಮೆಗೆ ಬೀಳುತ್ತದೆ ಎಂದು ಜನರ ಗಮನವನ್ನು ಬಿಜೆಪಿಯವರು ಪರಿವರ್ತನೆ ಮಾಡುತ್ತಿದ್ದರು. ಅದಕ್ಕಾಗಿ ಬಿಜೆಪಿಯವರಿಗೆ ಇದೊಂದು ಸ್ಯಾಂಪಲ್‌ ಕೊಟ್ಟಿದ್ದೇನೆ ಎಂದರು.

ಈ ವಿಷಯದಲ್ಲಿ ಮುಖ್ಯಮಂತ್ರಿಗಳ ಹೆಸರು ಎಳೆದು ತರಬಾರದು ಎಂದು ಮನವಿ ಮಾಡಿದ ಅವರು, ‘ಕಾಂಗ್ರೆಸ್‌ನಿಂದ.. ಜೆಡಿಎಸ್‌ನಿಂದ ಶಾಸಕರು ಹೋಗುತ್ತಾರೆ ಎನ್ನುವ ವದಂತಿ ಜೋರಾಗಿತ್ತು. ನಮ್ಮ ಬಗ್ಗೆಯೂ ನಮ್ಮ ನಾಯಕರು ಮತ್ತು ಗುರುಮಠಕಲ್‌ ಕ್ಷೇತ್ರದ ಜನರು ಅಪಾರ್ಥ ಮಾಡಿಕೊಳ್ಳಬಾರದು ಎನ್ನುವ ಕಾರಣಕ್ಕಾಗಿ ಅಂದು ರಾತ್ರಿ ಹೋಗುವಾಗ ಮುಖ್ಯಮಂತ್ರಿಗೆ ಫೋನ್‌ ಮಾಡಿದ್ದು ನಿಜ. ಅವರು ಸ್ವಾಭಾವಿಕವಾಗಿಯೆ ಹೇಳಿದ್ದು, ಹೋಗುವುದಿದ್ದರೆ ಹೋಗಿ ಬನ್ನಿ ಅಂದಿದ್ದರು’ ಎಂದು ವಿವರಿಸಿದರು.

‘ಅಂದು ರಾತ್ರಿ ಶಿವನಗೌಡ ನಾಯಕ ಫೋನ್‌ ಮಾಡಿದ್ದರು. ಬರುವಂತೆ ಹೇಳಿದಾಗ, ರಾತ್ರಿಯಾಗಿದೆ ಈಗ ಬೇಡ ಎಂದು ಹೇಳಿದೆ. ಆದರೆ, ಹಿರಿಯರು ಮಾತನಾಡುತ್ತಾರೆ ಎಂದು ಹೇಳಿ ಯಡಿಯೂರಪ್ಪ ಅವರ ಕೈಗೆ ಫೋನ್‌ ಕೊಟ್ಟರು. ನಿನಗೆ ಬರಲಿಕ್ಕೆ ಆಗತ್ತದೆಯೆ ಎಂದು ಅವರು ಕೇಳಿದ್ದರು. ಆದರೆ, ನಾನು ಆಗುವುದಿಲ್ಲ ಎಂದೆ. ನೀನು ಬರುವುದು ಬೇಡ. ಶಿವನಗೌಡ ನಾಯಕರೆ ಅಲ್ಲಿಗೆ ಕಾರಿನಲ್ಲಿ ಬಂದು ಕರೆದುಕೊಂಡು ಬರುತ್ತಾರೆ ಎಂದು ಒತ್ತಡ ಹಾಕಿದ್ದರಿಂದ ಅನಿವಾರ್ಯವಾಗಿ ನಾನೇ ದೇವದುರ್ಗ ಐಬಿಗೆ ಬರಬೇಕಾಯಿತು’ ಎಂದು ಹೇಳಿದರು.

ಸ್ಪೀಕರ್‌ ಮತ್ತು ನ್ಯಾಯಾಧೀಶರ ವಿಷಯ ಪ್ರಸ್ತಾವನೆ ಆಗುವಾಗ ಆ ಜಾಗದಲ್ಲಿ ಇರಲಿಲ್ಲ ಎಂದು ಯಡಿಯೂರಪ್ಪ ಹೇಳುತ್ತಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, “ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಜೊತೆಯಲ್ಲಿನಾಲ್ಕು ಜನರಿದ್ದೇವು. ಶಾಸಕರಾದ ಶಿವನಗೌಡ ನಾಯಕ, ಪ್ರಿತಂಗೌಡ, ನಾನು ಮತ್ತು ಇನ್ನೊಬ್ಬರು ಮರಮಕಲ್‌ ಇದ್ದರು’ ಎಂದರು.

“ನಿಷ್ಠೆ ವಿಷಯ ಬಂದರೆ ನಾನು ಕುಮಾರಸ್ವಾಮಿ ಅವರೊಂದಿಗೆ ಇದ್ದೇನೆ. ಚುನಾವಣೆ ಮುಂಚೆಯಿಂದಲೂ ಅವರೊಂದಿಗೆ ಇದ್ದೇನೆ. ಅವರ ರಾಜಕೀಯ ನೆರಳಿನಲ್ಲಿಯೇ ಬೆಳೆದಿದ್ದೇನೆ. ಸರ್ಕಾರ ನಡೆಸಲು ಅವರು ಪ್ರತಿದಿನ ಹಿಂಸೆ ಅನುಭವಿಸುತ್ತಿದ್ದರು. ನನ್ನ ಜಾಗದಲ್ಲಿ ಬೇರೆ ಯಾರೆ ಇದ್ದರೂ ಇದೇ ಕೆಲಸ ಮಾಡುತ್ತಿದ್ದರು. ಕುಮಾರಸ್ವಾಮಿ ಅವರು ಐದು ವರ್ಷ ಯಶಸ್ವಿಯಾಗಿ ಮುಖ್ಯಮಂತ್ರಿಯಾಗಿ ಕೆಲಸ ಮಾಡಬೇಕು ಎನ್ನುವುದು ನನ್ನ ಆಸೆ’ ಎಂದು ಹೇಳಿದರು.

‘ಇವೆಲ್ಲ ಬೆಳವಣಿಗೆಯಿಂದಾಗಿ ಜೀವ ಬೆದರಿಕೆ ಬಂದಿರುವುದು ನಿಜ. ಇದೆಲ್ಲ ಸ್ವಾಭಾವಿಕ. ಈಗ ವಿಷಯ ಪರಿವರ್ತನೆ ಮಾಡುವುದು ನನಗೆ ಇಷ್ಟವಿಲ್ಲ. ಇದೆಲ್ಲ ನಾನೇ ನಿಭಾಯಿಸಿಕೊಳ್ಳುತ್ತೇನೆ’ ಎಂದರು.

ಯಾದಗಿರಿ ಬಂದಿದ್ದ ಶರಣಗೌಡ ಅವರ ಜೊತೆಯಲ್ಲಿ ಬೆಂಬಲಿಗರ 30 ಕಾರುಗಳಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.