ಸಿಂಧನೂರು (ರಾಯಚೂರು ಜಿಲ್ಲೆ): ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ರಾಜ್ಯದಾದ್ಯಂತ ಸದ್ದು ಮಾಡಿರುವ ಬೆನ್ನಲ್ಲೇ ಸಿಂಧನೂರು ತಾಲ್ಲೂಕಿನಲ್ಲಿ ಕೆಲವರ ಬ್ಯಾಂಕ್ ಖಾತೆಗಳಿಗೆ ನಿಗಮದ ಹಣ ಜಮಾ ಆಗಿರುವುದು ಬಯಲಾಗಿದೆ.
ಮಾಜಿ ಸಚಿವ ಬಿ.ನಾಗೇಂದ್ರ ಅವರನ್ನು ವಿಶೇಷ ತನಿಖಾ ದಳ ಬಂಧಿಸಿದ ನಂತರ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ನೆಕ್ಕಂಟಿ ನಾಗರಾಜ, ನಾಗೇಶ್ವರರಾವ್ ಅವರ ಪರಿಚಯಸ್ಥರ ಖಾತೆಗಳಿಗೂ ನಿಗಮದ ಹಣ ಜಮಾ ಆಗಿರುವುದು ಬಹಿರಂಗವಾಗಿದೆ.
ನೆಕ್ಕಂಟಿ ನಾಗರಾಜ ಅವರು ತಮ್ಮ ಸಂಬಂಧಿ, ಸಿಂಧನೂರು ತಾಲ್ಲೂಕಿನ ಬೂದಿಹಾಳ ಕ್ಯಾಂಪಿನ ಕೆ.ವೆಂಕಟರಾವ್ ಅವರ ಕರ್ನಾಟಕ ಗ್ರಾಮೀಣ ಬ್ಯಾಂಕ್ ಖಾತೆಗೆ ಮಾರ್ಚ್ 8ರಂದು ₹12 ಲಕ್ಷ ಜಮಾ ಮಾಡಿದ್ದಾರೆ. ಕೆ.ವೆಂಕಟರಾವ್ ಮಕ್ಕಳಾದ ಲಕ್ಕಂಸಾನಿ ಲಕ್ಷ್ಮಿ ಖಾತೆಗೆ ₹ 25 ಲಕ್ಷ, ರತ್ನಕುಮಾರಿ ಖಾತೆಗೆ ₹ 25 ಲಕ್ಷ, ಮೊಮ್ಮಗ ಸಂದೀಪ್ ಖಾತೆಗೆ ₹ 36 ಲಕ್ಷ ಸೇರಿ ಒಟ್ಟು ₹98 ಲಕ್ಷ ಆಗಿದೆ. ಸಿಂಧನೂರು ನಗರಸಭೆ ಸದಸ್ಯರೊಬ್ಬರ ಖಾತೆಗೂ ಹಣ ಜಮಾ ಆಗಿರುವ ಮಾಹಿತಿ ಇದೆ.
‘ಯಾವುದೋ ಒಂದು ಫೈನಾನ್ಸ್ ಕಂಪನಿಯಿಂದ ನಾಲ್ವರ ಬ್ಯಾಂಕ್ ಖಾತೆಗಳಿಗೆ ಹಣ ಜಮಾ ಆಗಿದೆ. ಇದಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ಬ್ಯಾಂಕಿನ ಹಿರಿಯ ಅಧಿಕಾರಿಗಳಿಂದ ಪಡೆದುಕೊಳ್ಳಿ. ಇದು ನನ್ನ ಅಧಿಕಾರ ವ್ಯಾಪ್ತಿಗೆ ಬರುವುದಿಲ್ಲ’ ಎಂದು ಕರ್ನಾಟಕ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕ ರಾಘವೇಂದ್ರ ಹೇಳಿದ್ದಾರೆ.
‘ನನ್ನ ಖಾತೆಗೆ ಹಣ ಜಮಾ ಆಗಿರುವುದು ನಿಜ. ಪರಿಚಿತರೊಬ್ಬರು ನನಗೆ ಕೊಡಬೇಕಾಗಿದ್ದ ಸಾಲವನ್ನು ಮರಳಿಸಿದ್ದಾರೆ. ಅದನ್ನು ಬಿಟ್ಟು ಬೇರೆ ಏನೂ ಇಲ್ಲ’ ಎಂದು ಬೂದಿಹಾಳ ಕ್ಯಾಂಪ್ ನಿವಾಸಿ ವೆಂಕಟರಾವ್ ಪ್ರತಿಕ್ರಿಯಿಸಿದ್ದಾರೆ.
ಹಣ ಪಾವತಿ ಮಾಡಿದವರ ಹೆಸರು, ಸಾಲ ನೀಡಿದ ಮೊತ್ತ ಎಷ್ಟು ಎನ್ನುವ ಕುರಿತು ಹೇಳಲು ನಿರಾಕರಿಸುತ್ತಿದ್ದಾರೆ. ಹೀಗಾಗಿ ಇದು ನಿಗಮದ ಹಣವೇ ಇರಬಹುದು ಎಂದು ಹಲವರು ಸಂಶಯ ವ್ಯಕ್ತಪಡಿಸಿದ್ದಾರೆ.
ಬಳ್ಳಾರಿಯಲ್ಲಿ ನೆಲೆಸಿರುವ ಗುತ್ತಿಗೆ ಕಾಮಗಾರಿ ಕೈಗೊಳ್ಳುವ ಕೆಲವರು ನಾಗೇಂದ್ರ ಅವರಿಗೆ ಪರಿಚಿತರಾಗಿದ್ದಾರೆ. ಯಾವ ಹಣಕಾಸು ಸಂಸ್ಥೆಯ ಮೂಲಕ ಹಣ ಬಂದಿದೆ ಎನ್ನುವುದರ ಬಗ್ಗೆ ತನಿಖೆಯಿಂದ ಹೊರಬರಲಿದೆ. ಬಳ್ಳಾರಿ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಯ 100ಕ್ಕೂ ಹೆಚ್ಚು ಜನರ ಬ್ಯಾಂಕ್ ಖಾತೆಗೆ ನಿಗಮದ ಹಣ ವರ್ಗಾವಣೆಯಾಗಿದೆ ಎನ್ನುವ ಸುದ್ದಿ ಜಿಲ್ಲೆಯಲ್ಲಿ ಹರಿದಾಡುತ್ತಿದೆ.
ಶೇಕಡ 10ರಷ್ಟು ಕಮಿಷನ್: ವಾಲ್ಮೀಕಿ ನಿಗಮದಿಂದ ಕೆಲ ಹಣಕಾಸು ಸಂಸ್ಥೆಗೆ ಹಣ ವರ್ಗಾವಣೆ ಆಗಿದೆ. ಈ ಸಂಸ್ಥೆಯಿಂದ ಬಂದ ಹಣವನ್ನು ಖಾತೆ ಹೊಂದಿದವರು ನಗದು ರೂಪದಲ್ಲಿ ಮರಳಿಸಿದರೆ ಅದಕ್ಕೆ ಶೇಕಡ 10ರಷ್ಟು ಕಮಿಷನ್ ಕೊಡುವ ಆಮಿಷ ಒಡ್ಡಲಾಗಿತ್ತು ಎನ್ನಲಾಗಿದೆ. ಎಸ್‌ಐಟಿ ಹಾಗೂ ಇಡಿ ತನಿಖೆ ತೀವ್ರಗೊಂಡ ನಂತರ ಅಕ್ರಮದಲ್ಲಿ ಭಾಗಿಯಾಗಿರುವವರು ತಟಸ್ಥರಾಗಿದ್ದಾರೆ.
ಬೂದಿಹಾಳ ಕ್ಯಾಂಪಿನ ಕೆ.ವೆಂಕಟರಾವ್ ಹಾಗೂ ಅವರ ಕುಟುಂಬದವರ ಖಾತೆಗೆ ಜಮಾ ಆಗಿರುವ ಹಣವನ್ನು ಯಾರೂ ತೆಗೆದುಕೊಳ್ಳದಂತೆ ತಡೆ ಹಿಡಿಯಬೇಕು ಎಂದು ಎಸ್‍ಐಟಿ ಅಧಿಕಾರಿಗಳು ಕರ್ನಾಟಕ ಗ್ರಾಮೀಣ ಬ್ಯಾಂಕ್‍ಗೆ ನೋಟಿಸ್ ನೀಡಿದ್ದಾರೆ.
ವಾಲ್ಮೀಕಿ ನಿಗಮದ ಹಣ ಅಕ್ರಮ ವರ್ಗಾವಣೆ ಹಗರಣ ಬಯಲಿಗೆ ಬರುತ್ತಿದ್ದಂತೆಯೇ ಮುಖ್ಯಮಂತ್ರಿ ಅವರು ನಾಗೇಂದ್ರ ಅವರಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ಪಡೆದುಕೊಂಡಿದ್ದರು. ಅದರಂತೆ ಇದೀಗ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಅವರ ಹೆಸರೂ ಕೇಳಿ ಬರುತ್ತಿರುವುದರಿಂದ ಮುಖ್ಯಮಂತ್ರಿ ಅವರು ದದ್ದಲ್ ರಾಜೀನಾಮೆ ಕೇಳಿದ್ದಾರೆ ಎಂಬ ಸುದ್ದಿ ಕಾಂಗ್ರೆಸ್ ಆಪ್ತ ವಲಯದಲ್ಲಿ ಹರಿದಾಡುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.