ಕವಿತಾಳ: ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗುತ್ತಿದ್ದು, ಜನ ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಪಟ್ಟಣದ ವಿವಿಧ ತಂಪು ಪಾನೀಯ ಮಾರಾಟ ಮಳಿಗೆಗಳ ಹತ್ತಿರ ಜನರು ಗುಂಪಾಗಿ ನಿಂತು ತಂಪು ಪಾನೀಯ ಸೇವಿಸುತ್ತಿರುವ ದೃಶ್ಯ ಹೆಚ್ಚಾಗಿ ಕಂಡು ಬರುತ್ತಿದೆ.
ಬೇಸಿಗೆಯ ರಣ ಬಿಸಿಲಿಗೆ ಕಂಗೆಟ್ಟ ಜನ ದೇಹ ತಂಪಾಗಿಸಿಕೊಳ್ಳಲು ಮತ್ತು ನೀರಿನ ದಾಹ ತೀರಿಸಿಕೊಳ್ಳಲು ತಂಪು ಪಾನೀಯ ಸೇವಿಸುತ್ತಿದ್ದಾರೆ. ಇಲ್ಲಿನ ಹಳೆ ಬಸ್ ನಿಲ್ದಾಣ, ಆನ್ವರಿ ರಸ್ತೆಯಲ್ಲಿನ ಅಂಗಡಿಗಳಲ್ಲಿ ಸಿಗುವ ವಿವಿಧ ಹಣ್ಣಿನ ಜ್ಯೂಸ್, ಲಸ್ಸಿ, ಲಿಂಬು ಶರಬತ್ತು, ಎಳನೀರು ಮತ್ತು ಪೆಟ್ರೋಲ್ ಬಂಕ್ ಹತ್ತಿರ ಮಾರಾಟ ಮಾಡುವ ಲಿಂಬು ಸೋಡಾ, ಮಸಾಲಾ ಶರಬತ್ತು, ಸಿಹಿ ಶರಬತ್ತು ಹಾಗೂ ಊರ ಹೊರ ವಲಯದಲ್ಲಿ ಕಬ್ಬಿನ ಹಾಲು ಮಾರಾಟ ಜೋರಾಗಿ ನಡೆಯುತ್ತಿದೆ.
ಮಧ್ಯಾಹ್ನ 12 ಗಂಟೆಯಿಂದ ಸಾರ್ವಜನಿಕರ ಓಡಾಟ ಅಷ್ಟಾಗಿ ಕಂಡು ಬರದಿದ್ದರೂ ವಿವಿಧೆಡೆ ನಡೆಯುತ್ತಿರುವ ಮದುವೆ ಮತ್ತಿತರ ಶುಭ ಸಮಾರಂಭಗಳಿಗೆ ಹೋಗುವವರು, ಬೇರೆ ಬೇರೆ ಕೆಲಸಗಳ ನಿಮಿತ್ತ ಊರಿಂದ ಊರಿಗೆ ಹೋಗುವವರು ಬಸ್‌ಗಾಗಿ ಇಲ್ಲಿನ ಶಿವಪ್ಪ ತಾತನ ಮಠದ ಹತ್ತಿರ ಕಾದು ನಿಲ್ಲುತ್ತಾರೆ. ಮಠದ ಆವರಣದಲ್ಲಿ ಅರವಟಿಗೆ ಸ್ಥಾಪಿಸಲಾಗಿದ್ದು, ತಂಪಾದ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.
ಬಸ್‌ಗಾಗಿ ಕಾದು ನಿಲ್ಲುವ ಪ್ರಯಾಣಿಕರು, ವಾಹನ ಸವಾರರು, ಬೇರೆ ಬೇರೆ ಕೆಲಸಗಳ ನಿಮಿತ್ತ ಪಟ್ಟಣಕ್ಕೆ ಬರುವ ಜನರು ತಂಪು ಪಾನೀಯ ಕುಡಿದು ದೇಹವನ್ನು ತಂಪಾಗಿಸಿಕೊಳ್ಳುತ್ತಾರೆ.
‘42 ಡಿಗ್ರಿ ಸೆಲ್ಸಿಯಸ್‌ನಷ್ಟು ಬಿಸಿಲು ಹೆಚ್ಚಿದೆ. ಬೈಕ್ ಮೇಲೆ ಬರುತ್ತಿದ್ದರೆ ಬೆಂಕಿಯಲ್ಲಿ ಹಾದು ಬಂದಂತೆ ಬಿಸಿ ಗಾಳಿ ಬೀಸುತ್ತದೆ. ಕೆಲಸ ಕಾರ್ಯಗಳಿಗಾಗಿ ಓಡಾಡುವುದು ಅನಿವಾರ್ಯ. ಹೀಗಾಗಿ ಅಲ್ಲಲ್ಲಿ ತಂಪು ಪಾನೀಯ ಸೇವನೆ ಹಾಗೂ ನೀರು ಸಿಕ್ಕರೆ ಮುಖ ತೊಳೆದುಕೊಂಡು ಮುಂದೆ ಹೋಗುತ್ತೇವೆ. ಆಗ ಸ್ವಲ್ಪ ನಿರಾಳ ಎನಿಸುತ್ತದೆ’ ಎಂದು ಬೈಕ್ ಸವಾರ ಶರಣಬಸವ ಹೇಳಿದರು.
‘ಈಚೆಗೆ ಬಿಸಿಲಿನ ಜತೆಗೆ ಬಿಸಿಗಾಳಿಯೂ ಹೆಚ್ಚಿದೆ. ಹೀಗಾಗಿ ಮಧ್ಯಾಹ್ನ 12 ರಿಂದ 5 ಗಂಟೆವರೆಗೆ ಹೊರಗೆ ಓಡಾಡದೆ ಮನೆಯಲ್ಲಿಯೇ ಇರುವಂತೆ ಸಾರ್ವಜನಿಕರಿಗೆ ಸೂಚಿಸಲಾಗಿದೆ. ವೃದ್ಧರು, ಮಕ್ಕಳು ಮತ್ತು ಆರೋಗ್ಯ ಸಮಸ್ಯೆ ಇದ್ದವರು ಮನೆಯಲ್ಲಿರುವುದು ಸೂಕ್ತ’ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಾಲಪ್ಪ ನಾಯಕ ಹೇಳಿದರು.
ಮಿಕ್ಸ್ ಫ್ರೂಟ್ ಜ್ಯೂಸ್ ಲಸ್ಸಿ ಮಸಾಲೆ ಮಜ್ಜಿಗೆ ತಯಾರಿಸುತ್ತಿದ್ದು ನಿತ್ಯ ₹7 ರಿಂದ ₹ 8 ಸಾವಿರದವರೆಗೆ ವ್ಯಾಪಾರವಾಗುತ್ತಿದೆ. ಬಿಸಿಲ ಧಗೆ ಹೆಚ್ಚಳದಿಂದ ಜನರು ಹೆಚ್ಚಾಗಿ ತಂಪು ಪಾನೀಯ ಸೇವಿಸುತ್ತಿದ್ದಾರೆಪ್ರಸಾದ ಜ್ಯೂಸ್ ಅಂಗಡಿ ಮಾಲೀಕ
ಬೇರೆ ಊರುಗಳಿಂದ ಬರುವವರು. ವಾಹನ ಸವಾರರು ಹೆಚ್ಚಾಗಿ ಬಂದು ಹಣ್ಣಿನ ಜ್ಯೂಸ್ ಮತ್ತು ಶರಬತ್ತು ಕುಡಿಯುತ್ತಾರೆ. ಮನೆಗೆ ಪಾರ್ಸೆಲ್ ತೆಗೆದುಕೊಂಡು ಹೋಗುವವರ ಸಂಖ್ಯೆಯೂ ಹೆಚ್ಚುತ್ತಿದೆಮಲ್ಲಿಕಾರ್ಜುನ ಜ್ಯೂಸ್ ಅಂಗಡಿ ಮಾಲೀಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.