ADVERTISEMENT

ಸಿಂಧನೂರು: ಅಂಗಳದಲ್ಲಿ ವಿದ್ಯಾರ್ಥಿಗಳಿಗೆ ಬೋಧನೆ!

ಶಾಲಾ ಕಟ್ಟಡ ಅರ್ಧಕ್ಕೆ ನಿಲ್ಲಿಸಿರುವ ಕೆಆರ್‌ಐಡಿಎಲ್

ಡಿ.ಎಚ್.ಕಂಬಳಿ
Published 1 ಡಿಸೆಂಬರ್ 2023, 4:44 IST
Last Updated 1 ಡಿಸೆಂಬರ್ 2023, 4:44 IST
ಸಿಂಧನೂರಿನ ಹೃದಯಭಾಗದಲ್ಲಿರುವ ಬಡಿಬೇಸ್ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಅರ್ಧಕ್ಕೆ ನಿಂತಿರುವುದು
ಸಿಂಧನೂರಿನ ಹೃದಯಭಾಗದಲ್ಲಿರುವ ಬಡಿಬೇಸ್ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಅರ್ಧಕ್ಕೆ ನಿಂತಿರುವುದು   

ಸಿಂಧನೂರು: 10 ತಿಂಗಳ ಹಿಂದೆ 4 ಕೊಠಡಿಯ ಶಾಲಾ ಕಟ್ಟಡ ಪ್ರಾರಂಭಿಸಿ ಚುನಾವಣೆ ಕಾರಣಕ್ಕೆ ಕೆಲಸ ಸ್ಥಗಿತಗೊಳಿಸಿರುವುದರಿಂದ ವಿದ್ಯಾರ್ಥಿಗಳು ಅಂಗಳದಲ್ಲಿಯೇ ಕುಳಿತು ವಿದ್ಯಾಭ್ಯಾಸ ಮಾಡುವ ಸ್ಥಿತಿ ಎದುರಾಗಿದೆ.

ಇದು ಕುಗ್ರಾಮದ ಸ್ಥಿತಿ ಅಲ್ಲ. ಸಿಂಧನೂರು ನಗರದ ಬಡಿಬೇಸ್ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಈ ದುರ್ಗತಿ ಬಂದಿದೆ. ಬಡಿಬೇಸ್ ಪ್ರಾಥಮಿಕ ಶಾಲೆ ತುಂಬಾ ಹಳೆಯದಾಗಿದ್ದು, ನಗರದ ಹೃದಯಭಾಗದಲ್ಲಿದೆ. ಇಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರೈತರು, ಕಾರ್ಮಿಕರು ಮತ್ತು ಸಣ್ಣ-ಪುಟ್ಟ ವ್ಯಾಪಾರ ಮಾಡಿ ಜೀವನ ಸಾಗಿಸುವ ನಾಗರಿಕರ ಮಕ್ಕಳೇ ಓದುತ್ತಾರೆ.

‘ಒಂದರಿಂದ 7ನೇ ತರಗತಿಯವರೆಗೆ ಶಾಲೆ ನಡೆಯುತ್ತಿದ್ದು, 241 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಾರೆ. ಮುಖ್ಯಶಿಕ್ಷಕರು ಸೇರಿ 8 ಜನ ಶಿಕ್ಷಕರಿದ್ದಾರೆ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯಿದೆ. ಶೌಚಾಲಯವಿದೆ. ಶಿಕ್ಷಕರು ಇದ್ದಾರೆ. ಆದರೆ ಮಕ್ಕಳು ಕುಳಿತುಕೊಳ್ಳಲು ಕೊಠಡಿ ಇಲ್ಲದಿರುವುದಿರುವುದು ದೊಡ್ಡ ಸಮಸ್ಯೆಯಾಗಿದೆ ಎನ್ನುತ್ತಾರೆ’ ಶಾಲಾ ಸುಧಾರಣಾ ಸಮಿತಿಯ ಅಧ್ಯಕ್ಷ ಶ್ರೀನಿವಾಸ ಮರಾಠ.

ADVERTISEMENT

ಕೊಠಡಿಗಳು ಸೋರುತ್ತಿವೆ ಎನ್ನುವ ಕಾರಣಕ್ಕೆ ಇದ್ದ ಕೊಠಡಿಗಳನ್ನು ಈ ಹಿಂದೆ ಕೆಡವಲಾಯಿತು. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ₹58.33 ಲಕ್ಷ ಹಣ ಬಿಡುಗಡೆ ಮಾಡಿ ಕಟ್ಟಡ ನಿರ್ಮಾಣದ ಜವಾಬ್ದಾರಿಯನ್ನು ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮಕ್ಕೆ ವಹಿಸಲಾಗಿದೆ. ನಿಗಮದ ಅಧಿಕಾರಿಗಳು ಪ್ರಾರಂಭದಲ್ಲಿ ಕಟ್ಟಡದ ಕೆಲಸವನ್ನು ಉತ್ತಮವಾಗಿಯೇ ಮಾಡಿದ್ದಾರೆ. ಆದರೆ, ವಿಧಾನಸಭಾ ಚುನಾವಣೆಗಿಂತ ಎರಡು ತಿಂಗಳ ಮೊದಲೇ ಕಟ್ಟಡ ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದು, 8 ತಿಂಗಳಾದರೂ ಕೆಆರ್‌ಐಡಿಎಲ್ ಶಾಲೆಯ ಕಡೆಗೆ ಸುಳಿದಿಲ್ಲ. ಇಲಾಖೆಯ ಸಹಾಯಕ ಎಂಜಿನಿಯರ್ ಮಹಾಂತೇಶ ಅವರಿಗೆ ನೂರಾರು ಬಾರಿ ದೂರವಾಣಿ ಕರೆ ಮಾಡಿದರೂ ಅವರು ಸ್ವೀಕರಿಸುವುದಿಲ್ಲ. ಯಾರನ್ನು ಕೇಳಬೇಕೆಂದು ತಿಳಿಯದಂತಾಗಿದೆ. ಶಾಸಕ ಹಂಪನಗೌಡ ಬಾದರ್ಲಿ ಅವರನ್ನು ಭೇಟಿಯಾಗಿ ಪರಿಸ್ಥಿತಿಯನ್ನು ವಿವರಿಸಿದ್ದೇವೆ ಎನ್ನುತ್ತಾರೆ ಸಮಿತಿಯ ಅಧ್ಯಕ್ಷ ಶ್ರೀನಿವಾಸ ಮರಾಠ.

‘ಶಾಲೆಯಲ್ಲಿ 8 ಕೊಠಡಿಗಳಿದ್ದು, ಕಚೇರಿಗೊಂದು, ಬಿಸಿಯೂಟಕ್ಕೊಂದು ಮತ್ತು ನೀರಿನ ಶುದ್ಧೀಕರಣ ಘಟಕವನ್ನು ಮತ್ತೊಂದರಲ್ಲಿ ಅಳವಡಿಸಲಾಗಿದೆ. ಇನ್ನುಳಿದ 5 ಕೊಠಡಿಗಳಲ್ಲಿ 2 ಕೊಠಡಿಗಳು ಮಳೆ ಬಂದರೆ ಸಾಕು ಸೋರುತ್ತಿವೆ. ಅಂಥ ಸಮಯದಲ್ಲಿ ಮಕ್ಕಳನ್ನು ರಕ್ಷಿಸುವುದೇ ದೊಡ್ಡ ಚಿಂತೆಯಾಗಿದೆ. ನಗರಸಭೆ ಸದಸ್ಯ ಹಟ್ಟಿ ವೀರೇಶ ಅವರು ಒಳಾಂಗಣದಲ್ಲಿ ಟೈಲ್ಸ್ ಹಾಕಿರುವುದರಿಂದ ಮಕ್ಕಳು ಕುಳಿತುಕೊಳ್ಳಲು ಸಾಧ್ಯವಾಗಿದೆ. ಇಲ್ಲದಿದ್ದರೆ ಮಣ್ಣಿನಲ್ಲಿಯೇ ಮಕ್ಕಳು ಕುಳಿತುಕೊಳ್ಳುವ ಪರಿಸ್ಥಿತಿ ಬರುತ್ತಿತ್ತು’ ಎಂದು ಶಿಕ್ಷಕರು ಹೇಳುತ್ತಾರೆ ಮುಖ್ಯಶಿಕ್ಷಕ ಶರಣಪ್ಪ ಎಸ್.ಗೌಡರ.

ಮಕ್ಕಳು ಓದುವ ರೂಮಿನ ಮುಂಭಾಗದಲ್ಲಿಯೇ ಅಡುಗೆ ಮಾಡುತ್ತಿರುವುದರಿಂದ ಅಭ್ಯಾಸಕ್ಕೆ ತೊಂದರೆಯಾಗುತ್ತಿದೆ. ಶಾಸಕರು ಮತ್ತು ಅಧಿಕಾರಿಗಳು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಅರ್ಧಕ್ಕೆ ನಿಂತಿರುವ ಕಟ್ಟಡವನ್ನು ಪೂರ್ಣಗೊಳಿಸಬೇಕು

-ಬಿಸಿಯೂಟದ ಉಸ್ತುವಾರಿ

ಮಕ್ಕಳನ್ನು ಅಂಗಳದಲ್ಲಿ ಕೂರಿಸಿ ಬೋಧನೆ ಮಾಡಲು ತುಂಬಾ ಕಷ್ಟವಾಗಿದೆ. ಆದಷ್ಟು ಶೀಘ್ರ ಅರ್ಧಕ್ಕೆ ನಿಂತಿರುವ ಶಾಲಾ ಕಟ್ಟಡವನ್ನು ಪೂರ್ಣಗೊಳಿಸಲು ಶಾಸಕರಲ್ಲಿ ವಿನಂತಿಸಿದ್ದೇವೆ
-ಶರಣಪ್ಪ ಎಸ್.ಗೌಡರ ಮುಖ್ಯಶಿಕ್ಷಕ

ಎಂಟು ತಿಂಗಳಿನಿಂದ ಶಾಲಾ ಕಟ್ಟಡ ಅರ್ಧಕ್ಕೆ ನಿಲ್ಲಿಸುವ ಮೂಲಕ ವಿದ್ಯಾರ್ಥಿಗಳಿಗೆ ತೊಂದರೆ ನೀಡಿರುವ ಕೆಆರ್‌ಐಡಿಎಲ್ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು
-ಶ್ರೀನಿವಾಸ ಮರಾಠ ಅಧ್ಯಕ್ಷ ಎಸ್‍ಡಿಎಂಸಿ

ಸಿಂಧನೂರಿನ ಬಡಿಬೇಸ್ ಶಾಲಾ ಅಂಗಳದಲ್ಲಿ ಮಕ್ಕಳಿಗೆ ಶಿಕ್ಷಕಿ ಭೋಧನೆ ಮಾಡುತ್ತಿರುವುದು
ಶರಣಪ್ಪ ಎಸ್.ಗೌಡರ
ಶ್ರೀನಿವಾಸ ಮರಾಠ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.