ದೇವದುರ್ಗ: ಶಿಕ್ಷಕರ ಸಾಂಘಿಕ ಪ್ರಯತ್ನದಿಂದಾಗಿ ತಾಲ್ಲೂಕಿನ ವಸತಿ ಶಾಲೆಗಳು ಉತ್ತಮ ಫಲಿತಾಂಶ ಗಳಿಸಿವೆ.
ತಾಲ್ಲೂಕಿನ ಗಬ್ಬೂರು ಮೊರಾರ್ಜಿ ದೇಸಾಯಿ ವಸತಿ ಶಾಲೆ (ಎಸ್.ಸಿ), ಮಸರಕಲ್ ಮೊರಾರ್ಜಿ ದೇಸಾಯಿ ವಸತಿ ಶಾಲೆ (ಎಸ್.ಸಿ) ಮತ್ತು ದೇವದುರ್ಗ ಪಟ್ಟಣದ ವಿದ್ಯಾಗಿರಿ ಪ್ರದೇಶದಲ್ಲಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡಿದೆ.
ಎನ್.ಗಣೇಕಲ್ ಗ್ರಾಮದ ಪ್ರೌಢಶಾಲೆ 2023-24ನೇ ಸಾಲಿನಲ್ಲಿ ಶೇ 100ರಷ್ಟು ಫಲಿತಾಂಶ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದೆ.
ವಸತಿ ಶಾಲೆಗಳು ಶಿಕ್ಷಕರ ಸಾಂಘಿಕ ಪ್ರಯತ್ನ, ಇಲಾಖೆಯ ಅಧಿಕಾರಿಗಳು, ಸ್ಥಳೀಯರ ಪ್ರೋತ್ಸಾಹ, ವಿದ್ಯಾರ್ಥಿಗಳ ಶ್ರಮದಿಂದ ಜಿಲ್ಲೆಯಲ್ಲಿ ಗುರುತಿಸಿಕೊಂಡಿವೆ.
ಶಾಲೆಯಲ್ಲಿ ಕಲಿಕೆ, ಆಟೋಟದ ಜೊತೆಗೆ ಸ್ಪರ್ಧಾತ್ಮಕ ಮನೋಭಾವ ಬೆಳೆಸಲಾಗುತ್ತಿದೆ. ಹೀಗಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ.
ಈ ವಸತಿ ಶಾಲೆಯ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಎಲ್ಲ ವಿಭಾಗಗಳಲ್ಲೂ ಉತ್ತಮ ಸಾಧನೆ ಮಾಡುತ್ತಿದ್ದಾರೆ. 2006-07 ರಿಂದ ಈ ಶಾಲೆಗಳ ಮಕ್ಕಳು ಶಿಕ್ಷಣ, ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮೇಲುಗೈ ಸಾಧಿಸಿದ್ದಾರೆ. ರಾಜ್ಯ ಮಟ್ಟದಲ್ಲೂ ಗುರುತಿಸಿಕೊಂಡಿದ್ದಾರೆ.
ಗಬ್ಬೂರು ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆ 2011ರಲ್ಲಿ ಖಾಸಗಿ ಕಟ್ಟಡದಲ್ಲಿ ಪ್ರಾರಂಭಗೊಂಡು 2022 ವರೆಗೆ ಬಾಡಿಗೆ ಕಟ್ಟಡದಲ್ಲಿ ನಡೆದಿದೆ. ಹಲವು ಕೊರತೆಗಳ ನಡುವೆಯೂ ಮಕ್ಕಳು ಉತ್ತಮ ಸಾಧನೆ ಮಾಡಿದ್ದಾರೆ. 13 ವರ್ಷಗಳಲ್ಲಿ ಒಟ್ಟು 7 ಬಾರಿ ಶೇ 100ರಷ್ಟು ಫಲಿತಾಂಶ ಬಂದಿದ್ದು, 5 ಬಾರಿ ಶೇ 90ಕ್ಕೂ ಹೆಚ್ಚು ಹಾಗೂ 1 ಬಾರಿ ಶೇ 80ಕ್ಕೂ ಹೆಚ್ಚು ಫಲಿತಾಂಶ ಬಂದಿದೆ. 2022ರಲ್ಲಿ ಗ್ರಾಮದ ಖಾನಾಪುರ ರಸ್ತೆಯಲ್ಲಿ ಸುಮಾರು ₹5 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದೆ. ಈ ಕಟ್ಟಡ ಅಗತ್ಯ ಮೂಲ ಸೌಕರ್ಯ ಹೊಂದಿದೆ.
ಮಸರಕಲ್ ಹೊರವಲಯದ ಬೆಟ್ಟದ ಬಳಿ 25 ಎಕರೆ ಪ್ರದೇಶದಲ್ಲಿ ಸುಸಜ್ಜಿತ ಕಟ್ಟಡ ಹೊಂದಿದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಜಿಲ್ಲೆಯಲ್ಲಿಯೇ ಉತ್ತಮ ಮೂಲ ಸೌಲಭ್ಯ ವ್ಯವಸ್ಥೆ ಹೊಂದಿದ ಶಾಲೆಯಾಗಿದೆ. 2020-21, 2022-23, 2023-24ನೇ ಸಾಲಿನಲ್ಲಿ ಶೇ 100ಕ್ಕೆ 100ರಷ್ಟು ಫಲಿತಾಂಶ ಪಡೆದು ಗಮನಾರ್ಹ ಸಾಧನೆ ಮಾಡಿದೆ.
ವಿದ್ಯಾಗಿರಿಯ 8 ಎಕರೆ ಪ್ರದೇಶದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಕಳೆದ 9 ವರ್ಷಗಳ ಫಲಿತಾಂಶದಲ್ಲಿ 2013 ರಿಂದ 2023 ವರೆಗೆ 9 ಬಾರಿ ಶೇ 100ರಷ್ಟು ಫಲಿತಾಂಶ ಪಡೆದರೆ, ಎರಡು ಬಾರಿ ಶೇ 96ರಷ್ಟು ಫಲಿತಾಂಶ ಪಡೆದಿದೆ. ಜಿಲ್ಲೆ ಹಾಗೂ ಹೊರ ಜಿಲ್ಲೆಗಳ ಹೆಚ್ಚಿನ ಮಕ್ಕಳು ಈ ಶಾಲೆಯನ್ನು ಆದ್ಯತೆ ಮೇರೆಗೆ ಆಯ್ಕೆ ಮಾಡಿಕೊಳ್ಳುತ್ತಿರುವುದು ವಿಶೇಷ.
ಶಿಕ್ಷಕರು ವಸತಿ ಶಾಲೆ ಕೊಠಡಿಯಲ್ಲಿದ್ದು, ನಿರಂತರವಾಗಿ ತರಗತಿಗಳನ್ನು ನಡೆಸುವುದಲ್ಲದೆ ಶಾಲಾ ಅವಧಿಯ ನಂತರ ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಪರಿಹಾರ ಬೋಧನೆ, ತರಗತಿ ನಂತರ ಮಕ್ಕಳಿಗೆ ಅಭ್ಯಾಸದ ಅವಧಿ ನಿಗದಿಪಡಿಸಿರುವುದು, ದತ್ತು ಯೋಜನೆ, ರಸಪ್ರಶ್ನೆ ಕಾರ್ಯಕ್ರಮ, ಘಟಕ ಪರೀಕ್ಷೆ ಹಾಗೂ ವಿಶೇಷ ತರಗತಿಗಳನ್ನು ಆಯೋಜಿಸುವುದು ಒಳಗೊಂಡಂತೆ ಇತರೆ ಶೈಕ್ಷಣಿಕ ಯೋಜನೆಗಳನ್ನು ರೂಪಿಸುವ ಮೂಲಕ ಶೈಕ್ಷಣಿಕ ಗುಣಮಟ್ಟ ಹೆಚ್ಚಳ ಮಾಡಿದ್ದಾರೆ.
ದೇವದುರ್ಗ ತಾಲ್ಲೂಕಿನ ಎಲ್ಲಾ ವಸತಿ ಶಾಲೆಗಳು ಮಾಜಿ ಸಚಿವ ಕೆ.ಶಿವನಗೌಡ ನಾಯಕ ಅವರ ಅವಧಿಯಲ್ಲಿ ಸುಸಜ್ಜಿತ ಕಟ್ಟಡ, ಉತ್ತಮ ಆಟದ ಮೈದಾನ, ಶುದ್ಧ ಕುಡಿಯುವ ನೀರಿನ ಘಟಕ, ಸೌರ ವಿದ್ಯುತ್ ವ್ಯವಸ್ಥೆ, ಸೌರ ವಿದ್ಯುತ್ ಬೀದಿ ದೀಪಗಳು, ಯುಪಿಎಸ್ ಜನರೇಟರ್‌ಗಳು, ಎಲ್ಇಡಿ ಟಿವಿ, ಪ್ರೊಜೆಕ್ಟರ್, ಉತ್ತಮ ಗ್ರಂಥಾಲಯ, ಶಾಲಾ ಉದ್ಯಾನ, ಡಿಜಿಟಲ್ ಕಂಪ್ಯೂಟರ್ ಕೊಠಡಿ ಹಾಗೂ ಇತರೆ ಸೌಲಭ್ಯಗಳನ್ನು ಹೊಂದಿವೆ.
ಶಾಲೆಯಲ್ಲಿ ವರ್ಷದಲ್ಲಿ ಮೂರು ಬಾರಿ ಪಾಲಕರ ಸಭೆ ಕರೆಯಲಾಗುತ್ತದೆ. ಶಾಲೆಯಲ್ಲಿನ ಶಿಕ್ಷಕರು ಹೆಚ್ಚಿನ ಸಮಯವನ್ನು ವಿದ್ಯಾರ್ಥಿಗಳ ಕಲಿಕೆಗೆ ಮೀಸಲಿಟ್ಟಿದ್ದರಿಂದ ಪರೀಕ್ಷೆಯಲ್ಲಿ ಶಾಲೆಗೆ ಶೇ 100ರಷ್ಟು ಫಲಿತಾಂಶ ಬಂದಿದೆ. ಪಾಲಕರ ಸಲಹೆ ಸೂಚನೆ ನೆರವಾಯಿತು ಎಂದು ಮಸರಕಲ್ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಶರಣಬಸಯ್ಯ ತಿಳಿಸಿದರು.
ಪಠ್ಯಕ್ಕೆ ಒತ್ತು
ಎಸ್ಎಸ್ಎಲ್‌ಸಿ ಸೇರಿ ಶಾಲೆಯ ಆಯಾ ತರಗತಿಗಳ ವಿದ್ಯಾರ್ಥಿಗಳ ಕಲಿಕಾ ಮಟ್ಟ ಸುಧಾರಿಸಲು ಬೆಳಿಗ್ಗೆ 8 ರಿಂದ 9 ರವರೆಗೆ ಗಣಿತ ಮತ್ತು ವಿಜ್ಞಾನ ವಿಷಯದ ವಿಶೇಷ ತರಗತಿಗಳನ್ನು ನಡೆಸಲಾಗುತ್ತದೆ. ಸಂಜೆ 6ರಿಂದ 7.30 ರವರೆಗೆ ಎಂಒಡಿಯಿಂದ ಪ್ರತಿದಿನ ವಿಶೇಷ ತರಗತಿ ನಡೆಸುವ ಮೂಲಕ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ತಯಾರು ಮಾಡಲಾಗುತ್ತದೆ.
20 ಎಕರೆ ವಿಶಾಲ ಪ್ರದೇಶದಲ್ಲಿರುವ ಶಾಲೆಯ ವಾತಾವರಣ ಮಕ್ಕಳ ಕಲಿಕಾಸಕ್ತಿಗೆ ಹೆಚ್ಚು ಪೂರಕವಾಗಿದೆ. ವಿಶೇಷ ತರಗತಿ ಪೂರಕ ಪರೀಕ್ಷೆ ಮಾದರಿ ಪರೀಕ್ಷೆ ಮಕ್ಕಳ ಫಲಿತಾಂಶದಲ್ಲಿ ಮಹತ್ವದ ಪಾತ್ರ ವಹಿಸಿದೆ.-ಶರಣಬಸಯ್ಯ ಹಿರೇಮಠ, ಪ್ರಾಂಶುಪಾಲ ಎಂಡಿಆರ್‌ಎಸ್ ಮಸರಕಲ್
ಕಲಿಕೆಗೆ ಹೆಚ್ಚಿನ ಹೊತ್ತು ನೀಡಿದ್ದು ಮತ್ತು ಗುಣಮಟ್ಟದ ಬೋಧನೆ ಮಕ್ಕಳಿಗೆ ಉತ್ತಮ ಫಲಿತಾಂಶ ನೀಡಿದೆ-ನಿಂಗಪ್ಪ ಬಳಿಗಾರ, ಪ್ರಾಂಶುಪಾಲ ಎಂಡಿಆರ್‌ಎಸ್ ಗಬ್ಬೂರು
ಶಿಕ್ಷಕರು ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಕುರಿತು ವಿಶೇಷ ಕಾಳಜಿ ವಹಿಸಿ ನಿರಂತರವಾಗಿ ವಿಶೇಷ ತರಗತಿ ಹಾಗೂ ಕಾರ್ಯಾಗಾರ ಮಾದರಿ ಪರೀಕ್ಷೆ ನಡೆಸಿದ್ದರಿಂದ ಮಕ್ಕಳು ಹೆಚ್ಚು ಅಂಕಗಳಿಸಲು ಸಾಧ್ಯವಾಗಿದೆ.-ರಂಗಪ್ಪ ನಾಯಕ, ಪ್ರಾಂಶುಪಾಲ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ದೇವದುರ್ಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.