ಸಿಂಧನೂರು: ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಈಚೆಗೆ ಪ್ರಕಟವಾಗಿತ್ತು. ಇದರ ಬೆನ್ನಲ್ಲೇ ಇದಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿರುವುದರಿಂದ ಅಧ್ಯಕ್ಷ ಸ್ಥಾನ ಯಾರ ಮಡಿಲಿಗೆ ಬೀಳಬಹುದು ಎಂಬ ಸಂಗತಿ ಕುತೂಹಲ ಕೆರಳಿಸಿದೆ.
ನಗರಸಭೆ ಅಧ್ಯಕ್ಷರಾಗಿದ್ದ ಕಾಂಗ್ರೆಸ್‌ನ ಮಲ್ಲಿಕಾರ್ಜುನ ಪಾಟೀಲ ಅವರ ಅವಧಿ ಮುಗಿದು 16 ತಿಂಗಳ ಬಳಿಕ ರಾಜ್ಯ ಸರ್ಕಾರ ಪರಿಶಿಷ್ಟ ಪಂಗಡಕ್ಕೆ ಅಧ್ಯಕ್ಷ ಸ್ಥಾನ, ಸಾಮಾನ್ಯ ಮಹಿಳೆಗೆ ಉಪಾಧ್ಯಕ್ಷ ಸ್ಥಾನ ಮೀಸಲಿರಿಸಿ ಅಧಿಸೂಚನೆ ಹೊರಡಿಸಿತ್ತು.
ನಗರಸಭೆಗೆ ಕಾಂಗ್ರೆಸ್‌ನಿಂದ ಪರಿಶಿಷ್ಟ ಪಂಗಡದ ಮೀಸಲಾತಿಯಡಿ ವಿಜೇತರಾದ ಸದಸ್ಯರೇ ಇಲ್ಲ. ಆದರೆ, ಜೆಡಿಎಸ್‌ನಲ್ಲಿ ಮಾತ್ರ ಪರಿಶಿಷ್ಟ ಪಂಗಡದ ಮಹಿಳಾ ಕ್ಷೇತ್ರದಿಂದ ವಿಜೇತರಾದ ಪ್ರಿಯಾಂಕಾ ಅವರು ಅಧ್ಯಕ್ಷ ಸ್ಥಾನಕ್ಕೆ ಅರ್ಹರಾಗಿದ್ದರು. ಬಹುಮತ ಹೊಂದಿದ್ದರೂ ಅಧಿಕಾರ ವಂಚಿತರಾಗಬೇಕಾದ ಪರಿಸ್ಥಿತಿಯುಂಟಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಶೇಖರಪ್ಪ ಗಿಣಿವಾರ ಹೈಕೋರ್ಟ್ ಮೊರೆ ಹೋಗಿ ಮಧ್ಯಂತರ ತಡೆಯಾಜ್ಞೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ನಗರಸಭೆ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಪರಿಶಿಷ್ಟ ಜಾತಿಗೆ ಅಧ್ಯಕ್ಷ ಸ್ಥಾನ ಲಭಿಸಿಲ್ಲ ಎಂಬ ವಿಷಯದ ಮೇಲೆ ತಡೆಯಾಜ್ಞೆ ಲಭಿಸಿದೆ ಎಂದು ಶೇಖರಪ್ಪ ಗಿಣಿವಾರ ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷದ 20 ಸದಸ್ಯರಿದ್ದರೂ ಜೆಡಿಎಸ್‌ಗೆ ಅಧಿಕಾರ ಬಿಟ್ಟುಕೊಡುವ ಪ್ರಸಂಗ ಬಂದಿರುವುದಕ್ಕೆ ಕಾಂಗ್ರೆಸ್ ಮುಖಂಡರು ಕೈಕೈ ಹಿಸುಕಿಕೊಳ್ಳುವಂತಾಗಿದೆ ಎಂದು ಜೆಡಿಎಸ್ ಸದಸ್ಯರೊಬ್ಬರು ಲೇವಡಿ ಮಾಡಿದ್ದಾರೆ.
ಜಿಗಿದಾಟ: ಕಾಂಗ್ರೆಸ್ ಪಕ್ಷದ ಕೆ.ರಾಜಶೇಖರ ಮತ್ತು ಜೆಡಿಎಸ್‌ನ ಹನುಮೇಶ ಕುರುಕುಂದಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಜೆಡಿಎಸ್‌ನ ವೀರೇಶ ಹಟ್ಟಿ ಮತ್ತು ಸೈದಾಬಿ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. 6ನೇ ವಾರ್ಡಿನ ಕಾಂಗ್ರೆಸ್ ಸದಸ್ಯರೊಬ್ಬರು ಮೃತಪಟ್ಟಿರುವುದರಿಂದ ಕಾಂಗ್ರೆಸ್‌ನ 20 ಸದಸ್ಯರಿದ್ದು, ಶಾಸಕರು ಮತ್ತು ಸಂಸದರಿಗೆ ತಲಾ ಒಂದು ಮತ ಇರುವುದರಿಂದ ಕಾಂಗ್ರೆಸ್ ಪಕ್ಷಕ್ಕೆ ಒಟ್ಟು 22 ಮತಗಳ ಬಹುಮತವಿದೆ. ಈಗ ನಗರಸಭೆಯಲ್ಲಿ ಜೆಡಿಎಸ್ ಪಕ್ಷದ 8 ಮತ್ತು ಬಿಜೆಪಿಯ ಇಬ್ಬರು ಸದಸ್ಯರಿದ್ದಾರೆ.
ಕಾಂಗ್ರೆಸ್ ಹೊಸ ತಂತ್ರ: ಹೈಕೋರ್ಟ್ ವಿಚಾರಣೆ ಆಗಸ್ಟ್ 29ಕ್ಕೆ ನಿಗದಿಯಾಗಿದ್ದು, ತೀರ್ಪು ತಮ್ಮ ಪರವಾಗಿ ಬಂದರೆ ಪಕ್ಷದ ಸದಸ್ಯರಿಗೆ ಅಧ್ಯಕ್ಷ ಸ್ಥಾನ ಲಭಿಸುತ್ತದೆ. ಇಲ್ಲದಿದ್ದರೆ ಅಧಿಕಾರವನ್ನು ತಮ್ಮ ಪಕ್ಷಕ್ಕೆ ಪಡೆದುಕೊಳ್ಳುವ ಉದ್ದೇಶದಿಂದ ಜೆಡಿಎಸ್‌ನ ಪ್ರಿಯಾಂಕಾ ಅವರನ್ನು ತಮ್ಮ ಪಕ್ಷಕ್ಕೆ ಕರೆತರುವ ಹೊಸ ತಂತ್ರವನ್ನು ಕಾಂಗ್ರೆಸ್ ಹೆಣೆಯತೊಡಗಿದೆ. ಈಗಾಗಲೇ ಪ್ರಿಯಾಂಕಾ ಅವರ ಕುಟುಂಬದವರೊಂದಿಗೆ ಶಾಸಕ ಹಂಪನಗೌಡ ಬಾದರ್ಲಿ ಒಂದು ಸುತ್ತು ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಆದರೆ, ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿರುವ ಕಾಂಗ್ರೆಸ್ ಪಕ್ಷದ ಸದಸ್ಯರು ಆಂತರಿಕವಾಗಿ ನಡೆದಿರುವ ಮಾತುಕತೆಯನ್ನು ತಳ್ಳಿ ಹಾಕಿದ್ದಾರೆ.
ಎಲ್ಲವೂ ಅನಿಶ್ಚಿತ: ಅಧ್ಯಕ್ಷ ಸ್ಥಾನ ಎಸ್.ಟಿ.ಗೆ ಮೀಸಲಾಗಿರುವುದಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದು, ವಿಚಾರಣೆಯಲ್ಲಿ ತಮ್ಮ ಪರವಾಗಿ ತೀರ್ಪು ಸಿಗುತ್ತದೆಯೋ ಇಲ್ಲವೋ ಎನ್ನುವ ಆತಂಕ ಕಾಂಗ್ರೆಸ್ ಪಕ್ಷದ ಸದಸ್ಯರಿಗಿದೆ. ಆಕಸ್ಮಾತ್ ತಮ್ಮ ಪರವಾಗಿ ನ್ಯಾಯಾಯಲದ ತೀರ್ಪು ಬರದಿದ್ದರೆ ಪ್ರಿಯಾಂಕಾ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತಂದು ಪಕ್ಷದ ಘನತೆ ಉಳಿಸಿಕೊಳ್ಳಬೇಕೆನ್ನುವುದು ಇನ್ನು ಕೆಲ ಸದಸ್ಯರ ಅನಿಸಿಕೆ.
ಅತ್ತ ಜೆಡಿಎಸ್‌ನ ಪ್ರಿಯಾಂಕಾ ಅವರು ಎಸ್.ಟಿ. ಮಹಿಳೆಯಾಗಿದ್ದು, ನಗರಸಭೆಯಲ್ಲಿ ಒಬ್ಬರೇ ಎಸ್.ಟಿ. ವರ್ಗಕ್ಕೆ ಸೇರಿದವರಾಗಿದ್ದರಿಂದ ಅಧ್ಯಕ್ಷ ಸ್ಥಾನ ಸಿಕ್ಕೇ ಬಿಟ್ಟಿತು ಎನ್ನುವಷ್ಟರಲ್ಲಿ ತಡೆಯಾಜ್ಞೆ ಬಂದಿರುವುದು ಅವರಲ್ಲಿಯೂ ಆತಂಕ ಶುರುವಾಗಿದೆ.
ಒಟ್ಟಾರೆ ನಗರಸಭೆ ಅಧ್ಯಕ್ಷ ಸ್ಥಾನದ ಪ್ರಕ್ರಿಯೆ ಅನಿಶ್ಚಿತತೆಯಿಂದ ಕೂಡಿದ್ದು, ಅಧ್ಯಕ್ಷ ಸ್ಥಾನ ಯಾವ ಪಕ್ಷಕ್ಕೆ ಹೋಗುತ್ತದೆಯೋ, ಯಾವ ಸದಸ್ಯರ ಪಾಲಾಗುತ್ತದೆಯೋ ಕಾಯ್ದು ನೋಡಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.