ADVERTISEMENT

ರಾಯಚೂರು: ದೀಪದ ಹಬ್ಬದಲ್ಲಿ ಪಟಾಕಿ ಖರೀದಿ ಸಂಭ್ರಮ

ದೀಪಾವಳಿ ಸಂಭ್ರಮ ಹೆಚ್ಚಿಸಲು 36 ಪಟಾಕಿ ಮಳಿಗೆಗಳ ಸ್ಥಾಪನೆ

ಚಂದ್ರಕಾಂತ ಮಸಾನಿ
Published 1 ನವೆಂಬರ್ 2024, 7:27 IST
Last Updated 1 ನವೆಂಬರ್ 2024, 7:27 IST
ರಾಯಚೂರಿನ ಬಸವೇಶ್ವರ ವೃತ್ತದ ಸಮೀಪ ವಾಲ್ಕಟ್‌ ಮೈದಾನದಲ್ಲಿ ತೆರೆಯಲಾದ ಪಟಾಕಿ ಮಾರಾಟ ಮಳಿಗೆಯಲ್ಲಿ ವ್ಯಾಪಾರಿಯೊಬ್ಬರು ಮಾರುಕಟ್ಟೆಗೆ ಹೊಸದಾಗಿ ಮಾರಾಟಕ್ಕೆ ಬಂದು ಪಟಾಕಿಗಳನ್ನು ಪರಿಚಯಿಸಿದರು
ರಾಯಚೂರಿನ ಬಸವೇಶ್ವರ ವೃತ್ತದ ಸಮೀಪ ವಾಲ್ಕಟ್‌ ಮೈದಾನದಲ್ಲಿ ತೆರೆಯಲಾದ ಪಟಾಕಿ ಮಾರಾಟ ಮಳಿಗೆಯಲ್ಲಿ ವ್ಯಾಪಾರಿಯೊಬ್ಬರು ಮಾರುಕಟ್ಟೆಗೆ ಹೊಸದಾಗಿ ಮಾರಾಟಕ್ಕೆ ಬಂದು ಪಟಾಕಿಗಳನ್ನು ಪರಿಚಯಿಸಿದರು   

ರಾಯಚೂರು: ದೀಪಾವಳಿಯ ಸಂಭ್ರಮ ಹೆಚ್ಚಿಸಲು ಬಸವೇಶ್ವರ ವೃತ್ತದ ಸಮೀಪ ವಾಲ್ಕಟ್‌ ಮೈದಾನದಲ್ಲಿ ಬುಧವಾರ 36 ಪಟಾಕಿ ಮಾರಾಟ ಮಳಿಗೆಗಳನ್ನು ತೆರೆಯಲಾಗಿದೆ. ಎಲ್ಲ ಮಳಿಗೆಗಳಲ್ಲೂ ಗ್ರಾಹಕರು ಪಟಾಕಿಗಳ ಖರೀದಿಗೆ ಮುಗಿಬಿದ್ದಿದ್ದಾರೆ.

ಕೆಲ ದೊಡ್ಡ ವ್ಯಾಪಾರಿಗಳು ಈ ಬಾರಿ ಹೊಸ ಬಗೆಯ ಪರಿಸರ ಸ್ನೇಹಿ ಪಟಾಕಿಗಳನ್ನು ಮಾರಾಟಕ್ಕೆ ತಂದಿದ್ದು ಗ್ರಾಹಕರು ಕೇಳಿ ಖರೀದಿಸುತ್ತಿದ್ದಾರೆ. ಮಕ್ಕಳು ಹಾಗೂ ಯುವಕರು ಪಟಾಕಿ ಖರೀದಿಸಲು ಹೆಚ್ಚು ಉತ್ಸುಕರಾಗಿದ್ದಾರೆ. ಪಾಲಕರೊಂದಿಗೆ ಪಟಾಕಿ ಮಳಿಗೆಗಳಿಗೆ ಬಂದು ತಮಗೆ ಇಷ್ಟವಾದ ಪಟಾಕಿಗಳನ್ನು ಕೊಂಡೊಯ್ಯುತ್ತಿದ್ದಾರೆ.

ಸುರುಸುರ ಬತ್ತಿ, ಗುಳ್ಳಿಬತ್ತಿ, ಹೂಬಾಣ, ರಾಕೇಟ್‌ಗಳು ಹೆಚ್ಚು ಮಾರಾಟವಾಗುತ್ತಿವೆ. ದೊಡ್ಡ ವ್ಯಾಪಾರಸ್ಥರು ಹೆಚ್ಚು ಶಬ್ದ ಮಾಡುವ ಪಟಾಕಿಗಳನ್ನು ಕೇಳಿ ಖರೀದಿಸುತ್ತಿದ್ದಾರೆ. ಬೆಳಿಗ್ಗೆಯೇ ವ್ಯಾಪಾರ ವಹಿವಾಟು ಆರಂಭವಾದರೂ ಸಂಜೆ ವೇಳೆಗೆ ಖರೀದಿಗೆ ಜನದಟ್ಟಣೆಯಾಗುತ್ತಿದೆ.

ADVERTISEMENT

‘ಸಾಮಾನ್ಯ ಪಟಾಕಿಗಳು ₹15ರಿಂದ ₹50, ಸುರಸುರ ಬತ್ತಿ ₹15ರಿಂದ 50, ಹೂಬಾಣ 10 ಬಾಣಗಳು ಇರುವ ಒಂದು ಪ್ಯಾಕೇಟ್‌ಗೆ ₹210, ರಾಕೇಟ್ ಹಾಗೂ ಗುಳ್ಳೆಬಾಣ ಕನಿಷ್ಠ ₹100ರಿಂದ ₹500ರ ವರೆಗೂ ಇವೆ’ ಎಂದು ಪಟಾಕಿ ವ್ಯಾಪಾರಿ ಸುರೇಶಕುಮಾರ ತಿಳಿಸಿದರು.

’ಈ ಬಾರಿ ಹೊಸ ಬಗೆಯ ಡ್ರೋಣ ಪಟಾಕಿ ಮಾರುಕಟ್ಟೆಗೆ ಬಂದಿದೆ. ಚಕ್ರದ ಮಾದರಿಯಲ್ಲಿ ನೆಲದಿಂದ ಒಂದು ಮೀಟರ್‌ ಮೇಲಕ್ಕೆ ಸುತ್ತುತ್ತ ಹಾರಲಿದೆ. ನವಿಲಿನಂತೆ ಅರಳುವ ಪಟಾಕಿಗಳು ಬಂದಿವೆ. ಇವು ಪರಿಸರ ಸ್ನೇಹಿಯಾಗಿದ್ದು, ಮಕ್ಕಳು ಹೆಚ್ಚು ಆಕರ್ಷಿತರಾಗುತ್ತಿದ್ದಾರೆ’ ಎಂದು ಶ್ರೀರಾಮ ಕಾಕರ್ಸ್‌ ಮಾಲೀಕ ರಾಮಚಂದ್ರ ನಾಯಕ ಹೇಳಿದರು.

‘ಜಿಲ್ಲೆಯಲ್ಲಿ ಸಮೃದ್ಧವಾಗಿ ಮಳೆಯಾಗಿದೆ. ಬೆಳೆಯೂ ಚೆನ್ನಾಗಿ ಬಂದಿದೆ. ರೈತರು ಖುಷಿಯಲ್ಲಿದ್ದಾರೆ. ಹಬ್ಬವನ್ನು ಇನ್ನಷ್ಟು ಸಂಭ್ರಮದಿಂದ ಆಚರಿಸಲು ತಯಾರಿ ಮಾಡಿಕೊಂಡಿದ್ದಾರೆ. ದೀಪಗಳ ಜತೆಗೆ ಪಟಾಕಿ ಇದ್ದರೆ ಮಾತ್ರ ಹಬ್ಬದ ಸಡಗರ ಹೆಚ್ಚುತ್ತದೆ. ಹೀಗಾಗಿ ಈ ವರ್ಷ ₹ 3 ಸಾವಿರ ಬೆಲೆಯ ಪಟಾಕಿ ಖರೀದಿ ಮಾಡಿರುವೆ‘ ಎಂದು ಮಕ್ಕಳೊಂದಿಗೆ ಪಟಾಕಿ ಖರೀದಿಸಲು ಬಂದಿದ್ದ ಶಿವಕುಮಾರ ಸಂತಸ ಹಂಚಿಕೊಂಡರು.

ಹೂವು, ಹಣ್ಣು ಖರೀದಿ ಜೋರು

ರಾಯಚೂರು ಮಾರುಕಟ್ಟೆಯಲ್ಲಿ ಗುರುವಾರ ದರ ಏರಿಕೆ ನಡುವೆಯೂ ಸಾರ್ವಜನಿಕರು ಬೆಳಕಿನ ಹಬ್ಬ ದೀಪಾವಳಿ ಆಚರಣೆಗೆ ಬೇಕಾದ ಹೂವು, ಹಣ್ಣು, ಹಣತೆ ಹಾಗೂ ಅಲಂಕಾರಿಕ ವಸ್ತುಗಳನ್ನು ಖರೀದಿ ಮಾಡಿದರು.

ಹೂವಿನ ದರ ಗಗನಕ್ಕೇರಿದೆ ಸೇವಂತಿಗೆ ₹50- 60, ಚೆಂಡು ಹೂ ₹50 ರಿಂದ ₹ 100ಗೆ ಮಾರಾಟವಾಯಿತು. ಹಬ್ಬಕ್ಕೆ ಹೊಸ ಬಟ್ಟೆ ಖರೀದಿಯೂ ಜೋರಾಗಿತ್ತು. ಪರಿಸರ ಸ್ನೇಹಿ ಮಣ್ಣಿನ ಹಣತೆಗಳ ಉತ್ತಮ ವ್ಯಾಪಾರ ನಡೆಯಿತು.

ಲಕ್ಷ್ಮಿ ಪೂಜೆ

ಅಮಾವಾಸ್ಯೆ ಪ್ರವೇಶ ಮಾಡಿದೆ. ಹೀಗಾಗಿ ಸಂಪ್ರದಾಯಸ್ಥರು ನರಕಚುತುದರ್ಶಿಯ ದಿನವಾದ ಗುರುವಾರ ಸಂಜೆಯೇ ಲಕ್ಷ್ಮಿದೇವಿಯ ಪೂಜೆ ನೆರವೇರಿಸಿದರು.

ಶುಕ್ರವಾರ ಶುಭ ಎಂದು ಭಾವಿಸಿದವರು ನವೆಂಬರ್‌ 1ರಂದು ಲಕ್ಷ್ಮಿದೇವಿಯ ಪೂಜೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಬಹುತೇಕ ಕಡೆ ಶುಕ್ರವಾರವೇ ಹಬ್ಬ ಆಚರಿಸಲಾಗುತ್ತಿದೆ. ವ್ಯಾಪಾರಸ್ಥರು ಹಾಗೂ ಉದ್ಯಮಿಗಳು ದೀಪಾವಳಿಯ ಪಾಡ್ಯದ ದಿನ ಪೂಜೆ ಕಾರ್ಯಕ್ರಮ ಇಟ್ಟುಕೊಂಡಿದ್ದಾರೆ. ಒಟ್ಟಾರೆ ಐದು ದಿನಗಳ ವರೆಗೆ ದೀಪಾವಳಿ ಹಬ್ಬ ಆಚರಿಸಲಾಗುತ್ತಿದೆ.

ಈಗಾಗಲೇ ಎಲ್ಲ ಮನೆಗಳ ಮುಂದೆ ಬಣ್ಣದ ಆಕಾಶಬುಟ್ಟಿಗಳನ್ನು ತೂಗು ಹಾಕಿ ಝಗಮಗಿಸುವ ವಿದ್ಯುತ್‌ ದೀಪಗಳಿಂದ ಅಲಂಕಾರ ಮಾಡಲಾಗಿದೆ. ಮಕ್ಕಳು ಆದಿಯಾಗಿ ಹಬ್ಬದ ಆಚರಣೆಯಲ್ಲಿ ತೊಡಗಿದ್ದಾರೆ.

ರಾಯಚೂರಿನ ಬಸವೇಶ್ವರ ವೃತ್ತದ ಸಮೀಪ ವಾಲ್ಕಟ್‌ ಮೈದಾನದಲ್ಲಿ ತೆರೆಯಲಾದ ಪಟಾಕಿ ಮಾರಾಟ ಮಳಿಗೆಗಳು / ಶ್ರೀನಿವಾಸ ಇನಾಮದಾರ್
ರಾಯಚೂರು ಮಾರುಕಟ್ಟೆಯಲ್ಲಿ ಲಕ್ಷ್ಮಿಪೂಜೆಗೆ ಬಾಳೆಗಿಡ ಖರೀದಿಸಿದ ಖರೀದಿಸಿದ ಗ್ರಾಹಕರು
ನ.5ರ ವರೆಗೆ ಮಾರಾಟಕ್ಕೆ ಅವಕಾಶ
ಕಡ್ಡಾಯವಾಗಿ ಪಟಾಕಿ ಮಾರಾಟ ಮಳಿಗೆಗಳಲ್ಲಿ ಅಗ್ನಿನಂದಕ ಹೊಂದಿರಬೇಕು ಎನ್ನುವುದೂ ಸೇರಿದಂತೆ 15 ಮಾದರಿಯ ಕಟ್ಟುನಿಟ್ಟಿನ ಷರತ್ತುಗಳನ್ನ ಪಾಲಿಸುವಂತೆ ಸೂಚಿಸಿ ನವೆಂಬರ್ 5ರ ವರೆಗೆ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಈ ಅವಧಿಯಲ್ಲಿ ನಿಯಮಗಳನ್ನು ಉಲ್ಲಂಘಿಸಿರುವುದು ಕಂಡು ಬಂದರೆ ಪರವಾನಗಿ ರದ್ದುಪಡಿಸಿ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ಸಂದೇಶವನ್ನೂ ನೀಡಲಾಗಿದೆ. ನಗರದಲ್ಲಿ ಬಿಸಿಲು ಹೆಚ್ಚಿರುವ ಕಾರಣ ಎಲ್ಲ ಪಟಾಕಿ ಮಳಿಗೆಗಳ ಮುಂದೆ ಡ್ರಮ್‌ಗಳಲ್ಲಿ ನೀರು ತುಂಬಿ ಇಡಲಾಗಿದೆ. ಕನಿಷ್ಠ ಎರಡು ಅಡಿ ಜಾಗ ಕಾದು ಮಳಿಗೆಗಳನ್ನು ನಿರ್ಮಿಸಲಾಗಿದೆ. ಅಗ್ನಿ ಶಾಮಕ ವಾಹನ ನಿಲುಗಡೆಗೂ ವ್ಯವಸ್ಥೆ ಮಾಡಲಾಗಿದೆ. ಅಕ್ಟೋಬರ್‌ 29ರಿಂದ ಮಾರಾಟಕ್ಕೆ ಅನುಮತಿ ಕೇಳಿದ್ದರು. ಆದರೆ ಪೊಲೀಸರು ಒಂದು ದಿನ ತಡವಾಗಿ ಪರವಾನಗಿ ಕೊಟ್ಟಿದ್ದಾರೆ. ಹೀಗಿ ಒಂದು ದಿನ ವ್ಯಾಪಾರಸ್ಥರು ಅಡಚಣೆ ಎದುರಿಸಬೇಕಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.