ADVERTISEMENT

ಸಿಂಧನೂರು: 6 ತಿಂಗಳಲ್ಲಿ ಸಿಸಿ ರಸ್ತೆಯಿಂದ ಕಿತ್ತ ಕಂಕರ್

₹3 ಕೋಟಿ ಮಂಜೂರಾಗಿದ್ದರೂ ಕಾಮಗಾರಿ ಅಪೂರ್ಣ; ಸಂಚಾರಕ್ಕೆ ಪರದಾಟ

ಡಿ.ಎಚ್.ಕಂಬಳಿ
Published 11 ಸೆಪ್ಟೆಂಬರ್ 2024, 5:11 IST
Last Updated 11 ಸೆಪ್ಟೆಂಬರ್ 2024, 5:11 IST
ಸಿಂಧನೂರಿನ ರಾಯಚೂರು-ಗಂಗಾವತಿ ಮುಖ್ಯರಸ್ತೆಯಿಂದ ಗಂಗಾನರ, ಬಸವನಗರ ಮತ್ತು ವಿದ್ಯಾ ನಗರಕ್ಕೆ ತೆರಳುವ 40ನೇ ವಿತರಣಾ ಕಾಲುವೆಯ ರಸ್ತೆಯು ಸಂಪೂರ್ಣ ಹದಗೆಟ್ಟಿರುವುದು
ಸಿಂಧನೂರಿನ ರಾಯಚೂರು-ಗಂಗಾವತಿ ಮುಖ್ಯರಸ್ತೆಯಿಂದ ಗಂಗಾನರ, ಬಸವನಗರ ಮತ್ತು ವಿದ್ಯಾ ನಗರಕ್ಕೆ ತೆರಳುವ 40ನೇ ವಿತರಣಾ ಕಾಲುವೆಯ ರಸ್ತೆಯು ಸಂಪೂರ್ಣ ಹದಗೆಟ್ಟಿರುವುದು   

ಸಿಂಧನೂರು: ನಗರದ ಗಂಗಾವತಿ ರಸ್ತೆಗೆ ಹೊಂದಿಕೊಂಡು ಗಂಗಾನಗರಕ್ಕೆ ತೆರಳುವ 40ನೇ ವಿತರಣಾ ಕಾಲುವೆಯ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ.

2021ರಲ್ಲಿ ಶಾಸಕರಾಗಿದ್ದ ವೆಂಕಟರಾವ್ ನಾಡಗೌಡ ಅವರು ಕರ್ನಾಟಕ ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ ಜಲಸಂಪನ್ಮೂಲ ಇಲಾಖೆಯಿಂದ ₹3 ಕೋಟಿ ಹಣ ಮಂಜೂರು ಮಾಡಿಸಿ ಸಿ.ಸಿ. ರಸ್ತೆ ನಿರ್ಮಾಣದ ಜವಾಬ್ದಾರಿ ವಹಿಸಿಕೊಟ್ಟಿದ್ದರು.

ನಿಗಮದ ಅಧಿಕಾರಿಗಳು ಅತ್ಯಂತ ಕಳಪೆಯಾಗಿ ರಸ್ತೆ ನಿರ್ಮಿಸಿದರು. ಕಾಮಗಾರಿಯನ್ನೂ ಅಪೂರ್ಣ ಮಾಡಿದರು. ಗಂಗಾವತಿ ಮುಖ್ಯ ರಸ್ತೆಯಿಂದ ಅಮರೇಶಪ್ಪ ಮೈಲಾರ ಮನೆ ತನಕ ಮಾತ್ರ ಸಿ.ಸಿ. ರಸ್ತೆಯನ್ನು ನಿರ್ಮಿಸಲಾಗಿದ್ದು, ಇನ್ನುಳಿದ ಕಾಮಗಾರಿ ಬಾಕಿಯಿದೆ.

ADVERTISEMENT

ರಸ್ತೆ ನಿರ್ಮಾಣಗೊಂಡ ಆರು ತಿಂಗಳಲ್ಲಿ ಸಿಮೆಂಟ್ ಕಿತ್ತು ಕಂಕರ್ ಮೇಲೆ ಬಂದಿವೆ. ಈ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಸೇರಿದಂತೆ ಹಲವು ಸಂಘ-ಸಂಸ್ಥೆಗಳು ಸರ್ಕಾರಕ್ಕೆ ಮತ್ತು ಕರ್ನಾಟಕ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದರು. ಇದರಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು ಕಳಪೆ ಮಟ್ಟದ ಕಾಂಕ್ರಿಟ್ ರಸ್ತೆಯ ಮೇಲೆ ಡಾಂಬರ್ ರಸ್ತೆ ನಿರ್ಮಾಣಕ್ಕೆ ಮುಂದಾದರು. ಆಗ ಮತ್ತೆ ಸರ್ಕಾರಕ್ಕೆ ದೂರುಗಳು ಸಲ್ಲಿಕೆಯಾದವು. ಆಗಿನಿಂದ ರಸ್ತೆ ಕಾಮಗಾರಿ ಸ್ಥಗಿತಗೊಂಡಿದ್ದು, ಅದಾಗಿ ಸುಮಾರು ಒಂದು ವರ್ಷವೇ ಕಳೆದಿದೆ.

‘ಅರ್ಧ ಡಾಂಬರ್ ರಸ್ತೆ, ಅರ್ಧ ಕಾಂಕ್ರೀಟ್ ರಸ್ತೆ. ಅದರಲ್ಲಿ ಕಂಕರ್‌ಗಳು ಎದ್ದು ಸಾರ್ವಜನಿಕರ ಸಂಚಾರ ತೀವ್ರ ತೊಂದರೆ ಉಂಟಾಗಿದೆ. ಇನ್ನೂ ಒಂದು ಕಿಲೋ ಮೀಟರ್ ರಸ್ತೆಯ ನಿರ್ಮಾಣ ಕಾಮಗಾರಿಯೇ ಪ್ರಾರಂಭವಾಗಿಲ್ಲ. ಗಂಗಾನಗರ, ವೆಂಕಟೇಶ್ವರ ನಗರ, ಬಸವ ನಗರ, ವಿದ್ಯಾನಗರ ಹೀಗೆ ಹಲವು ಬಡಾವಣೆಗಳ ಜನ ಪರದಾಡುವಂತಾಗಿದೆ. ಈ ರಸ್ತೆಯ ವ್ಯವಸ್ಥೆಗೆ ಕಾಯಕಲ್ಪ ಸಿಗುವುದು ಯಾವಾಗ’ ಎಂಬುದು ನಗರಾಭಿವೃದ್ಧಿ ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ವೀರಭದ್ರಗೌಡ ಅಮರಾಪುರ್ ಪ್ರಶ್ನೆ.

‘ಪ್ರಮುಖ ಬಡಾವಣೆಗಳ ಜನರು ಸಂಚಾರಕ್ಕೆ ತೊಂದರೆ ಅನುಭವಿಸುತ್ತಿದ್ದರೂ ಜನಪ್ರತಿನಿಧಿಗಳು ಕಿಂಚಿತ್ತೂ ಗಮನ ಹರಿಸುತ್ತಿಲ್ಲ. ಇದು ಅವರ ನಿಷ್ಕಾಳಜಿಗೆ ಹಿಡಿದ ಕನ್ನಡಿಯಾಗಿದೆ. ಕೂಡಲೆ ಕಳಪೆ ರಸ್ತೆಗೆ ಪುನಶ್ಚೇತನ ನೀಡಬೇಕು. ಇನ್ನುಳಿದ ಕಾಮಗಾರಿ ಕೂಡಲೇ ಆರಂಭಿಸಿ ಗುಣಮಟ್ಟ ಕಾಯ್ದುಕೊಳ್ಳಬೇಕು. ಇಲ್ಲದಿದ್ದರೆ ಈ ರಸ್ತೆಯಲ್ಲೇ ಧರಣಿ ನಡೆಸಬೇಕಾಗುತ್ತದೆ’ ಎಂದು ಸಿಪಿಐಎಂಎಲ್‌ನ ಜಿಲ್ಲಾ ಘಟಕದ ಕಾರ್ಯದರ್ಶಿ ನಾಗರಾಜ ಪೂಜಾರ ಎಚ್ಚರಿಸಿದ್ದಾರೆ.

ಕರ್ನಾಟಕ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧಿಕಾರಿಗಳೊಂದಿಗೆ ಕಳಪೆ ಕಾಮಗಾರಿಯ ತನಿಖೆಯ ಕುರಿತು ಚರ್ಚಿಸಲಾಗುವುದು. ಬಾಕಿ ಉಳಿದ ಕಾಮಗಾರಿ ಪೂರ್ಣಗೊಳಿಸಲು ಕ್ರಮವಹಿಸುವೆ
ಹಂಪನಗೌಡ ಬಾದರ್ಲಿ ಶಾಸಕ

‘ಸಮಗ್ರ ತನಿಖೆಯಾಗಲಿ’

‘ಆರಂಭಿಕ ಹಂತದಲ್ಲಿಯೇ ಗುಣಮಟ್ಟ ಕಾಯ್ದುಕೊಳ್ಳದೆ ಕಳಪೆ ಕಾಮಗಾರಿ ಮಾಡಲಾಗಿದೆ ಸಮರ್ಪಕವಾಗಿ ಕ್ಯೂರಿಂಗ್ ಸಹ ಮಾಡಿಲ್ಲ. ಕಳಪೆ ಕಾಮಗಾರಿ ಮುಚ್ಚಲು ಮೇಲೆ ಡಾಂಬರ್ ಹಾಕಿ ಸರ್ಕಾರದ ಕೋಟ್ಯಂತರ ರೂಪಾಯಿ ಹಣ ಲಪಟಾಯಿಸಲಾಗಿದೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು’ ಎಂದು ಸಿಪಿಐಎಂಎಲ್‌ ಜಿಲ್ಲಾ ಕಾರ್ಯದರ್ಶಿ ನಾಗರಾಜ ಪೂಜಾರ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.