ADVERTISEMENT

ಉರಿಯದ ಬೀದಿ ದೀಪ: ಕತ್ತಲೆಯಲ್ಲಿ ಸಂಚಾರ

ಬಾವಸಲಿ
Published 5 ನವೆಂಬರ್ 2024, 6:23 IST
Last Updated 5 ನವೆಂಬರ್ 2024, 6:23 IST
   

ರಾಯಚೂರು: ಇಲ್ಲಿನ ನಗರಸಭೆಯಿಂದ ಬೀದಿ ದೀಪಗಳ ನಿರ್ವಹಣೆ ಸರಿಯಾಗಿ ಮಾಡದಿರುವುದರಿಂದ ನಗರದ ಕೆಲವೆಡೆ ಹಗಲು ಹೊತ್ತು ಬೀದಿ ದೀಪ ಉರಿದರೆ, ಹಲವೆಡೆ ಬೀದಿ ದೀಪ ರಾತ್ರಿಹೊತ್ತು ಉರಿಯದೇ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ.

ನಗರದ ಗೋಶಾಲಾ ರಸ್ತೆ, ಗಂಜ್ ರಸ್ತೆ, ಸ್ಟೇಶನ್ ರಸ್ತೆ ಮತ್ತಿತರೆಡೆ ಹಗಲಿನಲ್ಲಿ ಬೀದಿ ದೀಪಗಳು ಉರಿಯುತ್ತಿದೆ. ಆದರೆ ಮಂತ್ರಾಲಯ ರಸ್ತೆ (ಐಬಿ ರಸ್ತೆ), ಬಸವೇಶ್ವರ ರಸ್ತೆಯಲ್ಲಿ ಬೀದಿ ದೀಪಗಳು ಉರಿಯದೇ ರಾತ್ರಿ ವೇಳೆ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ.

ಎದುರು ಬರುವ ವಾಹನಗಳು ಸರಿಯಾಗಿ ಕಾಣದ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ. ರಸ್ತೆಯ ಎರಡೂ ಬದಿಯಲ್ಲಿ ಬಿಡಾಡಿ ದನಗಳು ಮಲಗುವುದರಿಂದ ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ದನಗಳು ಏಕಾಏಕಿ ಕಾಳಗಕ್ಕೆ ನಿಂತು ಪಾದಾಚಾರಿಗಳ ಮೇಲೆ ಎಗರುತ್ತವೆ. ಬೀದಿ ದೀಪಗಳು ಉರಿಯದ ಕಾರಣ ವಾಹನಗಳ ಸಂಚಾರಕ್ಕೆ
ತೊಡಕಾಗಿದೆ. ನಗರಸಭೆ ಆಡಳಿತ ಮಂಡಳಿ ಬೀದಿ ದೀಪಗಳ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ. ಹಲವೆಡೆ ಹಗಲಿನಲ್ಲಿ ದೀಪ ಉರಿದು ವಿದ್ಯುತ್ ನಷ್ಟ ಉಂಟಾದರೆ ಐಬಿ ರಸ್ತೆಯಲ್ಲಿ ದೀಪವಿಲ್ಲದೇ ಕತ್ತಲು ಆವರಿಸಿದೆ. ಆಶಾಪೂರ ಕ್ರಾಸ್‌ನಿಂದ ಆರ್‌ಟಿಒ ವೃತ್ತದವರೆಗೆ ರಾತ್ರಿವೇಳೆ ಸಂಚರಿಸಲು ಭಯ ಪಡಬೇಕಿದೆ.

ADVERTISEMENT

‘ಇದು ರಾಷ್ಟ್ರೀಯ ಹೆದ್ದಾರಿ ಆಗಿದ್ದರಿಂದ ಮಧ್ಯರಾತ್ರಿಯವರೆಗೂ ವಾಹನಗಳ ಓಡಾಟ ಹೆಚ್ಚಾಗಿರುತ್ತದೆ. ವಿದ್ಯುತ್ ದೀಪಗಳು ಉರಿಯದೇ ಅವಘಡ ಸಂಭವಿಸುತ್ತಿದೆ. ಬಿಡಾಡಿ ದನಗಳ ಹಾಗೂ ಬೀದಿ ನಾಯಿಗಳ ಕಾಟವೂ ಹೇಳತೀರದು. ನಗರಸಭೆ ಆಯುಕ್ತರ ಗಮನಕ್ಕೆ ತಂದರೂ ನಿರ್ಲಕ್ಷ ವಹಿಸಿದ್ದಾರೆ.
ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ’ ಎನ್ನುತ್ತಾರೆ ಆಶಾಪೂರ ರಸ್ತೆಯ ಅಮರೇಶ್ವರ ಕಾಲೊನಿಯ ನಿವಾಸಿ ಅಜೀಜ್ ಜಾಗೀರದಾರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.