ಹಟ್ಟಿ ಚಿನ್ನದ ಗಣಿ: ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಬೆಳೆಗಳಾದ ತೊಗರಿ, ಹತ್ತಿ ತೇವಾಂಶ ಹೆಚ್ಚಳದಿಂದ ಕೊಳೆಯು ತ್ತಿದ್ದು, ರೈತರು ಕಂಗಾಲಾಗಿದ್ದಾರೆ.
ಗುರುಗುಂಟಾ ಹೋಬಳಿ ವ್ಯಾಪ್ತಿಯಲ್ಲಿ ರೈತರು ಅತಿ ಹೆಚ್ಚು ಸೂರ್ಯಕಾಂತಿ, ಸಜ್ಜೆ, ತೊಗರಿ, ಹತ್ತಿ ಬಿತ್ತನೆ ಮಾಡಿದ್ದು, ನಿರಂತರ ಜಿಟಿಜಿಟಿ ಮಳೆಯಿಂದ ತೇವಾಂಶ ಹೆಚ್ಚಾಗಿ ಬೆಳೆಗಳು ಹಾಳಾಗುತ್ತಿವೆ.
ಗುರುಗುಂಟಾ, ಹಟ್ಟಿ, ಗೆಜ್ಜಲಗಟ್ಟಾ ಆನ್ವರಿ, ಮೇಧಿನಾಪೂರ, ಕೊಠಾ, ನಿಲೋಗಲ್, ವೀರಾಪೂರ, ಕಡ್ಡೊಣಿ, ಯಲಗಟ್ಟಾ, ಹಿರೇನಗನೂರು, ಹಿರೇಹೆಸರೂರು, ವಂದಲಿ ಹೊಸೂರು, ಗೌಡೂರು, ಮಾಚನೂರು, ಪೈದೊಡ್ಡಿ, ಯರಜಂತಿ, ಬಂಡೆಭಾವಿ, ಸೇರಿದಂತೆ ಇತರೆ ಹಳ್ಳಿಗಳ ತಗ್ಗು ಪ್ರದೇಶದ ಜಮೀನಿನಲ್ಲಿ ತೊಗರಿ, ಹತ್ತಿ, ಸೂರ್ಯಕಾಂತಿ ಬೆಳೆಗಳು ತೇವಾಂಶ ಹೆಚ್ಚಾಗಿ ಒಣಗುತ್ತಿದ್ದು, ರೈತರಿಗೆ ದಿಕ್ಕು ತೋಚದಂತಾಗಿದೆ.
ಮೋಡ ಕವಿದ ವಾತಾವರಣದಿಂದ ತೊಗರಿ ಹಾಗೂ ಸೂರ್ಯಕಾಂತಿ ಬೆಳೆಯಲ್ಲಿ ಎಲೆಚುಕ್ಕೆ ರೋಗ ಕಾಡುತ್ತಿದೆ. ಮಳೆ ಬಂದು ಬೆಳೆ ಹಾಳಾಗುತ್ತಿರುವುದು ಒಂದು ಕಡೆಯಾದರೆ ಮೋಡ ಮುಸುಕಿದ ವಾತಾವರಣದಿಂದ ಬೆಳೆಗೆ ಹುಳುವಿನ ಕಾಟ ಕಾಡುತ್ತಿದೆ. ಹತೋಟಿಗೆ ತರಲು ಔಷಧ ಸಿಂಪಡಣೆ ಮಾಡಿದರೂ ತೊಗರಿ ತೇವಾಂಶ ಹೆಚ್ಚಳದಿಂದ ಕೊಳೆಯುತ್ತಿದೆ.
ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನಹರಿಸಲಿ ಮಳೆ ಬಂದು ರೈತರ ಬೆಳೆಗಳು ಹಾಳಾಗಿವೆ. ಅಧಿಕಾರಿಗಳು ಬೆಳೆ ಪರಿಹಾರ ನೀಡಿ ರೈತರ ನೆರವಿಗೆ ಬರಬೇಕು ಎನ್ನುತ್ತಾರೆ ರೈತ ರಾಜಕುಮಾರ.
ಸಾಲ–ಸೂಲ ಮಾಡಿ ಬಿತ್ತನೆ ಮಾಡಲಾಗಿದೆ. ಫಲ ಕೈಗೆ ಬರುವ ಮುನ್ನವೇ ಮಳೆ ಬಂದು ರೈತರ ಬೆಳೆಗಳು ಹಾಳಾಗುತ್ತಿವೆ. ಸರ್ಕಾರ ನೆರವಿಗೆ ಬರಬೇಕು
-ಬಸವರಾಜ ಸಂಗಟಿ ರೈತ ಮಾಚನೂರು
ತೇವಾಂಶ ಹೆಚ್ಚಳದಿಂದ ಬೆಳೆಗಳು ಒಣಗುತ್ತಿದ್ದು ಕೃಷಿ ಇಲಾಖೆ ಅಧಿಕಾರಿಗಳು ರೈತರಿಗೆ ಮಾಹಿತಿ ನೀಡಿದರೆ ರೈತರ ಬೆಳೆಗಳು ಉಳಿಯುತ್ತವೆ. ಇಲ್ಲವಾದರೆ ರೈತರು ಸಂಕಷ್ಟ ಅನುಭವಿಸುತ್ತಾರೆ
-ಮುಕ್ತುಮ್ ಸಾಬ್ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.