ಶಕ್ತಿನಗರ: ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದಲ್ಲಿ(ಆರ್‌ಟಿಪಿಎಸ್) ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಅಗತ್ಯ ಕ್ರಮದ ಮಾಹಿತಿಯನ್ನು ತಿಳಿಸುವ ಆನ್‌ಲೈನ್ ಎಮಿಷನ್ ಮಾನಿಟರಿಂಗ್ ಸಿಸ್ಟ್ಂ (ವಾಯುಗುಣ ಪರೀಕ್ಷಣಾ ಮಾಹಿತಿ ಕೇಂದ್ರ) ಅಳವಡಿಸಲಾಗಿದೆ.
ಕರ್ನಾಟಕ ವಿದ್ಯುತ್ ನಿಗಮ (ಕೆಪಿಸಿಎಲ್)ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಸ್ಥಾವರಗಳ ಪೈಕಿ ಆರ್‌ಟಿಪಿಎಸ್‌ನಲ್ಲಿಯೆ ಮೊದಲ ಬಾರಿ ವಾಯುಗುಣ ಪರೀಕ್ಷಣಾ ಮಾಹಿತಿ ಕೇಂದ್ರ ಅಳವಡಿಸಿಕೊಳ್ಳಲಾಗಿದೆ. ಸ್ಥಾವರದ ಒಳಗೆ ಮಾಪನ ಕೇಂದ್ರ ಅಳವಡಿಸಿಕೊಂಡು ಅಂತರ್ಜಾಲ ಸಹಾಯದಿಂದ ಮಾಲಿನ್ಯದ ಮಾಹಿತಿ ಸಾರ್ವಜನಿಕರಿಗೆ ಬಿತ್ತರಿಸಲಾಗುತ್ತಿದೆ.
ಇದೇ ಅಂಕಿ ಅಂಶಗಳ ವಿವರವನ್ನು ಆನ್‌ಲೈನ್ ಮೂಲಕ ಕೇಂದ್ರ ಪರಿಸರ ಇಲಾಖೆಯ ಅಧಿಕಾರಿಗಳು ಕೂಡಾ ನೋಡಬಹುದು. ಅಲ್ಲದೆ, ಆರ್‌ಟಿಪಿಎಸ್ ಮುಖ್ಯದ್ವಾರದ ಪಕ್ಕದಲ್ಲಿನ ಬೃಹತ್ ಎಲ್‌ಸಿಡಿ ಪರದೆಯಲ್ಲಿ ಈ ಮಾಹಿತಿ 24 ತಾಸು ಬಿತ್ತರವಾಗಲಿದೆ.
ಆರ್‌ಟಿಪಿಎಸ್ ಒಳಗೆ ಬಳಕೆಯಾದ ಹಾರುಬೂದಿ ಹೊಂಡದಿಂದ ನದಿಗೆ ಬಿಡುತ್ತಿರುವ ನೀರಿನಲ್ಲಿ ರಾಸಾಯನಿಕ ಅಂಶಗಳಿರುವ ಧೂಳಿನ ಕಣಗಳು (ಎಸ್‌ಪಿಎಂ), ಗಂಧಕದ ಆಕ್ಸೈಡ್ (ಎಸ್‌ಒಎಕ್ಸ್ ), ಸಾರಜನಕದ ಆಕ್ಸೈಡ್ (ಎನ್‌ಒಕ್ಸ್), ಇಂಗಾಲದ ಮೊನಾಕ್ಸೈಡ್ (ಸಿಒ),ಓರೆನ್ (ಒ3) ಹಾಗೂ ಗಾಳಿಯ ದಿಕ್ಕು, ವೇಗ, ಉಷ್ಣತೆ, ಆರ್ದ್ರತೆ ಮುಂತಾದವುಗಳು ತಿಳಿಯಲಿವೆ. ಗಾಳಿಯಲ್ಲಿರುವ ಮಲಿನಕಾರಕಗಳನ್ನು ಮಾಪನ ಮಾಡಿ ಸಂಗ್ರಹಿಸಿದ ಮಾಹಿತಿಯನ್ನು ಆನ್‌ಲೈನ್ ಮೂಲಕ ಕೇಂದ್ರ ಪರದೆಯಲ್ಲಿ ಬಿತ್ತರಿಸಲಾಗುತ್ತದೆ.
ವಿದ್ಯುತ್ ಉತ್ಪಾದನೆಗಾಗಿ ಕಲ್ಲಿದ್ದಲು ಉರಿಸುವಿಕೆಯಿಂದ ಬೂದಿ, ದೂಳು, ಹೊಗೆ ಉತ್ಪತ್ತಿಯಾಗಿ ನೀರು, ವಾಯಮಾಲಿನ್ಯವಾಗುತ್ತಿದೆ ಎನ್ನುವ ದೂರು ಆರ್‌ಟಿಪಿಎಸ್ ವಿರುದ್ಧ ಮಾಡಲಾಗುತ್ತಿದೆ. ಆದರೆ, ಈ ಮಾಲಿನ್ಯವನ್ನು ಹತೋಟಿಯಲ್ಲಿಡಲು ಕೇಂದ್ರದ ವಿದ್ಯುತ್ ಸ್ಥಾಯಿ ಪರಿವರ್ತಕ (ಇಎಸ್‌ಪಿ)ನಿರ್ದೇಶನ ನೀಡಿದೆ. ಅದರಂತೆ ನೀರಿನ ಸಿಂಪರಣೆ ಮತ್ತು ಬೂದಿ ಸಮರ್ಪಕ ನಿರ್ವಹಣೆ ಇತ್ಯಾದಿಗಳಿಂದ ಮಾಲಿನ್ಯಕಾರಕ ಅಂಶಗಳನ್ನು ಕಡಿಮೆ ಮಾಡಬಹುದಾಗಿದೆ. ಇದಕ್ಕಾಗಿ ಮಾಪನ ಕೇಂದ್ರಗಳನ್ನು ಅಳವಡಿಸಿದ್ದು. ಇದರಿಂದಾಗಿ ಮಾಲಿನ್ಯದ ನಿಖರ ಮಾಹಿತಿ ತಕ್ಷಣವೇ ಲಭ್ಯವಾಗಲಿದೆ ’ಎಂದು ಆರ್‌ಟಿಪಿಎಸ್ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಸಿ.ಬಿ.ಯಲ್ಲಟ್ಟಿ ಹೇಳಿದರು.
ಈ ನಿಟ್ಟಿನಲ್ಲಿ ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು, ಪರಿಸರ ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳದಿದ್ದರೆ, ವಿದ್ಯುತ್ ಘಟಕಗಳನ್ನು ಬಂದ್ ಮಾಡುವಂತೆ ಕಟ್ಟು ನಿಟ್ಟಿನ ಎಚ್ಚರಿಕೆ ನೀಡಿ, ಆರ್‌ಟಿಪಿಎಸ್ ಅಧಿಕಾರಿಗಳಿಗೆ ನೋಟಿಸ್ ನೀಡಿದರು.
ಆನಂತರ ಸ್ಥಾವರದಲ್ಲಿ, ಆನ್‌ಲೈನ್ ಎಮಿಷನ್ ಮಾನಿಟರಿಂಗ್ ವ್ಯವಸ್ಥೆ ಅಳವಡಿಸಿರುವ ಬಗ್ಗೆ ಕೇಂದ್ರ ಪರಿಸರ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ , ಅಧಿಕಾರಿಗಳು ಆರ್‌ಟಿಪಿಎಸ್‌ಗೆ ಭೇಟಿ ನೀಡಿ ವ್ಯವಸ್ಥೆ ಅಳವಡಿಸಿರುವುದನ್ನು ಹಾಗೂ ಪರಿಸರ ಸಂರಕ್ಷಣೆಗಾಗಿ ಸೂಚಿಸಿದ್ದ ಹಲವು ಕ್ರಮಗಳನ್ನು ಕೈಗೊಂಡಿರುವುದನ್ನು ಪರಿಶೀಲಿಸಿ ನಂತರ ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಕಾಯ್ದೆ ಅನ್ವಯ ನೀಡಲಾಗಿದ್ದ ಶೋಕಾಸ್ ನೋಟಿಸ್‌ನ್ನು ಹಿಂಪಡೆದಿದ್ದಾರೆ ಎಂದು ಸಿ.ಬಿ.ಯಲ್ಲಟ್ಟಿ ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.