ದೇವದುರ್ಗ: ತಾಲ್ಲೂಕಿನಾದ್ಯಂತ ಸರ್ಕಾರಿ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಒಂದಲ್ಲ ಒಂದು ರೀತಿಯ ಕೊರತೆಗಳಿಂದ ಬಳಲುತ್ತಿವೆ. ಅವ್ಯವಸ್ಥೆ ಮತ್ತು ಸಮಸ್ಯೆಗಳ ನಡುವೆಯೇ ಬಡ ಮಕ್ಕಳು ಭವಿಷ್ಯ ರೂಪಿಸಿಕೊಳ್ಳಲು ಪರದಾಡುತ್ತಿದ್ದಾರೆ.
ಶಾಲಾ ಕೊಠಡಿಗಳು ಸರಿಯಾಗಿದ್ದರೆ, ಪಾಠ ಮಾಡಲು ಪೂರ್ಣ ಪ್ರಮಾಣದ ಶಿಕ್ಷಕರಿಲ್ಲ. ಶಿಕ್ಷಕರಿದ್ದರೆ ಅಲ್ಲಿ ಮಕ್ಕಳ ಸಂಖ್ಯೆ ಇಳಿಮುಖವಾಗಿದೆ. ಶಿಕ್ಷಕರು ಮತ್ತು ಮಕ್ಕಳು ಎರಡೂ ಇರುವ ಶಾಲಾ ಕೊಠಡಿಗಳು ಶಿಥಿಲಾವಸ್ಥೆ ತಲುಪಿವೆ. ಸರ್ಕಾರಿ ಶಾಲೆಗಳು ಬೋಧನೆಯಲ್ಲಿ ಗುಣಮಟ್ಟ ಕಾಯ್ದುಕೊಂಡರೂ ಉತ್ತಮ ಆಟದ ಮೈದಾನ, ಶೌಚಾಲಯ, ಕಾಂಪೌಂಡ್, ಪಾಠೋಪಕರಣ, ಪೀಠೋಪಕರಣ, ಗ್ರಂಥಾಲಯ ಮುಂತಾದ ಮೂಲಸೌಲಭ್ಯಗಳಿಂದ ವಂಚಿತವಾಗಿವೆ.
ತಾಲ್ಲೂಕಿನ ಕರಿಗುಡ್ಡ, ಗಾಲೇರದೋಡ್ಡಿ, ಗೂಗಲ್, ಗಾಗಲ್, ಕಮಲದೊಡ್ಡಿ, ಚಿಂತಲಕುಂಟಾ, ಗೋಪಳಾಪುರ, ದೊಂಡಂಬಳಿ, ಜೋಳದಹೆಡಗಿ ಮತ್ತು ಅನ್ವಾರ ಸೇರಿದಂತೆ ಒಟ್ಟು 241ಕ್ಕೂ ಹೆಚ್ಚು ಶಾಲಾ ಕೊಠಡಿಗಳು ದುರಸ್ತಿಯ ಹಂತ ತಲುಪಿವೆ. ಮಳೆಗಾಲ ಪ್ರಾರಂಭವಾಗಿದ್ದು, ಶಾಲಾ ಶಿಕ್ಷಣ ಇಲಾಖೆ ತೀವ್ರ ಅಪಾಯದಲ್ಲಿರುವ ಶಿಥಿಲ ಶಾಲಾ ಕಟ್ಟಡ ಬಳಸದೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕಾಗಿದೆ.
ತಾಲ್ಲೂಕಿನಲ್ಲಿ 175 ಸರ್ಕಾರಿ ಕಿರಿಯ, 142 ಹಿರಿಯ ಪ್ರಾಥಮಿಕ ಶಾಲೆಗಳು ಮತ್ತು 34 ಸರ್ಕಾರಿ ಪ್ರೌಢ ಶಾಲೆಗಳಿವೆ. ಒಟ್ಟು 60 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 1625 ಶಿಕ್ಷಕ ಮಂಜೂರಾತಿ ಹುದ್ದೆಗಳ ಪೈಕಿ ಪ್ರಸ್ತುತ 854 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದು, 771 ಶಿಕ್ಷಕರ ಕೊರತೆ ಕಾಡುತ್ತಿದೆ.
ತಾಲ್ಲೂಕಿನಲ್ಲಿ 771 ಶಿಕ್ಷಕರ ಕೊರತೆ ಇದೆ. ಸರ್ಕಾರ ಜೂನ್ 10ರೊಳಗೆ ಅತಿಥಿ ಶಿಕ್ಷಕರ ನೇಮಕಕ್ಕೆ ಕ್ರಮ ಕೈಗೊಳ್ಳಬೇಕು. ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿದರೆ ಇರುವ ಶಿಕ್ಷಕರ ಮೇಲೆ ಒತ್ತಡ ಹೆಚ್ಚಾಗುತ್ತದೆ. ಮಕ್ಕಳ ಕಲಿಕೆಗೆ ತೊಂದರೆಯಾಗುತ್ತದೆ ಎನ್ನುತ್ತಾರೆ ಅತಿಥಿ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ರಂಗಪ್ಪ ನಾಯಕ ಗೋಪಳಾಪುರ.
ತಾಲ್ಲೂಕಿನ ಮೇದರಗೋಳ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 5ನೇ ತರಗತಿವರೆಗೆ ಸುಮಾರು 100 ಕ್ಕೂ ಹೆಚ್ಚು ಮಕ್ಕಳಿದ್ದಾರೆ. ಅಲ್ಲಿ ಒಬ್ಬರೇ ಶಿಕ್ಷಕರಿದ್ದಾರೆ.
ಬೆಣಕಲ್ ಶಾಲೆಯಲ್ಲಿ 120ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಅಲ್ಲಿಯೂ ಒಬ್ಬರೇ ಶಿಕ್ಷಕರಿದ್ದಾರೆ. ಗಾಲೇರದೋಡ್ಡಿ ಶಾಲೆಯಲ್ಲಿ 200ಕ್ಕೂ ಹೆಚ್ಚು ಮಕ್ಕಳಿದ್ದಾರೆ. ಅಲ್ಲಿ ಒಬ್ಬರೇ ಶಿಕ್ಷಕರಿದ್ದಾರೆ. ಇದರಿಂದ ಪ್ರತಿಯೊಬ್ಬ ಮಕ್ಕಳ ಕಲಿಕೆಯ ಮೇಲೆ ನಿಗಾ ಇಡಲು ಶಿಕ್ಷಕರಿಗೆ ಸಾಧ್ಯವಾಗುವುದಿಲ್ಲ.
ಸರ್ಕಾರ ಜೂನ್ 10ರೊಳಗೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿದರೆ ಪಠ್ಯ ಪೂರ್ಣಗೊಳಿಸಲು ಸಹಕಾರಿಯಾಗುತ್ತದೆ. ತಡವಾದರೆ ಮಕ್ಕಳ ಶೈಕ್ಷಣಿಕ ಮತ್ತು ಶಿಕ್ಷಕ–ಅತಿಥಿ ಶಿಕ್ಷಕರ ಮೇಲೆ ಒತ್ತಡ ಹೆಚ್ಚಾಗುತ್ತದೆ-ರಂಗಪ್ಪ ನಾಯಕ ಗೋಪಳಾಪುರ ಅಧ್ಯಕ್ಷ ಅತಿಥಿ ಶಿಕ್ಷಕರ ಸಂಘದ ತಾಲ್ಲೂಕು ಘಟಕ
ಸರ್ಕಾರ ಅತಿಥಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಶೀಘ್ರದಲ್ಲೇ ಆದೇಶ ಮಾಡುವ ಸಾಧ್ಯತೆ ಇದೆ. ಶಿಥಿಲ ಕಟ್ಟಡ ಬಳಸದಂತೆ ಎಲ್ಲ ಶಾಲೆಯ ಮುಖ್ಯಶಿಕ್ಷಕರಿಗೆ ತಾಕೀತು ಮಾಡಲಾಗಿದೆಎಚ್.ಸುಖದೇವ ಕ್ಷೇತ್ರ ಶಿಕ್ಷಣಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.