ದೇವದುರ್ಗ: ಪಟ್ಟಣದಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರು ರೋಸಿ ಹೋಗಿದ್ದಾರೆ.
ಹೊಸ ಬಸ್ ನಿಲ್ದಾಣ, ಅಂಬೇಡ್ಕರ್ ಚೌಕ್, ಹಜರತ್ ಜೈಹಿರುದ್ದೀನ್ ಪಾಷ ದರ್ಗಾ ವೃತ್ತ, ಹಳೆ ಬಸ್ ನಿಲ್ದಾಣ, ಎಪಿಎಂಸಿ ಹತ್ತಿರ ಮತ್ತು ನಗರಗುಂಡ ಕ್ರಾಸ್ ಸೇರಿದಂತೆ ಪಟ್ಟಣದ ವಿವಿಧ ಮುಖ್ಯ ರಸ್ತೆಗಳಲ್ಲಿ, ಬಡಾವಣೆಗಳಲ್ಲಿ ಬಿಡಾಡಿ ದನಗಳ ಹಾವಳಿ ತಡೆಯುವುದೇ ಸವಾಲಾಗಿ ಪರಿಣಮಿಸಿದೆ.
ಈಚೆಗೆ ದನಗಳನ್ನು ಗೋಶಾಲೆಗೆ ಕಳುಹಿಸಲಾಗಿತ್ತು. ಆದರೆ, ಕೆಲವರು ಪ್ರಭಾವ ಬಳಸಿ ಜಾನುವಾರುಗಳನ್ನು ಬಿಡಿಸಿಕೊಂಡು ತಂದು ಮತ್ತೆ ಪಟ್ಟಣದ ಎಲ್ಲೆಂದರಲ್ಲಿ ಬಿಟ್ಟಿದ್ದಾರೆ. ಇದರಿಂದ ಅವು ರಸ್ತೆ ಬದಿಯಲ್ಲಿ ಟಿಕಾಣಿ ಹೂಡಿವೆ. ಪ್ರತಿನಿತ್ಯ ವಾಹನ ಸವಾರರಿಗೆ ಅಡೆತಡೆಗಳು ಉಂಟಾಗುತ್ತಿದ್ದು, ಹಲವು ಅಪಘಾತಗಳು ಸಂಭವಿಸಿವೆ.
ಪಟ್ಟಣದಲ್ಲಿ ಸಂಚಾರ ಪೊಲೀಸ್ ಠಾಣೆ ಇದ್ದು, ವಾಹನ ಸಂಚಾರ ನಿಯಂತ್ರಣ ಬದಲಿಗೆ ರಸ್ತೆ ಮೇಲೆ ದನ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೊಸ ಬಸ್ ನಿಲ್ದಾಣದ ಹತ್ತಿರ ತರಕಾರಿ ಮಾರುಕಟ್ಟೆಯ ಅಂಗಡಿ ಮಾಲೀಕರು ರಸ್ತೆ ಮೇಲೆ ಕೊಳೆತೆ ತರಕಾರಿ ಎಸೆಯುವುದರಿಂದ ತಿಂದು ರಸ್ತೆ ಮೇಲೆ ಮಲಗುತ್ತವೆ. ಇದರಿಂದ ಓಡಾಡುವ ಪಾದಚಾರಿಗಳಿಗೆ, ಮಹಿಳೆಯರಿಗೆ ಮತ್ತು ವೃದ್ಧರಿಗೆ ತೀವ್ರ ಸಮಸ್ಯೆ ಉಂಟಾಗುತ್ತಿದೆ.
ಪುರಸಭೆ ಮುಖ್ಯಾಧಿಕಾರಿಗೆ, ಸಾರ್ವಜನಿಕರು ಹಲವು ಬಾರಿ ಬಿಡಾಡಿ ದನಗಳನ್ನು ರಾಯಚೂರು ಗೋಶಾಲೆಗೆ ಕಳಿಸಲು ಮನವಿ ಮಾಡಿದರೂ ಕ್ರಮ ಕೈಗೊಳ್ಳುತ್ತಿಲ್ಲ. ಕಸ ವಿಲೇವಾರಿ ವಾಹನದಲ್ಲಿ ಹಲವು ಬಾರಿ ಬಿಡಾಡಿದನಗಳ ಕುರಿತು ಜಾಗೃತಿ ಮೂಡಿಸಿದ ಪುರಸಭೆಯ ಅಧಿಕಾರಿಗಳು ಅವುಗಳನ್ನು ಗೋಶಾಲೆಗೆ ಕಳುಹಿಸಲು ಮುಂದಾಗುತ್ತಿಲ್ಲ.
ಈ ಬಿಡಾಡಿ ದನಗಳು ರಸ್ತೆ ಸೇರಿದಂತೆ ಎಲ್ಲೆಂದರಲ್ಲಿ ಮಲಗಿರುತ್ತವೆ. ವಾಹನ ಸವಾರರ ಮೇಲೆ ಏಕಾಏಕಿ ದಾಳಿ ಮಾಡುವುದರಿಂದ ಅಪಘಾತ ಸಂಭವಿಸಿದ ಘಟನೆಗಳು ಹೆಚ್ಚುತ್ತಿವೆ.
ಹೊಸ ಬಸ್ ನಿಲ್ದಾಣ ರಸ್ತೆಯಲ್ಲಿ ಎಲ್ಲೆಂದರಲ್ಲಿ ಓಡಾಡುವ ಈ ದನಗಳಿಗೆ ಅಧಿಕೃತ ಯಜಮಾನರಿದ್ದಾರೆ. ಪ್ರತಿದಿನ ಬೆಳಗಿನ ಜಾವ ಹಾಲು ಕರೆದ ಬಳಿಕ ಅವುಗಳನ್ನು ಬೀದಿಗೆ ಬಿಡುತ್ತಿದ್ದಾರೆ. ಖರ್ಚಿಲ್ಲದೇ ದನಗಳ ಸಾಕಣೆ ಮಾಡಲು ಇಂತಹ ಮಾರ್ಗ ಕಂಡುಕೊಂಡಿದ್ದಾರೆ ಎನ್ನುತ್ತಾರೆ ವಾಹನ ಸವಾರರು.
‘ದನಗಳ ಹಾವಳಿ ತಡೆಯಲು ಪೌರಕಾರ್ಮಿಕರು ಹಾಗೂ ಬಿಡಾಡಿ ದನಗಳ ಹಾವಳಿಯಿಂದ ಜನರಿಗೆ ನಿತ್ಯ ತೊಂದರೆ ಉಂಟಾಗುತ್ತದೆ. ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆ ಬಗೆಹರಿಸಬೇಕಾಗಿದೆ’ ಎನ್ನುತ್ತಾರೆ ಪಟ್ಟಣದ ನಿವಾಸಿ ಹನುಮಂತ ಪೌಡಿ.
ಬಿಡಾಡಿ ದನಗಳ ಹಾವಳಿ ತಡೆಯುವ ಕುರಿತಂತೆ ಪ್ರಚಾರ ಮಾಡಲಾಗುತ್ತಿದೆ. ದನಗಳನ್ನು ಗೋಶಾಲೆಗೆ ಸಾಗಿಸಲಾಗುವುದು-ಹಂಪಯ್ಯ ಕೆ, ಪುರಸಭೆ ಮುಖ್ಯಾಧಿಕಾರಿ ದೇವದುರ್ಗ
ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಅದಕ್ಕೆ ನಾಗರಿಕರನ್ನೂ ಸೇರಿಸಿ ಸಮಿತಿ ರಚಿಸಬೇಕು. ಸಂಬಂಧಪಟ್ಟ ಅಧಿಕಾರಗಳು ಬಿಡಾಡಿ ದನಗಳನ್ನು ಹಿಡಿದು ಸುಗಮ ಸಂಚಾರಕ್ಕೆ ಅನವು ಮಾಡಿಕೊಡಬೇಕು-ತಿಮ್ಮಯ್ಯ ಬಾಪೂಜಿ, ವಾರ್ಡ್ ನಿವಾಸಿ
ದನಗಳ ಮಾಲೀಕರು ರಸ್ತೆ ಮೇಲೆ ಬಿಡದಂತೆ ಕ್ರಮ ವಹಿಸಲಿ. 1 ವಾರದ ನಂತರ ಪುರಸಭೆಗೆ ಬಿಡಾಡಿ ದನಗಳನ್ನು ರಾಯಚೂರು ಗೋಶಾಲೆಗೆ ಸಾಗಣೆ ಮಾಡಲು ಕ್ರಮ ಕೈಗೊಳ್ಳುವಂತೆ ತಿಳಿಸುವೆ-ಮಂಜುನಾಥ ಎಸ್, ಪಿಐ ದೇವದುರ್ಗ ಪೊಲೀಸ್ ಠಾಣೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.