ರಾಯಚೂರು: ಸುಕ್ಷೇತ್ರ ಶ್ರೀಶೈಲದಲ್ಲಿ ಬುಧವಾರ ತಡರಾತ್ರಿ ನಡೆದ ಗಲಾಟೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಯುವಕನಿಗೆ ಆಂಧ್ರಪ್ರದೇಶದ ಕರ್ನೂಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಯುವಕ ಮೃತಪಟ್ಟಿದ್ದಾನೆ ಎನ್ನುವುದು ವದಂತಿ ಎಂದು ಶ್ರೀಶೈಲ ಮಠದ ಅಧಿಕಾರಿಗಳು ’ಪ್ರಜಾವಾಣಿ‘ಗೆ ತಿಳಿಸಿದರು.
‘ಚಹಾ ಅಂಗಡಿಯಲ್ಲಿ ನಡೆದ ಗಲಾಟೆಯಲ್ಲಿ ಬಾಗಲಕೋಟೆ ಜಿಲ್ಲೆ ಬೀಳಗಿ ತಾಲ್ಲೂಕಿನ ಜಾನಮಟ್ಟಿ ಗ್ರಾಮದ ಶ್ರೀಶೈಲ ಎನ್ನುವವರಿಗೆ ತಲೆ ಹಾಗೂ ಎರಡೂ ಕೈಗಳಿಗೆ ರಕ್ತದ ಗಾಯಗಳಾಗಿವೆ. ತಲೆಗೆ ಮತ್ತು ಗಲ್ಲಕ್ಕೆ ಪಟ್ಟಿ ಹಾಕಿರುವುದರಿಂದ ಆತ ಮಾತನಾಡುವ ಸ್ಥಿತಿಯಲ್ಲಿಲ್ಲ. ಶ್ರೀಶೈಲ ಪೀಠದ ಜಗದ್ಗುರುಗಳು ಆಸ್ಪತ್ರೆಗೆ ಭೇಟಿ ನೀಡಿದಾಗ, ಗಾಯಾಳು ಮಲಗಿದ ಜಾಗದಿಂದಲೇ ನಮಸ್ಕಾರ ಕೂಡಾ ಮಾಡಿದ, ಆದರೆ, ಬಾಯಿ ತೆರೆಯಲಾಗಲಿಲ್ಲ. ಆತ ಪ್ರಾಣಾಪಾಯದಿಂದ ಪಾರಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಆತನ ಚಿಕಿತ್ಸೆ ವ್ಯವಸ್ಥೆ ನೋಡಿಕೊಳ್ಳುವುದಕ್ಕೆ ಮಠದಿಂದ ಇಬ್ಬರು ವ್ಯಕ್ತಿಗಳನ್ನು ಬಿಟ್ಟಿದ್ದೇವೆ‘ ಎಂದು ಹೇಳಿದರು.
’ಗಾಯಗೊಂಡ ಯುವಕನೊಂದಿಗೆ ಸಂಬಂಧಿಗಳಿಲ್ಲ. ಆತನ ಬಳಿ ಗುರುತಿನ ಪತ್ರವೂ ಇಲ್ಲ. ಹಲ್ಲೆ ಘಟನೆ ನಡೆದಾಗ ಮೈಯೆಲ್ಲಾ ರಕ್ತ ಹರಡಿರುವುದನ್ನು ನೋಡಿ, ಮೃತಪಟ್ಟಿದ್ದಾನೆ ಎಂದು ಸುದ್ದಿ ಹರಡಿದೆ. ಇದರಿಂದ ರೊಚ್ಚಿಗೆದ್ದ ಕೆಲವು ಕನ್ನಡಿಗರು ಶ್ರೀಶೈಲದಲ್ಲಿರುವ ಅಂಗಡಿಗಳು ಮತ್ತು ವಾಹನಗಳನ್ನು ಧ್ವಂಸ ಮಾಡಿದ್ದಾರೆ‘ ಎಂದು ತಿಳಿಸಿದರು.
ಇದೀಗ ಶ್ರೀಶೈಲದಲ್ಲಿ ಪರಿಸ್ಥಿತಿ ಶಾಂತವಾಗಿದೆ. ಯಾವುದೇ ತೊಂದರೆಯಿಲ್ಲದೆ ಭಕ್ತರು ದರ್ಶನ ಮಾಡಿಕೊಳ್ಳಬಹುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.