ADVERTISEMENT

ಮೂಗಿಗೆ ನಿಂಬೆರಸ ಬಿಟ್ಟುಕೊಂಡು ಮೃತಪಟ್ಟ ಶಿಕ್ಷಕ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2021, 12:24 IST
Last Updated 28 ಏಪ್ರಿಲ್ 2021, 12:24 IST
   

ಸಿಂಧನೂರು (ರಾಯಚೂರು): ನಗರದ ನಟರಾಜ ಕಾಲೋನಿ ನಿವಾಸಿ ಬಸವರಾಜ (43) ಅವರು ಬುಧವಾರ ಬೆಳಿಗ್ಗೆ ನಿಂಬೆರಸ ಮೂಗಿಗೆ ಬಿಟ್ಟುಕೊಂಡಿದ್ದರಿಂದ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿಯೇ ಮೃತಪಟ್ಟಿರುವ ಘಟನೆ ನಡೆದಿದೆ.

ನಿಂಬೆರಸ ಬಿಟ್ಟುಕೊಂಡಿದ್ದರಿಂದ ಎರಡು ಬಾರಿ ವಾಂತಿಯಾಗಿದೆ. ಆನಂತರ ನೆಲಕ್ಕೆ ಕುಸಿದಿದ್ದರಿಂದ ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗಲಿಲ್ಲ. ಅವರಿಗೆ ಯಾವುದೇ ಅನಾರೋಗ್ಯ ಇರಲಿಲ್ಲ ಎಂದು ಕುಟುಂಬದ ಸದಸ್ಯರು ‘ಪ್ರಜಾವಾಣಿ’ಗೆ ತಿಳಿಸಿದರು.

ಲಿಂಗಸುಗೂರು ತಾಲ್ಲೂಕು ರಾಮತ್ನಾಳ ಗ್ರಾಮದ ಬಸವರಾಜ ಅವರು 2002 ರಲ್ಲಿ ಸಿಂಧನೂರಿನ ಶರಣಬಸವೇಶ್ಚರ ಕಾಲೋನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶಿಕ್ಷಕರಾಗಿ ನೇಮಕವಾಗಿದ್ದರು. ಪತ್ನಿ ಹಾಗೂ ಇಬ್ಬರು ಪುತ್ರಿಯರಿದ್ದಾರೆ.

ADVERTISEMENT

'ಮೂಗಿನಲ್ಲಿ ನಿಂಬೆರಸ ಹಾಕಿಕೊಂಡಾಗ ಆಕಸ್ಮಿಕವಾಗಿ ಅದು ಧ್ವನಿಪೆಟ್ಟಿಗೆ (ಲ್ಯಾರಿಂಕ್ಸ್‌) ತಲುಪಿದರೆ ಖಂಡಿತವಾಗಿಯೂ ಉಸಿರಾಟದಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಸಾವು ಉಂಟಾಗುವ ಸಾಧ್ಯತೆಯೂ ಇದೆ' ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.