ADVERTISEMENT

ಕವಿತಾಳ: 19 ಸರ್ಕಾರಿ ಶಾಲೆಗಳಲ್ಲಿ ಕಾಯಂ ಶಿಕ್ಷಕರೇ ಇಲ್ಲ!

ಸಿರವಾರ ತಾಲ್ಲೂಕಿನ ಮಕ್ಕಳ ಶೈಕ್ಷಣಿಕ ಪ್ರಗತಿ ಬಗ್ಗೆ ಪಾಲಕರಲ್ಲಿ ಆತಂಕ

ಪ್ರಜಾವಾಣಿ ವಿಶೇಷ
Published 28 ಸೆಪ್ಟೆಂಬರ್ 2024, 23:06 IST
Last Updated 28 ಸೆಪ್ಟೆಂಬರ್ 2024, 23:06 IST
ಕವಿತಾಳ ಸಮೀಪದ ಪಾತಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅತಿಥಿ ಶಿಕ್ಷಕಿಯೊಬ್ಬರು ಮಕ್ಕಳಿಗೆ ಪಾಠ ಮಾಡುತ್ತಿರುವುದು
ಕವಿತಾಳ ಸಮೀಪದ ಪಾತಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅತಿಥಿ ಶಿಕ್ಷಕಿಯೊಬ್ಬರು ಮಕ್ಕಳಿಗೆ ಪಾಠ ಮಾಡುತ್ತಿರುವುದು   

ಕವಿತಾಳ (ರಾಯಚೂರು ಜಿಲ್ಲೆ): ಸಿರವಾರ ತಾಲ್ಲೂಕಿನ ಚಿಕ್ಕಬಾದರದಿನ್ನಿ, ಗಂಗಾನಗರ ಕ್ಯಾಂಪ್‌ (74) ಮತ್ತು ಗುಡದಿನ್ನಿ ಗ್ರಾಮ ಸೇರಿ 19 ಕಡೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಕನಿಷ್ಠ ಒಬ್ಬರೂ ಕಾಯಂ ಶಿಕ್ಷಕರಿಲ್ಲ!. ‘ಅತಿಥಿ ಶಿಕ್ಷಕ’ರಿಂದಲೇ ಸರ್ಕಾರಿ ಶಾಲೆ ನಡೆಯುತ್ತಿದ್ದು, ಮಕ್ಕಳ ಶೈಕ್ಷಣಿಕ ಪ್ರಗತಿ ಬಗ್ಗೆ ಪೋಷಕರಲ್ಲಿ ಆತಂಕ ಮನೆಮಾಡಿದೆ.

ಸೇವೆಯಲ್ಲಿದ್ದ ಕಾಯಂ ಶಿಕ್ಷಕರೆಲ್ಲ ಈಚೆಗೆ ವರ್ಗಾವಣೆಯಾಗಿ ಬೇರೆ ಜಿಲ್ಲೆಗಳಿಗೆ ತೆರಳಿದ್ದಾರೆ. ಹೀಗಾಗಿ ಶಾಲೆಯಲ್ಲಿ ಪಾಠ, ಆಟ, ಬಿಸಿಯೂಟ ನಿರ್ವಹಣೆ ಸೇರಿದಂತೆ ಎಲ್ಲಾ ಕಾರ್ಯಗಳನ್ನೂ ಅತಿಥಿ ಶಿಕ್ಷಕರೇ ನಿರ್ವಹಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.

‘ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಬಡ ಮತ್ತು ಮಧ್ಯಮ ವರ್ಗದ ಮಕ್ಕಳು ಕಲಿಯುತ್ತಿದ್ದಾರೆ. ಮಕ್ಕಳ ಹಾಜರಾತಿ ಹೆಚ್ಚಿಸಲು ಸರ್ಕಾರ ಬಿಸಿಯೂಟ, ಪೌಷ್ಟಿಕತೆ ಹೆಚ್ಚಿಸಲು ಮೊಟ್ಟೆ, ಬಾಳೆಹಣ್ಣು ಹಾಗೂ ಶೇಂಗಾ ಚಿಕ್ಕಿ ನೀಡುತ್ತಿದೆ. ಆದರೆ, ಕಾಯಂ ಶಿಕ್ಷಕರೇ ಇಲ್ಲದಿದ್ದರೆ ಶಾಲೆಗಳಲ್ಲಿ ಮಕ್ಕಳ ಶೈಕ್ಷಣಿಕ ಪ್ರಗತಿ ಹೇಗೆ ಸಾಧ್ಯ’ ಎಂದು ಪಾಲಕರಾದ ಶರಣಪ್ಪ, ಮಲ್ಲಯ್ಯ, ಉಮೇಶ, ನಿಂಗಪ್ಪ ಮತ್ತು ದೇವಪ್ಪ ಪ್ರಶ್ನಿಸಿದರು.

ADVERTISEMENT

ಪಾತಾಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 101 ಮಕ್ಕಳು ಓದುತ್ತಿದ್ದಾರೆ. ಮೂವರು ಕಾಯಂ ಶಿಕ್ಷಕರು ವರ್ಗಾವಣೆಯಾಗಿದ್ದಾರೆ. ಸದ್ಯ ಮೂವರು ಅತಿಥಿ ಶಿಕ್ಷಕರು ಪಾಠ ಮಾಡುತ್ತಿದ್ದಾರೆ. ಗುಡದಿನ್ನಿ ಗ್ರಾಮದ ಶಾಲೆಯಲ್ಲಿ 30 ಮಕ್ಕಳಿದ್ದಾರೆ. ಇಲ್ಲಿದ್ದ ಒಬ್ಬ ಶಿಕ್ಷಕರೂ ಈಚೆಗೆ ವರ್ಗಾವಣೆಯಾಗಿದ್ದು, ಅವರ ಬದಲಿಗೆ ಅತಿಥಿ ಶಿಕ್ಷಕರನ್ನು ನೇಮಿಸಲಾಗಿದೆ.

ತಾಲ್ಲೂಕಿನ ಅತ್ತನೂರು ಗ್ರಾಮದ ಜನತಾ ಕಾಲೊನಿ, ನಡುಗಡ್ಡೆ ಕ್ಯಾಂಪ್‌, ಬಾಗಲವಾಡದ ವಾಲ್ಮೀಕಿ ನಗರದ ಶಾಲೆ, ಶಿವನಗರ ಕ್ಯಾಂಪ್‌, ಕುರಕುಂದ ಕ್ರಾಸ್‌, ಬೊಮ್ಮಸನದೊಡ್ಡಿ, ಬುದ್ದಿನ್ನಿ, ವಡವಟ್ಟಿ ಕ್ರಾಸ್‌, ಬಲ್ಲಟಗಿ ತಾಂಡಾ, ಡಾಕ್ಟರ್‌ ಕ್ಯಾಂಪ್‌, ಕೆ.ಗುಡದಿನ್ನಿ ಕ್ಯಾಂಪ್‌, ಚಾಗಬಾವಿ ಕ್ಯಾಂಪ್‌, ಗಡ್ಡೆರಾಯನ ಕ್ಯಾಂಪ್‌, ಕಡದಿನ್ನಿ ಕ್ಯಾಂಪ್‌, ಬುಳ್ಳಾಪುರ, ಬಸವೇಶ್ವರ ಕ್ಯಾಂಪ್‌ ಶಾಲೆಗಳು ‘ಶೂನ್ಯ ಕಾಯಂ ಶಿಕ್ಷಕರ ಶಾಲೆ’ ಪಟ್ಟಿಗೆ ಸೇರಿವೆ.

‘ಈಚೆಗೆ 8ನೇ ತರಗತಿಗೆ ಪ್ರವೇಶ ಪಡೆಯಲು ಬಂದ ವಿದ್ಯಾರ್ಥಿಗಳಿಗೆ ಕನ್ನಡದಲ್ಲಿ ತಮ್ಮ ಹೆಸರು, ವಿಳಾಸ ಮತ್ತು ಕೆಲ ಪದ ಬರೆಯಲು ಹೇಳಿದಾಗ ಕೆಲ ಮಕ್ಕಳಿಗೆ ಬರೆಯಲು ಸಾಧ್ಯವಾಗಿಲ್ಲ. ಪ್ರೌಢಶಾಲೆಗಳಲ್ಲಿ ಅಕ್ಷರಾಭ್ಯಾಸದಿಂದ ಕಲಿಕೆ ಆರಂಭಿಸಬೇಕಾದ ಅನಿವಾರ್ಯತೆ ಇದೆ. ಶಿಕ್ಷಕರ ಕೊರತೆಯಿಂದ ಕಲಿಕಾ ಗುಣಮಟ್ಟ ಮತ್ತಷ್ಟು ಕುಸಿದರೆ ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೆಚ್ಚಿಸಲು ಹರಸಾಹಸ ಪಡಬೇಕು’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಪ್ರೌಢಶಾಲೆಯ ಶಿಕ್ಷಕರೊಬ್ಬರು ಬೇಸರ ವ್ಯಕ್ತಪಡಿಸಿದರು.

ಕೆ.ಮೌನೇಶ ಪಾತಾಪುರ
ಚಂದ್ರಶೇಖರ ದೊಡ್ಮನಿ
ಕಾಯಂ ಶಿಕ್ಷಕರಿಲ್ಲದ ಕಾರಣ ಮಕ್ಕಳ ಕಲಿಕೆಗೆ ತೊಂದರೆಯಾಗುತ್ತಿದೆ. ಒಬ್ಬರನ್ನಾದರೂ ನೇಮಕ ಮಾಡಲು ಅಧಿಕಾರಿಗಳು ಕ್ರಮ ವಹಿಸಬೇಕು
–ಕೆ.ಮೌನೇಶ ಪಾತಾಪುರ ಎಸ್‌ಡಿಎಂಸಿ ಅಧ್ಯಕ್ಷ
ಕಾಯಂ ಶಿಕ್ಷಕರಿಲ್ಲದ ಶಾಲೆಗಳಿಗೆ ಸಮೀಪದ ಶಾಲೆಯ ಒಬ್ಬ ಶಿಕ್ಷಕರನ್ನು ಎರವಲು ಸೇವೆಯ ಮೇಲೆ ನಿಯೋಜನೆ ಮಾಡಲಾಗುವುದು
–ಚಂದ್ರಶೇಖರ ದೊಡ್ಮನಿ ಕ್ಷೇತ್ರ ಶಿಕ್ಷಣಾಧಿಕಾರಿ ಮಾನ್ವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.