ರಾಯಚೂರು: ಜಿಲ್ಲೆಯಲ್ಲಿ ಯಾವುದೇ ರೀತಿಯ ಅಕ್ರಮ ಚಟುವಟಿಕೆಗಳ ಬಗ್ಗೆ ಪೊಲೀಸ್ ಇಲಾಖೆಗೆ ದೂರುಗಳು ಬಂದರೆ ತ್ವರಿತವಾಗಿ ಕ್ರಮ ಜರುಗಿಸಲಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಹೇಳಿದರು.
ನಗರದ ಆಶ್ರಯ ಕಾಲೊನಿಯಲ್ಲಿ ಮಂಗಳವಾರ ದೀಪಾವಳಿಯ ನಿಮಿತ್ತ ಬಡಾವಣೆಯ ಸಾರ್ವಜನಿಕರೊಂದಿಗೆ ದೀಪಗಳನ್ನು ಹಚ್ಚುವ ಮೂಲಕ ಹಬ್ಬವನ್ನು ಆಚರಿಸಿದ ಅವರು, ಆನಂತರ ಜನಸಂಪರ್ಕ ಸಭೆಯಲ್ಲಿ ಮಾತನಾಡಿದರು.
ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಇಲಾಖೆ ಬದ್ಧವಾಗಿದ್ದು, ಅಕ್ರಮ ಮದ್ಯ, ಸಿಎಚ್ ಪೌಡರ್ ಸೇರಿದಂತೆ ಯಾವುದೇ ಅಕ್ರಮ ಚಟುವಟಿಕೆಯ ಬಗ್ಗೆ ದೂರು ಬಂದರೆ ಪರಿಶೀಲಿಸಲಾಗುತ್ತದೆ ಎಂದರು.
ಈಗಾಗಲೇ ಅಕ್ರಮ ಮದ್ಯ ಹಾಗೂ ಸಿಎಚ್ ಪೌಡರ್ ಮಾರಾಟ ಮಾಡುವವರ ವಿರುದ್ಧ ಕ್ರಮ ಜರುಗಿಸಲಾಗಿದ್ದು, ಕುಡಿದು ಮಹಿಳೆಯರ ಮೇಲೆ ದೌರ್ಜನ್ಯ ಮಾಡುವವರ ಬಗ್ಗೆಯೂ ದೂರುಗಳು ಬಂದರೂ ಸ್ವೀಕರಿಸಲಾಗುತ್ತದೆ ಎಂದು ತಿಳಿಸಿದರು.
ಮೋಸ ಮಾಡುವವರ ಬಗ್ಗೆ ಪ್ರತಿಯೊಬ್ಬರೂ ಜಾಗೃತಿ ವಹಿಸಬೇಕು. ಹಣದ ವ್ಯವಹಾರ ಮಾಡುವಾಗ ವಂಚನೆಯ ಬಗ್ಗೆಯೂ ಜಾಗೃತರಾಗಿರಬೇಕು. ಹಣ ಕಳೆದುಕೊಳ್ಳುವ ಮುನ್ನವೇ ಎಚ್ಚರಗೊಂಡರೆ ವಂಚನೆಯಿಂದ ದೂರವಿರಬಹುದು ಎಂದರು.
ದೀಪಾವಳಿ ಹಬ್ಬದ ನಿಮಿತ್ತ ಬಡಾವಣೆಯ ಜನರಿಗೆ ಸಹಿ ಹಂಚುವ ಮೂಲಕ ಶುಭಾಷಯ ಕೋರಿದರು. ಇದೇ ವೇಳೆ ಬಡಾವಣೆಯ ಸಮಸ್ಯೆ ಹಾಗೂ ಜನರ ದೂರುಗಳನ್ನು ಆಲಿಸಿದರು.
ನಗರಸಭೆ ಸದಸ್ಯ ಶ್ರೀನಿವಾಸರೆಡ್ಡಿ, ಮುಖಂಡರಾದ ತಿಮ್ಮಾರೆಡ್ಡಿ, ಶ್ರೀನಿವಾಸರೆಡ್ಡಿ, ಜನಾರ್ದನರೆಡ್ಡಿ, ನಿವೃತ್ತ ಪೊಲೀಸ್ ಅಧಿಕಾರಿಗಳಾದ ನರಸಪ್ಪ, ಜಿಲಾನಿ ಪಾಷ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.