ದೇವದುರ್ಗ: ಕಂದಾಯ, ಭೂ ಮತ್ತು ಗಣಿವಿಜ್ಞಾನ, ಪ್ರಾದೇಶಿಕ ಸಾರಿಗೆ ಇಲಾಖೆಗಳಲ್ಲಿನ ಅಕ್ರಮಗಳಿಂದಾಗಿ ಸುದ್ದಿಯಾಗಿದ್ದ ದೇವದುರ್ಗದಲ್ಲಿ ಇದೀಗ ದೇವಸ್ಥಾನ ಜೀರ್ಣೋದ್ಧಾರಕ್ಕೆ ಮುಜರಾಯಿ ಇಲಾಖೆಯಿಂದ ಬಿಡುಗಡೆಯಾದ ಹಣವನ್ನೂ ಅಧಿಕಾರಿಗಳು ಲೂಟಿ ಮಾಡಿರುವುದು ಬೆಳಕಿಗೆ ಬಂದಿದೆ.
2020–21ರಿಂದ 2022–23ನೇ ಸಾಲಿನಲ್ಲಿ ಮುಜರಾಯಿ ಇಲಾಖೆಯಿಂದ ದೇವದುರ್ಗ ತಾಲ್ಲೂಕಿನ ಒಟ್ಟು 39 ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಮಂಜೂರಾಗಿದ್ದ ₹2.70 ಕೋಟಿ ಅನುದಾನ ದುರ್ಬಳಕೆ ಆಗಿದೆ. ತಾಲ್ಲೂಕಿನ ಕೊತ್ತದೊಡ್ಡಿ ಗ್ರಾಮದ ಸಾಮಾಜಿಕ ಕಾರ್ಯಕರ್ತ ಬಸವರಾಜ ನಾಯಕ ಮಸ್ಕಿ ಮಾಹಿತಿ ಹಕ್ಕಿನಡಿ ಪಡೆದ ಮಾಹಿತಿ ಹಾಗೂ ತಹಶೀಲ್ದಾರ್ ಅವರು ದೇವದುರ್ಗ ಶಾಸಕಿ ಕರೇಮ್ಮ ಜಿ ನಾಯಕ ಅವರಿಗೆ ನೀಡಿದ ಮಾಹಿತಿಯಲ್ಲಿ ಅಕ್ರಮ ಬಹಿರಂಗವಾಗಿದೆ.
ಕಳೆದ ಮೂರು ವರ್ಷ(2020ರಿಂದ 2023)ಗಳ ಅವಧಿಯಲ್ಲಿ ತಾಲ್ಲೂಕಿನ 39 ದೇವಸ್ಥಾನಗಳ ಜಿರ್ಣೋದ್ಧಾರಕ್ಕೆ ಸರ್ಕಾರ ಆರಾಧನಾ ಯೋಜನೆ ಅಡಿಯಲ್ಲಿ ₹18.73 ಲಕ್ಷ, ಸಾಮಾನ್ಯ ಯೋಜನೆ ಅಡಿಯಲ್ಲಿ ₹1.9 ಕೋಟಿ ಹಾಗೂ ನೇರವಾಗಿ ಮಠ–ಸಂಸ್ಥೆಗಳಿಗೆ ₹ 62 ಲಕ್ಷ ಬಿಡುಗಡೆ ಮಾಡಿದೆ. ಅಧಿಕಾರಿಗಳು ನಿಯಮಬಾಹಿರವಾಗಿ ಸಮಿತಿಗಳನ್ನು ರಚಿಸಿ ಅದೇ ಗ್ರಾಮದ ರಾಜಕೀಯ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿ ಹಾಗೂ ಗ್ರಾಮಲೆಕ್ಕಿಗರನ್ನು ಆ ಸಮಿತಿ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿ ಹಣ ಪಡೆದುಕೊಂಡಿದ್ದಾರೆ.
‘ಹಿಂದಿನ ತಹಶೀಲ್ದಾರ್ ಶ್ರೀನಿವಾಸ ಚಾಪೆಲ್ ಅವರು ಸಮಿತಿಗಳಿಗೆ ಶೇಕಡ 80ರಷ್ಟು ಹಣವನ್ನು ಚೆಕ್ ರೂಪದಲ್ಲಿ ನೀಡಿದ್ದಾರೆ. ಸಮಿತಿಯ ಕಾರ್ಯದರ್ಶಿಗಳು ಸಮಿತಿಯ ಮುಖಂಡರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ. ಇದರ ಹಿಂದೆ ದೊಡ್ಡ ಜಾಲವೇ ಇದೆ’ ಎನ್ನುತ್ತಾರೆ ಅರಿಶಿಣಗಿ ಗ್ರಾಮದ ರಾಮಣ್ಣ.
2022-23ನೇ ಸಾಲಿನ ಸಾಮಾನ್ಯ ಯೋಜನೆ ಅಡಿಯಲ್ಲಿ ಅರಿಶಿಣಗಿ ಗ್ರಾಮದ ಆಂಜನೇಯ ದೇವಸ್ಥಾನಕ್ಕೆ ಮಂಜೂರಾಗಿದ್ದ ₹ 20 ಲಕ್ಷ ಪೈಕಿ ₹ 10 ಲಕ್ಷ ಚೆಕ್ ಪಡೆದ ಸಮಿತಿ ಕಾಮಗಾರಿಯನ್ನೇ ಪ್ರಾರಂಭಿಸಿಲ್ಲ. ಹಳೆಯ ಗುಡಿಯ ಸ್ಥಿತಿ ಹಾಗೆಯೇ ಇದೆ. ಕೆ. ಹನುಮಂತ್ರಾಯ ನಾಯಕ ನಗರದಲ್ಲಿನ ಆಂಜನೇಯ ದೇವಸ್ಥಾನದ ಜೀರ್ಣೋದ್ಧಾರಕ್ಕೆ ₹40 ಲಕ್ಷ ಕಾಮಗಾರಿಗೆ ಜಿಲ್ಲಾಧಿಕಾರಿಯೇ ಆಡಳಿತಾತ್ಮಕ ಅನುಮೋದನೆ ನೀಡಿದ್ದಾರೆ. 2022ರ ಅಕ್ಟೋಬರ್‌ನಲ್ಲಿ ತಹಶೀಲ್ದಾರ್ ಅವರು ಸಮಿತಿ ಅಧ್ಯಕ್ಷರ ಹೆಸರಿನಲ್ಲಿ ₹28 ಲಕ್ಷ ಮೊತ್ತದ ಚೆಕ್ ವಿತರಿಸಿದ್ದಾರೆ. ವಾಸ್ತವದಲ್ಲಿ ಆ ಗ್ರಾಮದಲ್ಲಿ ಆಂಜನೇಯ ದೇವಸ್ಥಾನವೇ ಇಲ್ಲ!
ಜಿಲ್ಲಾಧಿಕಾರಿಗೆ ಹಣ ಬಳಕೆ ಪ್ರಮಾಣ ಪತ್ರ ಸಲ್ಲಿಸಲಾಗಿದೆ ಎಂದು ತಹಶೀಲ್ದಾರ್ ಸದನಕ್ಕೆ ನೀಡಿದ ಉತ್ತರದಲ್ಲೂ ಉಲ್ಲೇಖಿಸಿದ್ದಾರೆ. ಹೀಗೆ ತಾಲ್ಲೂಕಿನ 39 ಗ್ರಾಮಗಳಲ್ಲಿನ 21 ದೇವಸ್ಥಾನಗಳ ಕಾಮಗಾರಿ ಪ್ರಗತಿಯಲ್ಲಿದೆ ಮತ್ತು 17 ದೇವಸ್ಥಾನಗಳ ಕಾಮಗಾರಿಗೆ ಹಣ ಬಳಕೆಯಾಗಿದೆ. ಹಣ ಬಳಕೆ ಪ್ರಮಾಣಪತ್ರ ಜಿಲ್ಲಾಧಿಕಾರಿಗೆ ಸಲ್ಲಿಸಲಾಗಿದೆ ಎಂದು ಶಾಸಕಿ ಕರೆಮ್ಮ ಜಿ ನಾಯಕ ಕೇಳಿದ ಮಾಹಿತಿಗೆ ಅಧಿಕಾರಿಗಳು ಉತ್ತರಿಸಿದ್ದಾರೆ.
2022–23 ಸಾಲಿನಲ್ಲಿ ತಾಲ್ಲೂಕಿನ 17 ದೇವಸ್ಥಾನಗಳಿಗೆ ₹ 1 ಕೋಟಿವರೆಗಿನ ಅನುದಾನಕ್ಕೆ ಜಿಲ್ಲಾಧಿಕಾರಿ, ₹20 ಲಕ್ಷವರೆಗೆ ಅನುದಾನಕ್ಕೆ ಸಹಾಯಕ ಆಯುಕ್ತರು ಹಾಗೂ ₹10 ಲಕ್ಷವರೆಗಿನ ಅನುದಾನಕ್ಕೆ ತಹಶೀಲ್ದಾರ್ ಆಡಳಿತಾತ್ಮಕ ಅನುಮೋದನೆ ನೀಡಿದ್ದಾರೆ. ಅನುದಾನವನ್ನು ಅಧಿಕೃತವಾಗಿ ನೋಂದಣಿ ಇಲ್ಲದ ದೇವಸ್ಥಾನಗಳ ಸಮಿತಿಗಳಿಗೆ ನೀಡಲಾಗಿದೆ.
ಸದನದಲ್ಲಿ ಸದ್ದು: ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದಲ್ಲೂ ಪ್ರಕರಣ ಬಾರಿ ಸದ್ದು ಮಾಡಿದೆ. ದೇವದುರ್ಗ ಶಾಸಕಿ ಕರೆಮ್ಮ ನಾಯಕ ದೇವದುರ್ಗ ದೇವಸ್ಥಾನ ಅನುದಾನ ದುರ್ಬಳಕೆಯಾಗಿರುವುದನ್ನು ಸರ್ಕಾರದ ಗಮನ ಸೆಳೆದಿದ್ದಾರೆ.
‘ಅಧಿಕಾರಿಗಳು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ. ದೇವದುರ್ಗದಲ್ಲಿ ದೇವಸ್ಥಾನ ಜೀರ್ಣೋದ್ಧಾರ ಕಾಮಗಾರಿಯೇ ನಡೆಯುತ್ತಿಲ್ಲ. ಹಳೆಯ ದೇವಸ್ಥಾನಗಳು ಕುಸಿದು ಬೀಳುವ ಸ್ಥಿತಿಯಲ್ಲಿವೆ. ಹಣ ಬಳಕೆಯ ಪ್ರಮಾಣ ಪತ್ರವನ್ನು ಯಾವ ಆಧಾರದ ಮೇಲೆ ನೀಡಲಾಗಿದೆ ತಿಳಿದಿಲ್ಲ. ಈ ಪ್ರಕರಣದ ತನಿಖೆಗೆ ವಿಧಾನಸಭಾ ಸಭಾಧ್ಯಕ್ಷರು ಆದೇಶ ನೀಡಬೇಕು’ ಎಂದು ಒತ್ತಾಯಿಸಿದ್ದಾರೆ
‘ದೇವರ ಹೆಸರಲ್ಲೇ ಕೊಳ್ಳೆ ಹೊಡೆಯುತ್ತಿರುವ ಅಧಿಕಾರಿ ಹಾಗೂ ಶಾಮೀಲಾದ ರಾಜಕಾರಣಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು’ ಎಂದು ಅರಿಶಿಣಗಿ, ಮಲ್ಲಾಪುರ, ಎನ್ ಗಣೇಕಲ್, ಜಾಗಿರ್ ಜಾಡಲದ್ದಿನ್ನಿ, ನಾಗಡದಿನ್ನಿ, ಹೀರೆಬೂದೂರು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ದೇವದುರ್ಗ ತಾಲ್ಲೂಕಿನಲ್ಲಿ ಹಿಂದಿನ ಮೂರು ವರ್ಷಗಳ ಅವಧಿಯಲ್ಲಿ ಅನೇಕ ದೇವಸ್ಥಾನಗಳ ಹೆಸರಲ್ಲಿ ಹಣ ಎತ್ತಲಾಗಿದೆ. ವಾಸ್ತವದಲ್ಲಿ ದೇವಸ್ಥಾನಗಳ ಕಾಮಗಾರಿಯೇ ನಡೆಯುತ್ತಿಲ್ಲ. ದೇವದುರ್ಗ-ಕರೆಮ್ಮ ಜಿ, ನಾಯಕ ಶಾಸಕಿ
ಅನುದಾನ ಬಳಕೆಯಲ್ಲಿ ಜಿಲ್ಲಾಧಿಕಾರಿಯೇ ನಿಯಮ ಪಾಲಿಸಿಲ್ಲ. ಮಾಜಿ ಶಾಸಕ ಕೆ ಶಿವನಗೌಡ ನಾಯಕ ಅವರ ಒತ್ತಡಕ್ಕೆ ಮಣಿದು ನಿಯಮಬಾಹಿರವಾಗಿ ಸಮಿತಿಗೆ ಚೆಕ್ ನೀಡಲಾಗಿದೆ. ಸಮಿತಿಯಲ್ಲಿ ಬಿಜೆಪಿ ಕಾರ್ಯಕರ್ತರೇ ಇದ್ದಾರೆ.- ಬಸವರಾಜ ನಾಯಕ ಮಸ್ಕಿ, ಜೆಡಿಎಸ್ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.