ADVERTISEMENT

ರಾಯಚೂರು: ಹೈಟೆಕ್‌ ಸ್ಪರ್ಶದಿಂದ ದೂರ ಉಳಿದ ಜಿಲ್ಲಾ ಗ್ರಂಥಾಲಯ

ಜಿಲ್ಲೆಯ ಜನರ ಸಮಸ್ಯೆಗಳಿಗೆ ಸ್ಪಂದಿಸದ ಜಿಲ್ಲಾಡಳಿತ, ಸರ್ಕಾರ

ಚಂದ್ರಕಾಂತ ಮಸಾನಿ
ಬಾವಸಲಿ
Published 29 ಜುಲೈ 2024, 4:11 IST
Last Updated 29 ಜುಲೈ 2024, 4:11 IST
<div class="paragraphs"><p>ರಾಯಚೂರಿನ ಕೇಂದ್ರ ಗ್ರಂಥಾಲಯದ ನೋಟ &nbsp; &nbsp;&nbsp;</p></div>

ರಾಯಚೂರಿನ ಕೇಂದ್ರ ಗ್ರಂಥಾಲಯದ ನೋಟ     

   

ಚಿತ್ರ: ಶ್ರೀನಿವಾಸ ಇನಾಮದಾರ್

ರಾಯಚೂರು: ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸಿರುವ ಅಭ್ಯರ್ಥಿಗಳಿಗೆ ನಗರದ ಕೇಂದ್ರ ಗ್ರಂಥಾಲಯ ಅನುಕೂಲವಾಗಿದೆ. ಆದರೆ, ಇಲ್ಲಿ ಓದುಗರ ಸಂಖ್ಯೆಗೆ ಅನುಗುಣವಾಗಿ ಸೌಲಭ್ಯ ಸಿಗುತ್ತಿಲ್ಲ.

ADVERTISEMENT

ನಗರದ ಕೇಂದ್ರ ಗ್ರಂಥಾಲಯವು ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಓದುವುದಕ್ಕೆ ನೆಚ್ಚಿನ ತಾಣವಾಗಿದೆ. ಗ್ರಂಥಾಲಯ ಬೆಳಿಗ್ಗೆಯಿಂದ ಸಂಜೆಯ ವರೆಗೆ ಓದುಗರಿಂದ ತುಂಬಿರುತ್ತದೆ. ಅನೇಕರಿಗೆ ಒಳಗಡೆ ಆಸನಗಳು ಸಿಗದೇ ಗ್ರಂಥಾಲಯದ ಆವರಣದಲ್ಲಿರುವ ಉದ್ಯಾನದಲ್ಲಿ ಕುಳಿತು ಓದುತ್ತಿದ್ದಾರೆ.

ಮನೆಗಳಲ್ಲಿ ಓದಲು ಅನುಕೂಲವಿರದ ಅನೇಕ ವಿದ್ಯಾರ್ಥಿಗಳು ಗ್ರಂಥಾಲಯವು ಬೆಳಿಗ್ಗೆ 8 ಗಂಟೆಗೆ ಬಾಗಿಲು ತೆರೆಯುವುದನ್ನೇ ಕಾಯುತ್ತಾರೆ. ಅಷ್ಟೇ ಅಲ್ಲ ಬೆಳಗಿನಿಂದ ರಾತ್ರಿ 8 ಗಂಟೆಯವರೆಗೂ ವಿದ್ಯಾರ್ಥಿಗಳು ನಿರಂತರವಾಗಿ ಬಂದು ಹೋಗುತ್ತಾರೆ. ಗ್ರಂಥಾಲಯದ ಒಳ ಆವರಣ ಹಾಗೂ ಹೊರ ಆವರಣದಲ್ಲಿಯೂ ಪುಸ್ತಕಗಳನ್ನು ಹಿಡಿದು ಕುಳಿತುಕೊಂಡಿರುವುದು ಇಲ್ಲಿ ಕಾಣಸಿಗುತ್ತದೆ.

ಗ್ರಂಥಾಲಯದಲ್ಲಿ ಸುಮಾರು 200ಕ್ಕೂ ಹೆಚ್ಚು ಆಸನಗಳಿದ್ದರೂ ಸಾಕಾಗುತ್ತಿಲ್ಲ. ಹೀಗಾಗಿ ನಗರ ಕೇಂದ್ರ ಗ್ರಂಥಾಲಯಕ್ಕೆ ಹೊಂದಿಕೊಂಡು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ)ಯಿಂದ ₹ 50 ಲಕ್ಷ ಅನುದಾನದಲ್ಲಿ ಹೊಸ ಕಟ್ಟಡ ನಿರ್ಮಿಸಿ ಜಿಲ್ಲಾ ಗ್ರಂಥಾಲಯಕ್ಕೆ ಕೊಡಲಾಗಿದೆ.

ಪ್ರೌಢಶಾಲಾ ವಿದ್ಯಾರ್ಥಿಗಳು, ಕಾಲೇಜು ವಿದ್ಯಾರ್ಥಿಗಳು, ಓದುವ ಆಸಕ್ತಿ ಇರುವವರು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡಿಕೊಳ್ಳುವರು, ಸಾಹಿತಿಗಳು, ಕವಿಗಳು ಹಾಗೂ ಹಿರಿಯ ನಾಗರಿಕರು ಪ್ರತಿನಿತ್ಯ ದಿನಪತ್ರಿಕೆಗಳು, ವೃತ್ತ ಪತ್ರಿಕೆ ಹಾಗೂ ಪುಸ್ತಕಗಳನ್ನು ಓದಲು ಬರುತ್ತಾರೆ.

ಕೇಂದ್ರ ಗ್ರಂಥಾಲಯದ ಆವರಣ ಸಂಪೂರ್ಣ ಕೆಸರು ಮಯವಾಗಿದೆ. ‌ಕೊಳಚೆ ನೀರು ಉದ್ಯಾನದ ಪಕ್ಕದಲ್ಲಿಯೇ ಸಂಗ್ರಹವಾಗಿ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಗ್ರಂಥಾಲಯದ ಸುತ್ತ ಚಿಕ್ಕದಾದ ಆವರಣ ಗೋಡೆ ಇದೆ. ಇಲ್ಲಿ ಸುಲಭವಾಗಿ ಹಂದಿ, ನಾಯಿಗಳು ನುಗ್ಗುತ್ತವೆ. ಸುತ್ತಮುತ್ತ ಸ್ವಚ್ಛತೆ ಕಾಪಾಡಿದ್ದಲ್ಲಿ ಮತ್ತಷ್ಟು ಅನುಕೂಲವಾಗಲಿದೆ.

1.90 ಲಕ್ಷ ಪುಸ್ತಕಗಳು: ನೆಲಮಹಡಿ ಹಾಗೂ ಮೊದಲ ಮಹಡಿಗಳಲ್ಲಿ ಸುಮಾರು 1.90 ಲಕ್ಷ ಪುಸ್ತಕಗಳ ದೊಡ್ಡ ಸಂಗ್ರಹವೇ ಇದೆ. ಮನೆಗೆ ತೆಗೆದುಕೊಂಡು ಓದಲು ನೋಂದಣಿ ಮಾಡಿಕೊಂಡ ಪುಸ್ತಕಗಳ ಬಳಕೆದಾರರ ಸಂಖ್ಯೆ ಒಟ್ಟು 37 ಸಾವಿರ ಇದೆ. ಬೇರೆ ಕಡೆ ಇರುವಂತೆ ಕೆಟಲಾಗ್‌ ವ್ಯವಸ್ಥೆ ಇಲ್ಲ. ಗ್ರಂಥಾಲಯಕ್ಕೆ ಪ್ರತಿನಿತ್ಯ ಸರಾಸರಿ 600ರಿಂದ 900 ಜನರು ಬಂದು ಹೋಗುತ್ತಾರೆ.

ಓದುಗರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯಗಳಿವೆ. ಓದುಗರ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಉದ್ಯಾನದಲ್ಲಿ ಮತ್ತೊಂದು ಶೌಚಾಲಯ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ.

‘ನಗರಸಭೆ ಹಾಗೂ ಸಂಸದರಿಗೆ ಪ್ರಸ್ತಾವ ಸಲ್ಲಿಸಿ ಹೆಚ್ಚುವರಿ ಸೌಲಭ್ಯ ಪಡೆಯಲಾಗುವುದು. ಗ್ರಂಥಾಲಯಕ್ಕೆ ಸಿಬ್ಬಂದಿಯ ಕೊರತೆಯಿದ್ದು ಹೆಚ್ಚಿನ ಸೌಲಭ್ಯ ನೀಡಲು ಸಾಧ್ಯವಾಗುತ್ತಿಲ್ಲ’ ಎಂದು ಗ್ರಂಥಪಾಲಕಿ ನಿರ್ಮಲಾ ‘ಪ್ರಜಾವಾಣಿ’ಗೆ ತಿಳಿಸಿದರು.

ರಾಯಚೂರಿನ ಕೇಂದ್ರ ಗ್ರಂಥಾಲಯದಲ್ಲಿ ಜಾಗದ ಕೊರತೆಯಿಂದ ನೆಲದ ಮೇಲೆ ಕುಳಿತು ಓದುತ್ತಿರುವ ಯುವಕರು
ಹೆಚ್ಚಿನ ಅನುಕೂಲಕ್ಕೆ ವಿದ್ಯಾರ್ಥಿಗಳ ಒತ್ತಾಯ
ರಾಯಚೂರು ನಗರದಲ್ಲಿರುವ ಗ್ರಂಥಾಲಯ ನಗರ ಹಾಗೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಬಹಳ ಉಪಯುಕ್ತವಾಗಿದೆ. ಅಧ್ಯಯನಪರ ವಾತಾವರಣವಿರುವ ಕಾರಣ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳು ಇಲ್ಲಿಯೇ ಬಂದು ಓದುತ್ತಾರೆ. ‘ರಾಯಚೂರಲ್ಲಿ ಬಿಸಿಲು ಹಾಗೂ ಸೆಖೆ ಹೆಚ್ಚು ತಗಡಿನ ಶೆಡ್‌ಗಳಿರುವ ಮನೆಗಳು ಹಾಗೂ ಚಿಕ್ಕದಾದ ಮನೆಗಳಲ್ಲಿ ವಾಸವಾಗಿರುವ ಸಣ್ಣಕುಟುಂಬಗಳ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲ ಕಲ್ಪಿಸಿದೆ. ಜಿಲ್ಲಾಡಳಿತವು ಗ್ರಂಥಾಲಯದ ಉದ್ಯಾನದ ಆವರಣದಲ್ಲಿ ದೊಡ್ಡದಾದ ರೀಡಿಂಗ್‌ ರೂಮ್‌ ನಿರ್ಮಾಣ ಮಾಡಬೇಕು. ಮತ್ತಷ್ಟು ಅನುಕೂಲ ಕಲ್ಪಿಸಬೇಕು’ ಎಂದು ವಿದ್ಯಾರ್ಥಿಗಳಾದ ವೀರೇಶ ಮಲ್ಲೇಶ ಹಾಗೂ ಸುಪ್ರಿಯಾ ಮನವಿ ಮಾಡುತ್ತಾರೆ. ‘ಗ್ರಂಥಾಲಯಕ್ಕೆ ನಿತ್ಯ 900ರಿಂದ ಒಂದು ಸಾವಿರ ವಿದ್ಯಾರ್ಥಿಗಳು ಬಂದು ಹೋಗುತ್ತಾರೆ. ಗ್ರಂಥಾಲಯ ಅಧಿಕಾರಿಗಳು ಬೇಡಿಕೆ ಇಲ್ಲ ಎಂದು ಹೇಳುತ್ತ ಕುಳಿತರೆ ಸಾಲದು. ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳನ್ನು ಸಂಪರ್ಕಿಸಿ ಇಲ್ಲಿ ಸೌಲಭ್ಯ ವಿಸ್ತರಿಸಲು ಪ್ರಸ್ತಾವ ಸಲ್ಲಿಸಬೇಕು’ ಎಂದು ಹೇಳುತ್ತಾರೆ. ‘ಸರ್ಕಾರ ಸಿಬ್ಬಂದಿಯನ್ನೇ ನೇಮಕ ಮಾಡಿಲ್ಲ ಎಂದು ಗ್ರಂಥಾಲಯ ಅಧಿಕಾರಿಗಳು ನೆಪ ಹೇಳುತ್ತ ಕುಳಿತುಕೊಳ್ಳುತ್ತಾರೆ. ಜಿಲ್ಲಾಡಳಿತಕ್ಕೆ ಪ್ರಸ್ತಾವ ಸಲ್ಲಿಸಿ ಹೊರ ಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿ ನೇಮಕ ಮಾಡಿಕೊಳ್ಳಬೇಕು. ಕೆಕೆಆರ್‌ಡಿಬಿ ಹಾಗೂ ಜಿಲ್ಲಾಡಳಿತವು ಶೈಕ್ಷಣಿಕವಾಗಿ ಹಿಂದುಳಿದ ರಾಯಚೂರು ಜಿಲ್ಲೆಗೆ ಸೌಲಭ್ಯ ವಿಸ್ತರಿಸಲು ಕ್ರಮಕೈಗೊಳ್ಳಬೇಕು‘ ಎಂದು ಮನವಿ ಮಾಡುತ್ತಾರೆ.
‘ಗ್ರಂಥಾಲಯದಲ್ಲಿ ಏಸಿ ಅಳವಡಿಸಿ’
ಫೆಬ್ರುವರಿಯಿಂದ ಜೂನ್ ಅಂತ್ಯದವರೆಗೂ ರಾಯಚೂರು ಜಿಲ್ಲೆಯಲ್ಲಿ 40 ಡಿಗ್ರಿ ಸೆಲ್ಸಿಯಸ್‌ನಿಂದ 46 ಸೆಲ್ಸಿಯಸ್‌ ವರೆಗೆ ಗರಿಷ್ಠ ತಾಪಮಾನವಿರುತ್ತದೆ. ಕೊಠಡಿಯಲ್ಲಿ ಕುಳಿತುಕೊಂಡು ಓದಲು ಸಾಧ್ಯವಾಗದಷ್ಟು ಸೆಕೆ ಇರುತ್ತದೆ. ಹೀಗಾಗಿ ಜಿಲ್ಲಾ ಗ್ರಂಥಾಲಯದಲ್ಲಿ ಏಸಿ ಅಳವಡಿಸಬೇಕು ಎನ್ನುವುದು ಓದುಗರ ಆಗ್ರಹವಾಗಿದೆ. ನಗರದ ಸಿದ್ದರಾಮ ಜಂಬಲದಿನ್ನಿ ರಂಗ ಮಂದಿರದಲ್ಲಿ ಈಗಾಗಲೇ ಏಸಿ ಅಳವಡಿಸಲಾಗಿದೆ. ರಾಯಚೂರು ಜಿಲ್ಲೆ ಮಹತ್ವಾಕಾಂಕ್ಷಿ ಜಿಲ್ಲೆಯ ಪಟ್ಟಿಯಲ್ಲಿ ಸೇರಿರುವ ಕಾರಣ ಬಿಸಿಲೂರಿನ ಸಮಸ್ಯೆ ಅರ್ಥ ಮಾಡಿಕೊಂಡು ಸರ್ಕಾರ ಗ್ರಂಥಾಲಯದಲ್ಲಿ ಏಸಿ ಅಳವಡಿಸಲು ಅವಕಾಶ ಮಾಡಿಕೊಡಬೇಕು ಎಂದು ವಿದ್ಯಾರ್ಥಿ ಸಂಘಟನೆಗಳ ಪ್ರಮುಖರಾದ ರಮೇಶ ವೀರಾಪುರ ಮಲ್ಲನಗೌಡ ಅಂಚೆಸಗೂರು ಕಾರ್ತಿಕ ಶಿಂಧೆ ಮನವಿ ಮಾಡುತ್ತಾರೆ. ‘ವಿದ್ಯುತ್‌ ಬಿಲ್‌ ಸಮಸ್ಯೆಯಾಗದಂತೆ ಓದುಗರಿಂದಲೇ ಕನಿಷ್ಠ ಶುಲ್ಕ ಪಡೆಯಬಹುದು. ಈ ಕೊಠಡಿ ನಿರ್ವಹಣೆಗಾಗಿಯೇ ಪ್ರತ್ಯೇಕ ಸಿಬ್ಬಂದಿ ನಿಯೋಜನೆ ಮಾಡಬಹುದು. ಓದುಗರು ಸಾಹಿತಿಗಳು ಹಾಗೂ ಗ್ರಂಥಾಲಯ ಅಧಿಕಾರಿಗಳನ್ನು ಒಳಗೊಂಡು ವಿಶೇಷ ಸಭೆ ನಡೆಸಿ ತೀರ್ಮಾನ ಕೈಗೊಳ್ಳುವುದು ಸೂಕ್ತ’ ಎಂದು ಸಲಹೆ ನೀಡಿದ್ದಾರೆ.
ಡಿಜಿಟಲ್‌ ಗ್ರಂಥಾಲಯ ನಿರ್ಮಾಣ ಅಗತ್ಯ
ಜಿಲ್ಲಾ ಗ್ರಂಥಾಲಯದ ಆವರಣದಲ್ಲಿ ಪ್ರತ್ಯೇಕ ಡಿಜಿಟಲ್‌ ಗ್ರಂಥಾಲಯ ನಿರ್ಮಿಸಬೇಕು. ಕಂಪ್ಯೂಟರ್‌ ಮೂಲಕವೇ ಅಲ್ಲಿ ಎಲ್ಲ ಬಗೆಯ ಅಧ್ಯಯನ ಸಾಹಿತ್ಯ ದೊರಕುವಂತಾಗಬೇಕು. ಈಗಿರುವ ಕಂಪ್ಯೂಟರ್ ವಿಭಾಗದಲ್ಲಿ ಕುಳಿತ ವಿದ್ಯಾರ್ಥಿನಿಯರು ಟೇಬಲ್‌ ಮೇಲೆ ಇಟ್ಟು ನಿದ್ರೆ ಮಾಡುತ್ತಿದ್ದಾರೆ. ಇಂತಹದ್ದಕ್ಕೆ ಅವಕಾಶ ಕಲ್ಪಿಸಬಾರದು. ಸುಸಜ್ಜಿತ ಗ್ರಂಥಾಲಯ ನಿರ್ಮಾಣವಾದರೆ ಜಿಲ್ಲೆಯ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಿರುವ ಸಾಹಿತ್ಯವನ್ನು ಇಲ್ಲಿಂದಲೇ ಪಡೆಯಲು ಸಾಧ್ಯವಾಗಲಿದೆ. ಬಡ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಲಿದೆ. ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಬಜೆಟ್ ಪೂರ್ವದಲ್ಲಿ ಸಾರ್ವಜನಿಕರ ಸಭೆ ಕರೆದು ಜನರ ಬೇಕು ಬೇಡಿಕೆಗಳನ್ನು ಅರಿತುಕೊಳ್ಳಬೇಕು. ಬೇಡಿಕೆಯೇ ಬಂದಿಲ್ಲ ಎಂದು ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವ ಕೆಲಸವಾಗಬಾರದು ಎಂದು ಸಾಹಿತಿಗಳು ಹೇಳುತ್ತಾರೆ. ರಾಯಚೂರು ಸಂಸದ ಜಿ.ಕುಮಾರ ನಾಯಕ ಅವರು ಸಂಸದರ ಪ್ರದೇಶ ಅಭಿವೃದ್ಧಿ ನಿಧಿ ರಾಯಚೂರು ನಗರ ಶಾಸಕ ಶಿವರಾಜ ಪಾಟೀಲ ಹಾಗೂ ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ವಿಧಾನ ಪರಿಷತ್ ಸದಸ್ಯರು ತಮ್ಮ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ಅನುದಾನದ ಒದಗಿಸಿದರೂ ಒಂದು ವರ್ಷದಲ್ಲಿ ಹೊಸ ಹೈಟೆಕ್‌ ಕಟ್ಟಡ ಹಾಗೂ ಸೌಲಭ್ಯ ಒದಗಿಸಲು ಸಾಧ್ಯವಿದೆ. ಇವರು ಅಭಿವೃದ್ಧಿಗೆ ಮನಸ್ಸು ಮಾಡಬೇಕು ಅಷ್ಟೇ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.