ADVERTISEMENT

ಸಿಂಧನೂರು | ಪರಿಶಿಷ್ಟರ ಕೇರಿಯಲ್ಲಿ ನೀರಿಗೇ ಬರ!

6 ತಿಂಗಳಲ್ಲಿ ಹತ್ತು ಅರ್ಜಿ ಕೊಟ್ಟರೂ ಸ್ಪಂದಿಸದ ಪಿಡಿಒ: ಸ್ಥಳೀಯರ ಆಕ್ರೋಶ

ಡಿ.ಎಚ್.ಕಂಬಳಿ
Published 16 ಜುಲೈ 2024, 6:56 IST
Last Updated 16 ಜುಲೈ 2024, 6:56 IST
ಸಿಂಧನೂರು ತಾಲ್ಲೂಕಿನ ಸಾಲಗುಂದಾ ಗ್ರಾಮದಲ್ಲಿ ಟ್ಯಾಂಕ್ ಬಳಿ ಕೊಡಗಳನ್ನು ಇಟ್ಟಿರುವ ದೃಶ್ಯ
ಸಿಂಧನೂರು ತಾಲ್ಲೂಕಿನ ಸಾಲಗುಂದಾ ಗ್ರಾಮದಲ್ಲಿ ಟ್ಯಾಂಕ್ ಬಳಿ ಕೊಡಗಳನ್ನು ಇಟ್ಟಿರುವ ದೃಶ್ಯ   

ಸಿಂಧನೂರು: ಹೋಬಳಿ ಹಾಗೂ ಗ್ರಾಮ ಪಂಚಾಯಿತಿ ಕೇಂದ್ರವಾಗಿರುವ ತಾಲ್ಲೂಕಿನ ಸಾಲಗುಂದಾ ಗ್ರಾಮದ ಪರಿಶಿಷ್ಟರ ಕೇರಿಯ ಜನರು ನಿತ್ಯ ನೀರಿಗಾಗಿ ಪರದಾಡುವ ಸ್ಥಿತಿಯಿದೆ.

‘ಕಳೆದ ಆರು ತಿಂಗಳಿನಿಂದ ಕುಡಿಯಲು ಶುದ್ಧ ನೀರಿನ ಘಟಕಗಳಿಂದ ಹಣ ಕೊಟ್ಟು ನೀರು ತರುತ್ತಿದ್ದೇವೆ. ಆದರೆ, ಬಳಕೆ ಮಾತ್ರ ತೀವ್ರ ತೊಂದರೆಯಾಗಿದೆ. ಸವರ್ಣೀಯರ ಓಣಿಯಲ್ಲಿ ಸಾಕಷ್ಟು ನಳಗಳಿವೆ. ಕೊಳವೆ ಬಾವಿಗಳೂ ಇವೆ. ಯಥೇಚ್ಛವಾಗಿ ನೀರೂ ಲಭ್ಯವಾಗುತ್ತಿದ್ದು, ಅಪವ್ಯಯವೂ ಸಾಕಷ್ಟಾಗುತ್ತದೆ. ಆದರೆ, ನಮ್ಮ ಪ್ರದೇಶಕ್ಕೆ ಮಾತ್ರ ಪಂಚಾಯಿತಿ ನೀರಿನ ಸೌಲಭ್ಯ ಕಲ್ಪಿಸಲು ಮನಸು ಮಾಡುತ್ತಿಲ್ಲ’ ಎಂಬುದು ಗ್ರಾಮದ ನಿವಾಸಿ ಸಾಧು ಕನಕಪ್ಪ ಅವರು ಕಿಡಿಕಾರಿದರು.

‘ಗ್ರಾಮ ಪಂಚಾಯಿತಿ ಅಧಿಕಾರಿಗಳ ಮತ್ತು ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದ ಮಾದಿಗರ ಓಣಿಗೆ ನೀರಿನ ಸೌಕರ್ಯ ಮರೀಚಿಕೆಯಾಗಿದೆ. ಹಲವು ಬಾರಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಮತ್ತು ಅಭಿವೃದ್ಧಿ ಅಧಿಕಾರಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ನಮ್ಮ ಪರಿಸ್ಥಿತಿಯನ್ನು ಯಾರಿಗೆ ಹೇಳಬೇಕೋ ತಿಳಿಯದಂತಾಗಿದೆ’ ಎಂಬುದು ಅವರು ಬೇಸರಿಸುತ್ತಾರೆ.

ADVERTISEMENT

‘ವಾರಗಟ್ಟಲೇ ಸ್ನಾನ ಮಾಡದ ಸ್ಥಿತಿ ಎದುರಾಗಿದೆ.  ಬಟ್ಟೆ, ಪಾತ್ರೆ-ಪಗಡೆಗಳನ್ನು ತೊಳೆಯಲು ಸವರ್ಣೀಯರ ಓಣಿಗಳಿಗೆ ಹೋಗಿ ಅವರು ನೀರು ಕೊಟ್ಟಾಗ ನೀರು ತರುವ ಪರಿಸ್ಥಿತಿ ಇದೆ. ದೇಶಕ್ಕೆ ಸ್ವಾತಂತ್ರ್ಯ ಬಂದರೂ ನಮಗೆ ಸ್ವಾತಂತ್ರ್ಯವಿಲ್ಲದಂತಾಗಿದೆ’ ಎಂದು ದಳಪತಿ ನಾಗಪ್ಪ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

‘ರಾಜ್ಯ ಸರ್ಕಾರವು ಪರಿಶಿಷ್ಟ ಸಮುದಾಯಗಳ ಉದ್ಧಾರಕ್ಕಾಗಿ ಕೋಟಿಗಟ್ಟಲೇ ಹಣ ಖರ್ಚು ಮಾಡುವುದಾಗಿ ಹೇಳುತ್ತಿದೆ. ಆದರೆ, ನಮಗೆ ಸ್ನಾನ ಮತ್ತು ಬಟ್ಟೆ ತೊಳೆಯಲೂ ಕೂಡ ನೀರು ಸಿಗುತ್ತಿಲ್ಲ. ದಿನ ಬಳಕೆಗೆ ಬೇಕಿರುವ ನೀರು ಕೊಡುವ ಕಾಳಜಿಯನ್ನು ಆಡಳಿತ ವರ್ಗ ತೋರುತ್ತಿಲ್ಲ.  ನಮ್ಮ ಹಕ್ಕು ಪಡೆಯಲು ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕುವುದೇ ನಮಗೆ ಉಳಿದಿರುವ ದಾರಿ’ ಎಂದು ಮಾದಿಗರ ಓಣಿಯ ನಿವಾಸಿಗಳಾದ ಶೀಲಪ್ಪ, ಲಕ್ಷ್ಮಣ ಪೂಜಾರ, ದೊಡ್ಡರಮೇಶ ಮೇಗಳಮನೆ ನೊಂದು ನುಡಿದರು.

ಇದೇ ಪ್ರದೇಶದಲ್ಲಿರುವ ಅಂಬೇಡ್ಕರ್ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 150 ವಿದ್ಯಾರ್ಥಿಗಳಿದ್ದು, ಆ ಮಕ್ಕಳಿಗೂ  ಕುಡಿಯುವ ನೀರಿನ ತೊಂದರೆಯಾಗಿದೆ. ಈ ಬಗ್ಗೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಜಿ.ಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು ಗಮನ ಹರಿಸಿ ಕ್ರಮವಹಿಸಬೇಕು. ತ್ವರಿತವಾಗಿ ನೀರಿನ ಸೌಲಭ್ಯ ಒದಗಿಸಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.

-ಗ್ರಾ.ಪಂ. ಅಧಿಕಾರಿಗಳ ತಾರತಮ್ಯ ಹಲವು ಬಾರಿ ಮನವಿ ಸಲ್ಲಿಸಿದಾಗ್ಯೂ ಸ್ಪಂದನೆ ಇಲ್ಲ ಎಚ್ಚೆತ್ತುಕೊಳ್ಳದಿದ್ದರೆ ಗ್ರಾ.ಪಂ.ಕಚೇರಿ ಮುತ್ತಿಗೆ

ನೀರಿನ ಸಮಸ್ಯೆ ಕುರಿತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜೊತೆಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು

- ಚಂದ್ರಶೇಖರ ತಾಲ್ಲೂಕು ಪಂಚಾಯಿತಿ ಇಒ

ಮುತ್ತಿಗೆಗೆ ಸಿದ್ಧತೆ ‘ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಆರು ತಿಂಗಳಿನಿಂದ ನಿರಂತರವಾಗಿ ಸುಮಾರು 10 ಬಾರಿ ನೀರಿನ ಸೌಕರ್ಯ ಒದಗಿಸುವಂತೆ ಅರ್ಜಿ ಕೊಟ್ಟಿದ್ದೇವೆ. ಮೌಖಿಕವಾಗಿಯೂ ವಿನಂತಿ ಮಾಡಿದ್ದೇವೆ. ಆದರೆ ಅವರಿಂದ ಮಾತ್ರ ಕಿಂಚಿತ್ತೂ ನಮ್ಮ ಬಗ್ಗೆ ಕಾಳಜಿ ವ್ಯಕ್ತವಾಗಿಲ್ಲ. ಆದ್ದರಿಂದ ಪರಿಶಿಷ್ಟರ ಕೇರಿಯ ಜನರೆಲ್ಲ ಒಗ್ಗೂಡಿ ನೀರಿನ ಸೌಕರ್ಯಕ್ಕಾಗಿ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಲು ಸಿದ್ಧತೆ ನಡೆಸಿದ್ದೇವೆ’ ಎಂದು ಸ್ಥಳೀಯ ಮುಖಂಡ ದಳಪತಿ ನಾಗಪ್ಪ ಹೇಳುತ್ತಾರೆ.

‘ಹೊಸ ಕೊಳವೆಬಾವಿ ಶೀಘ್ರ’ ಕಳೆದ ವರ್ಷ ಮಳೆಯಾಗದ ಕಾರಣ ಕೊಳವೆಬಾವಿಯ ನೀರಿನ ಮಟ್ಟ ಗಣನೀಯ‌ ಪ್ರಮಾಣದಲ್ಲಿ ಕಡಿಮೆಯಾಗಿದೆ. ಬೇರೆ ಕಡೆಯಿಂದ ಪೈಪ್ ಹಾಕಿ ನೀರು ಪೂರೈಕೆಗೆ ವ್ಯವಸ್ಥೆ ಮಾಡಲಾಗಿತ್ತು. ಅದರಲ್ಲೂ ಸಹ ನೀರು ಬರಿದಾಗ ತೊಡಗಿದೆ. ಹೀಗಾಗಿ ಪರಿಶಿಷ್ಟರ ಕೇರಿಯಿಂದ ನೂರು ಮೀಟರ್ ದೂರದಲ್ಲಿ ಹೊಸ ಕೊಳವೆಬಾವಿ ಅಳವಡಿಸಿ ನೀರು ಸರಬರಾಜು ಮಾಡುತ್ತೇವೆ ಎಂದು ಪಿಡಿಒ ವೀರಭದ್ರಪ್ಪ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.