ADVERTISEMENT

ಬಹುದಿನಗಳ ಹೋರಾಟಕ್ಕೆ ಸಂದ ಜಯ: ‘ನಿರಾಶ್ರಿತ ಬಂಗಾಲಿ’ಗರಿಗೆ ಪೌರತ್ವ ಭಾಗ್ಯ

ಬಂಗಾಲಿ ಪುನರ್ವಸತಿ ಕ್ಯಾಂಪ್‌ನಲ್ಲಿ ಸಂಭ್ರಮ

ಡಿ.ಎಚ್.ಕಂಬಳಿ
Published 15 ಆಗಸ್ಟ್ 2024, 1:27 IST
Last Updated 15 ಆಗಸ್ಟ್ 2024, 1:27 IST
ಸಿಂಧನೂರು ತಾಲ್ಲೂಕಿನ ಆರ್.ಎಚ್.ನಂ.3 ಕ್ಯಾಂಪಿನಲ್ಲಿ ಜೋಪಡಿ, ಶೆಡ್ ಹಾಕಿಕೊಂಡು ಬಂಗಾಲಿ ನಿವಾಸಿಗಳು ವಾಸಿಸುತ್ತಿರುವುದು
ಸಿಂಧನೂರು ತಾಲ್ಲೂಕಿನ ಆರ್.ಎಚ್.ನಂ.3 ಕ್ಯಾಂಪಿನಲ್ಲಿ ಜೋಪಡಿ, ಶೆಡ್ ಹಾಕಿಕೊಂಡು ಬಂಗಾಲಿ ನಿವಾಸಿಗಳು ವಾಸಿಸುತ್ತಿರುವುದು   

ಸಿಂಧನೂರು (ರಾಯಚೂರು ಜಿಲ್ಲೆ): ಪೂರ್ವ ಪಾಕಿಸ್ತಾನ ಮತ್ತು ಪಾಕಿಸ್ತಾನ ನಡುವಿನ ಯುದ್ಧದಿಂದ ನಿರಾಶ್ರಿತರಾಗಿ 1970ರಿಂದ ಸಿಂಧನೂರು ತಾಲ್ಲೂಕಿನಲ್ಲಿ ನೆಲೆಯೂರಿರುವ ಬಂಗಾಲಿಗರಿಗೆ ಕೇಂದ್ರ ಸರ್ಕಾರವು ‘78ನೇ ಸ್ವಾತಂತ್ರ್ಯ ದಿನಾಚರಣೆ’ಯ ಸಂದರ್ಭದಲ್ಲಿ ‘ಪೌರತ್ವ’ ಪ್ರಮಾಣ ಪತ್ರ ಭಾಗ್ಯ ಕಲ್ಪಿಸಿದೆ. ಈ ಮೂಲಕ ಬಹುದಿನಗಳ ಹೋರಾಟಕ್ಕೆ ಸ್ಪಂದಿಸಿದೆ.

ಸಿಂಧನೂರು ತಾಲ್ಲೂಕಿನಲ್ಲಿ ನಾಲ್ಕು ಪುನರ್ವಸತಿ ಕ್ಯಾಂಪ್‍ಗಳಿದ್ದು, ಆರ್.ಎಚ್.ನಂ.2ರಲ್ಲಿ 7 ಸಾವಿರ, 3ರಲ್ಲಿ 7 ಸಾವಿರ, 4ರಲ್ಲಿ 4,500 ಮತ್ತು 5ರಲ್ಲಿ 4 ಸಾವಿರ ನಿರಾಶ್ರಿತರು ಇದ್ದಾರೆ. ಇವರಲ್ಲಿ ಸುಮಾರು 7 ಸಾವಿರಕ್ಕೂ ಹೆಚ್ಚು ಜನರಿಗೆ ಭಾರತೀಯ ಪೌರತ್ವ ಇನ್ನೂ ಲಭಿಸಿಲ್ಲ. ಭಾರತ ಸರ್ಕಾರ 2019ರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿದ್ದರೂ ಅದಕ್ಕೆ ನಿಯಮಾವಳಿ ರೂಪಿಸಿರಲಿಲ್ಲ. ಇದೇ ಫೆಬ್ರುವರಿ ತಿಂಗಳಲ್ಲಿ ಕೇಂದ್ರ ಸರ್ಕಾರ ನಿಯಮಾವಳಿ ರೂಪಿಸಿ ರಾಜ್ಯಪತ್ರ ಹೊರಡಿಸಿ ಪೌರತ್ವಕ್ಕೆ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಅನುವು ಮಾಡಿಕೊಟ್ಟಿದೆ.

ತಾಲ್ಲೂಕಿನ 146 ಜನ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಇವರ ಪೈಕಿ ಇದೀಗ ಐವರಿಗೆ ಪೌರತ್ವ ಪ್ರಮಾಣ ಪತ್ರ ಲಭಿಸಿರುವುದು ಬಂಗಾಲಿ ಕ್ಯಾಂಪ್‌ನ ನಿವಾಸಿಗಳಿಗೆ ಸಂತಸ ತಂದಿದೆ. ಈಚೆಗೆ ಆನ್‌ಲೈನ್‌ ಮೂಲಕ ಪೌರತ್ವ ಪ್ರಮಾಣಪತ್ರ ಸಿಕ್ಕಾಗ ಬಂಗಾಲಿಗರು ಪರಸ್ಪರ ಸಿಹಿ ಹಂಚಿ ಗುಲಾಲು ಹಾಕಿಕೊಂಡು ಕುಣಿದು ಸಂಭ್ರಮಿಸಿದ್ದರು.

ADVERTISEMENT

ಈ ಮೊದಲು ಸಿಂಧನೂರಿಗೆ ಬಂದಿದ್ದ ವಲಸಿಗರಿಗೆ ಅಂದಿನ ಜಿಲ್ಲಾಧಿಕಾರಿ ಪೌರತ್ವದ ಪ್ರಮಾಣ ಪತ್ರ ನೀಡಿದ್ದರು. ಆದರೆ, ಅನಕ್ಷರತೆ ಮತ್ತು ಬಡತನದ ಕಾರಣಕ್ಕೆ ಭಾವಚಿತ್ರ ತೆಗೆಸಿ ಅಧಿಕಾರಿಗಳಿಗೆ ಕೊಡದ ಕಾರಣ ಹಲವು ಜನರು ಪೌರತ್ವದಿಂದ ವಂಚಿತರಾಗಿದ್ದರು. ಹಲವು ವರ್ಷಗಳಿಂದ ಪೌರತ್ವಕ್ಕಾಗಿ ಪರಿತಪಿಸುತ್ತಿದ್ದರು.

2003ರಲ್ಲಿ ಕಾನೂನು ತಿದ್ದುಪಡಿ: ‘ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರ ಸರ್ಕಾರವು 2003ರಲ್ಲಿ ಪೌರತ್ವ ಕಾಯ್ದೆಗೆ ತಿದ್ದುಪಡಿ ಮಾಡಿ, ತಂದೆ ಮತ್ತು ತಾಯಿ ಇಬ್ಬರಿಗೂ ಪೌರತ್ವ ಇದ್ದರೆ ಮಾತ್ರ ಮಕ್ಕಳಿಗೆ ಪೌರತ್ವ ಕೊಡಬೇಕು. ಇಬ್ಬರಲ್ಲಿ ಒಬ್ಬರಿಗೆ ಇದ್ದರೆ ಪೌರತ್ವ ನಿಷೇಧಿಸುವ ನಿಯಮ ರೂಪಿಸಿತು. ಆಗ ನಮಗೆ ಪೌರತ್ವದ ಸಮಸ್ಯೆ ಉಂಟಾಯಿತು. ಆದ್ದರಿಂದ 2005ರಲ್ಲಿ ನಿಖಿಲ್ ಭಾರತ್ ಬಂಗಾಲಿ ಉದ್ಬಾಸ್ತು ಸಮನ್ವಯ ಸಮಿತಿ ರಚಿಸಿಕೊಂಡು ದೇಶವ್ಯಾಪಿ ಹೋರಾಟ ಮಾಡಿದ ಪರಿಣಾಮ 2019ರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಅಂಗೀಕಾರವಾಗಿದೆ. ಈಗ ಪೌರತ್ವ ಭಾಗ್ಯ ಲಭಿಸಿದೆ’ ಎಂದು ಸಮನ್ವಯ ಸಮಿತಿ ಮುಖಂಡರಾದ ಪ್ರೆಸೆನ್ ರಫ್ತಾನ್, ಜಗದೀಶ ಬಾವಾಲಿ, ಕೃಷ್ಣಧನ ಬಿಶ್ವಾಸ್, ಅನಿಲ್ ರಾಯ್ ಹರ್ಷ ವ್ಯಕ್ತಪಡಿಸಿದ್ದಾರೆ.

‘ಕರ್ನಾಟಕದ ಏಳೆಂಟು ಸಾವಿರ ಬಂಗಾಲಿಗರಿಗೆ ಸಿಎಎ ಕಾನೂನಿನ ಮೂಲಕ ಪೌರತ್ವ ಪಡೆಯಲು ಸಹಕರಿಸಿದ ಸಿಂಧನೂರು ತಾಲ್ಲೂಕಿನ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಮಾಜಿ ಸಂಸದರಿಗೆ ಕೃತಜ್ಞತೆ ಸಲ್ಲಿಸುತ್ತೇವೆ’ ಎಂದು ನಿಖಿಲ್ ಭಾರತ್ ಬಂಗಾಲಿ ಉದ್ಬಾಸ್ತು ಸಮನ್ವಯ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಸುನೀಲ್ ಮೇಸ್ತ್ರಿ ತಿಳಿಸಿದ್ದಾರೆ.

ಸಿಂಧನೂರಿನ ತಾಲ್ಲೂಕಿನ ಬಂಗಾಲಿ ನಿವಾಸಿಗಳು ಪೌರತ್ವಕ್ಕಾಗಿ ನವದೆಹಲಿಯಲ್ಲಿ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದ ಸಂದರ್ಭ.
ಆನ್‍ಲೈನ್‌ನಲ್ಲಿ ಸಲ್ಲಿಸಿದ ಅರ್ಜಿಗಳನ್ನು ಜಿಲ್ಲಾ ಮತ್ತು ರಾಜ್ಯ ಮಟ್ಟದ ಪರಿಶೀಲನಾ ಸಮಿತಿಗಳು ಪರಿಶೀಲಿಸಿದ ನಂತರ ಪೌರತ್ವ ಪ್ರಮಾಣ ಪತ್ರ ನೀಡಲು ಶಿಫಾರಸು ಮಾಡಲಾಗುವುದು.
ಅರುಣ್ ಎಚ್.ದೇಸಾಯಿ ತಹಶೀಲ್ದಾರ್ ಸಿಂಧನೂರು
ಅಖಂಡ ಭಾರತದ ನಿವಾಸಿಗಳಾಗಿದ್ದರೂ 50 ವರ್ಷಗಳಿಂದ ದ್ವಿತೀಯ ದರ್ಜೆಯ ನಾಗರಿಕರಂತೆ ಬದುಕುತ್ತಿದ್ದೆವು. ನಮಗೆ ಪೌರತ್ವ ನೀಡಿದ ಕೇಂದ್ರ ಸರ್ಕಾರಕ್ಕೆ ಧನ್ಯವಾದ. ತಿ
ಪ್ರಸೆನ್ ರಫ್ತಾನ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಿಖಿಲ್ ಭಾರತ್ ಬಂಗಾಲಿ ಉದ್ಬಾಸ್ತು ಸಮನ್ವಯ ಸಮಿ
ಎಸ್‌ಸಿ ಪ್ರಮಾಣ ಪತ್ರಕ್ಕೆ ಆಗ್ರಹ
‘ಪೌರತ್ವ ಲಭಿಸಿದರೂ ನಮ್ಮನ್ನು ಬಹುಮುಖ್ಯವಾದ ಸಮಸ್ಯೆಗಳು ಕಾಡುತ್ತಿವೆ. ಸಿಂಧನೂರಿನಲ್ಲಿ 50 ವರ್ಷ ಕಳೆದರೂ ಇಲ್ಲಿಯವರೆಗೆ ಜಾತಿ ಪ್ರಮಾಣ ಪತ್ರ ಲಭ್ಯವಾಗುತ್ತಿಲ್ಲ. ಪಶ್ಚಿಮ ಬಂಗಾಲ ಒಡಿಶಾ ಮಣಿಪುರ ತ್ರಿಪುರಾ ಅಸ್ಸಾಂ ಹಾಗೂ ಮತ್ತಿತರ ರಾಜ್ಯಗಳಲ್ಲಿ ‘ನಮಶೂದ್ರ’ ಸಮುದಾಯಕ್ಕೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ದೊರೆಯುತ್ತಿದ್ದು ಇಲ್ಲಿ ವಾಸವಾಗಿರುವ ಬಹುಸಂಖ್ಯಾತರು ನಮಶೂದ್ರರಾಗಿದ್ದಾರೆ. ಯಾವುದೇ ಜಾತಿ ಪ್ರಮಾಣ ಪತ್ರ ಕೊಡುತ್ತಿಲ್ಲ. ಇತರ ರಾಜ್ಯಗಳಂತೆ ಇಲ್ಲಿಯೂ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಕೊಡಬೇಕು’ ಎಂದು ನಿಖಿಲ್ ಭಾರತ್ ಬಂಗಾಲಿ ಉದ್ಬಾಸ್ತು ಸಮನ್ವಯ ಸಮಿತಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರೆಸೆನ್ ರಫ್ತಾನ್ ಆಗ್ರಹಿಸಿದ್ದಾರೆ.
ಪೌರತ್ವ ಪಡೆದ ಐವರು
ಸಿಂಧನೂರು ತಾಲ್ಲೂಕಿನ ಆರ್.ಎಚ್.ನಂ.4ರ ನಿವಾಸಿ ಜಯಂತ್ ಮಂಡಲ್ ಆರ್.ಎಚ್.ನಂ.2ರ ಬಿಪ್ರದಾಸ್ ಗೋಲ್ದರ್ ರಾಮಕೃಷ್ಣ ಅಧಿಕಾರಿ ಸುಕುಮಾರ್ ಮಂಡಲ್ ಅದೈತ್ ಅವರಿಗೆ ಕೇಂದ್ರ ಸರ್ಕಾರದಿಂದ ಪೌರತ್ವ ಪ್ರಮಾಣ ಪತ್ರ ಲಭಿಸಿದೆ. ಪೌರತ್ವ ನೀಡುವುದಕ್ಕಾಗಿಯೇ 2024ರ ಮೇ ತಿಂಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಸಮಿತಿ ರಚಿಸಿದ್ದು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿದ ಬಳಿಕ ಗುಪ್ತಚರ ಇಲಾಖೆ ಅಧಿಕಾರಿಗಳು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಿದ್ದಾರೆ. ಬಳಿಕ ರಾಜ್ಯ ಮಟ್ಟದ ಸಮಿತಿಯು ಸಂಪೂರ್ಣ ಮಾಹಿತಿ ಪಡೆದು ಪೌರತ್ವ ಪ್ರಮಾಣ ಪತ್ರವನ್ನು ನೀಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.