ಕವಿತಾಳ: ಒಂದು ವರ್ಷದಿಂದ ಮುಖ್ಯ ಶಿಕ್ಷಕರ ಹುದ್ದೆ ಖಾಲಿ, ಇದೀಗ ಎಲ್ಲ ಶಿಕ್ಷಕರು ವರ್ಗಾವಣೆಯಾಗಿದ್ದು ಶಾಲೆ ಕೇವಲ ಅತಿಥಿ ಶಿಕ್ಷಕರ ಮೇಲೆ ಅವಲಂಬಿತವಾಗಿದೆ....
ಇದು ಸಿರವಾರ ತಾಲ್ಲೂಕಿನ ಹಿರೇಹಣಿಗಿ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಚಿತ್ರಣ.
1 ರಿಂದ 7ನೇ ತರಗತಿಯ 252 ಮಕ್ಕಳ ಹಾಜರಾತಿ ಹೊಂದಿದ ಶಾಲೆಯಲ್ಲಿ ಕೊಠಡಿಗಳ ಕೊರತೆ ಇದೆ. ಮಕ್ಕಳಿಗೆ ಆಟವಾಡಲು ಆವರಣ ಇಲ್ಲ. ಮಳೆ ಬಂದರೆ ಕೆಲವು ಕೊಠಡಿಗಳು ಸೋರುತ್ತವೆ.
ಹೀಗೆ ಮೂಲ ಸೌಲಭ್ಯಗಳ ಕೊರತೆಯ ನಡುವೆ ಇದೀಗ ಪ್ರಮುಖವಾಗಿ ಶಿಕ್ಷಕರ ಕೊರತೆ ಎದುರಿಸುವಂತಾಗಿದೆ.
ಮುಖ್ಯ ಶಿಕ್ಷಕ ಸೇರಿದಂತೆ 10 ಶಿಕ್ಷಕರ ಹುದ್ದೆಗಳ ಮಂಜೂರಾತಿ ಇದೆ. ಒಂದು ವರ್ಷದ ಹಿಂದೆ ಮುಖ್ಯ ಶಿಕ್ಷಕ ನಿವೃತ್ತಿಯಾದ ನಂತರ ಸಹ ಶಿಕ್ಷಕರಿಗೆ ಪ್ರಭಾರ ವಹಿಸಲಾಗಿತ್ತು.
ಇದೀಗ 9 ಜನ ಸಹ ಶಿಕ್ಷಕರು ವರ್ಗಾವಣೆಯಾಗಿದ್ದು ಮುಖ್ಯ ಶಿಕ್ಷಕರೇ ಇಲ್ಲದಂತಾಗಿದೆ.
ವರ್ಗವಾವಣೆಯಾದ 9 ಜನ ಶಿಕ್ಷಕರಲ್ಲಿ 7 ಜನರು ಈಗಾಗಲೇ ಕರ್ತವ್ಯದಿಂದ ಬಿಡುಗಡೆಯಾಗಿ ಹೋಗಿದ್ದಾರೆ.
ಉಳಿದ ಇಬ್ಬರು ಶಿಕ್ಷಕರು ಸೆಪ್ಟೆಂಬರ್ ಮೊದಲ ವಾರದಲ್ಲಿ ಕರ್ತವ್ಯದಿಂದ ಬಿಡುಗಡೆಯಾಗಲು ಕಾಯುತ್ತಿದ್ದಾರೆ. ಐವರು ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದ್ದು ಶಾಲೆಯ ಸಂಪೂರ್ಣ ಜವಾಬ್ದಾರಿಯನ್ನು ಅತಿಥಿ ಶಿಕ್ಷಕರ ಮೇಲೆ ಹೊರಿಸಲಾಗಿದೆ.
‘ಪ್ರಸ್ತುತ ಇಬ್ಬರು ಶಿಕ್ಷಕರು ಕರ್ತವ್ಯದಿಂದ ಬಿಡುಗಡೆಯಾದರೆ ಶಾಲೆಯಲ್ಲಿ ದಾಖಲೆ ನೀಡಲು ಯಾರೊಬ್ಬರೂ ಇಲ್ಲದಂತಾಗುತ್ತದೆ. ಹೀಗಾಗಿ ಕಾಯಂ ಶಿಕ್ಷಕರನ್ನು ನೇಮಿಸಬೇಕು’ ಎಂದು ಪಾಲಕರಾದ ಬಸವರಾಜ ಭೋವಿ, ಹನುಮಂತ ಮತ್ತು ಶಿವರಾಜ ಅವರು ಆಗ್ರಹಿಸಿದರು.
ಕೊಠಡಿಗಳ ಕೊರತೆಯಿಂದ ಶಾಲೆ ಮುಂದಿನ ಕಟ್ಟೆಯ ಮೇಲೆ ಮತ್ತು ಆವರಣದಲ್ಲಿ ಪಾಠ ಮಾಡುವಂತಾಗಿದೆ. ಹಿರಿಯ ಪ್ರಾಥಮಿಕ ದರ್ಜೆಯಿಂದ ಉನ್ನತೀಕರಿಸಿದ್ದರೂ ಶಿಕ್ಷಕರ ಕೊರತೆ ಹಿನ್ನೆಲೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ 8ನೇ ತರಗತಿಗೆ ಮಕ್ಕಳಿಗೆ ಪ್ರವೇಶ ನೀಡಿಲ್ಲ ಎನ್ನುವ ಆರೋಪ ಕೇಳಿ ಬರುತ್ತದೆ.
ಶಿಕ್ಷಕರನ್ನು ನೇಮಿಸುವಂತೆ ಈಗಾಗಲೇ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ದಾಖಲೆಗಳನ್ನು ನಿರ್ವಹಿಸಲು ಮತ್ತು ಬಿಸಿಯೂಟ ಸೇರಿ ಸರ್ಕಾರದ ಯೋಜನೆಗಳನ್ನು ಮಕ್ಕಳಿಗೆ ತಲುಪಿಸಲು ಕಾಯಂ ಶಿಕ್ಷಕರು ಬೇಕು-ಬಸವರಾಜ ಸ್ವಾಮಿ ಹಣಿಗಿ ಎಸ್‌ಡಿಎಂಸಿ ಅಧ್ಯಕ್ಷ
ವರ್ಗಾವಣೆ ಪ್ರಕ್ರಿಯೆ ನಂತರ ತಾಲ್ಲೂಕಿನಲ್ಲಿ 30 ಶಾಲೆಗಳ ಪರಿಸ್ಥಿತಿ ಇದೇ ರೀತಿಯಾಗಿದೆ. ಪ್ರತಿ ಶಾಲೆಗೆ ಒಬ್ಬ ಕಾಯಂ ಶಿಕ್ಷಕರನ್ನು ನೇಮಿಸಲು ಕ್ರಮ ಕೈಗೊಂಡು ಆಡಳಿತಾತ್ಮಕ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುವುದು-ಚಂದ್ರಶೇಖರ ದೊಡ್ಮನಿ ಕ್ಷೇತ್ರ ಶಿಕ್ಷಣಾಧಿಕಾರಿ ಮಾನ್ವಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.