ADVERTISEMENT

ನಿತ್ಯ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಿ: ಶಾಸಕ ಮಾನಪ್ಪ ವಜ್ಜಲ

ವಿವಿಧ ಇಲಾಖೆ ಅಧಿಕಾರಿಗಳ ತುರ್ತು ಸಭೆ: ಅಧಿಕಾರಿಗಳಿಗೆ ಶಾಸಕ ಮಾನಪ್ಪ ವಜ್ಜಲ ಸೂಚನೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2024, 15:05 IST
Last Updated 16 ಆಗಸ್ಟ್ 2024, 15:05 IST
ಲಿಂಗಸುಗೂರು ಪುರಸಭೆ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ತುರ್ತು ಸಭೆಯಲ್ಲಿ ನೂತನ ಉಪ ವಿಭಾಗಾಧಿಕಾರಿ ಬಸವಣ್ಣೆಪ್ಪ ಕಲಶೆಟ್ಟಿ ಅವರನ್ನು ಸನ್ಮಾನಿಸಲಾಯಿತು
ಲಿಂಗಸುಗೂರು ಪುರಸಭೆ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ತುರ್ತು ಸಭೆಯಲ್ಲಿ ನೂತನ ಉಪ ವಿಭಾಗಾಧಿಕಾರಿ ಬಸವಣ್ಣೆಪ್ಪ ಕಲಶೆಟ್ಟಿ ಅವರನ್ನು ಸನ್ಮಾನಿಸಲಾಯಿತು   

ಲಿಂಗಸುಗೂರು: ‘ಪುರಸಭೆ ವ್ಯಾಪ್ತಿಯ ಕಸಬಾಲಿಂಗಸುಗೂರು, ಕರಡಕಲ್ಲ, ಲಿಂಗಸುಗೂರು ಪಟ್ಟಣದ ನಾಗರಿಕರಿಗೆ ಪ್ರತಿನಿತ್ಯ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ಅನಗತ್ಯ ತಾಂತ್ರಿಕ ಕಾರಣ ಮುಂದಿಡುವುದು ಬೇಡ’ ಎಂದು ಶಾಸಕ ಮಾನಪ್ಪ ವಜ್ಜಲ ಅವರು ಎಚ್ಚರಿಕೆ ನೀಡಿದರು.

ಶುಕ್ರವಾರ ನಡೆದ ವಿವಿಧ ಇಲಾಖೆ ಅಧಿಕಾರಿಗಳ ತುರ್ತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಶಾಶ್ವತ ಕುಡಿಯುವ ನೀರಿನ ಯೋಜನೆ ಸದ್ಬಳಕೆ ಮಾಡಿಕೊಳ್ಳುವಲ್ಲಿ ಆಡಳಿತ ವಿಫಲವಾಗಿದೆ. ವರ್ಷಪೂರ್ತಿ ಕುಡಿಯುವ ನೀರಿನ ಕೆರೆ ಭರ್ತಿಯಾಗಿದ್ದರೂ ನಾಗರಿಕರಿಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ವಾರದ ಏಳು ದಿನ, 24 ತಾಸು ನೀರು ಪೂರೈಸುವ ಅಮೃತ ಯೋಜನೆ ಕಾಮಗಾರಿ ಶೀಘ್ರದಲ್ಲಿಯೇ ಆರಂಭಗೊಳ್ಳಲಿದೆ’ ಎಂದು ತಿಳಿಸಿದರು.

‘ಅಂಚೆ ಕಚೇರಿಯಿಂದ ರಾಯಚೂರು ರಸ್ತೆಯ ವಿಸಿಬಿ ಕಾಲೇಜು ಕ್ರಾಸ್‌ವರೆಗಿನ ರಸ್ತೆ ಅಗಲೀಕರಣ ಮತ್ತು ಅಭಿವೃದ್ಧಿ ಕಾರ್ಯ ತೃಪ್ತಿಕರವಾಗಿಲ್ಲ. ಕಟ್ಟಡಗಳ ತೆರವು ಮತ್ತು ವಿದ್ಯುತ್‍ ಕಂಬಗಳ ಸ್ಥಳಾಂತರ ಕಾರ್ಯದಲ್ಲಿ ತಾರತಮ್ಯ ನೀತಿ ಅನುಸರಿಸುತ್ತ ಬಂದಿದ್ದೀರಿ. ಬೀದಿಬದಿ ವ್ಯಾಪಾರಸ್ಥರಿಂದ ಖಾಸಗಿ ವ್ಯಕ್ತಿಗಳು ಮನಸೋ ಇಚ್ಛೆ ಬಾಡಿಗೆ ವಸೂಲಿ ಮಾಡುತ್ತಿದ್ದಾರೆ. ಪುರಸಭೆ ಮೌನಕ್ಕೆ ಜಾರಿದ್ದು ನೋವಿನ ಸಂಗತಿ’ ಎಂದು ಕಳವಳ ವ್ಯಕ್ತಪಡಿಸಿದರು.

ADVERTISEMENT

‘ವಿದ್ಯುತ್‍ ಕಂಬ ಸ್ಥಳಾಂತರ, ಬೀದಿಬದಿ ಅಂಗಡಿಗಳ ತೆರವು ಕಾರ್ಯಾಚರಣೆಗೆ ಸಂಬಂಧಿಸಿ ಪುರಸಭೆ, ಸಾರಿಗೆ ಸಂಸ್ಥೆ ಹಾಗೂ ಲೋಕೋಪಯೋಗಿ ಇಲಾಖೆ ಪರಸ್ಪರ ದೂರುವುದು ತರವಲ್ಲ. ಎಲ್ಲರೂ ಒಂದಾಗಿ ಪೊಲೀಸ್‍ ಬಂದೋಬಸ್ತ್‌ನಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರ ತಿರುಗಾಟ, ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಲು ಶಿಸ್ತು ಕ್ರಮ ಕೈಗೊಳ್ಳಬೇಕು. ಮತ್ತೊಂದು ತುರ್ತು ಸಭೆಗೆ ಮುಂಚೆ ಈ ಕಾರ್ಯ ಆಗಿರಬೇಕು’ ಎಂದರು.

ರಾಜಕಾಲುವೆ (ಲಂಡಕೇನ ಹಳ್ಳ) ರಾಯಚೂರು ರಸ್ತೆಯಿಂದ ಜಿಟಿಟಿಸಿ ಕಾಲೇಜು ನಾಲಾದವರೆಗೆ ಹರಿಯುತ್ತಿದೆ. ಈ ನಾಲಾಗುಂಟ ನಿರ್ಮಾಣಗೊಂಡ ಬಡಾವಣೆಗಳ ನಕ್ಷೆ, ಜಮೀನುಗಳ ಪಹಣಿ ಪರಿಶೀಲಿಸಿ ಒತ್ತುವರಿ ತೆರವುಗೊಳಿಸಬೇಕು. ಕಂದಾಯ, ಸರ್ವೆ, ಪುರಸಭೆ ರಾಜಕಾಲುವೆ ಒತ್ತುವರಿ ತಡೆಯದಿದ್ದರೆ ಭವಿಷ್ಯದಲ್ಲಿ ಒಳಚರಂಡಿ ನೀರು ಹರಿಸುವುದು ಎಲ್ಲಿ?. ಕೂಡಲೇ ಒತ್ತುವರಿ ತೆರವುಗೊಳಿಸಿ ರಕ್ಷಣೆಗೆ ಮುಂದಾಗಬೇಕು’ ಎಂದು ಸಲಹೆ ನೀಡಿದರು.

ಪುರಸಭೆಗೆ ನಿಯಮ ಮೀರಿ ಪೌರಕಾರ್ಮಿಕನ ನೇಮಕಾತಿ ನಡೆದಿರುವುದು ನೋವಿನ ಸಂಗತಿ. ನೇಮಕಗೊಂಡ ನೌಕರ ನಿತ್ಯ ಕೆಲಸಕ್ಕೆ ಬರುತ್ತಿಲ್ಲ. ಪುರಸಭೆ ಖಜಾನೆಯಿಂದ ವೇತನ ನೀಡಲಾಗುತ್ತಿದೆ. ಚರಂಡಿಗಳು ತುಂಬಿ ರಸ್ತೆ ಮೇಲೆ ನೀರು ಹರಿಯುತ್ತಿದೆ. ಘನತ್ಯಾಜ್ಯ ವಿಲೇವಾರಿ ಆಗುತ್ತಿಲ್ಲ. ನಾಗರಿಕರು, ಸಂಘ–ಸಂಸ್ಥೆಗಳ ಪ್ರತಿನಿಧಿಗಳು ಛಿಮಾರಿ ಹಾಕಿ ಹೋರಾಟ ನಡೆಸುತ್ತಿದ್ದಾರೆ. ಬೀದಿ ದೀಪಗಳ ಅಳವಡಿಕೆ ಮಾಡಬೇಕು’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಭರದಿಂದ ಸಾಗಿದೆ. ಪಟ್ಟಣದ ಪ್ರಮುಖ ರಸ್ತೆಗಳ ಇಕ್ಕೆಲಗಳ ಸರ್ವೀಸ್‍ ರಸ್ತೆಗಳಲ್ಲಿ ಸಂಚರಿಸಲು ಆಗದಷ್ಟು ತೊಂದರೆ ಆಗುತ್ತಿದೆ. ಅತಿಕ್ರಮಣ ಮತ್ತು ನಿಯಮ ಉಲ್ಲಂಘಿಸಿ ನಿಲುಗಡೆ ಮಾಡುವ ವಾಹನಗಳನ್ನು ಜಪ್ತಿ ಮಾಡಿ ದಂಡ ವಿಧಿಸಬೇಕು’ ಎಂದು ತಾಕೀತು ಮಾಡಿದರು.

‘ಪಟ್ಟಣದ ಪ್ರಮುಖ ವೃತ್ತ ಮತ್ತು ಕ್ರಾಸ್‍ಗಳಲ್ಲಿ ಸಿಗ್ನಲ್‍, ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಮಾಡಬೇಕು. ಪೊಲೀಸ್‍ ಇಲಾಖೆ ನಮಗೆ ಯಾವುದೂ ಸಂಬಂಧವೇ ಇಲ್ಲ ಎಂದಾದರೆ ಈ ಕಾರ್ಯ ಯಾವ ಇಲಾಖೆ ಮಾಡಬೇಕು. ಸದ್ಯದ ಮಟ್ಟಿಗೆ ಪುರಸಭೆ ತೆರಿಗೆ ಹಣದಲ್ಲಿ ಸಿಗ್ನಲ್‍ ಅಳವಡಿಕೆ ಮತ್ತು ಸಿಸಿ ಕ್ಯಾಮೆರಾ ಜೋಡಣೆಗೆ ಮುಂದಾಗಬೇಕು. ಪೊಲೀಸ್‍ ಇಲಾಖೆ ಸುಗಮ ಸಂಚಾರಕ್ಕೆ ಕ್ರಮ ಕೈಗೊಳ್ಳಬೇಕು’ ಎಂದರು.

ನೂತನ ಉಪ ವಿಭಾಗಾಧಿಕಾರಿ ಬಸವಣ್ಣೆಪ್ಪ ಕಲಶೆಟ್ಟಿ ಅವರನ್ನು ಪುರಸಭೆ ವತಿಯಿಂದ ಶಾಸಕ ಮಾನಪ್ಪ ವಜ್ಜಲ ಸನ್ಮಾನಿಸಿ ಸ್ವಾಗತಿಸಿದರು. ತಹಶೀಲ್ದಾರ್ ಶಂಶಾಲಂ ನಾಗಡದಿನ್ನಿ, ಪುರಸಭೆ ಮುಖ್ಯಾಧಿಕಾರಿ ರಡ್ಡಿ ರಾಯನಗೌಡ್ರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.