ADVERTISEMENT

Diwali 2024 | ಬೆಳಕಿನ ಹಬ್ಬಕ್ಕೆ ಸಿದ್ಧಗೊಂಡ ಸಿಂಧನೂರು

ಡಿ.ಎಚ್.ಕಂಬಳಿ
Published 31 ಅಕ್ಟೋಬರ್ 2024, 6:59 IST
Last Updated 31 ಅಕ್ಟೋಬರ್ 2024, 6:59 IST
ಸಿಂಧನೂರಿನ ಸಾರ್ವಜನಿಕ ಆಸ್ಪತ್ರೆ ಮುಂಭಾಗದಲ್ಲಿ ಹಣತೆ ಮಾರಾಟ ಮಾಡಲಾಗುತ್ತಿರುವುದು
ಸಿಂಧನೂರಿನ ಸಾರ್ವಜನಿಕ ಆಸ್ಪತ್ರೆ ಮುಂಭಾಗದಲ್ಲಿ ಹಣತೆ ಮಾರಾಟ ಮಾಡಲಾಗುತ್ತಿರುವುದು   

ಸಿಂಧನೂರು: ಬೆಳಕಿನ ಹಬ್ಬ ದೀಪಾವಳಿಗೆ ದಿನಗಣನೆ ಶುರುವಾಗಿದೆ. ಸಾರ್ವಜನಿಕರು ಹಬ್ಬದ ಆಚರಣೆಗೆ ಸಿದ್ಧತೆ ನಡೆಸಿದ್ದಾರೆ.

ವ್ಯಾಪಾರಿಗಳು ತಮ್ಮ ವಹಿವಾಟು ಬಂದ್ ಮಾಡಿ ಅಂಗಡಿ ಕಟ್ಟಡಗಳ ಒಳಭಾಗ ಮತ್ತು ಮುಂಗಟ್ಟುಗಳಿಗೆ ಸುಣ್ಣ–ಬಣ್ಣ ಬಳಿಯುವ ಕಾರ್ಯದಲ್ಲಿ ತೊಡಗಿದ್ದಾರೆ.

ದೀಪಾವಳಿಗೆ ವರ್ತಕರು ಮತ್ತು ಸಾರ್ವಜನಿಕರು ವಿವಿಧ ಬಗೆಯ ಸಿಹಿ ಖಾದ್ಯಗಳನ್ನು ಖರೀದಿಸುತ್ತಿರುವುದರಿಂದ ಸ್ವೀಟ್ ಸ್ಟಾಲ್‍ಗಳು, ಬೇಕರಿಗಳು ತಮ್ಮ ಅಂಗಡಿಗಳ ಮುಂಭಾಗದಲ್ಲಿ ಅಂಗಡಿ ವಿಸ್ತರಣೆ ಮಾಡುವ ಕೆಲಸದಲ್ಲಿ ತೊಡಗಿದ್ದಾರೆ.

ADVERTISEMENT

‘ಈ ವರ್ಷ ಮಳೆ ಚೆನ್ನಾಗಿ ಬಂದಿದೆ. ಭತ್ತದ ಉತ್ತಮವಾಗಿ ಬೆಳೆದಿದೆ. ಈಗಾಗಲೇ ಕಾಲುವೆಯ ಮೇಲ್ಭಾಗದಲ್ಲಿರುವ ಜಮೀನುಗಳಲ್ಲಿ ಭತ್ತ ಕಾಳು ಕಟ್ಟ ತೊಡಗಿದೆ. ರೈತರು ಸಂತಸದಲ್ಲಿದ್ದಾರೆ. ನಮಗೂ ಒಳ್ಳೆ ವ್ಯಾಪಾರವಾಗುತ್ತಿದೆ. ಆದ್ದರಿಂದ ನಾವು ಸಂತಸದಲ್ಲಿದ್ದೇವೆ’ ಎನ್ನುತ್ತಾರೆ ಆನಂದ ಎಲೆಕ್ಟ್ರಿಕಲ್ ಮಾಲೀಕ ಗೌತಮ್ ಮೆಹ್ತಾ.

‘ಎಪಿಎಂಸಿಯ ಕೃಷಿ ಉತ್ಪನ್ನಗಳ ವರ್ತಕರು ದೀಪಾವಳಿ ಆಚರಣೆಗೆ ತಮ್ಮ ಅಂಗಡಿಗಳನ್ನು ಸ್ವಚ್ಛಗೊಳಿಸುತ್ತಿದ್ದಾರೆ. ಕಳೆದ ವರ್ಷಕ್ಕಿಂತ ಈ ಬಾರಿ ದೀಪಾವಳಿ ಹಬ್ಬವನ್ನು ಹೆಚ್ಚು ಅದ್ಧೂರಿಯಾಗಿ ಆಚರಿಸುವ ಉದ್ದೇಶವಿದೆ’ ಎನ್ನುತ್ತಾರೆ ಗಂಜ್ ವರ್ತಕ ನವರತ್ನಮಲ್‌ ಶೇಠ್.

ಹೋಟೆಲ್‍ಗಳು, ಖಾನಾವಳಿಗಳು, ಬಾರ್–ರೆಸ್ಟೋರೆಂಟ್‍ಗಳು, ವಸತಿ ಗೃಹಗಳು, ವಿವಿಧ ವಾಹನಗಳ ಬಿಡಿ ಭಾಗ ಮಾರಾಟ ಮಾಡುವ ಆಟೊ ಮೊಬೈಲ್ ಅಂಗಡಿಗಳು, ಟ್ರ್ಯಾಕ್ಟರ್, ಕಾರು, ದ್ವಿಚಕ್ರ ವಾಹನಗಳ ಶೋ ರೂಂಗಳು ದೀಪಾವಳಿಗಾಗಿ ಸಿದ್ಧಗೊಳ್ಳತೊಡಗಿವೆ. ಪ್ರತಿನಿತ್ಯ ಜನರಿಂದ ಕಿಕ್ಕಿರಿದು ತುಂಬಿರುತ್ತಿದ್ದ ‘ಗದಗ ಖಾನಾವಳಿ’ಯನ್ನು ಸುಣ್ಣಬಣ್ಣ ಬಳಿಯುವುದಕ್ಕಾಗಿ ಬಂದ್ ಮಾಡಿರುವುದು ಕಂಡುಬಂದಿತು. ಪ್ರತಿವರ್ಷದಂತೆ ಪಟಾಕಿ ಅಂಗಡಿಗಳು ಸಹ ಸಜ್ಜುಗೊಳ್ಳತೊಡಗಿವೆ.

‘ಸಣ್ಣಪುಟ್ಟ ಡಬ್ಬಾ ಅಂಗಡಿಗಳನ್ನೊಳಗೊಂಡ ಎಲ್ಲ ಬಗೆಯ ವ್ಯಾಪಾರಿಗಳು ದೀಪಾವಳಿಯನ್ನು ಆಚರಿಸುತ್ತಾರೆ. ಒಂದು ದಿನ ಅಂಗಡಿ ಬಂದ್ ಮಾಡಿ ಪೇಂಟ್ ಹಚ್ಚಿ ಹಬ್ಬಕ್ಕಾಗಿ ಸಿದ್ಧಗೊಳಿಸುತ್ತೇನೆ’ ಎನ್ನುತ್ತಾರೆ ಪಾನ್‍ಶಾಪ್ ಮಾಲೀಕ ಶೇಖರ್.

‘ಕಳೆದ ದೀಪಾವಳಿಯಿಂದ ಇಲ್ಲಿಯವರೆಗೆ ಮಾಡಿದ ವ್ಯವಹಾರದ ಜಮಾ-ಖರ್ಚನ್ನು ಮಾಡಿ ಲಾಭ ಮತ್ತು ಹಾನಿಯನ್ನು ಲೆಕ್ಕ ಹಾಕುವ ಸಂಪ್ರದಾಯ ಇದೇ ಹಬ್ಬದಲ್ಲಿ ಮಾಡುತ್ತಿರುವುದರಿಂದ ದೊಡ್ಡ ಅಂಗಡಿಗಳನ್ನು ಮೂರ್ನಾಲ್ಕು ದಿನ ಬಂದ್ ಮಾಡಿ ಅಂಗಡಿ ಸ್ವಚ್ಛಗೊಳಿಸುವುದರ ಜೊತೆಗೆ ಲೆಕ್ಕ ಪತ್ರಗಳನ್ನು ಸಹ ಸರಿಪಡಿಸಿಕೊಳ್ಳಲಾಗುತ್ತಿದೆ’ ಎಂದು ವರ್ತಕರ ಸಂಘದ ಅಧ್ಯಕ್ಷ ದೊಡ್ಡನಗೌಡ ಕಲ್ಲೂರು ಹೇಳುತ್ತಾರೆ.

ಮಾರುಕಟ್ಟೆಗೆ ಬಂದ ಹಣತೆಗಳು

ಬೆಳಕಿನ ಹಬ್ಬ ದೀಪಾವಳಿ ಸಮೀಪಿಸಿರುವುದರಿಂದ ನಗರದ ಮಾರುಕಟ್ಟೆಗೆ ಹಣತೆಗಳು ಲಗ್ಗೆ ಇಟ್ಟಿವೆ. ಕನಕದಾಸ ಸರ್ಕಲ್ ಹಾಗೂ ಸರ್ಕಾರಿ ಆಸ್ಪತ್ರೆಯ ಬಳಿ ತಳ್ಳು ಬಂಡಿಯಲ್ಲಿ ಮಾರಾಟ ಮಾಡಲಾಗುತ್ತಿದೆ. ಗ್ರಾಹಕರು ಮುಂಚಿತವಾಗಿ ಹಣತೆ ಕೊಂಡುಕೊಳ್ಳುತ್ತಿದ್ದಾರೆ. ಅ.31ರಂದು ನರಕ ಚತುರ್ದಶಿ ನ.1ರಂದು ಅಮಾವಾಸ್ಯೆ ನ.2ರಂದು ಬಲಿಪಾಡ್ಯಮಿ ಇದೆ. ಮಹಿಳೆಯರು ಹಣತೆ ಕೊಳ್ಳಲು ಮುಂದಾಗಿದ್ದಾರೆ. ದೊಡ್ಡ ಹಣತೆ ಜೋಡಿಗೆ ₹30 ಸಣ್ಣ ಹಣತೆ ₹80ಗೆ ಡಜನ್ ಇನ್ನೂ ಡಜನ್ ಸಣ್ಣ ಹಣತೆಗೆ ₹50 ದರ ನಿಗದಿಪಡಿಸಲಾಗಿದೆ. ಹೊರ ರಾಜ್ಯದ ಹಣತೆಗಳೇ ಬಹುತೇಕ ಮಾರುಕಟ್ಟೆಗೆ ಬಂದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.